Mysore
27
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಲೇಡೀಸ್ ಹಾಸ್ಟೆಲಿನ ಆ ದಿನಗಳು

• ಕೀರ್ತಿ ಎಸ್.ಬೈಂದೂರು

ಚಪ್ಪಲಿಗಳ ಖರೀದಿಯೆಂದರೆ ಪ್ರಾಣವೆನ್ನುವ ಒಬ್ಬಳು, ಚಪ್ಪಲಿಯನ್ನು ರೂಮಿಗೆ ಸೇರಿಸುವಂತಿಲ್ಲ ಎನ್ನುವ ಇನ್ನೊಬ್ಬಳು. ಮಾತು ಮಾತಿಗೂ ನಗುವ, ಮಾತೇ ಆಡದೇ ಶಿಸ್ತಿನಿಂದ ಓದುವ ಎಷ್ಟು ವೈರುಧ್ಯಗಳ ಮನಸ್ಸುಗಳಿದ್ದವು ಗಂಗೋತ್ರಿ ಲೇಡೀಸ್ ಹಾಸ್ಟೆಲ್‌ನಲ್ಲಿ! ಬಹುಶಃ ವೈರುಧ್ಯದ ನಡುವಲ್ಲೇ ಬೆಸೆದ ಕೆಲ ಸಾದೃಶ್ಯಗಳು ನಮ್ಮನ್ನು ಒಂದಾಗಿಸಿತ್ತು ಎನಿಸುತ್ತದೆ.

‘ನಾವು ಬೇಗ ಏಳೋದು, ಕೋಳಿ ಕೂಗಿನಿಂದಲ್ಲ’ ಹಾಸ್ಟೆಲ್ ಸೇರಿದ ಆರಂಭದಲ್ಲೇ ಹಾಡು ಬದಲಿಸಿದ್ದೆವು. ಬಟ್ಟೆ ಒಗೆಯುವಾಗ ಹನಿಯುವ ನೀರಿನ ಸದ್ದಿಗೆ ನಿದ್ದೆ ತಂತಾನೇ ಕಾಲುಕೀಳುತ್ತಿತ್ತು. ಅದರೊಂದಿಗೆ ಬಟ್ಟೆ ಒಗೆಯುವಾಗ ಹುಮ್ಮಸ್ಸು ಬರಲೆಂದು ಹಾಕುವ ‘ಜಿಂಗಿ ಚಕ್’ ಹಾಡುಗಳು ಬೇರೆ! ‘ಹಾಡು ಹಾಸ್ಟೇಡಿ, ತೊಂದ್ರೆ ಆಗತ್ತೆ’ ಎಂದ ಮಾತು ಯುದ್ಧ ನಡೆಯುವ ಹಂತಕ್ಕೆ ತಲುಪಿದ್ದಿದೆ. ಒಣಗಿಸಿಟ್ಟ ಬಟ್ಟೆ ಅಲ್ಲೇ ಇದ್ದರೆ ಪುಣ್ಯಗಳ ಪಟ್ಟಿಯನ್ನು ಎಣಿಸುತ್ತಿದ್ದೆವು. ಬಟ್ಟೆ ಕಳೆದುಕೊಂಡ ಹುಡುಗಿಯರು, ಆ ಬಟ್ಟೆಯ ಚಿತ್ರವನ್ನು ಮೆಸ್ ಎದುರಿನ ಗೋಡೆಗೆ ಅಂಟಿಸಿ, ವಿಳಾಸವನ್ನು ಹಾಕುತ್ತಿದ್ದರು. ಕೆಲ ಹುಡುಗಿಯರಂತೂ, ಬೈಗುಳವೆಲ್ಲ ತುಂಬಿ ಬೆದರಿಸುತ್ತಿದ್ದರು. ಆ ಪದ ಭಂಡಾರವನ್ನು ಗಮನಿಸಿದರೆ, ಹುಡುಗಿಯರ ಕಳೆದು ಹೋದ ಬಟ್ಟೆಗೆ ತಮಾಷೆಯಲ್ಲದೆ ಅನುಕಂಪ ಪಡುವಂತಿರಲಿಲ್ಲ.

ನಮಗೂ ಮತ್ತು ಮೆಸ್ ಆಂಟಿಯರಿಗೂ ಒಳ್ಳೆಯ ಬಾಂಧವ್ಯ ಇತ್ತು. ಸಂಜೆಗೆ ಬಹಳ ಸುಲಭವಾಗಿದ್ದ ಚುರುಮುರಿ ಮಾಡುವುದಕ್ಕೆ ಶುರುವಿಟ್ಟೆವು. ತರಕಾರಿ, ಕೊತ್ತುಂಬರಿ ಸೊಪ್ಪು ಎಲ್ಲ ಮೆಸ್ ಇಂದಲೇ ತಂದು, ತಯಾರಿಸಿ, ತಿಂದೂ ಆಯಿತು. ಮುಂದುವರಿದು, ಕೆಟಲ್‌ನಲ್ಲಿ ಬೇಯಿಸಿದ ಆಲೂಗಡ್ಡೆಗೆ ಒಂದಿಷ್ಟು ಪುಡಿಗಳನ್ನು ಹಾಕಿ, ತಯಾರಿಸಿದ ಆಲೂ ಪಲ್ಯ, ಕ್ಯಾಂಟೀನ್‌ನಿಂದ ತಂದ ಪಾನಿ, ಅಲ್ಲೇ ಪಕ್ಕದ ಅಂಗಡಿಯ ಸೇವ್, ಮನೆಯಿಂದ ತಂದ ಪುರಿ ಇಷ್ಟೇ. ಪಾನಿಪುರಿ ಕೂಡ ಸುಲಭದಲ್ಲಿ ತಯಾರಾಗುತ್ತಿತ್ತು. ಹಾಸ್ಟೆಲ್ ಊಟ ಸರಿ ಇಲ್ಲದಿದ್ದಾಗ ನಾವು ಸರಿದೂಗಿಸಿಕೊಳ್ಳುತ್ತಿದ್ದುದು ಹೀಗೆ.

ಹಾಸ್ಟೆಲಿನ ಮಧ್ಯಾಹ್ನದ ಊಟವೆಂದರೆ ಸಮಾ ರಂಭದ ಮನೆ ಇದ್ದಂತೆ. ದೋಸ್ತಿಗಳನ್ನೆಲ್ಲ ಕರೆದು, ಊಟ ಹಾಕಿಸಿ, ಖುಷಿಯಿಂದ ಕಳಿಸಿಕೊಡುವುದು. ಹಾಸ್ಟೆಲ್‌ನ ಉಳಿದ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದು, ಅವರನ್ನೇನಾದರೂ ಸಿಬ್ಬಂದಿಗಳು ಯಾರು? ಯಾವ ರೂಂ? ಎಂದೆಲ್ಲ ಪ್ರಶ್ನೆ ಕೇಳಿದರೆ, ರೂಂ ನಮ್ಮದಾ ಅಥವಾ ಅವರದ್ದಾ? ಎಂದು ನಮಗೇ ಸಂಶಯ ಬರಬೇಕು. ಅಷ್ಟು ಪಳಗಿದ ಸ್ನೇಹಿತೆಯರು! ಒಮ್ಮೆ ಹೀಗೆ, ಸಂಜೆ ತಡವಾಯಿತೆಂದು ಗೆಳತಿ ರೂಮಿನಲ್ಲಿ ಉಳಿದಿದ್ದಳು. ರಾತ್ರಿಯ ಹಾಜರಾತಿಗೆ ಮೇಡಂ ಬರುವ ಮೊದಲೇ, ಬಾತ್‌ರೂಂಗೆ ಓಡಿಸಿದ್ದೆ. ಮೇಡಂ ಹೋದ ಮೇಲೆ, ಅವಳನ್ನು ಕರೆದುಕೊಂಡು ಬಂದರೆ ‘ಯಪ್ಪಾ, ನಿಮ್ ಹಾಸ್ಟೆಲ್‌ನ ಬಾತ್ ರೂಂ ಸಹವಾಸ ಬೇಡಪ್ಪಾ’ ಅಂತ ನಮಸ್ಕರಿಸಿದ್ದಳು!

ಬಾತ್‌ರೂಂ ಕತೆ, ನೀರಿನ ಯುದ್ಧ ಆಗದೆ ಅಪೂರ್ಣ. ಅರುವತ್ತು ಜನರಿಗೆ ಇದ್ದದ್ದು, ಒಂದೇ ಗೀಸರ್. ಚಂದ್ರನ ಹೊತ್ತಲ್ಲಿ ಏಳುವ ಎಲ್ಲ ಚಂದ್ರವಂಶದವರು ಮೂರು ಗಂಟೆಯಿಂದಲೇ ಸಾಲಾಗಿ ಬಕೆಟ್ ಇಟ್ಟು ಬಂದರೆ ಸೂರ್ಯವಂಶ ದವರ ಕತೆ ಏನಾಗಬೇಡ! ಅವರು ಆಚೆ ಕದಲಿದರಷ್ಟೇ ಸಾಕಿತ್ತು, ಬರುವಷ್ಟರಲ್ಲಿ ನೀರು ಮುಂದಿನವರ ಬಕೆಟ್‌ನಲ್ಲಿ ಇರುತ್ತಿತ್ತು. ಆ ದಿನದ ಆರ್ಕೆಸ್ಟ್ರಾ ಕಾರ್ಯಕ್ರಮ ಅಲ್ಲಿಂದ ಆರಂಭ. ನನಗಂತೂ ಇದು ಆಪ್ತಮಿತ್ರ ಚಿತ್ರದ ಗಂಗಾ ನಾಗವಲ್ಲಿಯಾಗಿ ಬದಲಾಗುವ ದೃಶ್ಯದ ಮುಂದುವರಿದ ಭಾಗವೆಂದೇ ಅನಿಸುತ್ತದೆ. ನಮಗಿಂತ ಚಿಕ್ಕವರು, ಬಂದ ಹೊಸತರಲ್ಲಿ ಏನೂ ಹೇಳದೆ, ನೀರಿಗಾಗಿ ಮತ್ತೆ ಕಾಯುತ್ತಿದ್ದರು. ವಾರ ಕಳೆಯುತ್ತಿದ್ದಂತೆ ನಿಧಾನವಾಗಿ ತಾಳ
ಅಭ್ಯಾಸ ನಡೆದು, ತಿಂಗಳು ಕಳೆಯುತ್ತಿದ್ದಂತೇ ರಸ ಮಂಜರಿಗೆ ಹೊಸ ದನಿಗಳು ಸೇರ್ಪಡೆಯಾಗುತ್ತಿದ್ದವು. ಹಾಸ್ಟೆಲ್‌ನ ಬಹುತೇಕ ಶೀತಲ ಸಮರಗಳ ಮುಖ್ಯ ಕಾರಣ ಮಾತ್ರ ಇದುವೇ.

ಟೆಸ್ಟು, ಇಂಟರ್ನಲ್ಸ್ ಅಥವಾ ಸೆಮಿಸ್ಟರ್ ಪರೀಕ್ಷೆಯೇ ಇರಲಿ ಓದಿನ ತಯಾರಿ ಜೋರು, ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದ ಹುಡುಗಿಯೊಬ್ಬಳ ಅತ್ಯಾಚಾರದ ಘಟನೆಯಾದ ಬಳಿಕ, ರಜಾ ದಿನಗಳಲ್ಲಿ ಗಂಗೋತ್ರಿಯೊಳಕ್ಕೆ ಹೊರಗಿನವರು ಬರುವಂತಿರಲಿಲ್ಲ. ನಾಳೆಗೆ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಾಗಿದ್ದ ಹುಡುಗಿ ಆ ದಿನ ಪುಸ್ತಕದೊಳಗಿದ್ದ ಸಿಲೆಬಸ್ ನೋಡಿ ಕಂಗಾಲಾಗಿ, ಫೋನಲ್ಲಿ ಯಾರೊಂದಿಗೊ ಅಳುತ್ತಿದ್ದಳು. ತಕ್ಷಣ ಹಾಸ್ಟೆಲ್‌ಗೆ ಓಡಿಬಂದ ಅವಳ ಗೆಳತಿಯಲ್ಲಿ ಹೇಗೆ ಬಂದೆ ಎಂದರೆ, ‘ನಾನೀಗ ಹೋಗ್ಲಿಲ್ಲ ಅಂದ್ರೆ ಅವ್ರು ಸೂಸೈಡ್ ಮಾಡ್ಕೊತಾಳೆ’ ಎಂದು ಸೆಕ್ಯುರಿಟಿ ಅವರಲ್ಲಿ ಹೇಳಿದ್ದಷ್ಟೆಯಂತೆ!

ಹಳೆಯ ಪ್ರೇಮಕಥೆಗಳನ್ನು ಹೇಳುವ ಮತ್ತು ಕೇಳುವ ಹವ್ಯಾಸ ಎಲ್ಲರಿಗಿತ್ತು. ಹೇಳುವ ಸರದಿಯಲ್ಲಿ ತಮ್ಮ ಪಾತ್ರಗಳನ್ನು ವಿವರಿಸುವಾಗ ಹೊಸ ಚಿತ್ರದ ನಾಯಕಿಯರೆಲ್ಲ ಕಣ್ಮುಂದಿರುತ್ತಿದ್ದರು. ಕೊನೆಗೆ ತ್ಯಾಗವೇ ಪ್ರೀತಿ ಎನ್ನುವ ಶುಭಂ ಕಾರ್ಡ್‌ನೊಂದಿಗೆ ಕಥೆಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು! ಹೀಗೆ ಕೇಳಿದ ಹೆಸರುಗಳನ್ನು ಅಡ್ಡ ಹೆಸರಾಗಿಟ್ಟು ಕರೆಯುವ ಪದ್ಧತಿ ಪರಂಪರೆಯಾಯಿತು. ಜಗಳದಿಂದಲೇ ಪರಂಪರೆಯ ವಿನಾಶವೂ ಆಯಿತು.

ಅಪರೂಪಕ್ಕೆ ನಮ್ಮ ರೂಮಿನ ಹುಡುಗಿಯ ಮೊಬೈಲ್‌ಗೆ ಒಬ್ಬ ಹುಡುಗ ಫೋನ್ ಮಾಡುತ್ತಿದ್ದ. ರೂಮಿನವರೆಲ್ಲ ಒಟ್ಟಾಗಿ ಹುಡುಗಿಯನ್ನು ಕಾಡಿಸಬೇಕೆಂದು, ಅವಳ ಮೊಬೈಲ್‌ ನಿಂದ ಆ ಹುಡುಗನಿಗೆ ಪ್ರೀತಿಯ ಸಂದೇಶವನ್ನು ಕಳಿಸಿಯೇ ಬಿಟ್ಟಿದ್ದರು. ಶಾಂತರಾಗಿ ಕೂತವರನ್ನು ಕಂಡ ತಕ್ಷಣವೇ ಏನೋ ಕಿತಾಪತಿ ಮಾಡಿರಲಿಕ್ಕೂ ಸಾಕು ಎಂದು ಅವಳು ಮೊಬೈಲ್ ಗಮನಿಸಿದರೆ, ವಾಟ್ಸಾಪ್‌ನಲ್ಲಿ ಕಳಿಸಿರುವ ಮೆಸೇಜ್‌ ಇತ್ತು! ಕಂಗಾಲಾಗಿ, ಗೋಳಾಡಿ ಅತ್ತು, ರೂಮಿನವರಿಗೆಲ್ಲ ವಾರಕ್ಕಾಗುವಷ್ಟು ಬೈದು, ಮೆಸೆಜ್‌ ನ್ನು ಆ ಕೂಡಲೇ ಅಳಿಸಿಬಿಟ್ಟಳು. ಆ ಹುಡುಗ ಅದನ್ನು ಓದಿರಬಹುದಾ? ಉತ್ತರ ಸಿಗದ ಈ ಪ್ರಶ್ನೆಗೆ ಕುತೂಹಲ ನಮಗಂತೂ ಇತ್ತು. ಗಂಗೋತ್ರಿಯ ಹಾಸ್ಟೆಲ್‌ಗಳಲ್ಲಿ ಪ್ರತಿಭಟನೆ ಮಾಡುವುದು ಸಹಜವೇ. ಒಮ್ಮೆ ವಾರ ಕಳೆದರೂ ಹಾಸ್ಟೆಲಿನ ಊಟ ಸರಿಯಾಗದಿದ್ದಾಗ ಪ್ರತಿಭಟನೆಗೆ ರೂಪುರೇಷೆಗಳು ಮೌನವಾಗಿಯೇ ಸಿದ್ಧವಾಗಿದ್ದವು. ನಾವೆಲ್ಲ ಮೇಲಧಿಕಾರಿಗಳನ್ನು ಕರೆಸಲೇಬೇಕೆಂಬ ಪಟ್ಟುಹಿಡಿದು ಕೂತೆವು. ಉತ್ಸಾಹಿ ತರುಣಿಯರೆಲ್ಲ ಆವೇಶ ಬಂದವರಂತೆ ಗೇಟಿನ ಎದುರು ದೌಡಾಯಿಸಿದ್ದರು. ಬಂದ ವೇಗ ಬೇರೆಯೇ ಇತ್ತು! ಬಂದ ಮೇಲೆ, ‘ನೀ ಹೋಗೇ, ಏ ಹೋಗೆ… ಹೋಗೆ’ ಎನ್ನುವ ದೂಡಾಟದೊಳಗೆ, ಎತ್ತರದ ಗೇಟನ್ನು ಬೀಳಿಸಿಬಿಟ್ಟಿದ್ದರು! ಕೇಳಿದಂತೆ ಮೇಲಧಿಕಾರಿಗಳು ಬಂದು ಆಶ್ವಾಸನೆ ನೀಡಿ, ನಮ್ಮ ಕ್ರಾಂತಿಯ ಕನಸನ್ನು ಮುಂದೂಡಿದ್ದರು. ಆದರೂ, ‘ಹೆಣ್ ಮಕ್ಕೇ ಸ್ವಾಂಗು ಗುರು’ ಎನ್ನುವ ಹಾಡಿಗೆ ಆವತ್ತು ಅರ್ಥ ಬಂದಂತಿತ್ತು.

ತಡವಾದಾಗ ಗೇಟ್ ಹಾರಿ ಬಂದ ಅನುಭವವೊಂದೂ ಇಲ್ಲ. ನಮಗೂ ಈ ಸೋ ಕಾಲ್ಡ್ ಬದ್ಧತೆಗೂ ನಂಟು ಅಂಟಿತ್ತೆನ್ನಿ. ಕಲಾಮಂದಿರದ ಬಳಿ ಸಂಜೆಯಾದರೆ ನಾಟಕಗಳ ವಿಶೇಷ ಸಂತೆ ಶುರು. ನಾಟಕ ಆರಂಭವಾಗುವುದೇ ಏಳು ಗಂಟೆಗೆ. ಇಲ್ಲಾ, ಸೆಕ್ಯೂರಿಟಿ ಅವರೊಂದಿಗೆ ಜಗಳಕ್ಕೆ ತಯಾರಾಗಬೇಕಿತ್ತು! ಇಂದು ತಡವಾಗುತ್ತೆಂದರೆ, ಮೂರು ದಿನಗಳ ಹಿಂದಿನಿಂದ ಪತ್ರ ಬರೆದು ಒದ್ದಾಡಿಕೊಂಡು ಸಹಿ ಹಾಕಿಸಿಕೊಳ್ಳಬೇಕಿತ್ತು. ಅಲ್ಲೂ ಗಂಟೆ ಎಂಟು ಮೀರುವಂತಿಲ್ಲ. ಅದಕ್ಕಾಗಿ, ಡಾಕ್ಟರ್‌ಗಳ ಪ್ರಿನ್‌ಸಿಕ್ಕರೆ ಅದನ್ನು ಎತ್ತಿಟ್ಟುಕೊಂಡು, ಜಗಳವಿಲ್ಲದೆ ಗತ್ತಿನಿಂದ ಹೆಜ್ಜೆಯಿಡುತ್ತಿದ್ದೆವು. ನಮ್ಮನ್ನು ಪ್ರತೀ ಬಾರಿ ಅವರು ಕಟ್ಟಿಹಾಕಿ, ಬೀಗ ಜಡಿಯುತ್ತಿದ್ದರೆ, ಯುಕ್ತಿ ಸಾಧಿಸಿ ಕೀಲಿಯನ್ನು ತೆಗೆಯುವ ವಿಧಾನವನ್ನು ದಿನಗಳು ಕಳೆಯುತ್ತಿದ್ದಂತೆ ಕಲಿತಿದ್ದೆವು.
keerthisba2018@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ