Mysore
26
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಇರುಳಿಗರ ಕಾಲೋನಿಯಲ್ಲಿ ಮೂವತ್ತು ವರ್ಷಗಳ ಹಿಂದೆ..

ಸ್ವಾಮಿ ಪೊನ್ನಾಚಿ

ಮೊನ್ನೆ ಜೋಡುಘಟ್ಟಕ್ಕೆ ಬೈರೇಗೌಡರ ಜೊತೆ ಹೋದಾಗ ಈ ಘಟನೆಯನ್ನು ದಾರಿ ಉದ್ದಕ್ಕೂ ಹೇಳುತ್ತಾ ಇರುಳಿಗರಿಂದ ತಪ್ಪಿಸಿಕೊಂಡು ಬಂದುದೇ ಒಂದು ಸಾಹಸ ಎಂದು ನಗುತ್ತಿದ್ದರು. 30 ವರ್ಷಗಳ ಹಿಂದೆ ಇರುಳಿಗರ ಮೇಲೆ ಸಂಶೋಧನೆ ಮಾಡಲು ಡಾ.ಬೈರೇಗೌಡರು ಹೋದಾಗ ಇದ್ದ ಪೋಡಿಗೂ ಈಗ ನಾವು ನೋಡುತ್ತಿರುವ ಕಾಲೋನಿಗೂ ಸಂಬಂಧವೇ ಇರಲಿಲ್ಲ. ಇರುಳಿಗರೆಂದು ಯಾರೂ ಗುರುತಿಸಲು ಸಾಧ್ಯವಾಗದ ಮಟ್ಟಿಗೆ ಅವರು ಆಧುನಿಕತೆಗೆ ಒಗ್ಗಿಕೊಂಡಿದ್ದರು. ಪೋಡುಗಳ ಬದಲಾಗಿ ಹೆಂಚಿನ ಮನೆಗಳು, ಮನೆ ಮುಂದೆ ಬೈಕುಗಳು ನಿಂತಿದ್ದವು. ಜೀನ್ಸ್ ಪ್ಯಾಂಟು ಟಿ-ಶರ್ಟ್ ತೊಟ್ಟ ಯುವಕರು ಕೈಯಲ್ಲಿ ಆಂಡ್ರಾಯ್ಡ್ ಫೋನ್ ಹಿಡಿದುಕೊಂಡು ಅಲ್ಲಲ್ಲಿ ಕುಳಿತು ಕಾಲ ಕಳೆಯುತ್ತಿದ್ದರು. ಡಾ. ಬೈರೇಗೌಡರು ಹೇಳಿದ ಒಂದು ಪ್ರಸಂಗ ಹೀಗಿದೆ…

ಮಾಗಡಿ ತಾಲ್ಲೂಕಿನ ಜೋಡುಘಟ್ಟ ಇರುಳಿಗರ ಕಾಲೋನಿಗೆ ಸರಿ ಅಮಾವಾಸ್ಯೆಯ ದಿನ ಬರೋಬ್ಬರಿ ಒಂಬತ್ತು ಕಿಲೋಮೀಟರ್ ನಡೆದು ರಾತ್ರಿ ಎಂಟಕ್ಕೆ ಅಲ್ಲಿಗೆ ಸೇರಿಕೊಂಡಿದ್ದೆ. ಅವರಿಗೆ ಕಾಣದಿರಲೆಂದು ಕ್ಯಾಮೆರಾವನ್ನು ಪ್ಯಾಂಟಿನ ಜೇಬಿನಲ್ಲಿ ಅವಿತಿಟ್ಟುಕೊಂಡಿದ್ದೆ. ನನಗಾಗಿ ಇಬ್ಬರು ಇರುಳಿಗರು ಆ ಜಾಗಕ್ಕೆ ಕರೆದುಕೊಂಡು ಹೋಗಲು ಕಾಯುತ್ತಿದ್ದರು. ಬನ್ನಿ ಟೈಮ್ ಆಯ್ತದೆ ಎಂದು ಕಾಲೋನಿಯ ಹಿಂಭಾಗ ದೂರದವರೆಗೆ ಹಬ್ಬಿರುವ ಕಾಡಿನ ಕಣಿವೆಯಲ್ಲಿ ನಡೆಯುತ್ತಾ ಹೋದರು. ನಾನು ಅವರನ್ನು ಹಿಂಬಾಲಿಸುತ್ತಾ ಹೋದೆ. ಆಗೊಮ್ಮೆ ಈಗೊಮ್ಮೆ ಆನೆ ಘೀಳಿಡುವ ಸದ್ದು, ನರಿಗಳು ಊಳಿಡುವ ಸದ್ದು ಕಿವಿಗೆ ಬೀಳುತ್ತಿತ್ತಾದರೂ ಅವರ ಕೈಲಿ ಸೂಟೆ ಇದ್ದುದರಿಂದ ಧೈರ್ಯ ವಾಗಿ ಅವರನ್ನು ಅನುಸರಿಸುತ್ತಾ ಹೋದೆ. ಕಣಿವೆ ಇಳಿಯುತ್ತಿದ್ದ ಹಾಗೆ ಎದುರಿನ ಸಣ್ಣ ದಿಬ್ಬ ನೋಡುವುದಕ್ಕೆ ಚಿಕ್ಕದಾಗಿದ್ದರೂ ಕೂಡ ಬಹಳ ಕಡಿದಾಗಿತ್ತು. ಅದನ್ನು ಹತ್ತಿ, ತುದಿ ತಲುಪುವುದರೊಳಗೆ ನನ್ನ ಎದೆ ತಿದಿಯಂತೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಅಲ್ಲಿ ಕಾಣುತ್ತದಲ್ಲ ಬೆಂಕಿ! ಅಲ್ಲೇ ಇರುವುದು ಬನ್ನಿ ಎಂದು ಅವಸರಿಸುತ್ತಾ ಇರುಳಿಗರಿಬ್ಬರೂ ಕರೆದುಕೊಂಡು ಹೋದರು.

ಒಂದು ಕಲ್ಲಿನ ಮಂಟಪದ ಸುತ್ತ ಇರುಳಿಗರು ಸೂಟೆ ಹಚ್ಚಿಕೊಂಡು ಬೆಂಕಿಯ ಬೆಳಕಲ್ಲಿ ಕೆಂಪಗೆ ಕಾಣುತ್ತಾ ನಿಂತಿದ್ದರು. ಮಂಟಪದ ನಡು ಮಧ್ಯದಲ್ಲಿ ದೆವ್ವ ಹಿಡಿದ ಹೆಂಗಸರನ್ನು ಕೂರಿಸಿದ್ದರು. ಅವರು ತಮ್ಮ ಕಣ್ಣುಗಳನ್ನು ಅಗಲಿಸುತ್ತಾ ನಾಲಿಗೆ ಹೊರ ಚಾಚಿ, ತಿಂದು ಬಿಡುವ ಹಾಗೆ ನನ್ನ ಕಡೆ ಕೈ ಮಾಡುತ್ತಿದ್ದುದು ನೋಡಿ; ದಿಬ್ಬ ಏರಿ ಬಂದ ಆಯಾಸವೆಲ್ಲ ಒಮ್ಮೆಗೆ ಜರನೆ ಇಳಿದು ನಡುಕ ಹುಟ್ಟಿಕೊಂಡಿತು. ದೇವರು ಪೂಜಾರಪ್ಪನ ಮೈಮೇಲೆ ಆವಾಹನೆಯಾಗುತ್ತಲಿತ್ತು. ದಮ್ಮಡಿ, ಜಾಗಟೆ ಜೋರಾಗಿ ಬಡಿಯುತ್ತಾ ಕಕ್ಕೆ ಎಲೆಯ ಪೀಪಿಗಳಿಂದ ಜೋರಾಗಿ ವಾದ್ಯದ ಸದ್ದು ಮಾಡತೊಡಗಿದರು. ಇವರ ದಮ್ಮಡಿ ಬಡಿದ ಸದ್ದು ಆ ನೀರವ ರಾತ್ರಿಯಲ್ಲಿ ಎದುರಿನ ದೊಡ್ಡ ಬರೆಗೆ ಬಡಿದು ವಾಪಸ್ ಈ ಸದ್ದಿನೊಂದಿಗೆ ಸೇರಿ ಮೈಕಿನಲ್ಲಿ ಎಕೋ ಕೊಟ್ಟ ಹಾಗೆ ಕೇಳಿಸುತ್ತಿತ್ತು. ಪೂಜಾರಪ್ಪನ ಮೇಲೆ ದೇವಿ ಬಂದಳು. ಕಂಬಕ್ಕೆ ಕಟ್ಟಿ ಹಾಕಿದ್ದ ಆಡಿನ ಮರಿಯ ಕೊರಳಿಗೆ ಬಾಯಿ ಹಾಕಿ ಒಂದೇ ಏಟಿಗೆ ಅದರ ಮಾಂಸ ಕಿತ್ತು ಬರುವಂತೆ ಕಚ್ಚಿಬಿಟ್ಟನು. ರಕ್ತ ಚಿಲ್ ಎಂದು ಹಾರುತ್ತಿರುವಾಗಲೇ ಆ ಆಡಿನ ಮರಿ ಮೇ ಮೇ ಎನ್ನುತ್ತಾ ವಿಲಿವಿಲಿ ಒದ್ದಾಡಿ ಪ್ರಾಣಬಿಟ್ಟಿತು. ಪೂಜಾರಪ್ಪನ ಮುಸುಡಿ ರಕ್ತದ ಕಲೆಯಿಂದ ಆಂಜನೇಯನ ಮೂರ್ತಿಯಂತಾಗಿ ಇದು ಹನುಮಂತನೋ ದೇವಿಯೋ ಎಂದು ನನಗೆ ಗುರುತು ಹತ್ತದಾಯಿತು.

ಪೂಜಾರಪ್ಪನ ಕೈಗೆ ಕರ್ಪೂರ ಹಚ್ಚಿದರು. ಅತ್ತಿತ್ತ ಅಲುಗಾಟದಲ್ಲಿ ಅದು ಆರಿಹೋದುದನ್ನು ಯಾರೂ ಗಮನಿಸಲಿಲ್ಲ. ಇನ್ನೇನು ಹುಣಸೆ ಚಬಕೆ ತೆಗೆದುಕೊಂಡು ದೆವ್ವ ಹಿಡಿದ ಹೆಂಗಸರನ್ನು ಹೊಡೆದು ದೆವ್ವ ಬಿಡಿಸಬೇಕು. ಈ ದೃಶ್ಯ ಸೆರೆ ಹಿಡಿಯಬೇಕೆಂದು ಕ್ಯಾಮೆರಾ ತೆಗೆದವನೇ ಸ್ವಿಚ್ ಅದುಮಿಬಿಟ್ಟೆ. ನೈಟ್ ಮೋಡಿನಲ್ಲಿದ್ದ ಕ್ಯಾಮೆರಾದೊಳಗಿಂದ ಮಿಂಚು ಹೊಡೆ ದಂತೆ ಫ್ಲಾಷ್ ಬೆಳಕು ಮಿಂಚಿತು. ಅಚಾನಕ್ ಆಗಿ ಕಂಡ ಈ ಬೆಳಕಿನಿಂದ ದಿಗ್ಧಮೆಗೊಂಡ ಅವರು ನನ್ನನ್ನು ತಿಂದುಬಿಡುವವರಂತೆ ನೋಡಿದರು. ಚಬಕೆ ಹಿಡಿದ ದೇವರೂ ಒಂದು ಕ್ಷಣ ಅಚ್ಚರಿಗೊಂಡು ಸ್ತಬ್ಧವಾಗಿ ನಿಂತಿತು. ಈ ಪ್ಯಾಟೆ ನಾಯಿನ ಹೊರ ಅಟ್ಟಿ ಎಂದು ದೇವರು ಆಜ್ಞೆ ಮಾಡಿತು. ಪುಣ್ಯಕ್ಕೆ ಬಲಿಕೊಡಿ ಎಂದು ಆಜ್ಞೆ ಮಾಡಿರಲಿಲ್ಲ. ಮಾಡಿದ್ದರೆ ದೇವರ ವಾಕ್ಯವನ್ನು ಶಿರಸಾ ಪಾಲಿಸುವ ಇರುಳಿಗರು ನಾನು ಎಷ್ಟೇ ಅವರ ಒಡನಾಡಿಯಾಗಿದ್ದರೂ ಕೂಡ ನನ್ನನ್ನು ಒಂದೇ ಏಟಿಗೆ ಕತ್ತರಿಸಿ ಬಿಡುತ್ತಿದ್ದರು. ಇಬ್ಬರು ಇರುಳಿಗರು ನನ್ನ ಕೈ ಹಿಡಿದು ನಡೆಯಿರಿ ಕಾಡಿನಿಂದ ಆಚೆ ಬಿಡುತ್ತೇವೆ ಎನ್ನುತ್ತಾ ಕೈ ಹಿಡಿದು ಕರೆದುಕೊಂಡು ಹೋದರು. ಈ ಅಮಾವಾಸ್ಯೆ ರಾತ್ರಿ ಎಲ್ಲಿ ಹೋಗುವುದು? ಅಷ್ಟು ದೂರ ಕಾಡಿನಿಂದ ಆಚೆ ನಡೆಯುವುದು ಈ ಹೊತ್ತಿನಲ್ಲಿ ಅಸಾಧ್ಯದ ಮಾತು. ಯಾವುದಾದರೂ ಕಾಡುಪ್ರಾಣಿಗೆ ಸಿಕ್ಕಿ ಸಾಯುವ ಬದಲು ಇಲ್ಲೇ ಏನಾದರೂ ಮಾಡೋಣವೆಂದು ಯೋಚಿಸುತ್ತಿರುವಾಗಲೇ ಒಂದು ಉಪಾಯ ಹೊಳೆಯಿತು. ನನ್ನ ಮೈ ಮೇಲೆ ದೇವರು ಆವಾಹನೆ ಆದಂತೆ ನಟಿಸುತ್ತಾ, ಕೈ ಕಾಲು ಜೋರಾಗಿ ಅಲ್ಲಾಡಿಸಿ, ಕಿರುಚುತ್ತಾ ‘ಶಿಶು ಮಕ್ಕಳಾ… ನಿಮ್ಮ ಜಡೆಸ್ವಾಮಿ ದೇವರನ್ನೇ ಆಚೆ ಹಾಕ್ತಿರಾ? ಮಾಡ್ತೀನಿ ತಡೀರಿ ನಿಮಗೆ. ದೊಡ್ಡರೋಗ ಕೊಡ್ತೀನಿ’ ಎಂದು ವದರಿದೆ. ನನ್ನನ್ನ ಅವರು ದೇವರೆಂದೇ ನಂಬಿ ಸೀದಾ ಹೊತ್ತುಕೊಂಡು ಮಂಟಪದ ಕಡೆಗೆ ಕರೆದೊಯ್ದರು. ನನ್ನ ಕಿರುಚಾಟ, ಆರ್ಭಟವನ್ನು ಕಂಡ ಆ ಪೂಜಾರಪ್ಪನ ಮೈಮೇಲೆ ಆವಾಹನೆ ಯಾಗಿದ್ದ ದೇವಿ ಮಾಯವಾದಳು. ದೆವ್ವ ಹಿಡಿದವರು ತಮ್ಮ ಕಿತಾಪತಿ ಬಿಟ್ಟು ಮೌನವಾಗಿ ಪಕ್ಕ ನಿಂತರು. ಅವನ್ಯಾರೋ ಏನೋ ನೆನೆಸಿಕೊಂಡು ಬಂದು ಕೈಗೆ ಎರಡು ಕರ್ಪೂರ ಹಚ್ಚಿದ ನೋಡಿ! ನನಗೆ ಪೀಕಲಾಟ ಶುರುವಚ್ಚಿಕೊಂಡಿತು. ಕರ್ಪೂರ ಜೋರಾಗಿ ಉರಿಯುತ್ತಾ ಸುಡಲು ಪ್ರಾರಂಭವಾದ ಕೂಡಲೇ ಮಂಟಪದ ಕಂಬದ ಕಡೆಗೆ ನಾನು ಕೆಂಗಣ್ಣು ಬಿಟ್ಟು ನೋಡಿ, ಜೋರಾಗಿ ಉಫ್ ಎಂದು ಊದಿದೆ. ಎಲ್ಲರ ಗಮನ ಕಂಬದ ಕಡೆಗೆ ಹೋಗಿ ಮತ್ತೆ ನನ್ನ ನೋಡುವಷ್ಟರಲ್ಲಿ ಆ ಕರ್ಪೂರಗಳನ್ನು ಪ್ಯಾಂಟಿನ ಜೇಬಿಗಿಳಿಸಿದ್ದೆ. ಒಬ್ಬ ಮುದಿ ಹೆಂಗಸು ಅಡ್ಡಬಿದ್ದು; ‘ವಾಕ್ಸ ಹೇಳಿ ಸ್ವಾಮಿ’ ಎಂದಳು. ಈಗ ನಾನು ಏನಾದರೂ ಹೇಳದಿದ್ದರೆ ಮರ್ಯಾದೆ ಹೋಗುತ್ತದೆಂದು ‘ಏನಮ್ಮ ದಾರಿಲಿ ಬರುವಾಗ ಬೇರೆ ದೇವರ ಗ್ಯಾನ ಮಾಡೋ ಬತ್ತಿದ್ದ? ಅದಕ್ಕೆ ನಿಂಗೆ ದಾರಿ ತಪ್ಪಿಸಿದ್ದು ಗೊತ್ತಾಯ್ತಾ’ ಎಂದೆ. ಯಾವಾಗಲೂ ಸೀಗೆಸೊಪ್ಪು ಹುಡುಕಿಕೊಂಡು ಹೋಗುತ್ತಿದ್ದ ಹೆಂಗಸಿನ ಸ್ವಭಾವ ಗೊತ್ತಿದ್ದರಿಂದ ಊಹೆ ಮಾಡಿ ಹೇಳಿದ್ದೆ. ‘ಹೂ ಸ್ವಾಮಿ ತಪ್ಪಾಯ್ತು ಇನ್ಯಾಕೆ ಸೀದಾ ನಿಮ್ಮ ಗ್ಯಾನ ಮಾಡ್ಕೊಂಡೇ ಬತ್ತೀನಿ’ ಎಂದು ಅಡ್ಡಬಿದ್ದಳು. ಮತ್ತಿಬ್ಬರು ಏನೋ ಕೇಳಿದರು. ಹೇಗೋ ಸಂಭಾಳಿಸಿದೆ. ಇನ್ನೂ ಹೀಗೇ ಇದ್ದರೆ ಅಹ್ವಾನ ಆಗುತ್ತದೆಂದು ನಾನು ಬೇರೆ ಕಡೆ ಹೋಗಬೇಕು ಕಳಿಸಿಕೊಡಿ ಎಂದು ಜೋರಾಗಿ ಕಿರುಚುತ್ತಾ ನೆಲದ ಮೇಲೆ ದೊಪ್ಪನೆ ಬಿದ್ದುಕೊಂಡೆ.
swamyponnachi123@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!