ನವದೆಹಲಿ : ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ನಾಲ್ಕು ತಿಂಗಳ ಅವಧಿಯಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಇದರಿಂದ ಭಾರತೀಯ ಆರ್ಥಿಕತೆಗೆ ಬೃಹತ್ ಮಟ್ಟದ ಉತ್ತೇಜನ ಸಿಗುವ ಸಾಧ್ಯತೆಗಳಿವೆ. ಬೃಹತ್ ತೈಲದ ಅಮದು ವೆಚ್ಚದಿಂದಾಗಿ ದೇಶದ ಚಾಲ್ತಿ ಖಾತೆ ನಿಯಂತ್ರಣ ಮಿತಿಮೀರಲು ಶುರುವಾಗಿತ್ತು.ದುಬಾರಿ ತೈಲವನ್ನು ಖರೀದಿ ಮಾಡಲು ಹೆಚ್ಚು ಹಣ ನೀಡಬೇಕಾದುದರಿಂದ ದೇಶದ ರೂಪಾಯಿಯ ಮೌಲ್ಯ ಕುಸಿಯುತ್ತಿತ್ತು.
ಇದೀಗ ಜಾಗತಿಕ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 4.63 ರಷ್ಟು ಕುಸಿದಿದೆ. ಇದರಿಂದ ತೈಲದ ಬೆಲೆ 77.42 ಡಾಲರ್ ಗೆ ತಲುಪಿದೆ . ಕ್ರೂಡ್ ಆಯಿಲ್ ಫ್ಯೂಚರ್ಸ್ ಶೇ.4.9 ರಷ್ಟು ಕುಸಿತ ಕಂಡಿದ್ದು,ಬ್ಯಾರೆಲ್ ಗೆ 72.90 ಡಾಲರ್ ಗೆ ತಲುಪಿದೆ.
ಯು ಎಸ್ ನ ಕಚ್ಚಾ ತೈಲದ ದಾಸ್ತಾನುಗಳಲ್ಲಿನ ಹೆಚ್ಚಳದಿಂದ ಇಳುವರಿಯಲ್ಲಿ ಚೇತರಿಕೆಯಲ್ಲಿ ಕಂಡಿದೆ. ನಾಲ್ಕು ವಾರಗಳಿಂದ ಕಚ್ಚಾ ತೈಲದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡುಬರುತ್ತಿದೆ.
ಅಕ್ಟೋಬರ್ ನಲ್ಲಿ ದೇಶದ ಸರಕು ವ್ಯಾಪಾರದ ಕೊರತೆ ಗರಿಷ್ಠ ಮಟ್ಟಕ್ಕೇರಿತ್ತು. ಸದ್ಯ ತೈಲದ ಬೆಲೆ ಇಳಿಕೆ ಆಗುತ್ತಿರುವುದರಿಂದ ವ್ಯಾಪಾರದ ಕೊರತೆ ಕಡಿಮೆಯಾಗುವ ನಿರೀಕ್ಷೆ ಇದೆ.
ಭಾರತ ದೇಶವು ಕಚ್ಚಾತೈಲದ ಅಗತ್ಯಕ್ಕಿಂತ ಶೇಕಡ 80 ಹೆಚ್ಚಿಗೆ ಆಮದು ಮಾಡಿಕೊಳ್ಳುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಳವಾದಾಗ ಚಾಲ್ತಿ ಖಾತೆ ಕೊರತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.
ತೈಲಬೆಲೆಗಳು ಹಣದುಬ್ಬರವನ್ನು ಹೆಚ್ಚು ಮಾಡುತ್ತವೆ. ಸಿ ಎನ್ ಜಿ ಮತ್ತು ಎಲ್ ಪಿ ಜಿ ಹಾಗೂ ರಸ ಗೊಬ್ಬರಗಳ ಮೇಲಿನ ಸರ್ಕಾರದ ಸಬ್ಸಿಡಿ ಹೆಚ್ಚಾಗಲು ಕಾರಣವಾಗುತ್ತವೆ.
ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ನಾಲ್ಕು ತಿಂಗಳ ಅವಧಿಯಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಭಾರತ ದೇಶದ ಆರ್ಥಿಕತೆಗೆ ಪೂರಕವಾಗಲಿದೆ.