-ಪ್ರೊ.ಆರ್.ಎಂ.ಚಿಂತಾಮಣಿ

ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆ ಈಗ ನಡೆಯುತ್ತಿದ್ದು (ಏಪ್ರಿಲ್ 7,8,9) ನಿರ್ಣಯಗಳು ಬುಧವಾರ ಹೊರಬೀಳಲಿವೆ.
ಕಳೆದ ಫೆಬ್ರವರಿ ಸಭೆಯ ನಂತರ ಇಲ್ಲಿಯವರೆಗೆ ಗಂಗಾನದಿಯಲ್ಲಿ ಸಾಕಷ್ಟು ನೀರು ಹರಿದಿದೆ . ದೇಶದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದೇವೆ . ಡೆಪ್ಯೂಟಿ ಗವರ್ನರ್ ಮೈಕಲ್ ಪಾತ್ರಾರವರು ನಿವೃತ್ತರಾಗಲಿದ್ದು ಅವರ ಸ್ಥಾನದಲ್ಲಿ ಪೂನಂ ಗುಪ್ತಾ ನೇಮಕವಾಗಿದ್ದಾರೆ. ಈ ಸಭೆಯಲ್ಲಿ ಗುಪ್ತಾ ಸದಸ್ಯರಾಗಿ ಭಾಗವಹಿಸಲಿದ್ದಾರೆ .
ಐದು ವರ್ಷಗಳ ನಂತರ ಫೆಬ್ರವರಿ ಸಭೆಯಲ್ಲಿ ರೆಪೋ ದರವನ್ನು ಶೇ.0.25 ಕಡಿಮೆ ಮಾಡಲಾಗಿತ್ತು. ಪರಿಣಾಮವಾಗಿ ಬ್ಯಾಂಕುಗಳಿಗೆ ಮತ್ತು ಹಣಕಾಸು ಕಂಪೆನಿಗಳಿಗೆ ಅವುಗಳಲ್ಲಿರುವ ಸಾಲ ಪತ್ರಗಳನ್ನು ಅಡವಿಟ್ಟುಕೊಂಡು ತಾತ್ಕಾಲಿಕ ಈ (ಅಲ್ಪಾವಧಿ) ಸಾಲದ ಬಡ್ಡಿ ದರ ರೆಪೋದರ (Repossession Rate ) ಶೇಕಡ 6.25 ಕ್ಕೂ , ಇದಕ್ಕೆ ವಿರುದ್ಧವಾಗಿ ಈ ಸಂಸ್ಥೆಗಳಲ್ಲಿ ಅವಶ್ಯಕತೆ ಗಿಂತ ಹೆಚ್ಚು ಇದ್ದಾಗ ರಿಸರ್ವ್ ಬ್ಯಾಂಕಿನಲ್ಲಿ ತಾತ್ಕಾಲಿಕ ಠೇವಣಿಯಾಗಿ ಇಟ್ಟಾಗ ರಿಸರ್ವ್ ಬ್ಯಾಂಕು ಕೊಡುವ ಬಡ್ಡಿದರ ರಿವರ್ಸ್ ರೆಪೊ ರೇಟ್ ಅಥವಾ ವಿಶೇಷ ತಾತ್ಕಾಲಿಕ ಠೇವಣಿ ದರ ಶೇಕಡ 6ಕ್ಕೂ ಮತ್ತು ಬ್ಯಾಂಕುಗಳಿಗೆ ಆಪತ್ಕಾಲದಲ್ಲಿ ಅಂತಿಮ ಧಣಿಯಾಗಿ (Lender of Last resort) ಕೊಡುವ ಸಾಲದ ಬಡ್ಡಿದರ ಬ್ಯಾಂಕ್ ರೇಟು ಶೇಕಡಾ 6.50 ಕ್ಕೆ ಇಳಿದಿರುತ್ತದೆ . ಇದು ಕುಸಿಯುತ್ತಿರುವ ಆರ್ಥಿಕ ಬೆಳವಣಿಗೆಯನ್ನು ರಾಷ್ಟ್ರೀಯ ಒಟ್ಟಾದಾಯ (ಜಿಡಿಪಿ )ಯನ್ನು ಮೇಲುತ್ತಲು ಪೂರಕವಾದ ಕ್ರಮವೆಂದು ಹೇಳಲಾಗಿತ್ತು.
ಅರ್ಥ ವ್ಯವಸ್ಥೆಯಲ್ಲಿನ ಬಡ್ಡಿ ದರಗಳು ನಿಧಾನವಾಗಿ ಇಳಿಯುವ ಪ್ರಕ್ರಿಯೆ ಮುಂದುವರಿಯುತ್ತಿದೆ. ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆಯಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ ಬ್ಯಾಂಕುಗಳಲ್ಲಿ ಠೇವಣಿಗಳ ಬೆಳವಣಿಗೆ ದರ ನಿರೀಕ್ಷಿಸಿದಷ್ಟು ಹೆಚ್ಚುತ್ತಿಲ್ಲವಾದ್ದರಿಂದ ಠೇವಣಿ ಬಡ್ಡಿದರಗಳ ಇಳಿಕೆ ಬ್ಯಾಂಕುಗಳ ಠೇವಣಿ ಸಂಪನ್ಮೂಲವನ್ನು ಇನ್ನಷ್ಟು ಕಡಿಮೆ ಮಾಡೀತೆಂಬ ಭಯ ಕಾಡುತ್ತವೆ. ಇದರಿಂದ ಬ್ಯಾಂಕುಗಳ ನಿವ್ವಳ ಬಡ್ಡಿ ಆದಾಯ (Interest Margin ) ಸಾಲಗಳ ಬಡ್ಡಿ ಮತ್ತು ಠೇವಣಿಗಳ ಬಡ್ಡಿ ನಡುವಿನ ಅಂತರ ಕಡಿಮೆಯಾಗಿದೆ.
ರಿಸರ್ವ್ ಬ್ಯಾಂಕಿನ ಫೆಬ್ರವರಿ ಅಂದಾಜುಗಳಂತೆ ಜಿಡಿಪಿ ಬೆಳವಣಿಗೆ 2024-25 ರಲ್ಲಿ ವಾರ್ಷಿಕ ಶೇ.6.4 ಮತ್ತು 2025-26 ರಲ್ಲಿ 6.7 ಇರುತ್ತದೆ . ಹಣ ದುಬ್ಬರವು ಕಳೆದ ವರ್ಷ ಶೇ.4.8 ಇದ್ದದ್ದು, ಈ ವರ್ಷದ ಕೊನೆಯ ವೇಳೆಗೆ (ಮಾರ್ಚ್ 2026) ಶೇ. 4.2ಕ್ಕೆ ಇಳಿಯುವ ನಿರೀಕ್ಷೆ ಇದೆ . ಸರ್ಕಾರದ ಜಿಡಿಪಿ ಅಂದಾಜು ಸ್ವಲ್ಪ ಹೆಚ್ಚಾಗಿದ್ದು , 2025-26ರಲ್ಲಿ ಜಿಡಿಪಿ ಶೇ.6.6ರಿಂದ ಶೇ. 6.7ರವರೆಗೆ ಬೆಳೆಯುವ ಬಗ್ಗೆ ಆಶಾ ಭಾವನೆಯಿದೆ. 2024-25ರ ಮಾನ್ಸೂನ್ ಹಂಗಾಮಿನಲ್ಲಿ ಮಳೆ ಹೆಚ್ಚಾಗಿಯೇ ಬಿದ್ದಿದ್ದು, ಈ ವರ್ಷವೂ ಮಳೆಗಾಲ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಕೃಷಿ ಉತ್ಪಾದನೆ ನಿರೀಕ್ಷೆಗಿಂತ ಹೆಚ್ಚಾಗಬಹುದೆಂದು ಆಶಿಸಲಾಗಿದೆ.
ಟ್ರಂಪಾಘಾತ : ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಕಳೆದ ವಾರ ಭಾರತವೂ ಸೇರಿದಂತೆ 60 ದೇಶಗಳಿಂದ ತಮ್ಮ ದೇಶಕ್ಕೆ ಬರುವ ಆಮದುಗಳ ಮೇಲೆ ಶೇ.20 ರಿಂದ ಶೇ. 49ರವರೆಗೆ ಪ್ರತಿಕೃತ (Retaltiatry) ಆಮದು ಸುಂಕ ವಿಸಿಧಿದ್ದಾರೆ . ಇದು ನಾಳೆಯಿಂದಲೇ (ಏಪ್ರಿಲ್ 9) ಜಾರಿಗೆ ಬರುವುದೆಂದೂ ಹೇಳಿದ್ದಾರೆ .ಇದರೊಡನೆ ಈಗಾಗಲೇ ಎಲ್ಲಾ ಆಮದುಗಳ ಮೇಲೆ ಇದ್ದ ಶೇ.2.5ರ ಮೂಲ ಸುಂಕವನ್ನು ಶೇ.೧೦ಕ್ಕೆ ಹೆಚ್ಚಿಸಿದ್ದು , ಅದು ಇದೇ ಏ.5 ನೇ ದಿನಾಂಕದಿಂದ ಜಾರಿಗೆ ಬರುವುದುದೆಂದು ಹೇಳಿದ್ದಾರೆ. (ಈಗಾಗಲೇ ಜಾರಿಗೆ ಬಂದಿದೆ) ಭಾರತದಿಂದ ಬರುವ ಆಮದುಗಳ ಮೇಲೆ
ಶೇ.6.27 ಇದ್ದು , ಅತಿ ಹೆಚ್ಚು ಕಾಂಬೋಡಿಯಾ (ಶೇ.49) ಮತ್ತು ಅತಿ ಕಡಿಮೆ ಯೂರೋಪಿಯನ್ ಯೂನಿಯನ್(ಶೇ.20), ಚೀನಾದ ಉತ್ಪನ್ನಗಳ ಮೇಲೆ ಶೇ. 34 ಹೆಚ್ಚುವರಿಯಾಗಿ ವಿಧಿಸಲಾಗಿದ್ದು, ಈಗಾಗಲೇ ಇರುವ ಶೇ.20ನ್ನೂ ಸೇರಿ ಒಟ್ಟು ಶೇ. 54 ಆಗುತ್ತದೆ .
ಅಧಿಕಾರಕ್ಕೆ ಬಂದ ಆರಂಭದಿಂದಲೂ ‘ನನಗೆ ಅಮೆರಿಕ ಫಸ್ಟ್’ ಎಂದು ಹೇಳುತ್ತಿದ್ದ ಟ್ರಂಪ್ ಈಗ ತಮ್ಮ ನಿರ್ಧಾರದಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಎಲ್ಲ ದೇಶಗಳೂ ಪೋಷಿಸಿಕೊಂಡು ಬಂದಿದ್ದ ಜಾಗತಿಕ ಮುಕ್ತ ವ್ಯಾಪಾರ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ.
ಈ ‘ಶಾಕ್’ ಎಲ್ಲ ದೇಶಗಳಿಗೂ ಚಿಂತಿಸುವಂತೆ ಮಾಡಿದೆ. ಅಮೆರಿಕದಂತೆ ಇತರ ದೇಶಗಳೂ ಆಮದು ಸುಂಕ ಸಮರಕ್ಕೆ ತಯಾರಾಗಿ ಪ್ರತಿ ಸುಂಕಗಳನ್ನು ವಿಧಿಸಿದರೆ? ಅದರಿಂದ ಜಾಗತಿಕ ಅರ್ಥ ವ್ಯವಸ್ಥೆಗೇ ಪೆಟ್ಟು ಬಿದ್ದೀತು. ಬಹುತೇಕ ಆರ್ಥಿಕ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಕುಸಿಯುವ ಭಯ ಹೆಚ್ಚಾಗಿದೆ.
ಭಾರತದ ಮೇಲಿನ ಪರಿಣಾಮಕ್ಕೆ ಬಂದರೆ ಅಮೆರಿಕ ನಮ್ಮ ಪ್ರಮುಖ ವಿದೇಶಿ ವ್ಯಾಪಾರ ಪಾಲುದಾರ ದೇಶಗಳಲ್ಲಿ ಒಂದು. ಬಟ್ಟೆಗಳು, ಔಷಧಿಗಳು, ಮೆಷಿನರಿಗಳು ಮುಂತಾದವುಗಳು ಅಮೆರಿಕಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತವೆ. ವ್ಯಾಪಾರ ಶೇಷ ನಮ್ಮ ಪರವಾಗಿರುತ್ತದೆ . ಕೆಲವು ರಂಗಗಳಲ್ಲಿ ಅಮೆರಿಕದಿಂದ ಹೆಚ್ಚು ಅನುಕೂಲವಾಗಿದೆ. ಈ ಪೆಟ್ಟಿನಿಂದ ಹೊರಬಂದು ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಬೇಕಾಗುತ್ತದೆ . ಟ್ರಂಪ್ ಚರ್ಚೆಗೆ ಅವಕಾಶವಿದೆ ಎಂದು ಹೇಳಿರುವುದರಿಂದ ಚರ್ಚಿಸಿ ಹೊಂದಾಣಿಕೆ ಮಾಡಿಕೊಂಡು ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಎಷ್ಟೇ ಕಡಿಮೆಯಾದರೂ ಸಮಸ್ಯೆ ಮುಂದುವರಿಯುವುದಂತೂ ನಿಜ. ಭಾರತ , ಚೀನಾ ಸೇರಿ ಎಲ್ಲ ದೇಶಗಳ ನಡೆಯೂ ಇಲ್ಲಿ ಮುಖ್ಯವಾಗುತ್ತದೆ . ಹೆಚ್ಚುದೇಶಗಳು ಪ್ರತಿಕಾರಕ್ಕೆ ನಿಂತರೆ ಅಮೆರಿಕ ಸೇರಿ ಎಲ್ಲರಿಗೂ ತೊಂದರೆ . ಜಾಗತಿಕ ಅಭಿವೃದ್ಧಿ ಕುಂಠಿತವಾದೀತು.
ರಿಸರ್ವ್ ಬ್ಯಾಂಕ್ ನಡೆ : ಈಗಾಗಲೇ ನಮ್ಮ ಜಿ.ಡಿ.ಪಿ. ಬೆಳವಣಿಗೆ ಗುರಿ ಇರಿಸಿಕೊಂಡಿದ್ದ ವಾರ್ಷಿಕ ಶೇ. 7.0ಕ್ಕಿಂತ ಕಡಿಮೆ ದರದಲ್ಲಿದೆ. ಈಗ ಟ್ರಂಪ್
ನಿರ್ಧಾರದಿಂದ ನಮ್ಮ ವಿದೇಶಿ ವ್ಯಾಪಾರದಲ್ಲಿ ಏರುಪೇರಾಗ ಬಹುದು. ಅದು ಜಿ.ಡಿ.ಪಿ. ಬೆಳವಣಿಗೆಗೂ ಪೆಟ್ಟು ಕೊಡಬಹುದು. ನಮ್ಮ ಸರ್ಕಾರ
ಮತ್ತು ರಿಸರ್ವ್ ಬ್ಯಾಂಕ್ ಇದನ್ನು ಸರಿಪಡಿಸಿ ಬೆಳವಣಿಗೆ ಹೆಚ್ಚಿಸಲು ಉತ್ತೇಜಕ ಕ್ರಮಗಳನ್ನು ಕೈಗೊಳ್ಳಬೇಕು. ಅರ್ಥ ವ್ಯವಸ್ಥೆಯನ್ನು ಮೇಲೆತ್ತಬೇಕು.
ರಿಸರ್ವ್ ಬ್ಯಾಂಕ್ ಈಗಾಗಲೇ ನೀತಿ ಬಡ್ಡಿ ದರಗಳನ್ನು ಶೇ.0.2 ಇಳಿಸಿದೆ ಪರಿಣಾಮಗಳನ್ನು ಪರಿಶೀಲಿಸಿ ಈ ಸಭೆಯಲ್ಲೂ ಮುಂದಿನ ಸಭೆಯಲ್ಲೂ ಮತ್ತೆ ಶೇಕಡಾ 0.25 ಇಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಹಣದುಬ್ಬರ ನಿಯಂತ್ರಣದಲ್ಲಿರುವುದು ಕಾರಣವೆನ್ನಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿ ಈಗಾಗಲೇ ಶೇ.0.25 ಇಳಿಸುವ ಸಾಧ್ಯತೆ ಇದೆ . ಟ್ರಂಪ್ ಪರಿಣಾಮ ಹೆಚ್ಚು ಗಂಭೀರವೆನಿಸಿ ಅರ್ಥ ವ್ಯವಸ್ಥೆಗೆ ಅಗ್ಗದ ಹಣಕಾಸಿನ ಅವಶ್ಯಕತೆ ಹೆಚ್ಚಾಗಿದೆ ಎನ್ನಿಸಿದರೆ ಶೇ. 0.5ನ್ನೇ ಕಡಿಮೆ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ .
ಬ್ಯಾಂಕು ಈ ವರೆಗೆ ‘ತಟಸ್ಥ ನಿಲುವು’ ಮುಂದುವರಿಸಿಕೊಂಡು ಬಂದಿದೆ. ಆದರೆ ಇಂದಿನ ಪರಿಸ್ಥಿತಿ ಅವಲೋಕಿಸಿ ಅರ್ಥ ವ್ಯವಸ್ಥೆಗೆ ಹೆಚ್ಚಿನ ಗಾತ್ರದಲ್ಲಿ ಹಣಕಾಸು ಅವಶ್ಯಕತೆ ಇದೆ ಅನ್ನಿಸಿದರೆ ಉದಾರತೆಯೆಡೆಗೆ ತಿರುಗುವ ನಿಲುವು ತಳೆಯುವ ಸಾಧ್ಯತೆ ಯೂ ಹೆಚ್ಚಾಗಿದೆ.
ಈಗಾಗಲೇ ನಮ್ಮ ಜಿ.ಡಿ.ಪಿ. ಬೆಳವಣಿಗೆ ಗುರಿ ಇರಿಸಿಕೊಂಡಿದ್ದ ವಾರ್ಷಿಕ ಶೇ. 7.0 ಗಿಂತ ಕಡಿಮೆ ದರದಲ್ಲಿದೆ. ಈಗ ಟ್ರಂಪ್ ನಿರ್ಧಾರದಿಂದ ನಮ್ಮ
ವಿದೇಶಿ ವ್ಯಾಪಾರದಲ್ಲಿ ಏರುಪೇರಾಗಬಹುದು. ಅದು ಜಿ.ಡಿ.ಪಿ. ಬೆಳವಣಿಗೆಗೂ ಪೆಟ್ಟು ಕೊಡಬಹುದು. ನಮ್ಮ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಇದನ್ನು ಸರಿಪಡಿಸಿ ಬೆಳವಣಿಗೆ ಹೆಚ್ಚಿಸಲು ಉತ್ತೇಜಕ ಕ್ರಮಗಳನ್ನು ಕೈಗೊಳ್ಳಬೇಕು. ಅರ್ಥ ವ್ಯವಸ್ಥೆಯನ್ನು ಮೇಲೆತ್ತಬೇಕು.





