ವಿದೇಶ-ವಿಹಾರ
ಆಗಸ್ಟ್ ಒಂದರ ಗಡುವು ಬರುತ್ತಿದ್ದಂತೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಿಧ ದೇಶಗಳ ಮೇಲೆ ವಿತರಿಸಿದ ಸುಂಕದ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ವಾಣಿಜ್ಯ ಒಪ್ಪಂದ ಮಾಡಿಕೊಂಡಿರುವ ದೇಶಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ. ಹೊಸ ಸುಂಕ ಕುರಿತಂತೆ ಭಾರತ ಮತ್ತು ಅಮೆರಿಕ ನಡುವೆ ಇನ್ನೂ ಮಾತುಕತೆ ನಡೆಯುತ್ತಿದ್ದರೂ ಶೇ.೨೫ರಷ್ಟು ಸುಂಕವನ್ನು ವಿಧಿಸಲಾಗಿದೆ. ಇದರ ಜೊತೆಗೆ ರಷ್ಯಾದ ತೈಲ ಪಡೆಯುತ್ತಿರುವುದಕ್ಕಾಗಿ ಮತ್ತು ಡಾಲರ್ ವಿರೋಧಿ ಬ್ರಿಕ್ಸ್ ಕೂಟದ ಭಾಗವಾಗಿರುವುದಕ್ಕಾಗಿ ದಂಡ ವಿಧಿಸಲಾಗುವುದೆಂದು ಪ್ರಕಟಿಸ ಲಾಗಿದೆ.
ದಂಡದ ಪ್ರಮಾಣವನ್ನು ನಿರ್ದಿಷ್ಟವಾಗಿ ಬಹಿರಂಗಪಡಿಸಿಲ್ಲವಾದರೂ ಕನಿಷ್ಠ ಶೇ.೧೦ ಎಂದು ತಿಳಿಯಲಾಗಿದೆ. ಅಲ್ಲಿಗೆ ಒಂದು ವಸ್ತುವನ್ನು ಅಮೆರಿಕಕ್ಕೆ ರ- ಮಾಡಿದರೆ ಅದರ ಮೇಲೆ ಶೇ.೩೫ರಷ್ಟು ಸುಂಕ ಬೀಳುತ್ತದೆ. ಅಮೆರಿಕದ ಜನರು ಭಾರತದ ಒಂದು ವಸ್ತುವನ್ನು ಕೊಂಡರೆ ಅದರ ಮೇಲೆ ಶೇ.೩೫ರಷ್ಟು ಹೆಚ್ಚು ಬೆಲೆ ತೆರಬೇಕಾಗುತ್ತದೆ.
ಇದೀಗ ಟ್ರಂಪ್ ಅವರ ಆಪ್ತ ದೇಶವಾಗಿರುವ ಪಾಕಿಸ್ತಾನದ ಮೇಲೆ ವಿಧಿಸಲಾಗಿದ್ದ ಶೇ.೩೦ ಸುಂಕವನ್ನು ಶೇ.೧೯ಕ್ಕೆ ಇಳಿಸಲಾಗಿದೆ. ಸುಂಕದ ಪಟ್ಟಿ ಹೊರಡಿಸುವ ಮೊದಲೇ ಟ್ರಂಪ್ ಭಾರತವನ್ನು ಹೀಯಾಳಿಸಿ, ಪಾಕಿಸ್ತಾನವನ್ನು ಹೊಗಳಿ ಮಾತನಾಡಿದ್ದಾರೆ. ಪಾಕಿಸ್ತಾನದಲ್ಲಿರುವ ತೈಲ ನಿಕ್ಷೇಪಗಳಿಂದ ತೈಲ ತೆಗೆಯಲು ಅಮೆರಿಕ ನೆರವಾಗಲಿದೆ, ಯಾರಿಗೆ ಗೊತ್ತು ಒಂದು ದಿನ ಪಾಕಿಸ್ತಾನವೂ ಭಾರತಕ್ಕೆ ತೈಲ ಮಾರಾಟ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ. ಉಕ್ರೇನ್ ಯುದ್ಧ ನಿಲ್ಲಿಸಬೇಕೆಂದು ರಷ್ಯಾದ ಮೇಲೆ ಒತ್ತಡ ಹೇರಲಾಗುತ್ತಿದೆ. ಇಂಥ ಸಂದರ್ಭದಲ್ಲಿಯೂ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಅದು ದಂಡ ತೆರಬೇಕಾಗಿದೆ.
ಭಾರತ ಮತ್ತು ರಷ್ಯಾದ ಅರ್ಥವ್ಯವಸ್ಥೆ ಕುಸಿದಿದ್ದು, ಅವು ಒಟ್ಟಿಗೆ ನೆಲಕಚ್ಚಲಿವೆ ಎಂದು ಟ್ರಂಪ್ ಮಾತನಾಡಿದ್ದಾರೆ. ಅಲ್ಲಿಗೆ ಸುಂಕದ ವಿಚಾರದಲ್ಲಿ ರಾಜಿ ಇಲ್ಲ ಎಂದಾಯಿತು. ಆದರೆ ಭಾರತ ಇನ್ನೂ ಆಶಾಭಾವನೆ ಇಟ್ಟುಕೊಂಡಂತಿದೆ. ಸುಂಕದ ವಿಚಾರದಲ್ಲಿ ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಟ್ರಂಪ್ ಹೇಳಿರುವುದು ಈ ಆಶಾಭಾವನೆಗೆ ಕಾರಣ.
ಸುಂಕ ಕುರಿತಂತೆ ಬ್ರಿಟನ್, ದಕ್ಷಿಣ ಕೊರಿಯಾ, ಯೂರೋಪ್ ಒಕ್ಕೂಟವೂ ಸೇರಿದಂತೆ ಕೆಲವು ದೇಶಗಳ ಜೊತೆ ಒಪ್ಪಂದವಾಗಿದೆ. ಆದರೆ ಬಹುಪಾಲು ದೇಶಗಳ ಜೊತೆ ಒಪ್ಪಂದ ಆಗಿಲ್ಲ. ಈ ಹಿನ್ನೆಲೆಯಲ್ಲಿ ಟ್ರಂಪ್ ಸುಂಕದ ಪ್ರಮಾಣವನ್ನು ತಾವೇ ನಿರ್ಧರಿಸಿ ೬೯ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಪಟ್ಟಿಯಲ್ಲಿ ಇಲ್ಲದ ದೇಶಗಳ ಮೇಲೆ ಸುಂಕ ಶೇ.೧೦ ರಿಂದ ಆರಂಭವಾಗುತ್ತದೆ. ಅಂತಿಮ ಪ್ರಮಾಣವನ್ನು ನಂತರ ನಿರ್ಧರಿಸಲಾಗುವುದೆಂದು ಪ್ರಕಟಿಸಲಾಗಿದೆ. ಒಂದು ಒಪ್ಪಂದಕ್ಕೆ ಬರಲು ಮೆಕ್ಸಿಕೋ ದೇಶಕ್ಕೆ ಇನ್ನೂ ಮೂರು ತಿಂಗಳು ಕಾಲಾವಕಾಶ ಕೊಡಲಾಗಿದೆ. ಆದರೆ ಕಬ್ಬಿಣ, ಅಲ್ಯೂಮೂನಿಯಂ ಮತ್ತು ತಾಮ್ರ ಆಮದು ಮೇಲೆ ಈಗಾಗಲೇ ವಿಧಿಸಲಾಗಿರುವ ಶೇ.೫೦ ಸುಂಕ ಮುಂದುವರಿಯುತ್ತದೆ ಎಂದು ಪ್ರಕಟಿಸಲಾಗಿದೆ.
ಟ್ರಂಪ್ ಅವರ ಪ್ರಕಟಣೆಗಳನ್ನು ನೋಡಿದರೆ ಈ ಸುಂಕದ ವಿಚಾರ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಟ್ರಂಪ್ ಅವರು ಸುಂಕ ಹೇರಿರುವುದನ್ನು ಜಗತ್ತಿನ ಎಲ್ಲ ದೇಶಗಳ ನಾಯಕರೂ ಖಂಡಿಸುತ್ತಿದ್ದಾರೆ. ಟ್ರಂಪ್ ಪಾಳೇಗಾರರ ಯುಗದ ಪಳೆಯುಳಿಕೆಯಂತೆ ಎಲ್ಲರಿಗೂ ಕಾಣಿಸುತ್ತಿದ್ದಾರೆ.
ಅಮೆರಿಕ ಆರ್ಥಿಕವಾಗಿ ಬಲಾಢ್ಯ ದೇಶ. ಶ್ರೀಮಂತ ಬಳಕೆದಾರರಿರುವ ದೇಶ. ಮಾರುಕಟ್ಟೆಯೇ ಅಮೆರಿಕದ ಆರ್ಥಿಕತೆಯ ಜೀವಾಳ. ಹೀಗಾಗಿ ಬಹುಪಾಲು ದೇಶಗಳು ಅಮೆರಿಕದ ಜೊತೆ ಉತ್ತಮ ಮಾರುಕಟ್ಟೆ ಸಂಬಂಧವನ್ನು ಹೊಂದಿವೆ. ನೂರಾರು ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಾ ಬಂದಿವೆ. ಟ್ರಂಪ್ ಇದನ್ನೇ ಬಂಡವಾಳ ಮಾಡಿಕೊಂಡು ಅಮೆರಿಕದೊಳಕ್ಕೆ ಇತರ ದೇಶಗಳಿಂದ ಬರುವ ಎಲ್ಲ ವಸ್ತುಗಳ ಮೇಲೆ ಸುಂಕವನ್ನು ಹೆಚ್ಚಿಸಿ ದೇಶಕ್ಕೆ ಹೆಚ್ಚು ಆದಾಯ ಬರುವಂತೆ ಮಾಡಬೇಕೆಂದು ಹೊರಟಿದ್ದಾರೆ. ಅಮೆರಿಕ ೧೯೩೪ ರಿಂದಲೂ ಕಡಿಮೆ ಆಮದು ಸುಂಕವನ್ನು ವಿಧಿಸುತ್ತಾ ಬಂದಿದೆ. ಕನಿಷ್ಠ ೨.೫ರಿಂದ ೬.೦೦, ಗರಿಷ್ಟ ಶೇ ೧೯. ಸರಾಸರಿ ಶೇ. ೧೮.೨ ರಷ್ಟು ಆಮದು ಸುಂಕವನ್ನು ವಿಧಿಸಲಾಗುತ್ತಿದೆ.
ಈ ಪ್ರಮಾಣವನ್ನು ಟ್ರಂಪ್ ನೂರು ಪಟ್ಟು , ಕೆಲವು ವಸ್ತುಗಳ ಮೇಲೆ ೨೦೦ರಷ್ಟು ಸುಂಕ ವಿಧಿಸುವ ಉದ್ದೇಶವನ್ನು ಪ್ರಕಟಿಸಿದ್ದಾರೆ. ಈ ಕ್ರಮ ಅಮೆರಿಕಕ್ಕೆ ಲಾಭ ತಂದುಕೊಡುವುದಾದರೂ ರಫ್ತು ದೇಶಗಳಿಗೆ ಆಘಾತವೇ ಸರಿ. ಹೊಸದಾಗಿ ಹೇರಿದ ಸುಂಕ ಸೇರಿಸಿ ವಸ್ತುಗಳನ್ನು ಮಾರಾಟ ಮಾಡುವುದು ಸುಲಭವಲ್ಲ. ಸಹಜವಾಗಿ ಆಮದಾದ ವಸ್ತುಗಳ ಬೆಲೆ ಜಸ್ತಿಯಾಗುತ್ತದೆ. ಆಗ ಕೊಳ್ಳುವವರು ಕಡಿಮೆಯಾಗುತ್ತಾರೆ. ವ್ಯಾಪಾರವೂ ಕುಸಿಯುತ್ತದೆ. ಉತ್ಪಾದನೆಗೆ ಹಿನ್ನಡೆ ಉಂಟಾಗುತ್ತದೆ. ಇದರಿಂದ ಆಮದು-ರಫ್ತುದಾರರು ನಷ್ಟ ಎದುರಿಸ ಬೇಕಾಗುತ್ತದೆ. ಹೀಗಾಗಿಯೇ ಟ್ರಂಪ್ ವಿಧಿಸಿರುವ ಸುಂಕವನ್ನು ಎಲ್ಲರೂ ವಿರೋಧಿಸುತ್ತಿದ್ದಾರೆ.
ಇದು ಸುಂಕ ಹೇರಿಕೆಯ ಒಂದು ಮುಖ ಅಷ್ಟೆ. ಈ ಸುಂಕ ಯುದ್ಧಕ್ಕೆ ಮತ್ತೊಂದು ಮುಖವೂ ಇದೆ. ಪ್ರಸ್ತುತ ಅಂದಾಜಿನ ಪ್ರಕಾರ ಟ್ರಂಪ್ ಹೊಸ ಸುಂಕದಿಂದ ಅಮೆರಿಕಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧೨೮ ಬಿಲಿಯನ್ ಡಾಲರ್ ಹೆಚ್ಚು ಆದಾಯ ಬರಲಿದೆ. ಹತ್ತು ವರ್ಷಗಳಲ್ಲಿ ೨.೫ ಟ್ರಿಲಿಯನ್ ಡಾಲರ್‌ನಷ್ಟು ಹೆಚ್ಚು ಆದಾಯ ಬರಲಿದೆ ಎಂದು ಅಂದಾಜು ಮಾಡ ಲಾಗಿದೆ. ಅಮೆರಿಕದ ಆಮದು ಪ್ರಮಾಣ ಸುಮಾರು ೩೦೦ ಬಿಲಿಯನ್ ಡಾಲರ್ ಇದ್ದರೆ ರ- ಪ್ರಮಾಣ ಕೇವಲ ೧೦೦ ಬಿಲಿಯನ್ ಡಾಲರ್‌ಗಳಷ್ಟು. ಹೀಗಾಗಿ ಆಮದಾದ ವಸ್ತುಗಳಿಂದ ಅಪಾರ ಪ್ರಮಾಣದಲ್ಲಿ ಸರ್ಕಾರಕ್ಕೆ ಆದಾಯ ಬರಲಿದೆ. ಟ್ರಂಪ್ ಹೇಳುವಂತೆ ಅಮೆರಿಕ ಹಿಂದೆಂದೂ ಕಾಣದಂಥ ಹಣದ ಸುರಿಮಳೆಯನ್ನು ಕಾಣುತ್ತದೆ.
ಇದು ತತ್‌ಕ್ಷಣದ ಲಾಭ ಮಾತ್ರ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ. ಈಗ ಹತ್ತಾರು ದೇಶಗಳಿಂದ ಗ್ರಾಹಕರ ಬೇಡಿಕೆಯ ವಸ್ತುಗಳು ಅಮೆರಿಕಕ್ಕೆ ಬರುತ್ತಿವೆ. ಸ್ಪರ್ಧೆಯಿಂದಾಗಿ ಬೆಲೆಗಳೂ ಕಡಿಮೆ. ಆದರೆ ಅದೇ ಗ್ರಾಹಕರ ವಸ್ತುಗಳು ಅಮೆರಿಕದಲ್ಲಿಯೇ ತಯಾರಾಗಲಿ ಎನ್ನುವುದು ಟ್ರಂಪ್ ಅಭಿಪ್ರಾಯ. ಅಮೆರಿಕದಲ್ಲಿ ಬಂಡವಾಳ ಹೂಡಿ ಗ್ರಾಹಕರ ವಸ್ತುಗಳನ್ನು ತಯಾರಿಸಲು ಹಲವು ವರ್ಷಗಳೇ ಹಿಡಿಯುತ್ತವೆ. ಜೊತೆಗೆ ಅಮೆರಿಕದಲ್ಲಿ ಕಾರ್ಮಿಕರ ಸಂಬಳ ಸೌಲಭ್ಯ ಹೆಚ್ಚು. ಅಲ್ಲಿನ ಕಾನೂನಿನ ಪ್ರಕಾರ ಬಂಡವಾಳ ಹೂಡಿ, ನೌಕರರಿಗೆ ವೇತನ ಕೊಟ್ಟು ಆ ವಸ್ತು ಮಾರುಕಟ್ಟೆಗೆ ಬರುವ ವೇಳೆಗೆ ಅದರ ಬೆಲೆ ಸಹಜವಾಗಿ ಅತಿ ಹೆಚ್ಚು ಇರುತ್ತದೆ. ಆಗ ಗ್ರಾಹಕ ಸಹಜವಾಗಿ ಕಡಿಮೆ ಬೆಲೆಗೆ ಸಿಗುವ ಇತರ ದೇಶಗಳ ವಸ್ತುಗಳನ್ನೇ ಕೊಳ್ಳುತ್ತಾನೆ. ಬೇರೆ ದೇಶಗಳಲ್ಲಿ ನೌಕರರ ವೇತನ ಮತ್ತು ಬಂಡವಾಳ, ಮೂಲ ಸೌಕರ್ಯ ಕಲ್ಪಿಸಲು ತಗುಲುವ ವೆಚ್ಚ ಕಡಿಮೆ ಇರುತ್ತದೆ.
ಹೀಗಾಗಿ ಆಮದು ವಸ್ತುಗಳ ಬೆಲೆ ಕಡಿಮೆ ಇರುತ್ತದೆ. ಅಂತಿಮವಾಗಿ ಗ್ರಾಹಕರು ಹೊರದೇಶಗಳ ವಸ್ತುಗಳನ್ನು ಕೊಳ್ಳುತ್ತಾರೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಆದರೆ ಟ್ರಂಪ್ ಇದನ್ನು ಒಪ್ಪುತ್ತಿಲ್ಲ. ಅಮೆರಿಕದಲ್ಲಿಯೇ ಬಂಡವಾಳ ಹೂಡಿ ಗ್ರಾಹಕರ ವಸ್ತುಗಳನ್ನು ತಯಾರಿಸಿದರೆ ಅವುಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ. ವಿದೇಶಿ ಉದ್ಯೋಗಿಗಳ ಬದಲಾಗಿ ಸ್ಥಳೀಯರನ್ನೇ ನೇಮಿಸಿಕೊಂಡರೆ ಸಂಬಳವೂ ಕಡಿಮೆ ಇರುತ್ತದೆ. ಹೀಗಾಗಿ ಕ್ರಮೇಣ ಗ್ರಾಹಕರ ಬೇಡಿಕೆಯ ವಸ್ತುಗಳ ಬೆಲೆ ಕಡಿಮೆ ಇರುತ್ತದೆ. ಇನ್ನು ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ಈ ಸಮಸ್ಯೆ ಬರುವುದಿಲ್ಲ ಎನ್ನುವುದು ಟ್ರಂಪ್ ವಾದ.
ಒಟ್ಟಿನಲ್ಲಿ ಜಗತಿಕ ಮಾರುಕಟ್ಟೆಯಲ್ಲಿ ಟ್ರಂಪ್ ಹೂಡಿರುವ ಸುಂಕದ ಯುದ್ಧ ಕೋಲಾಹಲವನ್ನೇ ಉಂಟುಮಾಡಿದೆ. ಯಾವುದೇ ಒತ್ತಡ ಬಂದರೂಸುಂಕದ ನಿರ್ಧಾರವನ್ನು ಟ್ರಂಪ್ ಹಿಂತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಸುಂಕದಂಥ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಟ್ರಂಪ್‌ಗೆ ಇಲ್ಲ ಎಂದು ಕೆಲವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಸುಂಕ ಅಥವಾ ತೆರಿಗೆ ಹೇರುವ ಅಧಿಕಾರ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದು ವಾದ ಮಾಡಲಾಗುತ್ತಿದೆ. ಸದ್ಯಕ್ಕೆ ಒಂದು ಕೋರ್ಟ್ ಟ್ರಂಪ್ ವಿರುದ್ಧ ತೀರ್ಪು ನೀಡಿದ್ದರೆ, ಮತ್ತೊಂದು ಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿದೆ. ಅಂತಿಮ ತೀರ್ಪು ಬರುವವರೆಗೆ ಟ್ರಂಪ್ ದರ್ಬಾರ್ ನಡೆಯುತ್ತಲೇ ಇರುತ್ತದೆ.
ಈ ಸುಂಕ ಯುದ್ಧದಿಂದ ಸಂಕಷ್ಟಕ್ಕೆ ಒಳಗಾಗುವ ದೇಶಗಳು ಮಾರು ಕಟ್ಟೆಯ ಪರ್ಯಾಯ ಮಾರ್ಗಗಳನ್ನು ಹುಡುಕುವುದು ಅನಿವಾರ್ಯ. ಚೀನಾ ಇಂಥ ಪ್ರಯತ್ನ ನಡೆಸುತ್ತಿದೆ. ಪರಸ್ಪರ ಸಹಕಾರ ಮಾತ್ರ ಟ್ರಂಪ್ ಸರ್ವಾಧಿಕಾರಕ್ಕೆ ತಡೆ ಒಡ್ಡಬಲ್ಲದು.
” ಇದು ಸುಂಕ ಹೇರಿಕೆಯ ಒಂದು ಮುಖ ಅಷ್ಟೆ. ಈ ಸುಂಕ ಯುದ್ಧಕ್ಕೆ ಮತ್ತೊಂದು ಮುಖವೂ ಇದೆ. ಪ್ರಸ್ತುತ ಅಂದಾಜಿನ ಪ್ರಕಾರ ಟ್ರಂಪ್ ಹೊಸ ಸುಂಕದಿಂದ ಅಮೆರಿಕಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧೨೮ ಬಿಲಿಯನ್ ಡಾಲರ್ ಹೆಚ್ಚು ಆದಾಯ ಬರಲಿದೆ. ಹತ್ತು ವರ್ಷಗಳಲ್ಲಿ ೨.೫ ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚು ಆದಾಯ ಬರಲಿದೆ ಎಂದು ಅಂದಾಜು ಮಾಡಲಾಗಿದೆ.ಅಮೆರಿಕದ ಆಮದು ಪ್ರಮಾಣ ಸುಮಾರು ೩೦೦ ಬಿಲಿಯನ್ ಡಾಲರ್ ಇದ್ದರೆ ರಫ್ತುಪ್ರಮಾಣ ಕೇವಲ ೧೦೦ ಬಿಲಿಯನ್ ಡಾಲರ್‌ಗಳಷ್ಟು. ಹೀಗಾಗಿ ಆಮದಾದ ವಸ್ತುಗಳಿಂದ ಅಪಾರ ಪ್ರಮಾಣದಲ್ಲಿ ಸರ್ಕಾರಕ್ಕೆ ಆದಾಯ ಬರಲಿದೆ. ಟ್ರಂಪ್ ಹೇಳುವಂತೆ ಅಮೆರಿಕ ಹಿಂದೆಂದೂ ಕಾಣದಂಥ ಹಣದ ಸುರಿಮಳೆಯನ್ನು ಕಾಣುತ್ತದೆ.”
-ಡಿ.ವಿ.ರಾಜಶೇಖರ





