Mysore
20
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಆದರ್ಶಗಳ ಆಲಯ ಅಜ್ಜ-ಅಜ್ಜಿಯ ಸ್ವಾವಲಂಬಿ ಸಂಸಾರ

-ಸಂತೋಷ ಶಿರಸಂಗಿ, ಬೆಳಗಾವಿ

‘ನಿದ್ರೆ ಎಂಬ ನಿಜ ಹಾದರಗಿತ್ತಿ’ಎಂಬ ಶರೀಫರ ತತ್ವ ಪದದ ಹೊದಿಕೆ ತಗೆದಿಟ್ಟು ,ಬೆಳಿಗ್ಗೆ ಬೇಗ ಏಳುವುದು ತುಂಬಾ ಕಷ್ಟ.

ಆದರೂ ಬೇಗ ಎದ್ದು, ಅರ್ಧ ಮೈಲಿ ವಾಕಿಂಗ್ ಹೋಗುವುದು ನನ್ನ ನಿತ್ಯದ ರೂಢಿ. ಮುಂಜಾವಿನ ನಸುಬೆಳಕಿನಲ್ಲಿ ವಾಕಿಂಗ್ ಹೋಗುವವರೆಲ್ಲರಿಗೂ ಕಾಫಿ ಆಯ್ತಾ ,ಟೀ ಆಯ್ತಾ ಎಂಬ ಹಿರಿಯ ದಂಪತಿಗಳ ಉಪಚಾರದ ಮಾತುಗಳನ್ನು ನಿತ್ಯ ಕೇಳುತ್ತೇನೆ.
ವೃದ್ಧಾಪ್ಯದಲ್ಲೂ ಪೂರಕೆ ಹಿಡಿದು ಮನೆಯೊಂದರ ಕೆಲಸ ಮಾಡುತ್ತಾ, ಎಲ್ಲರಿಗೂ ನಗೆಯ ನಮಸ್ಕಾರ ಬೀರಿ ಮಾತನಾಡಿಸುವ
ಹಣ್ಣಾದ ಹುಮ್ಮಸ್ಸಿನ ನಗುಮುಖಗಳು. ಎಪ್ಪತ್ತು ವರ್ಷಗಳು ತುಂಬಿದ ಸಿದ್ಧಲಿಂಗಪ್ಪ ಮತ್ತು ಲಿಂಗಮ್ಮ. ಯಾರ ಅನುಕಂಪವೂ ನಮಗೆ ಬೇಕಿಲ್ಲ, ಮುರಿ ಮುರಿ ಮುಪ್ಪಾದರೂ ದುಡಿದೇ ಬದುಕುತ್ತೇವೆ.ಎನ್ನುವ ಆತ್ಮಾಭಿಮಾನದ ಗಟ್ಟಿ ಜೀವಗಳು ಮಾರುತಿ ದೇವಸ್ಥಾನ ರಸ್ತೆ, ಗಂಗೋತ್ರಿ ಬಡಾವಣೆಯಲ್ಲಿನ ನೆಮ್ಮದಿಯ ನಿವಾಸಿಗಳು.

ಇವರ ಬೆಳಗಿನ ಮಾತುಗಳೇ ನನಗೆ ಸುಭಾಷಿತಗಳು. ಅವರು ಕಂಡ ಎಪ್ಪತ್ತು ವರ್ಷಗಳ ಸುದೀರ್ಘ ಬದುಕಿನ ಅನುಭವದ ನಲ್ನುಡಿಗಳಿಗೆ ನನ್ನ ಹೃದಯ ಹಸಿದ ಕಿವಿಗಳಾಗುತ್ತವೆ. ಇದೊಂದು ಹಸಿವು ಅವರೊಂದಿಗೆ ಆತ್ಮೀಯ ಒಡನಾಟ ಬೆಳೆಸಿತು.
ಮೂಲತಃ ಇವರು ಚಾಮರಾಜನಗರದವರು.

ಮೈಸೂರಿಗೆ ಬಂದು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ, ಬದುಕು ಕಟ್ಟಿಕೊಂಡರು. ಒಬ್ಬಳೆ ಹೆಣ್ಣುಮಗಳು,ಆಕೆಗೆ ಒಳ್ಳೆಯ ಜೀವನ ರೂಪಿಸಿ ಹೆಗಲಿಗೇರಿದ ಜವಾಬ್ದಾರಿಯನ್ನು ಹಗುರಾಗಿಸಿಕೊಂಡರು. ಸಂಬಂಧಗಳೇ ಸಂಪತ್ತಾಗಬೇಕು, ಸಂಪತ್ತಿಗಾಗಿ ಕೈಚಾಚುವ ಸಂಬಂಧಿಕರು ನಾವಾಗಬಾರದು.

ಎಂದೂ ಯಾವ ನೆಂಟರು,ಬೀಗರ ಹಂಗೂ ನಮಗೆ ಬೇಡ. ಕಡೆವರೆಗೂ ಕಾಯಕದ ಫಲದಲ್ಲಿ ಬದಕುತ್ತೇವೆ ಎನ್ನುವ ಶ್ರಮಿಕರು. ಅಜ್ಜಿ ಕೊಡಿಟ್ಟ ರೂ. ನಾಲ್ಕು ಲಕ್ಷದಿಂದ ಮೂರು ವರ್ಷದವರೆಗೆ ಭೋಗ್ಯಕ್ಕಾಗಿ ಮನೆಯೊಂದನ್ನು ಪಡೆದಿದ್ದಾರೆ. ನಮ್ಮ ಹಾಸ್ಟೆಲ್ ಮುಂದಿರುವ ಮನೆಯೊಂದರ ಕೆಲಸ ಅಜ್ಜಿ ಮಾಡುತ್ತಾರೆ,ತಾತ ಹೋಟೆಲೊಂದಕ್ಕೆ ತರಕಾರಿಗಳನ್ನು ಕತ್ತರಿಸುತ್ತಾರೆ. ತಿಂಗಳಿನ ಆದಾಯ 1,600. ತಾತ ಇಷ್ಟು ಹಣ ಒಂದು ತಿಂಗಳಿಗೆ ಸಾಕಾಗುತ್ತಾ? ಎಂದು ಕೇಳಿದೆ.

ಖರ್ಚು ಮಾಡಿದರೆ ಖಾಲಿಯಾಗದ ವಸ್ತು ಜಗತ್ತಿನಲ್ಲಿ ಯಾವುದಿದೆ? ಜೀವನದ ಹಿತಿ-ಮಿತಿ ಗೊತ್ತಿದ್ದರೆ, ಸಾಕು ಎಲ್ಲವೂ ಸಾಕಾಗುತ್ತದೆ ಎಂದು ಉತ್ತರಿಸಿದರು. ಅಜ್ಜಿ ನಿಮಗೇನಾದರು ಹಣ ಬೇಕಾದರೆ ಕೇಳಿ ನಾನು ಕೊಡುತ್ತೇನೆ ಅಂದೆ. ‘ಜೀವನ ನೆಮ್ಮದಿಯಾಗಿದೆ ಕಣಪ್ಪಾ.


ಪಾಪ ಓದುವ ಹುಡುಗರು ನೀವು, ನಿಮ್ಮ ಹತ್ರ ಕಾಸ ತಗೊಂಡರೆ ಮಾದಪ್ಪ ಮೆಚ್ಚತಾನ, ಅನ್ನಕ್ಕಿಂತ ಅಕ್ಷರ ದೊಡ್ಡದು ಕಣಪ್ಪಾ, ಚೆನ್ನಾಗಿ ಓದಿ ಅಪ್ಪ ಅಮ್ಮನ ಸುಖವಾಗಿ ನೋಡಕೊಳ್ಳಿ ಎಂದರು. ಅತಿಭೋಗವದು ರೋಗ, ಕೊಲ್ಲುವುದು ಬೇಗ, ಸಾಮಾನ್ಯ ಜೀವನವು ಪರಮಸುಧೆಯಂತೆ ಎಂಬ ಕುವೆಂಪು ಅವರ ಸಾಲುಗಳನ್ನು ಪ್ರತ್ಯಕ್ಷವಾಗಿ ಜೀವಿಸುತ್ತಿದ್ದಾರೆ. ನೂರು ರೂಪಾಯಿಗೆ ಏನು ಬರುತ್ತೆ? ಎನ್ನುವುದರಲ್ಲಿ ನಾವಿದ್ದೇವೆ, ವಾರಪೂರ್ತಿಗೆ ನೂರು ರೂ. ಸಾಕೆನ್ನುವವರು ಇವತ್ತಿಗೂ ಇದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟವಾಗಿದ್ದು ಈ ವೃದ್ಧ ಜೀವಿಗಳ ದಾಂಪತ್ಯ ಜೀವನ. ‘ನೀ ನನಗಿದ್ದರೆ ನಾ ನಿನಗೆ’ ಎನ್ನುವ ಜಮಾನದಲ್ಲಿ ನಾವಿದ್ದೇವೆ. ಆದರೆ ಇವರು ‘ನೀನಿದ್ದರೆ ಮಾತ್ರ ನಾನು’ ಎನ್ನುವ ಪರಸ್ಪರ ಪ್ರೀತಿ,ಕಾಳಜಿ, ಪ್ರೇಮದಿಂದ ಐವತ್ತು ವರ್ಷಗಳನ್ನು ಪೂರೈಸಿ,ಸುಖ ದುಃಖಗಳಲ್ಲಿ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ.

ಆ ಹಿರಿಯ ಮುಖಗಳ ಹಿಂದೆ ಕಷ್ಟಗಳ ಕರಿ ನೆರಳಿದ್ದರು, ಯಾರಿಗೂ ಕೈ ಚಾಚದೆ ಬದುಕುತ್ತಿರುವ ಅವರ ಜೀವನ ಪ್ರೇರಣೀಯ.
ಇದು ಅನುಕಂಪದ ಬರಹವಲ್ಲ, ಆದರ್ಶಗಳಿಗೆ ಜೀವ ತುಂಬುವ ಬದುಕು.ಅವರ ಆದರ್ಶಗಳ ಆಶೀರ್ವಾದದ ನುಡಿ-ಬದುಕು
ಕಣ್ಣತುಂಬಿಸಿಕೊಳ್ಳುವ ಸಂಭ್ರಮ ಸದಾ ನನ್ನದು.

 

Tags:
error: Content is protected !!