• ಅನಿಲ್ ಅಂತರಸಂತೆ
ಕೊರೊನಾ ಲಾಕ್ ಡೌನ್ ಜನರ ಬದುಕಿಗೆ ದುಸ್ತರವಾಗಿತ್ತು. ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿತ್ತು. ಎಷ್ಟೋ ಉದ್ಯಮಗಳು ಬಾಗಿಲು ಮುಚ್ಚಿದವು. ಅನೇಕರ ಬದುಕು ನರಕವಾಗಿದ್ದಂತೂ ನಿಜ.
ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ತೀರಾ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಸುಲಲಿತವಾಗಿ, ಮಾಹಿತಿ ಪೂರ್ಣವಾಗಿ, ಸ್ಪಷ್ಟವಾಗಿ ಕುಸಿಯಿತು. ಶಾಲೆಗಳಿಲ್ಲದೆ ಅವರು ಮನೆಯಲ್ಲಿಯೇ ಕಾಲ
ಕಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇಂತಹ ಸಂದರ್ಭವನ್ನೂ ಸರಿಯಾಗಿ ಬಳಸಿಕೊಂಡು, ಜಾಲತಾಣಗಳಲ್ಲಿ ಭಾಷಣಗಳನ್ನು ಮಾಡುತ್ತಾ ಜನರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿಯ ಜಾಗೃತಿ ಮೂಡಿಸಿ, ಕೊರೊನಾ ನಂತರ ಸುಮಾರು 500ಕ್ಕೂ ಅಧಿಕ ವೇದಿಕೆಗಳಲ್ಲಿ ಭಾಷಣ ಮಾಡಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ ಬರೆದಿದ್ದಾರೆ ಫಾಲಿಯಾ ಖಾನ್ ಮತ್ತು ಆಕೆಯ ಸಹೋದರ ಮೊಹಮ್ಮದ್ ಹಸೇನ್.

ಫಾಲಿಯಾ ಮತ್ತು ಮೊಹಮ್ಮದ್ ಹಸೀನ್ ಮೈಸೂರಿನ ಅಜಾಜುಲ್ಲಾ ಖಾನ್ ಮತ್ತು ಫರ್ಹೀನ್ ಖಾನ್ ದಂಪತಿಯ ಮಕ್ಕಳು. 16 ವರ್ಷದ ಫಾಲಿಯಾ ಮತ್ತು 10 ವರ್ಷದ ಹಸೇನ್ ತಮ್ಮ ಭಾಷಣದ ಚತುರತೆಯಿಂದಲೇ ಇಂದು ಮೈಸೂರಿನ ಮನೆ ಮಾತಾಗಿದ್ದಾರೆ, ಹಲವು ದಾಖಲೆಗಳನ್ನು ಮಾಡಿ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ.
ಫಾಲಿಯಾ ಖಾನ್ ಮೈಸೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಯುಟ್ಯೂಬ್‌ನಲ್ಲಿ ಒಂದು ಖಾತೆ ತೆರೆದು ಅಲ್ಲಿ ಸಾಮಾಜಿಕ ಕಳಕಳಿ, ಮಕ್ಕಳ ಶೈಕ್ಷಣಿಕ ವಿಷಯಗಳು ಸೇರಿದಂತೆ ಒಂದಿಷ್ಟು ಜಾಗೃತಿ ಮೂಡಿಸುವ ವಿಷಯಗಳ ಕುರಿತು ಭಾಷಣಗಳನ್ನು ಮಾಡುತ್ತ ಆರಂಭವಾದ ಇವರ ಪ್ರಯಾಣ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ತಲುಪಿರುವುದು ಹೆಮ್ಮೆಯ ವಿಚಾರ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅತ್ಯಧಿಕ ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣಗಳನ್ನು ಮಾಡಿದ ಇವರ ಸಾಧನೆ ಭಾರತೀಯ ಪುಸ್ತಕದ ದಾಖಲೆ (India Book Of Record)ನಲ್ಲಿ ದಾಖಲಾಗಿರುವುದು ಮೈಸೂರಿಗೆ ಹೆಮ್ಮೆಯ ವಿಚಾರವಾಗಿದೆ.
ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಸುಲಲಿತವಾಗಿ, ಮಾಹಿತಿ ಪೂರ್ಣವಾಗಿ ಭಾಷಣಗಳನ್ನು ಮಾಡುವ ಇವರು, ಈವರೆಗೂ 500ಕ್ಕೂ ಅಧಿಕ ವೇದಿಕೆಗಳಲ್ಲಿ ತಮ್ಮ ಭಾಷಣಗಳನ್ನು ಮಾಡಿದ್ದಾರೆ. ಅಲ್ಲದೆ ಹತ್ತಾರೂ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಆನ್‌ಲೈನ್ ಮೂಲಕ ಭಾಷಣಗಳನ್ನು ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಭಾಷಣ ಮಾತ್ರವಲ್ಲದೇ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕಿಕ್ ಬಾಕ್ಸಿಂಗ್ ಕಲಿತಿದ್ದು, ರಾಷ್ಟ್ರೀಯ ಮುಯೆ ಥಾಯ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನೂ ಗೆದ್ದಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಗಣಿತ ಒಲಿಂಪೇಡ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳು ಮತ್ತು ಬೆಂಗಳೂರಿನಲ್ಲಿ ನಡೆದ ಸ್ಪೆಲ್ ಬೀ ಸ್ಪರ್ಧೆಗಳಲ್ಲಿ 3 ಚಿನ್ನದ ಪದಕಗಳು ಗೆದ್ದು ಕೀರ್ತಿ ತಂದಿದ್ದಾರೆ.
ಇನ್ನು HCD ಗ್ರೂಪ್ ಆಫ್ ಆಸ್ಪತ್ರೆಗಳ ಸಿಇಒ ಡಾ.ಅಜಯ್ ಕುಮಾರ್ ನೇತೃತ್ವದ ಚಿಂತಕರ ಚಾವಡಿ ‘ಅಂತರ್ಧ್ವನಿ’ಯ ಸದಸ್ಯರಾಗಿಯೂ, ಜೆಸಿಐ ಅಂತರರಾಷ್ಟ್ರೀಯ ಸಂಸ್ಥೆಯ ಜೂನಿಯರ್ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದೆ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಬೇಕು ಎಂಬ ಕನಸು ಕಂಡಿದ್ದಾರೆ.
ಇವರ ಸಹೋದರ ಮೊಹಮ್ಮದ್ ಹಸೇನ್ ಕೂಡ ಅಕ್ಕನ ಹಾದಿಯಲ್ಲಿಯೇ ಮುಂದುವರಿದಿದ್ದೂ, 10 ವರ್ಷದ ಈ ಬಾಲಕ 3 ಭಾಷೆಗಳಲ್ಲಿ ಗರಿಷ್ಟ ಭಾಷಣಗಳನ್ನು ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾನೆ. ಅಲ್ಲದೆ ಡಿಸೆಂಬರ್ 2021ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮುಯೆ ಥಾಯ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದಾರೆ ಅಲ್ಲದೆ ಅನೇಕ ರಾಷ್ಟ್ರೀಯ ಭಾಷಣ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಇವರು ಬಾಕ್ಸಿಂಗ್ ಮತ್ತು ಕಿಕ್ ಬಾಕ್ಸಿಂಗ್ ಕ್ರೀಡಾಪಟುವಾಗಿದ್ದು, ರಾಜ್ಯ ಮತ್ತು ಜಿಲ್ಲಾ ಚಾಂಪಿಯನ್ ಶಿಪ್ ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‘ಯುವರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರಿಬ್ಬರೂ ತಮ್ಮ ಯೂಟ್ಯೂಬ್ ಚಾನೆಲ್ WHIZZ SIBLINGS ನಲ್ಲಿ ತಮ್ಮ ಭಾಷಣಗಳನ್ನು ನೀಡುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.





