• ಸುಮಂಗಲಾ
ಪ್ರಿಯ ಉಸ್ತಾದ್ ರಾಶಿದ್ ಜೀ,
“ಛೀನೆ ರೆ ಮೋರ ಚೈನ್ ಮೃಗನಯನಿಯಾ..”
ಆ ದಿನ ಹೀಗೇ ಯುಟ್ಯೂಬಿನಲ್ಲಿ ಏನೋ ಹುಡುಕುವಾಗ ಈ
ವಿಡಿಯೋ ಹಾಡು ಕಾಣಿಸಿತು.
ಅರೆ… ಝಗಮಗಿಸುವ ಕೋಕ್ ಸ್ಟುಡಿಯೋ ಇಂಡಿಯಾ ವೇದಿಕೆಯಲ್ಲಿ ನಿಮ್ಮ ದನಿ… ನಾನು ನಂಬಲಾಗದೇ ಮತ್ತೆ ಮತ್ತೆ ವಿಡಿಯೋದಲ್ಲಿ ಕಣ್ಣು ಕೀಲಿಸಿದೆ, ಆಲಿಸಿದೆ… ಹೌದು, ನೀವೇ..! ಒಹ್.. ಯುವಪ್ರೇಮಿಯ ಆರ್ತತೆಯಲ್ಲಿ, ನಿಮ್ಮ ಎಂದಿನ ಆದ್ರ್ರ ದನಿಯಲ್ಲಿ, ಬಲ ದವಡೆಯಲ್ಲಿ ಪಾನ್ ಇಟ್ಟುಕೊಂಡು, ಭಾವಪರವಶತೆಯಿಂದ ‘ಮೃಗನಯನಿ, ನನ್ನ (ಮನದ) ಶಾಂತಿಯನ್ನು ಕದ್ದಳು ಎಂದು ಹಾಡುತ್ತಿದ್ದಿರಿ. ಆ ಪ್ಯೂಶನ್ ಸಂಗೀತ ವೇದಿಕೆಯಲ್ಲಿಯೂ ಶಾಸ್ತ್ರೀಯ ಸಂಗೀತದ ನಿಮ್ಮದೇ ‘ಮಾಹೋಲ್’ ಒಂದನ್ನು ಹುಟ್ಟುಹಾಕಿದ್ದಿರಿ. ಸಲೀಂ ಮರ್ಚಂಟ್ ‘ಹೋಶ್ ಉಡಾದೆ’ ಎಂದು ಹಾಡು ಮುಂದುವರಿಸಿದ್ದಾಗಲೀ, ಆ ಅಬ್ಬರದ ವಾದ್ಯಸಂಗೀತವಾಗಲೀ ಯಾವುದೂ ಮನದಲ್ಲಿ ಉಳಿಯದೇ, ಹತ್ತು ಹಲವು ರೀತಿಯಲ್ಲಿ “ಛೀನೆ ರೆ ಮೋರ ಚೈನ್ ಮೃಗನಯನಿಯಾಂ…” ಸಾಲನ್ನು ಪುನರಾವರ್ತಿಸುವ ನಿಮ್ಮ ದನಿ ಮಾತ್ರ ಎದೆಗೊಳದಲ್ಲಿ ಅಲೆಯಂತೆ ಹಬ್ಬಿ, ಮನವ ತಬ್ಬಿ ಉಳಿಯಿತು.
ಇದು ಸರಿಯಾಗಿ ಹತ್ತು ವರ್ಷಗಳ ಹಿಂದೆ, 2014ರಲ್ಲಿ. ಅದಕ್ಕಿಂತ ಮೊದಲು ನನಗೆ ತುಂಬ ಇಷ್ಟವಾಗಿದ್ದು
“ಯಾರ್ ಪಿಯಾ ಕೆ ಆಯೇ,
ಯೇ ದುಃಖ ಸಹಾ ನಾ ಜಾಯ್… ಹಾಯ್ ರಾಮ್…
(ಪ್ರಿಯೆಯ ನೆನಪು ಕಾಡುತಿದೆ, ಈ ನೋವು ಸಹಿಸಲಾರೆನು, ಹಾಯ್ ರಾಮ್”
ಈ ರುಮಿಯನ್ನು ಬಡೇ ಗುಲಾಂ ಅಲಿ ಖಾನ್ 1932ರಲ್ಲಿ ತಮ್ಮ ಮರಣಿಸಿದ ಪತ್ನಿಯ ನೆನಪಿನಲ್ಲಿ ಬರೆದಿದ್ದಂತೆ… ಸಂಗಾತಿಯ ಅಗಲಿಕೆಯ ಆತ್ಯಂತಿಕವಾದ ನೋವಿನಲ್ಲಿ ಅದ್ದಿ ತೆಗೆದ ದನಿಯಲ್ಲಿ, ಆ ಭಾವತೀವ್ರತೆಯಲ್ಲಿ, ಅವರಂತೆ ಹಾಡುವವರು ನೀವೊಬ್ಬರೇ ಎನ್ನುವುದು ಎಲ್ಲರೂ ಹೇಳುವ ಮಾತು.
ಇನ್ನೊಂದು ಬಹಳ ಇಷ್ಟವಾಗಿದ್ದು ಸಾಯಲಿಯಾ ಝನಕಾ ಮೋರಿ… ಝನನ ಝನನ ಬಾಜೆ ಝನಕಾರ್….”
ಬಹುಶಃ ನಿಮ್ಮ ಎಲ್ಲಾ ಕಛೇರಿಗಳಲ್ಲಿ ಈ ಎರಡನ್ನೂ ಹಾಡುವಂತೆ ನಿಮಗೆ ಹತ್ತಾರು ಚೀಟಿಗಳು ಬರುತ್ತವೆ. ನೀವು ಅಷ್ಟೇ ಪ್ರೀತಿಯಿಂದ ಕೋರಿಕೆಯನ್ನು ಒಪ್ಪಿ, ಎರಡರಲ್ಲಿ ಒಂದನ್ನಾದರೂ ಹಾಡುತ್ತಿದ್ದಿರಿ.
ಆ ದಿನವೂ ನೀವು ಇಷ್ಟೇ ಪ್ರೀತಿಯಿಂದ ಪಾಯಲಿಯಾ ಝನಕಾರ್ ಮೋರಿ…” ಹಾಡಿದ್ದಿರಿ… ಅದು 2017, ಸೆಪ್ಟೆಂಬರ್ ಎರಡನೇ ವಾರ. ಅಂದು ಜೆಎಸ್‌ಎಸ್ ಸಭಾಂಗಣದಲ್ಲಿ ನಿಮ್ಮ ಕಛೇರಿಯಿತ್ತು. ತುಸು ತಡವಾಗಿ ತಲುಪಿ, ಸಭಾಂಗಣದ ಒಳಗೋಡಿದರೆ, ಇಬ್ಬರು ಸ್ವಯಂಸೇವಕ ದ್ವಾರಪಾಲಕರು “ಒಳಗಡೆ ಒಂದು ಇರುವೆಗೂ ಜಾಗವಿಲ್ಲ, ಯಾರನ್ನೂ ಬಿಡಕೇ ಆಗಲ್ಲ, ಬಾಗಿಲವರೆಗೆ ಜನ ನಿಂತಿದ್ದಾರೆ” ಎಂದರು. ನನ್ನಂತೆ ಇನ್ನೂ ನಾಲ್ಕಾರು ಜನರು ನಿಮ್ಮ ಸಂಗೀತ ಕೇಳದೇ ಹಿಂಗೇ ಹೋಗುವುದೇ ಎಂಬ ಇನ್ನಿಲ್ಲದ ನಿರಾಸೆಯಿಂದ ನಿಂತಿದ್ದೆವು. ಕೊನೆಗೊಮ್ಮೆ ಆಯೋಜಕರಲ್ಲೊಬ್ಬರು “ಒಂದು ನಾಲೈದು ಜನ ಅಷ್ಟೇ ಬರಬಹುದು” ಎಂದು ಕರೆದೊಯ್ದರು. ಅವರು ನಮಗೆ ಜಾಗ ಮಾಡಿಕೊಟ್ಟದ್ದು ವೇದಿಕೆಯ ಸೈಡಿನಲ್ಲಿ ಹಾಸಿದ್ದ ಜಮಖಾನದ ಮೇಲೆ. ಒಹ್… ಹೀಗೆ ತಡವಾಗಿ ಹೋಗಿದ್ದು ಕೂಡ ಪವಾಡವೆಂಬಂತೆ ವರವಾಗಿ ಪರಿಣಮಿಸಿ, ನಿಮ್ಮ ಸಂಗೀತಸುಧೆಯನ್ನು ಕೇವಲ ನಾಲ್ಕಾರು ಅಡಿ ದೂರದಲ್ಲಿ ಕೂತು ಕೇಳುವುದು ಎಂದರೆ… ಆಹಾ! ಅಂದಿನ ರೋಮಾಂಚನವನ್ನು ಪದಗಳಲ್ಲಿ ಚಿತ್ರಿಸಲು ಸಾಧ್ಯವೇ ಇಲ್ಲ. ನಿಮ್ಮ ಇಡೀ ಬದುಕೇ ಈಗೊಂದು ದಂತಕಥೆಯಂತೆ ಕಂಡರೆ ಅಚ್ಚರಿಯಿಲ್ಲ. ಉತ್ತರ ಪ್ರದೇಶದ ಬದಾಯೂಂ ಎಂಬ ಪುಟ್ಟ ಪಟ್ಟಣದ ಪ್ರಸಿದ್ಧ ಸಹಸ್ವಾನ್ ಘರಾನೆಯಲ್ಲಿ ಜನಿಸಿದವರು ನೀವು. ನಿಮ್ಮ ತಾಯಿಯ ಮಾವ ಉಸ್ತಾದ್ ನಿಸಾರ್ ಹುಸೈನ್ ಖಾನರು ಸಹಸ್ವಾನ್ ಘರಾನೆಯನ್ನು ಇನ್ನಷ್ಟು ಬೆಳಗಿದ ಸಂಗೀತಗಾರರು. ನೀವು ನಾಲ್ಕು ವರ್ಷದ ಹಸುಗೂಸಾಗಿದ್ದಾಗ ಸೂಫಿ ಹಾಡುಗಾರ್ತಿಯಾಗಿದ್ದ ನಿಮ್ಮ ತಾಯಿ ಶಾಬ್ರಿ ಬೇಗಂ ತೀರಿಕೊಂಡಿದ್ದಂತೆ. ಅಮ್ಮನ ಬೆಚ್ಚಗಿನ ಮಡಿಲಿನ ಆಸರೆಯಿಲ್ಲದೇ ನಿಮ್ಮ ಪುಟಾಣಿ ಎದೆಯೊಳಗೆ ಅದೆಂಥ ಒಂಟಿತನ ಕಾಡಿರಬಹುದು… ನಿಮ್ಮ ಕಬಡ್ಡಿ, ಕ್ರಿಕೆಟ್ ಹುಚ್ಚು, ಒಂದೆಡೆ ಕುಳಿತು ಅಭ್ಯಾಸ ಮಾಡಲಾಗದ ನಿಮ್ಮ ತಹತಹ, ಆರೇಳು ವರ್ಷದ ಈ ಹಠಮಾರಿಯನ್ನು ನೀವೇ ದಾರಿಗೆ ತನ್ನಿ ಎಂಬಂತೆ ತಂದೆಯವರು ಉ. ನಿಸಾರ್ ಹುಸೈನ್ ಖಾನರ ಬಳಿ ನಿಮ್ಮನ್ನು ಕಳಿಸಿದರು. ಗಂಡಾಬಂದನ್ ಆದಾಗ ನೀವು ಇನ್ನೂ ಆರೇಳು ವರ್ಷದವರು. 1978ರಲ್ಲಿ ಉ.ನಿಸಾರ್ ಹುಸೈನ್ ಖಾನರ ಲಲಿತ್ ರಾಗದ ರೆಕಾರ್ಡಿಂಗಿನಲ್ಲಿ ನಡುನಡುವೆ ಅವರಿಗೆ ಗಾಯನದ ಸಾಥ್ ನೀಡಿದ್ದು ನೀವು. ಆಗ ನಿಮಗೆ ಕೇವಲ ಹತ್ತು ವರ್ಷ. ನಂತರ ಕಲ್ಕತ್ತೆಯಲ್ಲಿ ನಡೆದ ದೊಡ್ಡ ಕಾನ್ಸರೆನ್ಸಿನಲ್ಲಿ ಕಛೇರಿ ನೀಡಿದಾಗ ನಿಮಗೆ ಹನ್ನೊಂದು ವರ್ಷವಿರಬಹುದು ಅಷ್ಟೇ. ಅಂದು ಪಟದೀಪ್ ರಾಗದಲ್ಲಿ ‘ಲಾಗಿ ತೋಸೆ ನೈನಾ ಪ್ರೀತಮ್’ ಹಾಡಿದ್ದೆ ಎಂದು ನೆನಪಿಸಿಕೊಂಡಿದ್ದಿರಿ. ಅಂದು ಕಛೇರಿ ನೀಡಿದ ದಿಗ್ಗಜರಾದರೂ ಯಾರು… ಪಂಡಿತ್ ರವಿಶಂಕರ್, ಪಂ. ಭೀಮಸೇನ ಜೋಶಿ ಇನ್ನಿತರರು. ಆ ವಯಸ್ಸಿನ ನಾವು ಶಾಲೆಯಲ್ಲಿ ನಾಲ್ಕಾರು ಅಕ್ಷರ ಓದಿಬರೆಯುವುದಕ್ಕೆ ಇನ್ನಿಲ್ಲದಂತೆ ಹೆಣಗಾಡುತ್ತಿದ್ದ ಸಮಯದಲ್ಲಿ ನೀವು ದಿಗ್ಗಜರ ಮುಂದೆ ಕುಳಿತು, ಐದಾರು ಸಾವಿರ ಪ್ರೇಕ್ಷಕರ ಎದುರು ಸಂಗೀತ ಕಛೇರಿ ನೀಡಿದ್ದಿರಿ, ಆಗಲೇ ರೆಕಾರ್ಡಿಂಗಿನಲ್ಲಿ ಹಾಡಿದ್ದಿರಿ ಎಂದರೆ ದಂತಕಥೆಯಲ್ಲದೇ ಇನ್ನೇನು ರಾಶಿದ್‌ಜೀ!
ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಸ್ಥಾಪಕ ನಿರ್ದೇಶಕರಾಗಿದ್ದ ವಿಜಯ್ ಕಿಚ್ಚು ನಿಮ್ಮ ಅಜ್ಜ ಉಸ್ತಾದ್ ನಿಸಾರ್ ಹುಸೈನ್ ಖಾನರನ್ನು 1977ರಲ್ಲಿ ಕಲ್ಕತ್ತೆಗೆ ಆಹ್ವಾನಿಸಿದಾಗ, ಅವರು ನಿಮ್ಮನ್ನೂ ಕರೆದೊಯ್ದರು. ಹಾಗೆಂದು ಅಕಾಡೆಮಿಯಲ್ಲಿ ಸುಮ್ಮನೇ ನಿಮ್ಮನ್ನು ತೆಗೆದುಕೊಳ್ಳಲಿಲ್ಲ. ಎಲ್ಲರಂತೆ ನೀವೂ ಪ್ರವೇಶ ಪರೀಕ್ಷೆ ತೆಗೆದುಕೊಂಡೇ ಅಲ್ಲಿಗೆ ಕಾಲಿಟ್ಟಿರಿ. ಅಲ್ಲಿ ಕಲಿಸುವುದಕ್ಕೆ ಇದ್ದ ದೊಡ್ಡ ದೊಡ್ಡ ಸಂಗೀತಗಾರರು, ಅಕಾಡೆಮಿಗೆ ಬಂದು ಹೋಗುತ್ತಿದ್ದ ಬೇರೆ ಬೇರೆ ಹಿರಿಯ ಸಂಗೀತಗಾರರು, ಅಲ್ಲಿದ್ದ ದೊಡ್ಡ ಲೈಬ್ರರಿಯಲ್ಲಿ ಹಳೆಯ ರೆಕಾರ್ಡಿಂಗ್‌ಗಳು, ಹೀಗೆ ಹಲವಾರು ದಿಗ್ಗಜರ, ಎಲ್ಲ ಬಗೆಯ ಸಂಗೀತ ಕೇಳುತ್ತ ಕೇಳುತ್ತ… ಆವರೆಗೆ ರಿಯಾಜ್, ಅದೇ ಅದೇ ಅಭ್ಯಾಸ ಎಂದು ಬೇಸರಪಡುತ್ತಿದ್ದ ನೀವು ಥಟ್ಟನೆ ಸಂಗೀತದೊಂದಿಗೆ ಪ್ರೀತಿಯಲ್ಲಿ ಬಿದ್ದಿರಿ.
ಸಂಗೀತಕ್ಕೆ ಬರದಿದ್ದರೆ ಕ್ರಿಕೆಟ್ ಆಡುತ್ತಿದ್ದೆ ಎಂದಿದ್ದಿರಿ… ಸದ್ಯ! ಬ್ಯಾಟು ಬೀಸಲು, ಬಾಲು ಹಿಡಿಯಲು (ಮತ್ತು ಕಣ್ಣೆವೆ ಪಿಳುಕಿಸದೇ ನೋಡಲು!) ಈ ನಮ್ಮ ಭಾರತದಲ್ಲಿ ಬೇಕಾದಷ್ಟು ಜನರಿದ್ದಾರೆ… ನೀವು ಕ್ರಿಕೆಟ್ ಅಂಗಳಕ್ಕೆ ಬರದೇ ಇದ್ದುದು ಎಷ್ಟು ಒಳ್ಳೆಯದಾಯಿತು ರಾಶಿದ್ ಜೀ! ಲಕ್ಷಾಂತರ ಜನರನ್ನು ನಿಮ್ಮ ಕೊರಳಿನ ಸ್ತರದಾಸರೆಯಲ್ಲಿ ಗಂಧರ್ವ ಲೋಕಕ್ಕೆ ಕರೆದೊಯ್ದು, ಮೈಮರೆಯುವಂತೆ ಮಾಡಿದಿರಿ. ನಿಮ್ಮ ಗುರು ಉಸ್ತಾದ್ ನಿಸಾರ್ ಹುಸೈನ ರೀತಿಯಲ್ಲಿಯೇ ನೀವು ವಿಲಂಬಿತ್ ಖಯಾಲ್ಗಳನ್ನು ನಿಧಾನಗತಿಯಲ್ಲಿ ವಿಸ್ತರಿಸುವುದಕ್ಕೆ ಆದ್ಯತೆ ಕೊಡುತ್ತಿದ್ದಿರಿ. ಜೊತೆಗೆ ಸರಗಮ್ ಹಾಗೂ ಸರಗಮ್ ತಾನ್ ಕಾರಿಗಳ ಬಳಕೆಯಲ್ಲಿ ಅಸಾಧಾರಣ ನೈಪುಣ್ಯತೆ ಸಾಧಿಸಿದ್ದಿರಿ. ಉಸ್ತಾದ್ ಅಮಿರ್ ಖಾನ್ ಹಾಗೂ ಪಂ.ಭೀಮಸೇನ ಜೋಶಿಯವರ ಶೈಲಿಗಳಿಂದಲೂ ಪ್ರಭಾವಿತರಾಗಿದ್ದಿರಿ. ನಿಮ್ಮ ಗುರುಗಳ ಹಾಗೆಯೇ ತರಾನ ಹಾಡುವುದಕ್ಕೆ ನಿಪುಣರಾದರೂ, ಅದನ್ನು ನಿಮ್ಮದೇ ಶೈಲಿಯಿಂದ ತುಸು ಖಯಾಲ್ ಶೈಲಿಯಲ್ಲಿ ಮಾಡುತ್ತಿದ್ದಿರಿ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಎಲ್ಲ ಪ್ರಸ್ತುತಿಯಲ್ಲಿ ನಿಮ್ಮ ಎದೆಯಾಳದಿಂದ ಹೊರಹೊಮ್ಮುವ ಭಾವತೀವ್ರತೆ. ಇದೆಲ್ಲ ಸಂಗೀತ ಬಲ್ಲವರು ಹೇಳುವ ಮಾತು ರಾಶಿದ್ ಜೀ… ಸಂಗೀತದ ತಾಂತ್ರಿಕ ಅಂಶಗಳನ್ನು ಅರಿಯದ ನನ್ನಂಥವಳಿಗೆ ನಿಮ್ಮ ಸಂಗೀತವನ್ನು ಎದೆಗಿಳಿಸಿಕೊಳ್ಳುವುದಷ್ಟೇ ಗೊತ್ತು. ಶಾಲೆಗೆ ಹೋಗಿ ಕಲಿಯದ ನೀವು ತುಂಬ ಓದಿಕೊಂಡಿರುವ ಸುಂದರ ಹುಡುಗಿಯರೆಂದರೆ ಮೆಚ್ಚುತ್ತಿದ್ದಿರಂತೆ. ಯಾವುದೋ ಮದುವೆ ಮನೆಯಲ್ಲಿ ಭೇಟಿಯಾದ ಲವಲವಿಕೆಯ, ಸುಂದರ ಬಂಗಾಳಿ ಹುಡುಗಿ ಜೊಯೀತ (ಶೋಮ) ಬಸು ನಿಮ್ಮ ನಿದ್ದೆ ಕದ್ದೊಯ್ದ ಮೃಗನಯನಿ”ಯಾಗಿದ್ದಳು. ಆಗಿನ್ನೂ ನಿಮಗೆ 23ರ ಹರೆಯ… ಶೋಮ ಎಂಬಿಎ ಓದುತ್ತಿದ್ದರು. ಮೂರು ದಶಕಗಳಿಗೂ ಮೀರಿದ ಎಂಥ ಅನುರೂಪದ ದಾಂಪತ್ಯ ನಿಮ್ಮದು… ಸ್ವರ್ಗಕ್ಕೆ ಕಿಚ್ಚುಹಚ್ಚಿದಂತೆ ಇದ್ದಿರಿ. ನಿಮ್ಮ ತಾಯಿಯ ಹೆಸರಿನಲ್ಲಿ ಶಾಖೆ ಬೇಗಂ ಮೆಮೊರಿಯಲ್ ಟ್ರಸ್ಟ್ ಸ್ಥಾಪಿಸುವುದಕ್ಕೆ ಒತ್ತಾಸೆಯಾಗಿ ನಿಂತು, ಅದರ ದೇಖರೇಖಿಯನ್ನೆಲ್ಲ ಮಾಡುತ್ತಿದ್ದವರು ಶೇಮಾ. ಮಗ ಅರ್ಮಾನವನ್ನು ನಿಮ್ಮ ಶಾಸ್ತ್ರೀಯ ಸಂಗೀತದ ತೆಕ್ಕೆಗೆ ಸೆಳೆದುಕೊಂಡ ನೀವು, ಇಬ್ಬರು ಹೆಣ್ಣುಮಕ್ಕಳಿಗೆ ಮೊದಮೊದಲು ಸಂಗೀತ ಕಲಿಸಲು ಹಿಂಜರಿಕೆ ತೋರಿದಿರಿ ಎನ್ನುವುದು ನಿಮ್ಮ ಬಗ್ಗೆ ನನ್ನ ತಕರಾರು ರಾಶಿದ್‌ಜೀ. ಆದರೆ ಇಬ್ಬರಿಗೂ ನಿಮ್ಮ ಸಂಗೀತ ಸ್ವಲ್ಪ ಒಲಿದಿದೆ, ನೀವೂ ಕಡೆಗೆ ತುಸು ರಾಜಿಯಾದಿರಿ. ದೊಡ್ಡಮಗಳು ಸುಹಾ ಸೂಫಿ ಗಾಯಕಿಯಾಗಿದ್ದಾಳೆ ಹಾಗೂ ಶಿವೊನ ಸಿನಿಮಾಗಳಲ್ಲಿ ಗಾಯಕಿಯಾಗಿದ್ದಾಳೆ.
ನಿಮಗೆ ಯುವ ಜನರ ನಡುವೆ ಅತಿಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಜಬ್ ವಿ ಮೆಟ್ ಸಿನಿಮಾದ ‘ಆವೋಗೆ ಜಬ್ ತುಮ್’ ಹಾಡು. ಆದರೆ ಇವುಗಳನ್ನು ಸಂಗೀತದ ಗಂಭೀರ ಶೋತೃಗಳ ಮುಂದೆ ಹಾಡುವುದನ್ನು ತಪ್ಪಿಸುತ್ತಿದ್ದಿರಿ ಅಥವಾ ಕಛೇರಿಯ ಕೊನೆಯಲ್ಲಿ ಹಾಡುತ್ತಿದ್ದಿರಿ. ನಿಮ್ಮ ಉದ್ದೇಶ ಸ್ಪಷ್ಟವಿತ್ತು… ಆ ಹಾಡು ಕೇಳಲು ಬರುವ ಯುವ ಜನತೆಯ ಕಿವಿಯ ಮೇಲೆ ಸ್ವಲ್ಪ ಶಾಸ್ತ್ರೀಯ ಸಂಗೀತ ಬೀಳುವಂತೆ ಮಾಡುವುದು, ನಿಧಾನಕ್ಕೆ ಅಭಿರುಚಿ ಬೆಳೆಸುವುದು. ಪ್ಯೂಷನ್, ಸಿನಿಮಾ ಸಂಗೀತ, ಪಾಶ್ಚಾತ್ಯ ವಾದ್ಯಸಂಗೀತ, ಹಿಂದೂಸ್ತಾನಿ ಸಂಗೀತದ ಬೇರೆ ಬೇರೆ ಪ್ರಕಾರಗಳು… ಹೀಗೆ ಎಷ್ಟೆಲ್ಲ ಪ್ರಯೋಗಶೀಲತೆಗೆ ನಿಮ್ಮನ್ನು ತೆರೆದುಕೊಂಡಿದ್ದಿರಿ… ಕೊನೆಯವರೆಗೂ ಕಲಿಯುವ ತವಕ, ಇನ್ನಷ್ಟು ಉತ್ಕೃಷ್ಟವಾಗಿ ಹಾಡಬೇಕೆಂಬ ತಹತಹ ನಿಮ್ಮಲ್ಲಿತ್ತು. “ನಾನು ಚೆನ್ನಾಗಿ ಹಾಡಿದೆ ಎಂದು ಬಹಳ ಅಪರೂಪಕ್ಕೊಮ್ಮೆ ಅನ್ನಿಸುತ್ತದೆ. ನನ್ನದೇ ರೆಕಾರ್ಡಿಂಗ್ ಕೇಳಿದರೆ, ಅರೆ, ಎಷ್ಟು ಲಘುವಾಗಿದೆಯಲ್ಲ, ಇದು ಘನವಾಗಿಲ್ಲ ಎನ್ನಿಸುತ್ತದೆ” ಎಂದಿದ್ದಿರಿ.
ದೂರದರ್ಶನವು 2001 ರಲ್ಲಿ ಪಂಡಿತ್ ಭೀಮಸೇನ್ ಜೋಶಿಯವರ ಜೊತೆಗೆ ನಿಮ್ಮ ಜುಗಲಬಂದಿ ಕಾರ್ಯಕ್ರಮವನ್ನು ಆಯೋಜಿಸಿತ್ತಲ್ಲ… ಆಗ ಅವರಿಗೆ 79 ವರ್ಷ ಮತ್ತು ನಿಮಗೆ 33 ವರ್ಷ… ತಲೆಮಾರಿನ ಅಂತರವೇ ಇಲ್ಲದಂತೆ ಇಬ್ಬರ ನಡುವೆ ಅದೆಂಥ ಸ್ವರ-ಸಾಂಗತ್ಯವಿಲ್ಲ..! ಆಗ ಅವರಿಗೆ ನೆಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವೇದಿಕೆಯ ತುದಿಯಲ್ಲಿ ಕೆಳಗೆ ಕಾಲು ಇಳಿಬಿಟ್ಟು ಕುಳಿತಿದ್ದರು. ನೀವು ಅವರ ಪಕ್ಕದಲ್ಲಿ ನಿಮ್ಮ ಎಂದಿನ ಸ್ವರಮಂಡಲದೊಂದಿಗೆ… ಕೊನೆಯಲ್ಲಿ ಇಬ್ಬರೂ ಹಾಡಿದ್ದು ‘ತುಮ್ ಕಾಹೈ ಕೋ ನೇಹಾ ಲಗಾಯ ಸಜನಾ’ ನೀವಿಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಹಾಡಿದಿರಿ… ಮತ್ತು ನಾವು ಈಗಲೂ ಆ ರೆಕಾರ್ಡಿಂಗ್ ಹಾಕಿಕೊಂಡು, ಕಣ್ಣಲ್ಲಿ ಕಣ್ಣಿಟ್ಟು ನಿಮ್ಮಿಬ್ಬರನ್ನೂ ನೊಡುತ್ತಾ, ನಿಮ್ಮ ದನಿಯನ್ನು ಎದೆಗಿಳಿಸಿಕೊಳ್ಳುತ್ತಿದ್ದೇವೆ.
ಭೀಮಸೇನ ಜೋಶಿಯವರಿಗೆ ನಿಮ್ಮ ಮೇಲೆ ಅದೆಂಥ ಅಭಿಮಾನ, ಅಕ್ಕರೆಯಿತ್ತು ಎಂದು ನೀವು ಒಂದು ಸಂದರ್ಶನದಲ್ಲಿ ಹೇಳಿದ್ದಿರಿ. ನಿಮ್ಮನ್ನು ಚಿಕ್ಕ ವಯಸ್ಸಿನಿಂದ ಕಂಡವರು ಅವರು… ಶಾಸ್ತ್ರೀಯ ಸಂಗೀತ ಪರಂಪರೆಯ ಉತ್ಕೃಷ್ಟತೆ ಹೀಗೆಯೇ ಮುಂದುವರಿಯಬಲ್ಲದೇ ಎಂದು ಹಿಂದೂಸ್ತಾನಿ ಕಲಾರಸಿಕರು ಭೀಮಸೇನ ಜೋಶಿಯವರಿಗೆ ಕೇಳಿದಾಗ, ಅವರು “ಈಗ ಭಾರತೀಯ ಗಾಯನ ಸಂಗೀತದಲ್ಲಿ ಭವಿಷ್ಯದ ಭರವಸೆಯಾಗಿ ಒಬ್ಬ ವ್ಯಕ್ತಿ ಕಾಣುತ್ತಿದ್ದಾರೆ” ಎಂದು ನಿಮ್ಮತ್ತ ಕೈತೋರಿದ್ದರಂತೆ.
ನೀವು ಜೋಶಿಯವರ ಮಾತನ್ನು ಉಳಿಸಿಕೊಂಡಿರಿ. ದಿನದಿಂದ ದಿನಕ್ಕೆ ಗಾಯನದಲ್ಲಿ ಪಳಗುತ್ತ, ನಿಮ್ಮದೇ ಕೊರಳಿನ ಸ್ವರಗಳಿಗೆ ಹೊಸ ಮೆರುಗು, ಮಾಧುರ್ಯ ತುಂಬುತ್ತ ನಡೆದಿರಿ. ನಿಮಗೆ ಪ್ರಶಸ್ತಿಗಳು ಸಂದವು ಎನ್ನುವುದಕ್ಕಿಂತ ನಿಮ್ಮಿಂದಾಗಿ ಪ್ರಶಸ್ತಿಗಳ ತೂಕ ಹೆಚ್ಚಿತು ಎನ್ನುವೆ. 2006ರಲ್ಲಿ ಪದ್ಮಶ್ರೀ ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಬಂದಾಗ ನಿಮಗಿನ್ನೂ 36 ವರ್ಷವಷ್ಟೆ. 2010ರಲ್ಲಿ ಗ್ಲೋಬಲ್ ಇಂಡಿಯನ್ ಮ್ಯುಸಿಕ್ ಅಕಾಡೆಮಿ ಪ್ರಶಸ್ತಿ, ಬಂಗಾಭೂಷಣ್ ಪ್ರಶಸ್ತಿ, ಮಹಾ ಸಂಗೀತ್ ಸಮ್ಮಾನ್ ಪ್ರಶಸ್ತಿ, 2022ರಲ್ಲಿ ಪದ್ಮಭೂಷಣ ಪ್ರಶಸ್ತಿ… ಒಂದೆರಡೇ!
ಹಾಂ… ಮೊನ್ನೆ ಫೋನ್ ಮಾಡಿದ ಪಂ.ರಾಜೀವ ತಾರಾನಾಥರು ನಿಮ್ಮ ಬಗ್ಗೆ ನೆನೆಯುತ್ತ, “ಇಲ್ಲಿ ಬೆಂಗಳೂರಿನಲ್ಲಿ ಅವರಿಗೇನೋ ಪ್ರಶಸ್ತಿ ಕೊಟ್ಟೆವು. ಜಾಕೀರ್ ಹುಸೇನ್ ಇದ್ದರು. ದೊಡ್ಡವರು ನೀವು, ನೀವೇ ಕೊಡಿ ಎಂದು ನನ್ನ ಕೈಯಲ್ಲಿಯೇ ಕೊಡಿಸಿದರು. ತೊಂಬತ್ತರ ದಶಕವಿರಬಹುದು… ಏನು ಪ್ರಶಸ್ತಿ ಅಂತ ಮರೆತುಹೋಗಿದೆ. ಬಹಳ ಒಳ್ಳೆಯ ಸಂಗೀತಗಾರ’ ಎಂದು ಭಾರವಾದ ದನಿಯಲ್ಲಿ ಹೇಳುತ್ತ ಮೌನಕ್ಕೆ
ಜಾರಿದರು.
ಹತ್ತು ವರ್ಷದ ಹುಡುಗನಾಗಿದ್ದಾಗ ನಿಮ್ಮ ಉಸ್ತಾದರೊಂದಿಗೆ ಹಾಡಿದ ಲಲಿತ್ ರಾಗದ ರೆಕಾರ್ಡಿಂಗಿನ ಲಿಂಕ್ ಅನ್ನು ಗೆಳತಿ ಕಳಿಸಿದ್ದಾಳೆ. ಅದೇ ಬಂದಿಶ್ ಅನ್ನು ನೀವು ಬೇರೆ ಕಛೇರಿಗಳಲ್ಲಿಯೂ ಹಾಡಿದ್ದೀರಿ. ವಿಷಾದ ರಾಗದಲ್ಲಿ ಅದ್ದಿ ತೆಗೆದ ದನಿಯಲ್ಲಿ ನೀವು ಹಾಡುತ್ತಿರುವುದನ್ನು ಕೇಳುತ್ತ ಕೂತಿರುವೆ.
“ರೈನಾ ಕಾ ಸಪನಾ; ಮೈಂ ಕೈಸೆ ಕಹೂಂ ರೇ; ಸೋವತ ಸೋವತ, ಆಂಖೇ ಖುಲಿರಿ ಜಬ್, ಕೌ ನಾ ಪಾಯೋ ಅಪ್ಪಾ
“ರಾತ್ರಿಯ ಕನಸು… ಏನೆಂದು ಹೇಳಲಿ… ನಿದ್ದೆಯಾಗಿ ಕಣ್ಣು ತೆರೆದರೆ, ಇರಲಿಲ್ಲ ಯಾರೂ ನನ್ನೊಂದಿಗೆ”
ಅರೆ… ಇಷ್ಟು ದಿನ ಕನಸು ಮುಗಿದು, ನಿದ್ದೆಯಿಂದೆದ್ದರೆ, ನೀವು ಇದ್ದಿರಿ ಅಲ್ಲೆಲ್ಲೋ ದೂರದಲ್ಲಿ ನಮಗಾಗಿ ಹಾಡುತ್ತ. ಆದರೆ ಈಗ ನೀವೂ ಕೂಡ..?
ಅಂದಹಾಗೆ ಅಂದು ಜೆಎಸ್ ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ ಮುಗಿದ ಮೇಲೆ, ನಿಮ್ಮನ್ನು ಅಭಿನಂದಿಸುವ ಸಮಯದಲ್ಲಿ ನೀವು ವಿನಮ್ರ ಹುಡುಗನ ಹಾಗೆ ಎದ್ದು ನಿಂತಿದ್ದಿರಿ… ನಿಮ್ಮ ಸಾಥಿದಾರರನ್ನು ಪರಿಚಯಿಸಿದ್ದಿರಿ… ನಾನು ಮೊಬೈಲಿನಲ್ಲಿ ಫೋಟೋ ತೆಗೆದುಕೊಂಡೆ. ಅದರಲ್ಲಿ ಒಂದು ಫೊಟೋವನ್ನು ಯಾರಿಗಾದರೂ ತೋರಿಸಿದ ನಂತರ ನಾನು ಕೇಳುವ ಪ್ರಶ್ನೆ- “ಎರಡನೇ ಫೋಟೋದಲ್ಲಿ ರಾಶಿದ್ ಖಾನರು ಯಾಕೆ ಬಲಭಾಗಕ್ಕೆ ನೋಡ್ತಿದ್ದಾರೆ??” ಅವರು ಯಾಕಿರಬಹುದೆಂದು ಅಚ್ಚರಿಪಡುತ್ತಿರುವಂತೆ ನಾನು ಉತ್ತರಿಸುತ್ತೇನೆ- “ಅಯ್ಯೋ… ಇನ್ಯಾಕೆ… ರಾಶಿದ್ ಖಾನರು ನನ್ನನ್ನೇ (ಪ್ರೀತಿಯಿಂದ!) ನೋಡ್ತಿದ್ದಾರೆ (ಅಂತ ನಾನಂತೂ ಭಾವಿಸಿದ್ದೇನೆ)!” ಎಂದು. ಮತ್ತೆ ನಾವೆಲ್ಲ ಗೊಳ್ಳನೆ ನಗುವುದು…
ಈಗ ನೀವು ಕಛೇರಿ ಮುಗಿಯುವ ಮೊದಲೇ ಭೈರವಿಯಲ್ಲಿ ಜೀವನಗೀತೆ ಹಾಡಿ, ರಂಗಸ್ಥಲದಿಂದಲೇ ಹಠಾತ್ತನೆ ಎದ್ದು ಹೋಗಿಬಿಟ್ಟಿದ್ದೀರಿ… ಇನ್ನೆಂದೂ ಬಾರದ ಲೋಕಕ್ಕೆ. ಇದು ಹೋಗುವ ಸಮಯವೇ ರಾಶಿದ್
ಜೀ?
ಈಗ ನಾವು ನಿಮಗೆ ಕರೆಯುತ್ತಿದ್ದೇವೆ “ಅಲಬೇಲಾ.. ಸಾಜನ್ ಆಯೋ ರೆ…”
ಒಮ್ಮೆ ಮಾತನಾಡಿ ರಾಶಿದ್ ಜೀ…
ನಾವಿಲ್ಲಿ ದಿಕ್ಕೆಟ್ಟು ಕುಳಿತಿದ್ದೇವೆ… ಹುಚ್ಚರಂತೆ…
“ಯಾರ್ ಪಿಯಾ ಕೆ ಆಯೇ, ಯೇ ದುಃಖ್ ಸಹಾ ನಾ ಜಾಯ್’…
ಉಳಿದಿರುವ ಆಶಯವೊಂದೇ ಈಗ… ನಿಮ್ಮ ಸಪ್ತಸ್ವರಗಳು ನಮ್ಮನ್ನು ಹೀಗೆಯೇ ಪ್ರೀತಿಯಿಂದ ದಿಟ್ಟಿಸುತಿರಲಿ. ನೀವಿಲ್ಲಿ ಉಳಿಸಿಹೋಗಿರುವ ನಿಮ್ಮ ಜೇನುದನಿ ನಮ್ಮನ್ನು ಎಲ್ಲದರಿಂದ ಪಾರುಗಾಣಿಸಲಿ. “ಅಬ್ ಮೋರಿ ನಯ್ಯಾ ಪಾರ್ ಕರೋಗೆ”
sumangalagm@gmail.com





