• ನಾ.ದಿವಾಕರ
ಬ್ಯಾಂಕಿಂಗ್ ಎಂದರೆ ಕೇವಲ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಹಾಗೂ ಅವಶ್ಯ ಇದ್ದವರಿಗೆ ಸಾಲ ನೀಡುವ ಒಂದು ವಾಣಿಜ್ಯ ಸಂಸ್ಥೆ ಎಂಬ ವ್ಯಾಖ್ಯಾನವು ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೂಪಾಂತರಗೊಂಡಿದೆ. ನಾವೀನ್ಯತೆಯೇ ಪ್ರಧಾನ ಚಾಲಕ ಶಕ್ತಿ ಯಾಗಿರುವ ಬ್ಯಾಂಕಿಂಗ್ ಉದ್ದಿಮೆ ಇಂದು ಗ್ರಾಹಕರ ನಿತ್ಯ ಹಣಕಾಸು ಚಟುವಟಿಕೆಗಳನ್ನು ನಿರ್ವಹಿಸುವ, ನಿಭಾಯಿಸುವ ಹಾಗೂ ನಿಯಂತ್ರಿಸುವ ಜವಾಬ್ದಾರಿಯನ್ನು ಹೊತ್ತಿದೆ.
ಸ್ವಾತಂತ್ರ್ಯಾನಂತರದ ಆರಂಭದ ದಿನಗಳಲ್ಲಿ ಕೇವಲ ಉಳ್ಳವರಿಗೆ ನಿಲುಕುವಂತಿದ್ದ ಬ್ಯಾಂಕಿಂಗ್ ಸೇವೆಗಳು ತಳ ಮಟ್ಟದ ಶ್ರೀಸಾಮಾನ್ಯನಿಗೂ ತಲುಪುವಂತಾಗಿದ್ದು 1969ರ ಬ್ಯಾಂಕ್ ರಾಷ್ಟ್ರೀ ಕರಣದ ನಂತರದಲ್ಲಿ. ಬ್ಯಾಂಕಿನಲ್ಲಿ ಒಂದು ಖಾತೆ ತೆರೆಯಲೂ ಪರದಾಡುತ್ತಿದ್ದ ಹಳ್ಳಿಗಾಡಿನ ಬಡಜನತೆಗೆ ಖಾತೆ ತೆರೆಯುವ ಹಕ್ಕು ನೀಡಿದ್ದು ಕೂಡ ರಾಷ್ಟ್ರೀಕರಣದ ಒಂದು ಕೊಡುಗೆ.
ಕೃಷಿ ಪ್ರಧಾನ ಭಾರತದಲ್ಲಿ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಕೈಗೊಂಡ ಹಸಿರು ಕ್ರಾಂತಿಯ ಉಪಕ್ರಮಗಳಿಗೆ ಪೂರಕವಾಗಿ ಸಂಭವಿಸಿದ ಬ್ಯಾಂಕ್ ರಾಷ್ಟ್ರೀಕರಣ, ಹಳ್ಳಿಗಾಡಿನ ರೈತಾಪಿ ಸಮುದಾಯಕ್ಕೆ ಸುಲಭವಾದ ಹಣಕಾಸು ಸೌಲಭ್ಯಗಳನ್ನು ಒದಗಿಸುವ ಒಂದು ಮಾರ್ಗವನ್ನು ರೂಪಿಸಿದ್ದು ಈಗ ಇತಿಹಾಸ. ಹಿಂತಿರುಗಿ ನೋಡಿದಾಗ ಹಸಿರು ಕ್ರಾಂತಿಯ ಆಶಯಗಳು ಸಾಕಾರಗೊಂಡು, ಗ್ರಾಮೀಣ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಮೂಲಕ ಸ್ವತಂತ್ರ ಭಾರತವು ಆಹಾರ ಸ್ವಾವ ಲಂಬನೆಯನ್ನು ಸಾಧಿಸಲು ಸಾಧ್ಯವಾಗಿದ್ದು ವಾಸ್ತವ. ಆದಾಗ್ಯೂ ರಾಷ್ಟ್ರೀ ಕರಣದ ನಂತರದಲ್ಲೂ ಭಾರತದ ವಾಣಿಜ್ಯ ಬ್ಯಾಂಕುಗಳು ಉದ್ಯಮ ಸ್ನೇಹಿ ಯಾಗಿಯೇ ಉಳಿದಿದ್ದು ಕೂಡ ವಾಸ್ತವವೇ. ಸಾಲ ನೀಡುವುದಕ್ಕಾಗಿ ಗುರುತಿಸ ಲಾದ ಆದ್ಯತಾ ವಲಯದಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಲಾಯಿತಾದರೂ, ಸಾರ್ವಜನಿಕ ಬ್ಯಾಂಕುಗಳು ನೀಡಬೇಕಿದ್ದ ಶೇ.40 ಆದ್ಯತಾ ವಲಯದ ಸಾಲಗಳ ಪೈಕಿ ಕೃಷಿ ಕ್ಷೇತ್ರಕ್ಕೆ ನಿಗದಿಪಡಿಸಿದ್ದು ಶೇ.17 ಮಾತ್ರ.
ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಲೇ ಬಂದರೂ ಗ್ರಾಮೀಣ ಬದುಕಿನ ಸುಸ್ಥಿರತೆಗೆ ಅಗತ್ಯವಾದ ತಳಪಾಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಬ್ಯಾಂಕ್ ಸೌಲಭ್ಯದೊಂದಿಗೆ ಕೃಷಿ ಫಸಲು ಪಡೆದ ರೈತರು ಅದರ ಸಂಗ್ರಹ, ಶೇಖರಣೆ ಹಾಗೂ ಮಾರಾಟಕ್ಕೆ ಮಾರುಕಟ್ಟೆಯನ್ನೇ ಅವಲಂಬಿಸಬೇಕಿತ್ತು. ಈ ಮಾರುಕಟ್ಟೆ ಔದ್ಯೋಗಿಕ-ಔದ್ಯಮಿಕ ವಲಯದ ಹಿಡಿತದಲ್ಲಿತ್ತು.
ನವ ಉದಾರವಾದದ ಪ್ರಭಾವ: 1991ರ ನಂತರದ ಜಾಗತೀಕರಣ ಮತ್ತು ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಬ್ಯಾಂಕಿಂಗ್ ಉದ್ದಿ ಮೆಯೂ ತನ್ನ ಮೂಲ ಸ್ವರೂಪವನ್ನು ಕಳಚಿಕೊಂಡು, ತಂತ್ರಜ್ಞಾನ ಆಧಾರಿತ ಉದ್ಯಮವಾಗಿ ರೂಪುಗೊಳ್ಳುತ್ತಿದೆ. 1969ರ ರಾಷ್ಟ್ರೀಕರಣದ ಸಂದರ್ಭದ ಇದ್ದಂತೆಯೇ ಈಗಲೂ ಸಾರ್ವಜನಿಕ-ಖಾಸಗಿ ಬ್ಯಾಂಕುಗಳು ಔದ್ಯಮಿಕ ವಲಯಕ್ಕೆ ಮೂಲ ಹಾಗೂ ಚಾಲಕ ಬಂಡವಾಳವನ್ನು ಒದಗಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತವೆ. ಬೃಹತ್ ಉದ್ಯಮಗಳಿಗೆ, ಆಧುನಿಕ ತಂತ್ರಜ್ಞಾನದ ಸಾಫ್ಟ್‌ವೇರ್ ಉದ್ಯಮಗಳಿಗೆ ಹಾಗೂ ಮೂಲಸೌಕರ್ಯಗಳನ್ನು ನಿರ್ಮಿಸುವ ಕಂಪೆನಿಗಳಿಗೆ ಕೋಟ್ಯಂತರ ರೂ.ಗಳ ಸಾಲ ಒದಗಿಸುವಮೂಲಕ ಬ್ಯಾಂಕುಗಳು ತಮ್ಮ ವಹಿವಾಟು ಹಾಗೂ ಲಾಂಭಾಂಶವನ್ನು ಹೆಚ್ಚಿಸಿಕೊಳ್ಳುತ್ತಿವೆ. ಗೃಹ ನಿರ್ಮಾಣ, ವಾಹನ ಖರೀದಿ ಮುಂತಾದ ವೈಯಕ್ತಿಕ ಸಾಲ ಸೌಲಭ್ಯಗಳ ಮೂಲಕ ದೇಶದ ಮೂಲೆಮೂಲೆಗಳನ್ನೂ ತಲುಪಿರುವ ಬ್ಯಾಂಕಿಂಗ್ ಉದ್ದಿಮೆ ಪ್ರವರ್ಧಮಾನಕ್ಕೆ ಬರುತ್ತಿರುವ ನಗರೀಕರಣಗೊಂಡ ಮಧ್ಯಮ ವರ್ಗಗಳು ಬದುಕು ಕಟ್ಟಿಕೊಳ್ಳಲೂ ನೆರವಾಗುತ್ತಿರುವುದು ವಾಸ್ತವ.
ಬ್ಯಾಂಕುಗಳ ಲಾಭಾಂಶ ಹೆಚ್ಚಳ ಹಾಗೂ ಮಾರುಕಟ್ಟೆ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಾಲ ಮರುಪಾವತಿಯೂ ಮುಖ್ಯವಾಗುತ್ತದೆ. ಸಾಮಾನ್ಯ ವಾಗಿ ಸಾಲದ ಮೇಲಿನ ಬಡ್ಡಿಗೂ ಗ್ರಾಹಕರ ಠೇವಣಿಗೆ ನೀಡುವ ಬಡ್ಡಿಗೂ ಸರಾಸರಿ ಶೇ.2.5 ವ್ಯತ್ಯಾಸ ಇರುತ್ತದೆ. ಕೃಷಿ ಮತ್ತು ಸಣ್ಣ ಉದ್ದಿಮೆಯ ಸಾಲಗಳಿಗೆ ಅಗ್ಗದ ಬಡ್ಡಿ ದರ ವಿಧಿಸಲಾಗುತ್ತದೆ, ವಾಹನ ಖರೀದಿ, ಗೃಹ ನಿರ್ಮಾಣ ಹಾಗೂ ವೈಯಕ್ತಿಕ ಸಾಲಗಳ ಬಡ್ಡಿದರ ಹೆಚ್ಚಾಗಿರುತ್ತದೆ. ಈ ಬಡ್ಡಿ ದರದಲ್ಲಿನ ಅಂತರವೇ ಬ್ಯಾಂಕುಗಳ ಲಾಭಾಂಶವನ್ನು ನಿರ್ಧರಿಸುವ ಪ್ರಮುಖ ಮಾನದಂಡವಾಗಿರುತ್ತದೆ. ಹಾಗಾಗಿ ಬ್ಯಾಂಕುಗಳು ಸಾಲ ತೀರುವಳಿಗಾಗಿ ಕಠಿಣ ಕ್ರಮಗಳನ್ನು ಜರುಗಿಸುವುದು ಅನಿವಾರ್ಯ. ತಮ್ಮ ನಿತ್ಯ ಜೀವನಾವಶ್ಯ ವೆಚ್ಚಗಳಿಗೆ ಹೆಚ್ಚಿನ ಜನರು ಚಿನ್ನದ ಒಡವೆಗಳನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯುವುದು ಕಳೆದ ಎರಡು ಮೂರು ದಶಕಗಳಲ್ಲಿ ಕಂಡುಬರುತ್ತಿರುವ ಮಹತ್ತರ ಬದಲಾವಣೆ. ಈ ಸಾಲದ ಮರುಪಾವತಿ ವಿಳಂಬವಾದ ಕೂಡಲೇ ಬ್ಯಾಂಕುಗಳು ಒಡವೆಗಳನ್ನು ಹರಾಜು ಹಾಕಲು ಮುಂದಾಗುತ್ತವೆ.
ವಸೂಲಾಗದ ಸಾಲಗಳು: ಸಾಲಗಳನ್ನು ನಿಗದಿತ ಸಮಯದಲ್ಲಿ ಹಿಂಪಡೆ ಯುವಸಲುವಾಗಿ ಬ್ಯಾಂಕುಗಳು ಸಾಲದಿಂದಖರೀದಿಸಿದ ವಸ್ತು- ಉಪಕರಣ -ವಾಹನ ಇತ್ಯಾದಿಗಳನ್ನು ವಶಪಡಿಸಿಕೊಳ್ಳುವುದೂ ಒಂದು ವಿಧಾನ. ಗೃಹ ಸಾಲಗಳ ಮರುಪಾವತಿಗೆ ಮನೆಗಳನ್ನು ಹರಾಜು ಹಾಕುವ ಹಕ್ಕನ್ನು ಸಹ SARFESHI ಕಾಯ್ದೆ ಬ್ಯಾಂಕುಗಳಿಗೆ ನೀಡುತ್ತದೆ. ಕೂಡ ಒಡವೆಯ ಮೇಲೆ ಸಾಲ ಪಡೆದಿರುವ ಗ್ರಾಹಕರ ಮತ್ತಾವುದೋ ಸಾಲ ಸುಸ್ತಿಯಾಗಿದ್ದರೆ, ಒಡವೆ ಸಾಲ ತೀರಿದ್ದರೂ ಅಡಮಾನ ಇಟ್ಟ ಚಿನ್ನವನ್ನು ಉಳಿಸಿಕೊಳ್ಳುವ ನಿಯಮವೂ ಬ್ಯಾಂಕುಗಳಲ್ಲಿ ಜಾರಿಯಲ್ಲಿದೆ.
ಮತ್ತೊಂದು ಬದಿಯಲ್ಲಿ ಔದ್ಯಮಿಕ ಸಾಲಗಳು ಅತಿ ಹೆಚ್ಚು ಸುಸ್ತಿಯಾಗಿರು ವುದನ್ನೂ ಬ್ಯಾಂಕಿಂಗ್ ಇತಿಹಾಸದಲ್ಲಿ ಕಾಣಬಹುದು. ಆದರೆ ಕೆಳಸ್ತರದ ಜನರ ಮೇಲೆ ವಿಧಿಸುವಂತಹ ಷರತ್ತುಗಳಾಗಲೀ, ಅವರ ವಸ್ತು-ಉಪಕರಣಗಳ ಮೇಲೆ ವಿಧಿಸುವ ನಿರ್ಬಂಧಗಳಾಗಲೀ ಅಥವಾ ಮರು ಪಾವತಿ ಮಾಡಲು ಅವರ ಮೇಲೆ ಹೇರಲಾಗುವ ಒತ್ತಡವಾಗಲೀ, ಮೇಲು ಸ್ತರದ ಔದ್ಯಮಿಕ ವಲ ಯದ ಸುಸ್ತಿದಾರರ ಮೇಲೆ ಹೇರಲಾಗುವುದಿಲ್ಲ. ಇದು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಒಂದು ಚೋದ್ಯ. ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಸಾಲ ನೀಡುವುದರಿಂದ, ಸಾಲ ಪಡೆಯುವ ವ್ಯಕ್ತಿ ಅಥವಾ ಉದ್ಯಮದ ಹಣಕಾಸಿನ ಪರಿಸ್ಥಿತಿಯೂ ಮುಖ್ಯ ಮಾನದಂಡವಾಗಿ ಪರಿಣಮಿಸುತ್ತದೆ.
ಮರುಪಾವತಿಯಾಗದ ಸಾಲಗಳನ್ನು ರೈಟ್ ಆಫ್ ಅಥವಾ ವಜಾ ಮಾಡುವುದು ಬ್ಯಾಂಕಿಂಗ್ ಉದ್ಯಮದ ಒಂದು ಸಹಜ ಪ್ರಕ್ರಿಯೆ. ಸಾಲದ ಮರುಪಾವತಿ ಸಾಧ್ಯವೇ ಆಗದ ಸಂದರ್ಭದಲ್ಲಿ ಸಣ್ಣ ಸಾಲಗಳನ್ನೂ ರೈಟ್ ಆಫ್ ಮಾಡಲಾಗುತ್ತದೆ. ಎನ್ ಪಿಎಗಳನ್ನು ರೈಟ್ ಆಫ್ ಮಾಡುವ ಮೂಲಕ ಬ್ಯಾಂಕುಗಳು ತಮ್ಮ ಬ್ಯಾಲನ್ಸ್ ಶೀಟ್‌ಗಳಿಂದ ಆ ಮೊತ್ತಗಳನ್ನು ಹೊರತುಪಡಿಸಿ ಹೆಚ್ಚಿನ ಲಾಭವನ್ನು ತೋರಿಸಲು ಸಾಧ್ಯವಾಗುತ್ತದೆ. ಮೂಲತಃ ರೈಟ್ ಆಫ್ ಪ್ರಕ್ರಿಯೆ ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರಗಳನ್ನು ಸ್ವಚ್ಛಗೊಳಿಸುವ ಒಂದು ಪ್ರವೃತ್ತಿಯೂ ಆಗಿದೆ. ಆದರೆ ರೈಟ್ ಆಫ್ ಮಾಡಿದ ನಂತರವೂ ಸಾಲವನ್ನು ಹಿಂಪಡೆಯುವ ಅಧಿಕಾರ ಬ್ಯಾಂಕುಗಳಿಗೆ ಇರುತ್ತದೆ.
ಸಾರ್ವಜನಿಕ ಬ್ಯಾಂಕುಗಳ ಸ್ಥಿತಿ: ನವ ಉದಾರವಾದದ ಆರ್ಥಿಕ ನೀತಿಗಳಿ ಗನುಸಾರವಾಗಿ ಸಾರ್ವಜನಿಕ ಬ್ಯಾಂಕುಗಳ ಸಂಖ್ಯೆಯನ್ನು 28 ರಿಂದ 12ಕ್ಕೆ ಇಳಿಸಿದ ನಂತರದಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಪಡೆದುಕೊಂಡಿದೆ, ಎಲ್ಲ ಬ್ಯಾಂಕುಗಳೂ ಲಾಭ ಗಳಿಕೆಯಲ್ಲಿ ಮುನ್ನಡೆಯುತ್ತಿವೆ ಎಂಬ ಸರ್ಕಾರದ ಹೆಗ್ಗಳಿಕೆಯ ನಡುವೆಯೇ ರೈಟ್ ಆಫ್ ಮಾಡಲಾದ ಎನ್‌ಪಿಎಗಳನ್ನು ಕುರಿತೂ ಆರ್ಥಿಕ ತಜ್ಞರು ಚರ್ಚೆ ನಡೆಸುತ್ತಿ ದ್ದಾರೆ. ಕೋಟ್ಯಂತರ ರೂ. ಮೌಲ್ಯದ ಔದ್ಯಮಿಕ ಸಾಲಗಳನ್ನು ರೈಟ್ ಆಫ್ ಮಾಡುವ ಮೂಲಕ ಬ್ಯಾಂಕುಗಳು ತಮ್ಮ ಬ್ಯಾಲನ್ಸ್ ಶೀಟ್‌ಗಳಲ್ಲಿ ಹೆಚ್ಚಿನ ಲಾಭಾಂಶವನ್ನು ಪ್ರಕಟಿಸುತ್ತಿವೆ ಎಂಬ ಆರೋಪಗಳ ನಡುವೆಯೇ, 2014-15ರ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳು 10.42 ಲಕ್ಷ ಕೋಟಿ ರೂ., ಖಾಸಗಿ ಬ್ಯಾಂಕುಗಳು4.14 ಲಕ್ಷಕೋಟಿರೂ.ಗಳಮರುಪಾವತಿಯಾಗದ ಸಾಲಗಳನ್ನು ರೈಟ್ ಆಫ್ ಮಾಡಿರುವುದಾಗಿ ಆರ್ ಬಿಐ ವರದಿ ಮಾಡಿದೆ.
ಆದರೆ ಸಾರ್ವಜನಿಕ ಬ್ಯಾಂಕುಗಳು ರೈಟ್ ಆಫ್ ಮಾಡಿರುವ 10.42 ಲಕ್ಷ ಕೋಟಿ ರೂ. ಎನ್‌ಪಿಎಗಳ ಪೈಕಿ ಇದೇ ಅವಧಿಯಲ್ಲಿ ಬ್ಯಾಂಕುಗಳು 1.61 ಲಕ್ಷ ಕೋಟಿ ರೂ.ಗಳನ್ನು ಮಾತ್ರ ಮರಳಿ ಗಳಿಸಲು ಸಾಧ್ಯವಾಗಿದೆ.
ಅಂದರೆ ರೈಟ್ ಆಫ್ ಆದ ಶೇ.15 ಸಾಲಗಳು ಮಾತ್ರ ಬ್ಯಾಂಕುಗಳಿಗೆ ವಾಪಸಾತಿ ಆಗಿವೆ.
ಈ ಬೃಹತ್ ಮೊತ್ತ ಸಾಲಮನ್ನಾ ಅಲ್ಲ ಎಂದು ಸರ್ಕಾರ ಖಚಿತಪಡಿಸಿದ್ದರೂ, ಅದನ್ನು ಮರಳಿ ಪಡೆಯಲು ಇರುವ ವಿವಿಧ ಕಾನೂನಾತ್ಮಕ ವಿಧಾನಗಳ ಸಮರ್ಪಕ ಬಳಕೆ ಆಗುತ್ತಿಲ್ಲ ಎನ್ನುವುದು ವಾಸ್ತವ. 2014-15ರಲ್ಲಿ ರೈಟ್ ಆಫ್ ಆದ ಎನ್‌ಪಿಎ ಮೊತ್ತ 65 ಸಾವಿರ ಕೋಟಿ ರೂ. ಇದ್ದುದು, 2022-23ರ ವೇಳೆಗೆ 2.09 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಹೀಗೆ ಸಾಲ ಮರುಪಾವತಿಸದೆ ರಿಯಾಯಿತಿ ಪಡೆದ ಉದ್ಯಮಿಗಳ ಹೆಸರುಗಳನ್ನು ಬಹಿರಂಗಪಡಿಸಲುಆರ್‌ಬಿಐಕಾಯ್ದೆಯೇಅಡ್ಡಿಯಾಗಿರುವುದ ರಿಂದ, ಈ ಸುಸ್ತಿದಾರರು ಯಾರು ಎಂದು ಸಾರ್ವಜನಿಕರಿಗೆ ತಿಳಿಯುವುದೇ ಇಲ್ಲ. ನೀರವ್ ಮೋದಿ (12,636 ಕೋಟಿ ರೂ.), ವಿಜಯ್ ಮಲ್ಯ (9,000 ಕೋಟಿ ರೂ.), ಜತಿನ್ ಮೆಹ್ರಾ(7,000 ಕೋಟಿ ರೂ.), ನಿತಿನ್ ಜಯಂತಿಲಾಲ್ ಸಂದೇಸರ (5,000 ಕೋಟಿ ರೂ.) ಇನ್ನೂ ಮುಂತಾದ 31 ಉದ್ಯಮಿಗಳ ಹೆಸರುಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ.
(ಅಂಕಿಅಂಶ ದತ್ತಾಂಶಗಳಿಗೆ ಆಧಾರ: ಆರ್‌ಬಿಐ ವಾರ್ಷಿಕ ವರದಿಗಳನ್ನಾಧರಿಸಿದ ಪ್ರಜಾವಾಣಿ ವರದಿ 22-12-2023 ಮತ್ತು ಹಿಂದೂ ಬ್ಯುಸಿನೆಸ್ ಲೈನ್)





