ಚೆನ್ನೈ : ಐಫೋನ್ ಗಳಿಗೆ ಗೊರಿಲ್ಲಾ ಗ್ಲಾಸ್ ಪೂರೈಕೆ ಮಾಡುವ ಅಮೇರಿಕಾ ಮೂಲದ ಕಾರ್ನಿಂಗ್ ಸಂಸ್ಥೆಯು ಭಾರತ ದೇಶದಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ ಮಾಡಲು ಮುಂದಾಗಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಾರ್ನಿಂಗ್ ಕಂಪನಿಯು ತಮಿಳುನಾಡಿನಲ್ಲಿ ಗೊರಿಲ್ಲಾ ಗ್ಲಾಸ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಶ್ರೀ ಪೆರುಂಬುದೂರಿನ ಬಳಿ ಇರುವ ಪಿಳ್ಳೈಪ್ಪಾಕ್ಕಂನಲ್ಲಿ 1000 ಕೋಟಿ ರೂ. ಬಂಡವಾಳದಲ್ಲಿ ಕಾರ್ಖಾನೆ ಆರಂಭವಾಗಲಿದೆ. ಈ ಕಾರ್ಖಾನೆಯಲ್ಲಿ 300 ಜನರಿಗೆ ಉದ್ಯೋಗಾವಕಾಶ ಇರಲಿದೆ ಎಂದು ಹೇಳಲಾಗುತ್ತಿದೆ.
ಇದೇ ಮೊದಲ ಬಾರಿಗೆ ಕಾರ್ನಿಂಗ್ ಕಂಪನಿಯು ಭಾರತ ದೇಶಕ್ಕೆ ಪ್ರವೇಶ ಮಾಡುತ್ತಿದೆ. ಕೆಲ ತಿಂಗಳುಗಳ ಹಿಂದೆ ಕಾರ್ನಿಂಗ್ ಕಂಪನಿಯು ತಮ್ಮಲ್ಲಿ ಹೂಡಿಕೆ ಮಾಡಲಿದೆ ಎಂದು ತೆಲಂಗಾಣ ಸರ್ಕಾರ ಹೇಳಿತ್ತು. ಬ್ಯುಸಿನೆಸ್ ಸ್ಟಾಂರ್ಡ್ ನಲ್ಲಿ ಬಂದಿದ್ದ ವರದಿಯ ಪ್ರಕಾರ ಭಾರತದ ಆಪ್ಟೀಮಸ್ ಇನ್ಪ್ರಾಕಾಮ್ ಹಾಗೂ ಅಮೇರಿಕಾದ ಕಾರ್ನಿಂಗ್ ಸಂಸ್ಥೆಗಳು ಜೊತೆಯಾಗಿ ಉನ್ನತ ಗುಣಮಟ್ಟದ ಸ್ಮಾರ್ಟ್ ಫೋನ್ ಕವರ್ ಗ್ಲಾಸ್ ಫ್ಯಾಕ್ಟರಿಯನ್ನು ಆರಂಭಿಸಬಹುದು. 2024 ರ ಕೊನೆಯ ಒಳಗೆ ಈ ಘಟಕಗಳು ತಮ್ಮ ಕಾರ್ಯವನ್ನು ಶುರು ಮಾಡಬಹುದು ಎಂದಿತ್ತು.
ಆಪಲ್ ಐಫೋನ್ ಅಸೆಂಬ್ಲಿಂಗ್ ಮಾಡುವ ಫಾಕ್ಸ್ ಕಾನ್ ಹಾಗೂ ಪೆಗಾಟ್ರಾನ್ ನ ಘಟಕಗಳು ತಮಿಳುನಾಡಿನಲ್ಲಿಯೇ ಇರುವುದರಿಂದ ತೆಲಂಗಾಣದ ಬದಲಾಗಿ ತಮಿಳುನಾಡಿನಲ್ಲಿ ಗೊರಿಲ್ಲಾ ಗ್ಲಾಸ್ ಉತ್ಪಾದನಾ ಘಟಕ ಪ್ರಾರಂಭ ಮಾಡಲು ಕಾರ್ನಿಂಗ್ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮುಂಬರುವ 2024 ರ ಜನವರಿ ತಿಂಗಳಿನಲ್ಲಿ ನಡೆಯಲಿರುವ ಗ್ಲೋಬಲ್ ಇನ್ವೆಸ್ಟರ್ ಮೀಟ್ ನಲ್ಲಿ ತಮಿಳುನಾಡು ಸರ್ಕಾರ ಹಾಗೂ ಕಾರ್ನಿಂಗ್ ಕಂಪನಿಯ ನಡುವೆ ಒಪ್ಪಂದ ನಡೆಯುವ ಸಾಧ್ಯತೆಗಳಿವೆ. ಒಪ್ಪಂದದ ಬಳಿಕ ಗೊರಿಲ್ಲಾ ಗ್ಲಾಸ್ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಒಂದು ವರ್ಷಗಳ ಕಾಲಾವಕಾಶ ಬೇಕಾಗಬಹುದು.





