Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹಾಡುಗಾರ ಪತ್ರಕರ್ತ ಕೋಟೆ ಬಸವರಾಜು

  • ಮಂಜು ಕೋಟೆ

ಪ್ರೊ.ನಂಜುಂಡಪ್ಪನವರ ವರದಿಯಂತೆ ಎಚ್.ಡಿ.ಕೋಟೆ ತೀರಾ ಹಿಂದುಳಿದ ತಾಲ್ಲೂಕು ಅನಿಸಿಕೊಂಡಿದೆಯಾದರೂ ತಾಲ್ಲೂಕಿನಲ್ಲಿ ಕಲೆ, ಸಾಹಿತ್ಯ ಮತ್ತು ಕಲಾವಿದರಿಗೆ ಕೊರತೆಯಿಲ್ಲ ಎನ್ನುವುದಕ್ಕೆ ಗಾಯಕ ಹಾಗೂ ಪತ್ರಕರ್ತರಾದ ಎಚ್.ಬಿ.ಬಸವರಾಜು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.

ಕಲೆ ಕಲಾವಿದರಲ್ಲಿರುವ ಸೃಜನ ಶೀಲತೆ ಯನ್ನು ತೋರಿಸುತ್ತದೆ. ಈಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದೇ ಮಾರ್ಗದಲ್ಲಿ ಸಾಗುವ ಅವಕಾಶ ಸಿಕ್ಕಿರುವುದು ಕೆಲವೇ ಕಲಾವಿದರಿಗೆ ಮಾತ್ರ. ಅಂತಹ ಕಲಾವಿದರಲ್ಲಿ ಬಸವರಾಜು ಕೂಡ ಒಬ್ಬರು. ಬಹುಮುಖ ಪ್ರತಿಭೆವುಳ್ಳ ಎಚ್.ಡಿ.ಕೋಟೆಯ ನಿವಾಸಿಯಾಗಿರುವ
ಇವರು ಗಾಯಕರಾಗಿ ತಮ್ಮ ಸುಮಧುರ ಕಂಠಸಿರಿಯ ಮೂಲಕ ಚಿತ್ರಗೀತೆಗಳು, ಭಾವಗೀತೆಗಳು ಮತ್ತು ಜಾನಪದ ಗೀತೆಗಳನ್ನು ಸೊಗಸಾಗಿ ಹಾಡಿ ಪ್ರೇಕ್ಷಕರ ಮನಗೆದ್ದಿದ್ದಾರೆ.

ಬಸವರಾಜು ಅವರು 1964ರಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದರು. ಗಾಯನವನ್ನು ಹವ್ಯಾಸವಾಗಿ ರೂಢಿಸಿಕೊಂಡ ಇವರು, ಯಾವುದೇ ಸಂಗೀತ ತರಗತಿಗೆ ಹೋಗಿ ಕಲಿತವರಲ್ಲ. ಪ್ರೌಢಶಾಲೆಯಲ್ಲಿರುವಾಗಲೇ ಅವರ ಶಿಕ್ಷಕರಾಗಿದ್ದ ಕುಚೇಲ ಎಂಬವರ ಮಾರ್ಗದರ್ಶನದಲ್ಲಿ ಚಿತ್ರಗೀತೆಗಳನ್ನು ಹಾಡುವ ಮೂಲಕ ಆಸಕ್ತಿ ಬೆಳೆಸಿಕೊಂಡರು.

ಹಂತಹಂತವಾಗಿ ಬೆಳೆದ ಕಲಾವಿದ:
ತಮಗಿದ್ದ ಸಂಗೀತದ ಒಲವನ್ನು ಶಿಕ್ಷಕರು, ಗೆಳೆಯರಿಂದ ಖಾತ್ರಿ ಪಡಿಸಿಕೊಂಡ ಬಸವರಾಜು ಬಳಿಕ ಹಂತಹಂತವಾಗಿ ಹವ್ಯಾಸಿ ಗಾಯಕರಾಗಿ ತಾಲ್ಲೂಕಿನಲ್ಲಿ ಗುರುತಿಸಿಕೊಂಡರು. ಭಾವಗೀತೆ, ಭಕ್ತಿಗೀತೆ, ಜಾನಪದಗೀತೆಗಳ ಗಾಯನವನ್ನು ರೂಢಿಸಿಕೊಂಡಿದ್ದಾರೆ. ಈಗ ಅವರ ಶರೀರಕ್ಕೆ 61 ವರ್ಷವಾದರೂ ಶಾರೀರ ಮಾತ್ರ ಇಂದಿಗೂ ಹಸನಾಗಿದೆ.

ಬಸವರಾಜು ಹಾಡಿಗೆ ಮನಸೋಲುವ ಮಂದಿ: ಬಸವರಾಜು ಹಲವು ವರ್ಷಗಳಿಂದ ಅವರದ್ದೇ ಆದ ವನಸಿರಿ ವಾದ್ಯ ಗೋಷ್ಠಿ ಎನ್ನುವ ತಂಡವೊಂದನ್ನು ಕಟ್ಟಿಕೊಂಡು ರಾಜ್ಯದ ವಿವಿಧೆಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಚಲನಚಿತ್ರ ನಟರೂ ಇವರ ಗಾಯನಕ್ಕೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಗೀತ ತಿಳಿದಿಲ್ಲ: ಹವ್ಯಾಸಿ ಗಾಯಕರಾದ ಬಸವರಾಜು ಅವರಿಗೆ ಸಂಗೀತದ ಗಂಧ ವಿಲ್ಲ. ಎಂದೂ ಎಲ್ಲೂ ಯಾರಿಂದಲೂ ಸಂಗೀತ ಕಲಿಯದೇ ಇದ್ದರೂ ಇಂದಿಗೂ ಡಾ. ರಾಜ್‌ಕುಮಾರ್, ಪಿ.ಬಿ.ಶ್ರೀನಿವಾಸ್, ಅಶ್ವಥ್ ಮತ್ತು ಯೇಸುದಾಸ್ ಅವರ ಕಂಠಸಿರಿಯ ಹಾಡುಗಳನ್ನು ಸುಮಧುರ ವಾಗಿ ಹಾಡಿ ಅಚ್ಚರಿ ಮೂಡಿಸುತ್ತಾರೆ.

ನಿರ್ಗಳವಾಗಿ ಸುಶ್ರಾವ್ಯವಾಗಿ ಹಾಡುವ ಪ್ರವೃತ್ತಿ ಬೆಳೆಸಿಕೊಂಡು ಸಂಗೀತ ಕಲಿತ ಕಲಾವಿದರನ್ನು ನಾಚಿಸುವಂತೆ ಹಾಡುವ ಹಾಡುಗಾರಿಕೆ ಅವರಲ್ಲಿದೆ.

ಪ್ರಾಮಾಣಿಕ ಪತ್ರಕರ್ತನಾಗಿ ಸೇವೆ: ಬಸವರಾಜು ಕಡುಬಡತನದ ಜೀವನ ನಡೆಸುತ್ತಿದ್ದರೂ ತಾಲ್ಲೂಕಿನಲ್ಲಿ ಪ್ರಾಮಾಣಿಕ ಪತ್ರಕರ್ತನಾಗಿ ಸುಮಾರು 24 ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಪತ್ರಿಕಾ
ಬರವಣಿಗೆಗಳು ನೊಂದವರು, ಶೋಷಿತರು ಹಾಗೂ ನ್ಯಾಯದ ಪರವಾಗಿದ್ದು, ಪತ್ರಿಕೆ ಸುದ್ದಿ ವಿಚಾರದಲ್ಲಿ ಯಾರಿಂದಲೂ ಎಂದೂ ರಾಜಿಯಾದವರಲ್ಲ.

ಸಂಗೀತ ಸನ್ಮಾನಗಳನ್ನು ಬಯಸದ ಬಸವರಾಜು: ಬಸವರಾಜು ಹಿರಿಯ ಪತ್ರಕರ್ತ ಹಿರಿಯ ಕಲಾವಿದ ಎನಿಸಿಕೊಂಡರೂ ಹಲವು ಕಲಾವಿದರ ಸಂಘಗಳಲ್ಲಿ, ವಾಹನ ಚಾಲಕರ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು, ಗೌರವಾಧ್ಯಕ್ಷರಾಗಿ, ಸಲಹೆಗಾರರಾಗಿಯೂ ಸೇವೆಸಲ್ಲಿಸಿದ್ದಾರೆ. ಆದರೆ ಕೀರ್ತಿ ಸನ್ಮಾನಗಳಿಗಾಗಿ ಬಸವರಾಜು ಎಂದೂ ಎಲ್ಲೂ ಆಸೆಪಟ್ಟವರಲ್ಲ. ಬದಲಾಗಿ ತಾನಾಗೇ ಒಲಿದು ಬಂದ ಹಲವು ಸನ್ಮಾನಗಳಿಂದ ಅವರೇ ಹೊರಗುಳಿದಿರುವ ನಿದರ್ಶನಗಳೂ ಸಾಕಷ್ಟಿವೆ.

ಬಸವರಾಜು ಕಲಾವಿದರಷ್ಟೇ ಅಲ್ಲದೆ ನಿರ್ಗತಿಕರು, ಕಲಾವಿದರು, ವಯೋವೃದ್ದರು, ಚಾಲಕರು, ಜನಸಾಮಾನ್ಯರ ಕಷ್ಟಸುಖಗಳಲ್ಲಿ ಈಗೋ ಭಾಗಿಯಾಗಿ ಮಾನವೀಯತೆಯ ಮೌಲ್ಯಗಳಿಂದ ಪರಿಚಿತರಾದ ಕಲಾವಿದ, ಪತ್ರಕರ್ತ, ಇಂತಹ
ಬಹುಮುಖ ಪ್ರತಿಭೆಯುಳ್ಳ ಇವರು ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಬೆಳಗಲಿ ಎನ್ನುವುದು ಜನರ ಆಶಯ.

 

Tags: