Mysore
18
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಶಾಲೆಯ ಹುಡುಗರು ತಾವರೆ ಕಿತ್ತ ಪ್ರಸಂಗ

• ಅಜಯ್ ಕುಮಾರ್ ಎಂ ಗುಂಬಳ್ಳಿ

ಅದ್ಯಾವ ದಿನವೆಂದು ನೆನಪಿಲ್ಲ. ಬೆಳಗಿನ ಸಮಯ. ಇನ್ನು ಶಾಲೆಯ ಘಂಟೆ ಬಾರಿಸಿರಲಿಲ್ಲ. ನಾನು ಮತ್ತು ಗೆಳೆಯ ಶಾಲಾ ಆವರಣದಲ್ಲಿ ಇದ್ದವರು, ಮೀನು ನೋಡಲು ಕಾಲುವೆಗೆ ಹೋಗಿದ್ದೆವು.
ಶಾಲೆಯ ಸುತ್ತ ಒಂದು ದೇವಸ್ಥಾನ, ಗದ್ದೆಗಳು, ಕಾಲುವೆ, ಕೆರೆ, ಸಣ್ಣ ಗುಡ್ಡ ಇವೆಲ್ಲವೂ ಇದ್ದವು. ಮೂತ್ರ ಉಯ್ಯಲು ಬಿಟ್ಟಾಗ ನಾವೆಲ್ಲ ಅಡ್ಡಾಡಿಕೊಂಡು ಪುನಃ ತರಗತಿಗೆ ಹೋಗುವುದು ಸ್ವಲ್ಪ ಲೇಟು ಮಾಡುತ್ತಿದ್ದೆವು. ಕಾಲುವೆಯಲ್ಲಿ ಮೀನಿನ ಮರಿಗಳು ಈಜಾಡುವುದನ್ನು ಬಹಳ ಆಸಕ್ತಿ ಮತ್ತು ಖುಷಿಯಿಂದ ನೋಡುತ್ತಿದ್ದೆವು. ಅದೊಂಥರಾ ಚೆಂದ ನಮಗೆ ಹಾಗೇ ನೋಡುತ್ತ ಕೆರೆಯ ಬಳಿ ಸಾಗಿದೆವು.

ಅದು ನೂರು ಮೀಟರ್ ಉದ್ದ ಇರುವ ಕೆರೆ. ತಾವರೆ ಹೂಗಳು ಬಿಸಿಲಿಗೆ ಫಳಾರನೆ ಹೊಳೆಯುತ್ತಿದ್ದವು. ನೀರಿಗಿಳಿದೆವು. ಮಂಡಿಯು ಮುಳುಗಿಹೋಗಿ ನಮ್ಮಿಬ್ಬರ ಚೆಡ್ಡಿಗಳ ತುದಿ ತೇವವಾದದ್ದಕ್ಕೆ ಮೇಲಕ್ಕೆ ಹತ್ತಿ ಬಂದೆವು. ತಾವರೆ ಹೂ ಇಬ್ಬರನ್ನೂ ಆಕರ್ಷಿಸಿತ್ತು. ಅವನ್ನು ಕೀಳಲೇಬೇಕೆಂದು ಸ್ವಲ್ಪ ಹೊತ್ತು ಏನೆಲ್ಲ ಉಪಾಯ ಮಾಡಬಹುದೆನಿಸಿತೊ ಎಲ್ಲವನ್ನೂ ಮಾಡಿದರೂ ತಾವರೆಯನ್ನು ಮಾತ್ರ ಕೀಳಲಾಗಲಿಲ್ಲ. ಗೆಳೆಯ ಮತ್ತು ನಾನು ಸಪ್ಪಗಾಗಿದೆವು. ತಾವರೆ ಹೂ ದಡದ ಅಂಚಿಗೆ ಇದ್ದರೂ ಡದದ ಮೇಲೆಲ್ಲ ವಿವಿಧ ಬಗೆಯ ಸೆತ್ತೆಗಳಿದ್ದವು. ಕಾಲಿಡಲು ಬಲು ಕಷ್ಟವಾಗುತ್ತಿತ್ತು.

ಅದೇನನ್ನಿಸಿತೋ ಗೆಳೆಯನಿಗೆ. ‘ಬಾ ಇಲ್ಲಿ’ – ನನ್ನ ಕರೆದು ಮುಳ್ಳಿನ ಸೆತ್ತೆಗಳ ಸರಿಸಿ ಕಾಲಾಕಿ ಒಂದು ಕೈಯನ್ನು ನನಗೆ ಕೊಟ್ಟು ‘ಗಟ್ಟಿಯಾಗಿ ಹಿಡೋ’ ಅಂದ. ಅವನು ಈ ಬಗ್ಗೆ ಕೈಯನ್ನು ಮಿತಿ ಮೀರಿ ಚಾಚಿ ತಾವರೆ ಹೂಗಳ ಸಮೀಪದಲ್ಲಿದ್ದ. ಆದರೂ ಹೂಗಳು ಸಿಕ್ಕಲಿಲ್ಲ. ಒಂದು ನಿಮಿಷ ಹಾಗೇ ಪ್ರಯತ್ನಪಟ್ಟ. ಇನ್ನೇನು ಸಿಕ್ಕೀತು ಅನ್ನುವಷ್ಟರಲ್ಲಿ ತಾವರೆಗಳು ಕೈತಪ್ಪಿ ಹೋಗುತ್ತಿದ್ದವು. ಗೆಳೆಯನ ಒಂದು ಕಾಲು ಇನ್ನಷ್ಟು ಕೆಳಕ್ಕೆ ಹೋಯ್ತು. ನಾನು ಶಕ್ತಿಮೀರಿ ಅವನನ್ನು ಎಳೆಯುತ್ತಿದ್ದೆ. ಅಚಾನಕ್ ಆಗಿ ತಾವರೆಗಳು ಸಿಕ್ಕ ಅಪರಿಮಿತ ಖುಷಿಗೆ ಇಬ್ಬರೂ ಓಡಿ ಬಂದೆವು. ಇಬ್ಬರ ಚಡ್ಡಿಗಳೂ ಒದ್ದೆಯಾಗಿದ್ದನ್ನು ಮೇಷ್ಟ್ರು ಕಡೆಗಣ್ಣಿಂದ ಕಂಡಿದ್ದರು. ಪ್ರಾರ್ಥನೆ ಮುಗಿದು ಎಲ್ಲರೂ ತರಗತಿಯಲ್ಲಿ ಕುಳಿತಿದ್ದರು. . ಪುಣ್ಯಕ್ಕೆ ಮೇಡಂ ಬಂದಿರಲಿಲ್ಲ. ದೇವರ ಫೋಟೋಗೆ ತಾವರೆ ಸಿಕ್ಕಿಸಿದೆವು. ಹುಡುಗಿಯರೆಲ್ಲ ಆಸೆಗಣ್ಣಿನಿಂದ, ಎಲ್ಲಿತ್ತು? ಹೇಗೆ ಕಸಿದಿರಿ?’ ಎಂದು ಕೇಳುತ್ತಿದ್ದಾಗ ಇಬ್ಬರಿಗೂ ವಿಪರೀತ ಸಂತಸವಾಗಿತ್ತು. ರಾಮಯ್ಯ ಮೇಷ್ಟ್ರು ಬಂದವರೇ ‘ಕೆರೆಗೆ ಯಾತಕ್ಕೆ ಹೋಗಿದ್ರಿ? ಏನಾದ್ರು ಹೆಚ್ಚುಕಡಿಮೆ ಆಗಿದೆ” ಭಯಂಕರ ಕೋಪದಿಂದ ನಮಗೆ ಬಾಸುಂಡೆ ಬರುವಂತೆ ಏಟು ಕೊಟ್ಟಿದ್ದರು. . ನಮಗೆ ನಾವೇ ಬೆನ್ನು ತಟ್ಟಿಕೊಳ್ಳುತ್ತ ನೋವಿನ ನಡುವಲ್ಲೂ ಖುಷಿಯ ತುತ್ತತುದಿಯಲ್ಲಿ ಅಂದಿನ ಇಡೀ ದಿನವನ್ನು ಕಳೆದಿದ್ದೆವು.
ajayapta491@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!