Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸಂಕ್ರಾಂತಿ

• ಮೊಗಳ್ಳಿ ಗಣೇಶ್

ಆಗೊಂದು ಸುಗ್ಗಿಯ ಸಂಕ್ರಾಂತಿಯ ಕಾಲವಿತ್ತು, ಈಗ ಬಡಪಾಯಿ ರೈತರಿಗೆ ಯಾವ ಯಾವ ಸಾಲಗಳ ಶೂಲವಿದೆಯೋ! ಆಗ ಸಂಕ್ರಾಂತಿ ಬಂತೆಂದ ಕೂಡಲೆ ಮರಗಿಡಗಳಿಗೆಲ್ಲ ಚಳಿಗೆ ಮುದುರಿ ಉದುರಿ ಮಕರ ಸೂರ್ಯನ ಬಿಸಿಲಿಗಾಗಿ ಕಾಯುತ್ತಿದ್ದವು. ನಮ್ಮ ಮೈ ಚರ್ಮವೂ ಚಳಿಯ ಹೊಡೆತಕ್ಕೆ ಹಾವು ಪೊರೆ ಬಿಟ್ಟಂತಾಗಿ ಹೊಳೆಯ ಬೆಚ್ಚನೆಯ ನೀರಲ್ಲಿ ತೊಳೆದು ಹೋಗುತಿತ್ತು. ಅಂತಹ ಚಳಿಯಲ್ಲಿ ಹೊಳೆಯ ನೀರು ಯಾರಿಂದ ಬೆಚ್ಚಗಾಯಿತೊ… ಭೂತಾಯಿಯೇ ನೀರು ಕಾಯಿಸಿದಳೇನೊ ಎಂದುಕೊಳ್ಳುತ್ತಿದ್ದೆವು. ಸಂಕ್ರಾಂತಿ ಹಬ್ಬ ಅಪ್ಪಟ ಕೃಷಿ ಸಂಸ್ಕೃತಿಯ ಆಚರಣೆಯಾಗಿತ್ತು. ಸೂರ್ಯ ತನ್ನ ಪಥ ಬದಲಿಸುತ್ತಿದ್ದ. ಸೂರ್ಯನ ಈ ಪಥ ಚಲನೆಯ ನಿಮಿತ್ತವೇ ಹಳ್ಳಿಗರು ಸೂರ್ಯಾರಾಧನೆಯನ್ನು ಆಚರಿಸುತ್ತಿದ್ದುದು.

ಇನ್ನೊಂದೆಡೆ ಪರಿಸರ ಚಿಗುರಿ ಹೂ ಬಿಡಲು ಮುಂದಾಗುತ್ತಿತ್ತು. ಭೂಮಿ ಬೇಸಿಗೆಯನ್ನು ಬರಮಾಡಿಕೊಳ್ಳಲು ಮುಂದಾಗುತ್ತಿತ್ತು. ನಮಗೂ ಸಂಕ್ರಾಂತಿಯು ಹತ್ತಾರು ಬಾಗಿಲುಗಳ ತೆರೆಯುತ್ತಿತ್ತು. ಸುಗ್ಗಿಯ ಕೆಲಸಗಳಲ್ಲಿ ಮುಳುಗುವುದೇ ದೊಡ್ಡ ಹಬ್ಬವಾಗಿತ್ತು. ವರ್ಷವೆಲ್ಲ ದುಡಿದಿದ್ದನ್ನು ಬಳ್ಳಗಳಲ್ಲಿ ತುಂಬಿಕೊಳ್ಳುವ ಕಾಲ ಅದಾಗಿತ್ತು. ಒಂದೇ ಒಕ್ಕಣೆಯ ಕಣದಲ್ಲಿ ಹತ್ತಾರು ಧಾನ್ಯಗಳ ಚೀಲಗಳಿಗೆ ತುಂಬಿ ಗಾಡಿಗೆ ಹೇರಿ ಮನೆಗೆ ತಂದು ಹಜಾರದಲ್ಲಿ ಜೋಡಿಸಿಕೊಳ್ಳುವಾಗ ನಮ್ಮ ತಾತ ಪ್ರತಿಯೊಂದು ಚೀಲಕ್ಕೂ ನಮಸ್ಕರಿಸಿ ದೈವ ಎಂದು ಗೌರವಿಸುತ್ತಿದ್ದ. ನಮಗೂ ಆ ಮೂಟೆಗಳ ಮೇಲೆ ನೆಗೆದು ಕುಣಿದು ಮಂಗಾಟ ಆಡುವುದೇ ಸ್ವರ್ಗವಾಗಿತ್ತು.

ಸುಗ್ಗಿಯ ಹಿಗ್ಗಿಗೆ ಈ ಕಾಲದ ಮಕ್ಕಳು ಅಷ್ಟು ಅದೃಷ್ಟವಂತರಲ್ಲ. ಸಂಕ್ರಾಂತಿಯ ಹಬ್ಬದಲ್ಲಿ ಅಂತಹ ಸವಿಯೂಟ ಏನೂ ಇರುತ್ತಿರಲಿಲ್ಲ. ಅವರೆ ಕಾಯಿನ ಸುಗ್ಗಿಯ ಸೊಗಡಿನ ಸೊನೆ ಉತ್ತರ ಕರ್ನಾಟಕದವರಿಗೆ ಗೊತ್ತಿಲ್ಲ. ಹಿಚುಕಿ ಸಿಪ್ಪೆ ತೆಗೆದ ಅವರೆ ಕಾಯಿಯ ಸಾರಿಗೆ ಹೊಸ ಭತ್ತದ ಅಕ್ಕಿಯ ಅನ್ನ ಮಾಡಿ ಉಚ್ಚೆಳ್ಳೆಣ್ಣೆ ಬಿಟ್ಟುಕೊಂಡು ಊಟ ಮಾಡುವುದೇ ಮಹಾ ಸಂಭ್ರಮ. ಅಪರೂಪಕ್ಕೆ ಸಿಗುತ್ತಿದ್ದ ಹೊಸ ಅಕ್ಕಿಯು ಬೆಂದ ಹಣ್ಣಾಗಿರುತ್ತಿತ್ತು. ಹೆಣ್ಣು ಮಕ್ಕಳು ಜವನ ಮುಡಿದು ಮತ್ತು ತರಿಸುತ್ತಿದ್ದರು. ಅಂತಹ ಘಾಟು ಘಮಲಿನ ಜವನ ಹೂ ಮುಡಿದವರೇ ಊರ ತುಂಬ ಮೊಳಗುತ್ತಿದ್ದರು. ತಮಟೆ ನಗಾರಿಗಳು ಸುಗ್ಗಿಯ ಮೊಳಗಿಸುತ್ತಿದ್ದವು.

ಸಂಕ್ರಾಂತಿ ಎಂದರೆ ದನಗಳ ಕಿಚ್ಚು ಹಾಯಿಸುವುದು, ಊರ ಕೆರೆ ಮಾಳದ ಮುಂದಾರಿಗೆ ಊರಿನ ಎಲ್ಲ ಪರುಗಳನ್ನು ಸಿಂಗರಿಸಿ ಕರೆ ತರುತ್ತಿದ್ದರು. ಆ ಹಳ್ಳಿಯ ಸಂಪತ್ತನ್ನು ಆ ಊರಿನ ತಿಪ್ಪೆಗಳ ಎತ್ತರ ನೋಡಿ ಅಳೆಯುತ್ತಿದ್ದರು. ಕೆರೆ ಕಟ್ಟೆಗಳಲ್ಲಿ ರಾಸುಗಳನ್ನೆಲ್ಲ ತೊಳೆದು ಕೊಂಬು ಗೊರಸು ಗಾಯ ಸರಿ ಮಾಡಿ ನೀಲಿ ಬಣ್ಣದಿ ತರಾವರಿ ಸಿಂಗಾರ ಮಾಡಿ ಕೊಂಬುಗಳಿಗೆ ಕಂಚಿನ, ಬೆಳ್ಳಿಯ ಒಡವೆಗಳ ತೊಡಿಸುತ್ತಿದ್ದರು. ಕೊರಳ ಗಂಟೆಗಳಿಗೆ ಲೆಕ್ಕವೇ ಇಲ್ಲ. ದನಗಳಿಗೆ ಅಲಂಕಾರ ಮಾಡುವ ಪ್ರಸಾದನ ಕಲಾವಿದರಿದ್ದರು, ಗೋಗರೆದು ಅವರಿಂದ ಹಸುಗಳಿಗೆ ಪೈಪೋಟಿಯ ಸಿಂಗಾರ ಮಾಡಿಸುತ್ತಿದ್ದರು. ಕರುಗಳನ್ನು ನಮ್ಮಂತಹ ಹುಡುಗರ ಕೈಗೆ ಕೊಟ್ಟುಬಿಡುತ್ತಿದ್ದರು. ದೊಡ್ಡ ಗೌಡರು ಎತ್ತುಗಳನ್ನು ಪ್ರತಿಷ್ಠೆಯಿಂದ ಪ್ರದರ್ಶಿಸುತ್ತಿದ್ದರು. ಗೊಂಡೆಹಾರ, ಮಣಿಸರ, ಬೆಳ್ಳಿ ಕಾಲ್ಗಡಗಗಳ ತೊಡಿಸುತ್ತಿದ್ದರು. ಎತ್ತುಗಳು ಗೌಸು ತೊಟ್ಟು ನಡೆಯುವುದೇ ಒಂದು ಆನೆ ಅಂಬಾರಿಗಿಂತ ಮಿಗಿಲಾಗಿತ್ತು. ‘ಗೌಸು’ ಬ್ರಿಟಿಷರ ಗೌನಿನಿಂದ ಬಂದ ಪದ. ಮುಸ್ಲಿಮರು ಅದನ್ನು ಗೌಸ್ ಎಂದು ಕರೆದು ಕೊಂಡರೇನೊ! ಒಟ್ಟಿನಲ್ಲಿ ನಮ್ಮ ಹಳ್ಳಿ ಜನ ಪ್ರೀತಿಯಿಂದ ಕಿಚ್ಚು ಹಾಯಿಸುವ ಗೌರವದಿಂದ ಗೌಸು ತೊಡಿಸಿ ಅವುಗಳನ್ನು ಕಿಚ್ಚು ಸಂಕ್ರಾಂತಿಯ ಹಬ್ಬ ಹತ್ತಾರು ಹಾಯಲು ಕರೆದೊಯ್ಯುತ್ತಿದ್ದರು.

ಉದ್ದವಾಗಿ ದಾರಿಯಲ್ಲಿ ನೆಲ್ಲುಲ್ಲು ರಾಶಿ ಹಾಕಿರುತ್ತಿದ್ದರು. ಇಡೀ ಊರಾದ ಊರ ಜನವೇ ನೆರೆದಿರುತ್ತಿತ್ತು. ಅದೇ ಕಾಲದಲ್ಲಿ ಹೆಣ್ಣುಗಳ ನೋಡಲು ಮನೆಗಳಿಗೆ ಬೇರೆ ಊರಿಂದ ಜನ ಬರುತ್ತಿದ್ದರು. ಹೆಣ್ಣು ಗಂಡಿನ ಒಪ್ಪಂದದ ಸಂಬಂಧ ಗಳೂ ಅದೇ ಕಾಲದಲ್ಲಿ ನಡೆದು ಬಿಡುತ್ತಿದ್ದವು. ಅಹಾ ಒಂದೇ ಎರಡೇ ಸಂಕ್ರಾಂತಿಯ ಮಾನವ ವಿಕಾಸದ ಪಾಡು! ಸಂಕ್ರಾಂತಿ ಹಬ್ಬ ಪಶುಪಾಲಕರ ಕಾಲವನ್ನು ಕನಿಷ್ಠ ಮೂರು ಸಾವಿರ ವರ್ಷಗಳ ಹಿಂದಕ್ಕೆ ಕೊಂಡೊಯ್ದರೂ ಬೃಹತ್ ಪ್ರಮಾಣದಲ್ಲಿ ಪಶುಗಳ ಜೊತೆ ಎಲ್ಲೆಲ್ಲಿ ಮೇವು ಸಿಗುತ್ತೋ ಅಲ್ಲೆಲ್ಲ ಪಯಣ ಹೊರಟು ಸಂಕ್ರಾಂತಿಯ ಸೂರ್ಯ ಪಥಕ್ಕೆ ಬಂದ ಕೂಡಲೆ ಇಡೀ ಪಶುಪಾಲಕ ಸಂಸ್ಕೃತಿ ಒಂದು ಸಂಭ್ರಮದ ಹಂತ ತಲುಪುತ್ತಿತ್ತು.
ಪಶುಗಳು ಒಂದೆಡೆ ನಿಂತಾಗ ಸೆಗಣಿ ಗುಡ್ಡಗಳೇ ನಿರ್ಮಾಣ ಆಗುತ್ತಿದ್ದವು. ಪ್ರತಿವರ್ಷ ಅಂತಹ ಸೆಗಣಿ ಗುಡ್ಡ ಬೆಳೆದು ಒಣಗುತಿತ್ತು. ಆ ಸೆಗಣಿ ಗುಡ್ಡಕ್ಕೆ ಬೆಂಕಿ ಹಚ್ಚಿ ಸೂರ್ಯಾರಾಧನೆ ಮಾಡುತ್ತಿದ್ದರು ಪಶುಪಾಲಕರು. ಅಲ್ಲಿಂದ ಸಂಕ್ರಾಂತಿ ಹಬ್ಬ ತನ್ನ ಮೂಲ ಪಶುಪಾಲಕ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ.

ನಮ್ಮೂರ ಸಂಕ್ರಾಂತಿ ಹಬ್ಬದಲ್ಲಿ ನನಗೆ ಹಸುಗಳ ಕೊರಳ ಗಂಟೆಯದೇ ಕನಸು. ಬೆಂಕಿ ಹಚ್ಚಿ ಕಿಚ್ಚು ಹಾಯಿಸುವ ರೂಢಿಯ ಮೂಲ ಆಗ ನನಗೇನು ಗೊತ್ತಿರಲಿಲ್ಲ. ಧಗಧಗಿಸುವ ಕೆನ್ನಾಲಿಗೆಯ ಕಿಚ್ಚಲ್ಲಿ ಹಸುಗಳ ನುಗ್ಗಿಸಿ ನೆಗೆದುಕೊಂಡು ಬರುವುದು ಆ ಕತ್ತಲಲ್ಲಿ ಬಹಳ ರೋಚಕವಾಗಿತ್ತು. ಆ ಬೆಂಕಿಯ ಕೆಂಬೆಳಕಲ್ಲಿ ಅವರು ಯಾವುದೋ ಲೋಕದಿಂದ ಬಂದವರಂತೆ ಕಾಣುತ್ತಿದ್ದರು. ಬೆಂಕಿಗೆ ಹೆದರಿದ ಚಂಡಿ ಹಸುಗಳು ಹಗ್ಗ ಕಿತ್ತುಕೊಂಡು ಎತ್ತಲೊ ನುಗ್ಗಿಬಿಡುತ್ತಿದ್ದವು. ಕಿಚ್ಚು ಹಾಯುವುದಂತೂ ದೊಡ್ಡ ಮನರಂಜನೆಯಾಗಿತ್ತು. ಎಳೆಮಾರೆ ಎಂಬಾಕೆ ದಡಿ ಎಮ್ಮೆಗಳ ಸಾಕಿದ್ದಳು. ಎದೆಗುಂದದೆ ಆಕೆ. ಸೀರೆಯನ್ನು ಕಚ್ಚೆಯಾಗಿ ಕಟ್ಟಿಕೊಂಡು ಗಂಡಸರಿಗೆ ಸವಾಲು ಹಾಕಿ ಕೋಣಗಳಿಗೆ ಬೆದರಿಕೆ ಒಡ್ಡಿ ಯಶಸ್ವಿಯಾಗಿ ಬೆಂಕಿ ದಾಟುತ್ತಿದ್ದಳು. ಅವಳ ಆ ಎಮ್ಮೆಗಳು ಚಳಿಗೆ ಬೆಂಕಿ ಕಾಯುವ ಎಂಬಂತೆ ಎಳೆದಾಡುತ್ತಿದ್ದವು.

ಊರಲ್ಲಿ ಈಗ ಎಳೆಮಾರೆಯೂ ಇಲ್ಲ, ಅವಳ ಎಮ್ಮೆಗಳೂ ಇಲ್ಲ. ಇಂದು ವ್ಯವಸಾಯ ಮಾಡುವವರೇ ಇಲ್ಲವಾಗುತ್ತಿದ್ದಾರೆ. ಸಂಕ್ರಾಂತಿ ಅನ್ನ ಬೆಳೆಯುವ ಹಬ್ಬವಾಗಿತ್ತೆ ಹೊರತು ದುಡ್ಡು ಬೆಳೆಯುವ ವ್ಯವಹಾರವಾಗಿರಲಿಲ್ಲ. ಕೃಷಿ ಸಲಕರಣೆಗಳನೆಲ್ಲ ತೊಳೆದು ಪೂಜಿಸುತ್ತಿದ್ದರು. ಸಾಕು ಪ್ರಾಣಿಗಳ ಚೆನ್ನಾಗಿ ಮೇಯಿಸಿ ಮೈದುಂಬಿಸಿ ಜಾತ್ರೆಗೆ ಹೋಗುತ್ತಿದ್ದರು. ಪಶು ಸಂಪತ್ತಿನ ಮಾರುಕಟ್ಟೆ ರಾಜರ ಕಾಲದ ಬಹು ದೊಡ್ಡ ವ್ಯಾಪಾರವಾಗಿತ್ತು. ಪಶು ಸಂಪತ್ತಿನ ಕಳ್ಳತನ ಪಾಂಡವರ ಕಾಲದಲ್ಲಿ ಇತ್ತು. ಈ ಸಂಪತ್ತಿಗಾಗಿ ಇಡೀ ಪ್ರಪಂಚದ ಎಲ್ಲ ಪಶುಪಾಲಕರಿಗೂ, ಆದಿವಾಸಿಗಳಿಗೂ, ಅಲೆಮಾರಿಗಳಿಗೂ ಬಹಳ ಬಹಳ ಯುದ್ಧಗಳಾಗಿವೆ. ಇವತ್ತಿಗೂ ಆಫ್ರಿಕಾದ ಬುಡಕಟ್ಟುಗಳು ಈ ಪಶು ಸಂಪತ್ತಿಗಾಗಿಯೇ ಕಾದಾಡುತ್ತಿವೆ. ನಾಗರಿಕತೆಗೆ ಬಂದಿದ್ದೇವೆ ಎಂಬುದು ನಿಜ. ಆದರೆ ಸೂರ್ಯನ ಪಥವನ್ನೇನು ನಾವು ದಾಟಿಲ್ಲ. ನಿಸರ್ಗದ ಚಲನೆ ಮನುಷ್ಯರಿಗೆ ಸಂಸ್ಕೃತಿಯನ್ನು ಕಲಿಸಿಕೊಟ್ಟಿದೆ. ಇಂದು ಅಭಿವೃದ್ಧಿ ಎನ್ನುವುದೇ ಶಾಪವಾಗಿದ್ದು ಬಿತ್ತಿ ಬೆಳೆವ ರೈತರು ಸರ್ಕಾರಗಳ ಕ್ರೂರ ನೀತಿಗಳಿಂದ ನೇಣು ಹಾಕಿಕೊಳ್ಳಬೇಕಾಗಿದೆ. ಇಲ್ಲವೇ ತುಂಡು ಭೂಮಿಯ ಮಾರಿ ಮಹಾನಗರಗಳಲ್ಲಿ ಜೀತಗಾರರಾಗಿ ಮನೆ ಮಠ ಎಲ್ಲ ಗುರುತು ಸಿಗದಂತಾಗಿವೆ. ಎಲ್ಲ ಬದಲಾಗಲೇಬೇಕು; ಆದರೆ ನಮ್ಮ ಬದಲಾಗುವ ಕಾಲಮಾನಕ್ಕೆ ಮಾನವೀಕ ರಣವಿರಬೇಕು; ನೈತಿಕ ಅಂತಃಶಕ್ತಿ ಇರಬೇಕು. ಕುದ್ರತೆಗಳು ಮತ್ತೆ ಮತ್ತೆ ಬಲಾಡ್ಯ ಆಗುವುದಾದರೆ ಅದು ಅಭಿವೃದ್ಧಿ ಅಲ್ಲ. ಇದನ್ನು ನಿಸರ್ಗ ಸಹಿಸುವುದಿಲ್ಲ.
(ಲೇಖಕರು ಕನ್ನಡದ ಖ್ಯಾತ ಕಥೆಗಾರ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಪ್ರಾಧ್ಯಾಪಕರು)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ