Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ದೆಹಲಿ ಕಣ್ಣೋಟ: ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೆ ಹಲವು ತೊಡಕು

ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಚಿವ ಸಂಪುಟ ತೀರ್ಮಾನ ಕೈಗೊಂಡಿರುವುದು ಈಗ ದೇಶದಾದ್ಯಂತ ವಿಶೇಷವಾಗಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಏನೇ ತೀರ್ಮಾನ ತೆಗೆದುಕೊಂಡರೂ ಅದು ದೇಶದ ಹಿತಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಮತ್ತು ದೇಶದ ಭದ್ರತೆಗಾಗಿ ಎಂದು ಮಾತನಾಡುವ ಜನರು ಈಗ ಗಲ್ಲಿ ಗಲ್ಲಿಗಳಲ್ಲೂ ಸಿಗುತ್ತಾರೆ. ಇಷ್ಟು ಸಾಲದು ಎನ್ನುವಂತೆ ಬಹುತೇಕ ಎಲ್ಲ ಭಾಷೆಗಳ ಕೂಗುಮಾರಿ ಟಿವಿ ಮಾಧ್ಯಮಗಳೂ ಪೈಪೋಟಿಗೆ ಬಿದ್ದಂತೆ ದಿನ ಬೆಳಗಾದರೆ ಅದನ್ನೇ ಹೇಳುತ್ತಿವೆ. ಖಾಸಗಿ ಟಿವಿಗಳ ಈ ವರ್ತನೆ ಕೇಂದ್ರ ಸರ್ಕಾರದ ಸ್ವಾಮ್ಯದ ದೂರದರ್ಶನ ಚಾನೆಲ್‌ಗಳನ್ನೂ ಹಿಂದಕ್ಕೆ ಹಾಕುವ ಮಾತಿರಲಿ ಅವುಗಳನ್ನೂ ನಾಚಿಸುವಷ್ಟು ಮೋದಿ ಅವರ ಹೊಗಳಿಕೆಗೆ ನಿಂತಿವೆ.

ಪ್ರಧಾನಿ ಮೋದಿ ಅವರ ಒಳ್ಳೆಯ ಕೆಲಸಗಳನ್ನು ಶ್ಲಾಸುವುದರಲ್ಲಿ ತಪ್ಪೇನಿಲ್ಲ. ಆದರೆ ಅದಕ್ಕೂ ಒಂದು ಇತಿ ಮಿತಿ ಇರುತ್ತದೆ. ವಾಸ್ತವವಾಗಿ ಆ ಹೊಗಳಿಕೆಗೆ ಒಂದು ಗೌರವ ಇರಬೇಕು. ಈ ಹಿಂದೆ ಯಾವ ಪ್ರಧಾನಿ ಮತ್ತು ಯಾವ ಸರ್ಕಾರವೂ ಮಾಡದ ಕೆಲಸವನ್ನು ಮೋದಿ ಮಾತ್ರ ಮಾಡುತ್ತಾರೆ, ಅವರಷ್ಟು ಸಮರ್ಥರು ಮತ್ತೊಬ್ಬರಿಲ್ಲ ಎನ್ನುವುದಕ್ಕೆ ಹಲವರ ಆಕ್ಷೇಪವಿದೆ. ಈ ಹೊಗಳಿಕೆಯ ಮಟ್ಟ ಎಷ್ಟಿದೆ ಎಂದರೆ ಕೆಲವು ತಿಂಗಳ ಹಿಂದೆ ನಟಿ ಮತ್ತು ಸಿಮ್ಲಾದ ಬಿಜೆಪಿ ಸಂಸದೆ ಕಂಗನಾ ರಣವತ್ ‘ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದೇ ೨೦೧೪ರಲ್ಲಿ’ ಎಂದು ಹೇಳಿ ಇಡೀ ದೇಶದ ನಗೆಪಾಟಲಿಗೆ ಈಡಾಗಿದ್ದರು. ಒಂದು ದೇಶ ಒಂದು ಚುನಾವಣೆ ಎಂಬುದು ನಮ್ಮ ದೇಶಕ್ಕೆ ಹೊಸದೇನೂ ಅಲ್ಲ. ನಮ್ಮ ಪ್ರಜಾತಂತ್ರ ವ್ಯವಸ್ಥೆ ಶುರುವಾದ ಬಳಿಕ ದೇಶದ ಮೊದಲ ಚುನಾವಣೆ ನಡೆದದ್ದು ೧೯೫೨ರಲ್ಲಿ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿಯೇ ಸಾರ್ವತ್ರಿಕ ಚುನಾವಣೆ ೧೯೬೭ರವರೆಗೆ ಸರಾಗವಾಗಿ ನಡೆದು ಬಂತು. ಆಗ ದೇಶದಲ್ಲಿ ಪ್ರಬಲವಾಗಿ ಇದ್ದುದೇ ಕಾಂಗ್ರೆಸ್ ಪಕ್ಷ. ನಂತರ ಸಮಾಜವಾದಿ ಪಕ್ಷ, ಪ್ರಜಾಸೋಷಿಯಲಿಸ್ಟ್ ಪಕ್ಷ, ಜನಸಂಘ ಮತ್ತು ಕಮ್ಯೂನಿಸ್ಟ್ ಪಕ್ಷಗಳು. ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಹೋರಾಟ ನಡೆದುದರಿಂದ ಸಹಜವಾಗಿ ಆ ಪಕ್ಷವೇ ಅತಿ ದೊಡ್ಡ ಪಕ್ಷವಾಗಿ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡಣ್ಣನ ಪಾತ್ರ ನಿರ್ವಹಿಸುತ್ತಾ ಬಂದಿತು. ೧೯೬೮-೬೯ರಲ್ಲಿ ಕರ್ನಾಟಕದ ಎಸ್. ನಿಜಲಿಂಗಪ್ಪ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.

ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದರು. ೧೯೬೯ರಲ್ಲಿ ಬೆಂಗಳೂರಿನಲ್ಲಿ ಎಐಸಿಸಿ ಅಽವೇಶನ ನಡೆಯಿತು. ಈ ಇಬ್ಬರೂ ನಾಯಕರ ನಡುವಣ ಭಿನ್ನಾಭಿಪ್ರಾಯದಿಂದ ಪಕ್ಷ ಒಡೆದು ಹೋಳಾಯಿತು. ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ (ಓ) ಸಂಸ್ಥಾ ಕಾಂಗ್ರೆಸ್ ಎಂತಲೂ ಇಂದಿರಾ ಗಾಂಧಿ ನೇತೃತ್ವದ ಪಕ್ಷ ಕಾಂಗ್ರೆಸ್ (ಆರ್) ಎಂತಲೂ (ಅಂದರೆ ಅಂದು ಅಽಕಾರದಲ್ಲಿದ್ದುದರಿಂದ ಆರ್ ಎಂದರೆ ರೂಲಿಂಗ್) ಹೆಸರಾಯಿತು. ಈ ಬಣಕ್ಕೆ ಇಂದಿರಾ ಗಾಂಽ ಅವರು ತಮ್ಮ ಆಪ್ತ ನಿಷ್ಠರಾಗಿದ್ದ ಜಗಜೀವನ ರಾಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಪಕ್ಷದ ಒಡಕು ರಾಷ್ಟ್ರಮಟ್ಟದಲ್ಲಿಯಲ್ಲದೆ ರಾಜ್ಯ ಮಟ್ಟದಲ್ಲೂ ಆಯಿತು. ಸಂಸ್ಥಾ ಕಾಂಗ್ರೆಸ್ ನಾಯಕರು ತಮಗೆ ಸುಗಮವಾಗಿ ಆಡಳಿತ ಮಾಡಲು ಬಿಡುತ್ತಿಲ್ಲ, ಅವರು ಬಡವರ ವಿರೋಽ, ಬಡವರಿಗಾಗಿ ಏನೇ ಕಾರ್ಯಕ್ರಮ ತಂದರೂ ಅದನ್ನು ವಿರೋಽಸುತ್ತಿದ್ದಾರೆ ಎಂದು ಇಂದಿರಾ ಗಾಂಧಿ ಅವರು ಆರೋಪಗಳ ಸುರಿಮಳೆಗರೆದರು. “ಗರೀಬಿ ಹಠಾವೋ” ಘೋಷಣೆ ಜೊತೆಗೆ ೧೪ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಸಮಾಜವಾದಿ ಸಿದ್ಧಾಂತದ ಕಡೆ ವಾಲಿದರು.

ಇಷ್ಟು ಮಾಡಿ ಅವರು ೧೯೭೦ರಲ್ಲಿ ಲೋಕಸಭೆಯನ್ನು ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಗೆ ಹೋದರು. ೧೯೭೧ರಲ್ಲಿ ಲೋಕಸಭೆ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆದವು. ಈ ಚುನಾವಣೆಯಲ್ಲಿ ಇಂದಿರಾ ಗಾಂಽ ಅವರಿಗೆ ಅಭೂತಪೂರ್ವ ಗೆಲುವು ಬಂದಿತು. ಆ ಗೆಲುವು ಹೇಗಿತ್ತೆಂದರೆ ಲೋಕಸಭೆಯ ಒಟ್ಟು ೫೨೧ ಸ್ಥಾನಗಳ ಪೈಕಿ ಇಂದಿರಾ ಕಾಂಗ್ರೆಸ್ಸಿಗೆ ೩೫೨ ಸ್ಥಾನಗಳು ಬಂದವು. ಇಂದಿರಾ ಗಾಂಽ ಚುನಾವಣಾ ಗಾಳಿಯಲ್ಲಿ ಸಂಸ್ಥಾ ಕಾಂಗ್ರೆಸ್ಸಿನ ಹಲವು ಮುಖಂಡರು ಸೋತು ಸುಣ್ಣವಾದರು. ಸಂಸ್ಥಾ ಕಾಂಗ್ರೆಸ್ಸಿನಿಂದ ಕೇವಲ ೧೬ ಮಂದಿ ಮಾತ್ರ ಗೆದ್ದರು. ಭಾರತೀಯ ಜನಸಂಘದಿಂದ ೨೨ ಮಂದಿ ಗೆದ್ದರೆ ಪಿ. ಸುಂದರಯ್ಯ ನೇತೃತ್ವದ ಸಿಪಿಎಂ ಪಕ್ಷವು ೨೫ ಸ್ಥಾನಗಳನ್ನು ಗಳಿಸಿತ್ತು. ಇದು ಅಂದಿನ ರಾಜಕೀಯ ವ್ಯವಸ್ಥೆಯ ಒಂದು ನೋಟವಷ್ಟೆ. ೧೯೫೧ರಿಂದ ನಿಯಮಿತವಾಗಿ ಏಕಕಾಲಕ್ಕೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಕಾಂಗ್ರೆಸ್ ಒಡಕಿನ ನಂತರದ ರಾಜಕೀಯ

ಕಾರಣಗಳಿಗಾಗಿ ೧೯೭೧ರಲ್ಲಿ ನಡೆದ ಚುನಾವಣೆಯಲ್ಲಿ ಹಳಿತಪ್ಪಿತು. ನಂತರದ ದಿನಗಳಲ್ಲಿ ಹಲವು ರಾಜ್ಯ ವಿಧಾನಸಭೆಗಳು ಅವಽಗೂ ಮುನ್ನ ವಿಸರ್ಜನೆಗೊಂಡು ಚುನಾವಣೆಗಳು ನಡೆದವು. ಅಲ್ಲಿಂದೀಚೆಗೆ ಏಕಕಾಲಕ್ಕೆ ನಡೆಯುತ್ತಿದ್ದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಹಾದಿ ತಪ್ಪಿದ್ದು ಅದು ಮತ್ತೆ ಸರಿ ಹೋಗಲಿಲ್ಲ. ಇದು ಚುನಾವಣಾ ರಾಜಕೀಯ ಇತಿಹಾಸ. ೧೯೮೦ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಽ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳಾದ ಮೇಲೆ ಲೋಕಸಭೆಯಲ್ಲಿ ಬಹುಮತ ಪಡೆಯುವ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ರಾಜೀವ್ ಗಾಂಽ ನಂತರ ಲೋಕಸಭೆ ಚುನಾವಣೆಗಳಲ್ಲಿ ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತ ಪಡೆಯಲಾಗದೆ ೧೯೮೯ರಿಂದ ೧೯೯೯ರವರೆಗೆ ಪದೇ ಪದೇ ಚುನಾವಣೆಗಳು ಎದುರಾದವು.

ಅಟಲ್ ಬಿಹಾರಿ ವಾಜಪೇಯಿ ಅವರು ೧೯೯೬ ಮತ್ತು ೧೯೯೮ರಲ್ಲಿ ಪ್ರಧಾನಿ ಆಗಿದ್ದಾಗ ಅವರದ್ದು ಅಲ್ಪಬಹುಮತದ ಸಮ್ಮಿಶ್ರ ಸರ್ಕಾರವಾಗಿತ್ತು. ಮೈತ್ರಿಕೂಟದಲ್ಲಿ ಉಂಟಾದ ಭಿನ್ನಮತದಿಂದ ಅವರ ಸರ್ಕಾರವೂ ಉರುಳಿತು. ಆ ದಿನಗಳಲ್ಲಿ ಬಿಜೆಪಿಯ ಅಗ್ರಗಣ್ಯ ನಾಯಕರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಈ ಅಸ್ಥಿರ ಆಡಳಿತ ವ್ಯವಸ್ಥೆಯ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಮತ್ತೆ ಏಕಕಾಲದಲ್ಲಿ ಚುನಾವಣೆ ನಡೆಸುವ “ಒಂದು ರಾಷ್ಟ್ರ ಒಂದು ಚುನಾವಣೆ” ಪದ್ಧತಿ ಬರಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು. ಆ ನಂತರದ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಘೋಷ ವಾಕ್ಯವನ್ನು ಅಳವಡಿಸಿಕೊಳ್ಳುತ್ತಾ ಬಂದಿತು. ಆರ್‌ಎಸ್‌ಎಸ್ ಬೆಂಬಲದಿಂದ ಹಿಂದೂ ರಾಷ್ಟ್ರ ನಿರ್ಮಾಣದ ಕನಸು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಚುನಾವಣೆಯಲ್ಲಿ ಘೋಷಿಸಿದ ಆಶ್ವಾಸನೆಯನ್ನು ಜಾರಿಗೆ ತರುವುದರಲ್ಲಿ ಹಿಂದು ಮುಂದು ನೋಡುವುದಿಲ್ಲ. ಇದು ಅವರ ಜಾಯಮಾನ. ಹೀಗಾಗಿ ಮೋದಿ ಅವರು ಯಾವುದೇ ತೀರ್ಮಾನ ಕೈಗೊಂಡರೂ ಪ್ರತಿಪಕ್ಷಗಳ ಟೀಕೆಗೆ ಕಿವಿಗೊಡುವುದಿಲ್ಲ.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ನೇಮಕಗೊಂಡಿದ್ದ ಉನ್ನತ ಮಟ್ಟದ ಸಮಿತಿಯು ಮಾರ್ಚ್ ತಿಂಗಳಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ೧೮ ಸಾವಿರಕ್ಕೂ ಹೆಚ್ಚು ಪುಟಗಳ ವರದಿಯನ್ನು ಸಲ್ಲಿಸಿತ್ತು. ಆ ವರದಿಯನ್ನೀಗ ಕೇಂದ್ರ ಸಚಿವ ಸಂಪುಟ ಈ ತಿಂಗಳ ೧೮ರಂದು ಅಂಗೀಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಚುನಾವಣಾ ಸುಧಾರಣೆಯ ವರದಿಗೆ ಒಂದು ಗೌರವ ಸ್ಥಾನ ತಂದುಕೊಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಯಶಸ್ವಿಯಾಗಿ ಬಳಸಿಕೊಂಡಿರುವುದು ಅವರ ರಾಜಕೀಯ ಜಾಣ್ಮೆ. ಈ ಉನ್ನತ ಮಟ್ಟದ ಸಮಿತಿಯು ಮುಖ್ಯವಾಗಿ ಹನ್ನೊಂದು ಶಿಫಾರಸುಗಳನ್ನು ಮಾಡಿದೆ. ಅದರ ಪ್ರಕಾರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆ ಏಕಕಾಲಕ್ಕೆ ನಡೆಯಬೇಕು.

ಎರಡನೆಯದಾಗಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪುರಸಭೆ, ನಗರ ಸಭೆ, ಪಾಲಿಕೆಗಳು ಮತ್ತು ಮಹಾನಗರ ಪಾಲಿಕೆಗಳ ಚುನಾವಣೆಗಳೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ನಡೆದ ೧೦೦ ದಿನಗಳ ನಂತರ ನಡೆಯಬೇಕು. ಲೋಕಸಭೆ ಚುನಾವಣೆ ಹೊತ್ತಿಗೆ ಯಾವುದಾದರೂ ವಿಧಾನಸಭೆ ಅವಽ ಇದ್ದರೂ ಅದನ್ನು ಮೊಟಕುಗೊಳಿಸಿ ಏಕಕಾಲಕ್ಕೆ ಚುನಾವಣೆ ನಡೆಸುವುದು. ಇದು ಮೊದಲ ಸಲ ಏಕಕಾಲಕ್ಕೆ ನಡೆಯುವ ಚುನಾವಣೆಗೆ ಅನ್ವಯವಾಗುತ್ತದೆ. ಆದರೆ ಮಧ್ಯದಲ್ಲಿ ಚುನಾಯಿತ ಸರ್ಕಾರ ಪತನವಾದರೆ ಅಂತಹ ವಿಧಾನಸಭೆಗಳ ಚುನಾವಣೆಯನ್ನು ಅವಽ ಬರುವ ತನಕ ಕೇಂದ್ರದ ಆಡಳಿತಕ್ಕೆ ಒಪ್ಪಿಸುವುದು ಇಲ್ಲವೇ ಸರ್ವ ಪಕ್ಷಗಳ ಸದಸ್ಯರ ಆಡಳಿತ ವ್ಯವಸ್ಥೆಯನ್ನು ಚುನಾವಣೆವರೆಗೆ ಮುಂದುವರಿಸುವುದು. ಹೀಗೆ ಕೆಲವು ಗೊಂದಲಕಾರಿ ಶಿಫಾರಸುಗಳಿರುವುದಾಗಿ ವರದಿಯಾಗಿದೆ.

ಈ ವರದಿಯನ್ನು ಜಾರಿಗೆ ತರಲು ಸಂವಿಧಾನಕ್ಕೆ ೧೫ ತಿದ್ದುಪಡಿಗಳಾಗಬೇಕಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲು ಸಂಸತ್ ಮಟ್ಟದಲ್ಲಿ ತಿದ್ದುಪಡಿ ಆದರೆ ಸಾಕು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕಾದರೆ ಅದಕ್ಕೆ ಸಂಬಂಽಸಿದ ತಿದ್ದುಪಡಿಗಳಿಗೆ ರಾಜ್ಯ ವಿಧಾನ ಮಂಡಲಗಳ ಒಪ್ಪಿಗೆಯೂ ಅವಶ್ಯ. ಹೀಗಾಗಿ ಏಕಕಾಲಕ್ಕೆ ನಡೆಸುವ ಚುನಾವಣಾ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದು ಸುಲಭವಲ್ಲ ಎನ್ನುವ ವಾದ ಸುಮಾರು ಹದಿನೈದು ಪ್ರತಿಪಕ್ಷಗ ಳದ್ದು. ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಲಿದೆ ಎನ್ನುವುದು ಪ್ರತಿಪಕ್ಷಗಳ ಆತಂಕ. ಈ ವರದಿಯ ಬಗೆಗೆ ದೇಶದಲ್ಲಿ ವ್ಯಾಪಕವಾಗಿ ಚರ್ಚೆ ಆಗಲಿ ಎನ್ನುವುದು ಮೋದಿ ಅವರ ಆಶಯ. ಈ ವರದಿಯನ್ನು ಬರಲಿರುವ ಸಂಸತ್ತಿನ ಚಳಿಗಾಲದ ಅಽವೇಶನದಲ್ಲಿ ಮಂಡಿಸುವ ಹಾಗೂ ಆ ನಂತರ ಈ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡುವ ಉದ್ದೇಶ ಸರ್ಕಾರದ್ದು. ಸರ್ಕಾರದ ಪ್ರಕಾರ ಈ ವರದಿಯು ಜಾರಿಗೆ ಬರುವುದು ೨೦೨೯ರಲ್ಲಿ ನಡೆಯುವ ಚುನಾವಣೆಯಿಂದ. ಈಗಾಗಲೇ ಸರ್ಕಾರಕ್ಕೆ ತಲೆ ನೋವಾಗಿರುವ ಜನಗಣತಿ ಕಾರ್ಯ, ನಂತರ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಕ್ಷೇತ್ರಗಳನ್ನು ಗುರುತಿಸುವುದು ಹೀಗೆ ಎಲ್ಲ ಬದಲಾವಣೆ ಮತ್ತು ಸುಧಾರಣೆ ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ಆಗಲಿದೆಯೇ ಎನ್ನುವುದು ಪ್ರಶ್ನೆ.

 

 

Tags: