Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅವಳು ಈಗ ಮೆಲೆ ಮಹದೇಶ್ವರ ಬೆಟ್ಟದ ಮನೆಮಗಳು

• ಕೀರ್ತನ ಎಂ.

ಅವಳ ಪ್ರಯಾಣ ಹೊರಟಿದ್ದು ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿರುವ ಸೋಮವಾರಪೇಟೆಯಿಂದ ಮೂಡಲ ಸೀಮೆಯ ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ. ಅವಳಿಗೆ ಅವತ್ತಿಗೆ ಡಿಗ್ರಿ ಅಂತಿಮ ವರ್ಷದ ಪರೀಕ್ಷೆ ಮುಗಿದಿತ್ತು. ಮುಗಿದ ತಕ್ಷಣ ತಾಯಿಯ ಕರೆ ಯಾವಾಗ ಹೊರಟು ಬರುತ್ತೀಯ ಎಂದು. ಅವಳಿಗೂ ತಿಳಿದಿದೆ ಇದು ಕೇವಲ ತಾತ್ಕಾಲಿಕ ವಿದಾಯವಲ್ಲ ಎಂದು. ಇನ್ನು ಹೊರಟರೆ ಇಲ್ಲಿಂದ ಸಂಪೂರ್ಣ ನಿರ್ಗಮನವೆಂದು. ಹೆಣ್ಣು ಒಬ್ಬಳು ಮದುವೆಯಾಗಿ ಗಂಡನ ಮನೆಗೆ ಹೋದರೆ ತವರಿಗೆ ಅತಿಥಿಯಂತೆ. ಅಂತೆಯೇ ಈಗ ನಿರ್ಗಮಿಸಿದರೆ ಇನ್ಮುಂದೆ ನಾನು ಇಲ್ಲಿಗೆ ಅತಿಥಿಯಾಗಿ ಬಿಡುತ್ತೇನೆ ಎನ್ನುವುದು ಅವಳಿಗೂ ತಿಳಿದಿದೆ. ಕೊನೆ ಪಕ್ಷ ಎರಡು ದಿನ ಹೆಚ್ಚು ಇದ್ದು ಹೊರಡುವ ಬಯಕೆ ಅವಳ ಜೀವಕ್ಕೆ. ಆದರೆ ಅಮ್ಮನ ಕರೆ ಪರೀಕ್ಷೆ ಮುಗಿದು ಒಂದು ದಿನ ಕಳೆದಂತೆ ಬ್ಯಾಗ್ ಎತ್ತಿಕೊಂಡು ಬಸ್ ಹತ್ತುವಂತೆ ಮಾಡಿತು.

ಇಷ್ಟವಿಲ್ಲದೆ ಇಚ್ಛೆಯಿಲ್ಲದೆ ತಾನು ಆಡಿ ಬೆಳೆದ ಊರನ್ನು ತೊರೆದು ಹೊರಟಳು ಹುಡುಗಿ, ಮನಸ್ಸಿನ ತುಂಬಾ ಭಾರ ಭಾರ ಮೈಸೂರು ದಾಟಿದ ಮೇಲೆ ಅಂತೂ ಕಣ್ಣಾಲಿ ತುಂಬಿತ್ತು.

ಸೋಮವಾರಪೇಟೆಯಿಂದ ಕುಶಾಲನಗರ ಮಾರ್ಗವಾಗಿ ಬಂದರೆ ಮೈಸೂರಿಗೆ ಮೂರು ಗಂಟೆಗಳ ಪ್ರಯಾಣ. ಹೆಚ್ಚು ಕಡಿಮೆ ಮೈಸೂರಿನ ವಾತಾವರಣ ಹೊಂದಿಕೊಳ್ಳುವಂತಹದ್ದು. ಬೆಟ್ಟಕ್ಕೆ ಎರಡು ಬಸ್‌ಗಳ ಪ್ರಯಾಣ ಮಾಡಬೇಕು
ಮೈಸೂರಿನವರೆಗೂ ಒಂದು ಬಸ್, ಮೈಸೂರಿನಲ್ಲಿ ಬಸ್‌ ಬದಲಾಯಿಸಬೇಕು.
ಮೈಸೂರಿನಲ್ಲಿ ಬಸ್‌ ಇಳಿದವಳು ಹೊಟ್ಟೆ ಚುರುಗುಟ್ಟುವಾಗ ಅಲ್ಲೇ ಏನಾದರೂ ತಿಂದು ನಂತರ ಬೆಟ್ಟದ ಬಸ್ ಹತ್ತುವ ನಿರ್ಧಾರ ಮಾಡಿದಳು. ಇದರ ಮಧ್ಯೆ ತಾಯಿ ಕರೆ “ಎಲ್ಲಿರುವೆ?” ಎಂದು. ಮೈಸೂರು ಎಂದು ತಿಳಿಸಿದವಳಿಗೆ, “ಸರಿ ಇವತ್ತು ಕೊಳ್ಳೇಗಾಲದಲ್ಲಿ ಉಳಿದು ನಾಳೆ ಬೆಟ್ಟಕ್ಕೆ ಬಾ” ಎಂದು ತಿಳಿಸಿದ ತಾಯಿ ಕರೆ ಸ್ಥಗಿತಗೊಳಿಸಿದರು.

ಕೊಳ್ಳೇಗಾಲದಲ್ಲಿ ಅವಳ ಸೋದರ ಮಾವನ ಮನೆ ಇದೆ. ಹಾಗಾದರೆ ಅಲ್ಲೇ ಹೋಗಿ ಊಟ ಮಾಡಲೇ? ಎನ್ನುವ ಯೋಚನೆ ಮೂಡಿದಾಗ ಸಮಯ ನೋಡಿಕೊಂಡಳು, ಅದಾಗಲೇ ಎರಡು ಗಂಟೆ. ಇಲ್ಲೇ ತಿಂದು ಹೊರಡುವ ನಿರ್ಧಾರ ಮಾಡಿ ಹತ್ತಿರದಲ್ಲಿದ್ದ ಹೋಟೆಲ್‌ಗೆ ತೆರಳಿದಳು.

ಅಲ್ಲಿ ಆರ್ಡರ್ ಮಾಡಿದ್ದು ದೋಸೆ. ಅದನ್ನು ತಿನ್ನುವಾಗ ಬೇಸರವಾಯಿತು. ಕೊಡಗಿನ ತನ್ನೂರಿನಲ್ಲಿ ಎಷ್ಟೊಂದು ರುಚಿಯಾಗಿ ಇರುತ್ತಿತ್ತು ಎಂದು ಹಳೆಯ ನೆನಪುಗಳು ಕಾಡಿತು. ಪತ್ರೋಡೆ, ಪುಲ್, ಆಟ ಪಾಯಸ ಹಲವಾರು ತಿನಿಸುಗಳು ಕಣ್ಣ ಮುಂದೆ ಬಂದು ಸರಿದು ಹೋದವು. ಅಲ್ಲಿಂದ ಹೊರಟವಳು ಕೊಳ್ಳೇಗಾಲದ ಬಸ್ ಏರಿದಳು. ಜನಸಂದಣಿ ಅವಳನ್ನು ಒಂದು ಕ್ಷಣ ದಿಗ್ನಮೆಗೊಳಿಸಿತು. ಎಷ್ಟೋ ಕಡೆಗೆ ತಿರುಗಾಡಿರುವ ಹುಡುಗಿಗೆ ಕೊಳ್ಳೇಗಾಲದ ಬಸ್‌ಗೆ ಜನ ಹತ್ತುವ ಪರಿ ಅಚ್ಚರಿ. ಇಷ್ಟೊಂದು ರಶ್ ! ಉದ್ದಾರ ಎತ್ತಿದವಳು ಅಂತೂ ಇಂತೂ ಅವರ ನಡುವೆ ನುಸುಳಿ ಮೊದಲ ಮೂರು ಬಸ್ ಬಿಟ್ಟು ನಾಲ್ಕನೇ ಬಸ್ ಹತ್ತಿದಳು. ಅದು ಭಾನುವಾರ ಆದ್ದರಿಂದ ಬೆಟ್ಟಕ್ಕೆ ತೆರಳುವ ಭಕ್ತರೆಲ್ಲ ಇರುವುದರಿಂದ ಇಷ್ಟು ರಶ್ ಎನ್ನುವುದು ಅವಳಿಗೆ ಅರ್ಥವಾಗಿರಲಿಲ್ಲ.

ಅದೂ ಅಲ್ಲದೆ ಕೊಳ್ಳೇಗಾಲಕ್ಕೆ ಹೋದರೆ ಬೆಟ್ಟಕ್ಕೆ ಬೇಕಾದಷ್ಟು ಬಸ್ ಸಿಗುತ್ತವೆ ಎನ್ನುವ ಕಾರಣಕ್ಕೆ ಪರಸೆ ಭಕ್ತರು ತಾ ಮುಂದು ನಾ ಮುಂದು ಎಂದು ಬಸ್ ಏರುತ್ತಿದ್ದರೆ, ಇವಳಿಗಂತೂ ಹತ್ತಿ ತನಗಾಗಿ ಒಂದು ಸೀಟ್ ಗಿಟ್ಟಿಸಿಕೊಳ್ಳುವಾಗ ಯುದ್ಧ ಗೆದ್ದ ಅನುಭವ.

“ಅಬ್ಬಾ ಸಾಕಾಗಿ ಹೋಯಿತು” ಎಂದುಕೊಳ್ಳುತ್ತಾ ಉಸಿರು ಎಳೆದುಕೊಳ್ಳುವಾಗ ಬಂದ ಅಜ್ಜಿ ಒಬ್ಬರು “ಯಾರಾರು ಬತ್ತಾರ?” ಎಂದು ಕೇಳಲು, ಇಲ್ಲ ಎಂದು ತಲೆ ಅಡಿಸಿದ್ದೆ ಕುಳಿತಿದ್ದವಳನ್ನೇ ಇನ್ನಷ್ಟು
ಜರುಗಿಸಿ ಕುಳಿತುಕೊಂಡರು.
ಅವಳಿಗಂತೂ ಏನು ಹೇಳಬೇಕು ತಿಳಿಯಲಿಲ್ಲ. “ಎಲ್ಲಿಗೆ ತಾಯಿ?” ಎಂದಾಗ ಕೊಳ್ಳೇಗಾಲ ಎಂದು ಸುಮ್ಮನಾದಳು.
“ನಾವ್ ಬೆಟ್ಟಕ್ಕೆ ಉಂಟಿವಿ…” ಎಂದು ಮಾತು ಪ್ರಾರಂಭಿಸಿತು ಅಜ್ಜಿ. ಆದರೆ ಅದರಲ್ಲಿ ಅದೆಷ್ಟೋ ಪದಗಳು ಅವಳಿಗೆ ಅರ್ಥವಾಗದೆ ಸುಮ್ಮನೆ ತಲೆ ಆಡಿಸಿದಳು. ಕಾರಣ ಅಜ್ಜಿ ಬಳಸುತ್ತಿದ್ದ ಕನ್ನಡ ಪದಗಳ ಅರ್ಥ ತಿಳಿಯದು ಅವಳಿಗೆ.
ಎಲ್ಲವೂ ಹೊಸತು ಅಷ್ಟೇ ಕಷ್ಟವೆನಿಸಿತು. ಕಿವಿಗೆ ಇಯರ್ ಫೋನ್ ಹಾಕಿಕೊಂಡು ಕಣ್ಣು ಮುಚ್ಚಿದಳು. ಬೆಟ್ಟಕ್ಕೆ ಆಗಲಿ, ಕೊಳ್ಳೇಗಾಲಕ್ಕೆ ಆಗಲಿ ಇಲ್ಲಿಯವರೆಗೂ ಒಬ್ಬಳೇ ಪ್ರಯಾಣಿಸಿದವಳಲ್ಲ. ಹಾಗೆ ಪ್ರಯಾಣದಲ್ಲಿ ನಿದ್ದೆ ಮಾಡುವ ಅಭ್ಯಾಸವೂ ಇಲ್ಲದ ಕಾರಣ ಹಾಡು ಕೇಳುತ್ತಾ ಕುಳಿತಳು.

ಒಂದೂವರೆ ತಾಸಿಗೆ ಕೊಳ್ಳೇಗಾಲ ತಲುಪಿದ್ದೆ. ಮನೆ ಸೇರಿದ ಹುಡುಗಿಗೆ ರಾತ್ರಿ ಮಾತ್ರ ನಿದಿರೆ ಹತ್ತಿರ ಸುಳಿಯಲಿಲ್ಲ. ಕೊಡಗಿನಲ್ಲಿದ್ದ ಅಷ್ಟು ವರ್ಷ ಫ್ಯಾನ್ ಮೊರೆ ಹೋದವಳಲ್ಲ. ಆದರೆ ಇಲ್ಲಿ ಫ್ಯಾನ್ ಇಲ್ಲದೆ ನಿದಿರೆ ಬಾರದು. ಒಂದೇ ದಿನಕ್ಕೆ ಸಾಕಾಗಿ ಹೋದಂತೆ ಅನಿಸಿ ನಿದಿರೆ ಬಾರದೆ ಅತ್ತು ಕೊನೆಗೆ ಹೇಗೋ ಫ್ಯಾನ್ ಗಾಳಿಯನ್ನೇ ಸಾಗಿಸುತ್ತಾ ಮಲಗಿದಳು.

ಬೆಳಗಿನ ಪಯಣ ಬೆಟ್ಟಕ್ಕೆ ಮಾವನೇ ಬಸ್ ಹತ್ತಿಸಿ ಕೊಟ್ಟ ಕಾರಣ ನಿನ್ನೆಯಷ್ಟು ತ್ರಾಸಾಗಲಿಲ್ಲ ಅವಳಿಗೆ. ಬಸ್ ಏರಿ ಕುಳಿತವಳಿಗೆ ಮಧುವನಹಳ್ಳಿ ತಲುಪುವಾಗ ಊರಿನ ಒಳಗೆ ರಸ್ತೆ ಇದೆಯೋ ರಸ್ತೆಯ ಪಕ್ಕ ಪಕ್ಕವೇ ಊರುಗಳನ್ನು ನಿರ್ಮಿಸಿದ್ದರೋ ಎನ್ನುವ ಗೊಂದಲ. ಕೊಡಗಿನಲ್ಲಿ ಯಾವುದೇ ಊರಿನ ಬೋರ್ಡ್ ಕಂಡರೂ ಊರು ಕಾಣಲು ಸ್ವಲ್ಪ ದೂರ ನಡೆದು ಹೋಗುವ ಸ್ಥಿತಿ. ಮೊದಲು ಸ್ವಾಗತಿಸುವುದೇ ಕಾಫಿ ತೋಟ ಅದರಲ್ಲಿ ಬಸ್ ಸ್ವಲ್ಪ ರಸ್ತೆ ಬದಿಗೆ ಹೋದರೆ ಮನೆಯ ಚಾವಡಿ ತಾಗಿ ಬಿಡುವ ಪರಿಸ್ಥಿತಿ.

ಅದೇ ರೀತಿ ಮುಂದೆಯೂ ಸಿಕ್ಕಾಗ ಅವಳಿಗದು ಆಶ್ಚರ್ಯ ಉಂಟು ಮಾಡಲಿಲ್ಲ. ಎರಡು ಕಡೆಯೂ ತೀರಾ ವಿಭಿನ್ನವಾದ ಸಂಸ್ಕೃತಿ ಇದೆ. ಅದಕ್ಕೆ ತಕ್ಕನಾಗಿ ಎಲ್ಲವೂ ರೂಪುಗೊಂಡಿವೆ ಎಂದುಕೊಂಡು ಹಾಡು ಕೇಳುತ್ತಾ ಸುಮ್ಮನೆ ಸುತ್ತಲಿನ ಪರಿಸರದ ಸೊಬಗನ್ನು ಕಣ್ಣುಂಬಿ ಕೊಳ್ಳುತ್ತಾ ಕುಳಿತಳು.
ತಾಳ ಬೆಟ್ಟ ತಲುಪುವವರೆಗೂ ಒಂದು ರೀತಿಯ ಪಯಣ, ಅಲ್ಲಿಂದ ಮುಂದಕ್ಕೆ ಬೇರೆಯಾಯಿತು. “ಉಘ ಮಾದಪ್ಪ’ ಎನ್ನುವ ಕೂಗು ಜೋರಾಗಿ ಮೊಳಗಿತು.

ಹಾವು ಹರಿದಂತೆ ಸಾಗಿರುವ ತಿರುವಿನ ರಸ್ತೆ ಸುತ್ತಲೂ ಬಾನೆತ್ತರಕ್ಕೆ ಏರಿ ನಿಂತಿರುವ ಬೆಟ್ಟಗಳು, ದೃಷ್ಟಿ ಹಾಯಿಸಿದಷ್ಟು ದೂರಕ್ಕೂ ಕಾಣುವ ಕಾಡು ಕೊಡಗಿನಂತೆ ಒಂದು ಕ್ಷಣ ಭ್ರಮೆ ಹುಟ್ಟಿಸಿದ್ದು ಸುಳ್ಳಲ್ಲ. ಮಾದಪ್ಪನೊಂದಿಗೆ ಜನರು ಎಷ್ಟು ಭಾವನಾತ್ಮಕವಾಗಿ ಬದುಕನ್ನು ಕೂಡಿಸಿಕೊಂಡಿದ್ದಾರೆ ಎನ್ನುವುದು ಕೂಡ ಅವಳಲ್ಲಿ ಅಚ್ಚರಿ ಹುಟ್ಟಿಸಿತು. ಅಲ್ಲಿ ಬೆಳಿಗ್ಗೆ ಬೇಗನೇ ಎದ್ದು ಕಾಫಿ ತೋಟಕ್ಕೆ ಹೋಗುವ ಜನರ ಬದುಕಿಗೂ ಇಲ್ಲಿ ದೇವಸ್ಥಾನದ ಪೂಜೆಗೆ ಅಥವಾ ಬೇರೆ ಬೇರೆ ಕೆಲಸಕ್ಕೆ ತೆರಳುವ ಜನರ ಬದುಕಿಗೂ ಬೆಟ್ಟದಷ್ಟು ವ್ಯತ್ಯಾಸ ಕಂಡಿತು. ಗುಡ್ಡಪ್ಪಂದಿರು, ಸೋಲಿಗರ ಬದುಕು ಎಲ್ಲವೂ ಹೊಸ ಜೀವನದ ಪರಿಚಯ ಮಾಡಿಸಿತು. ಹೊಂದಿಕೊಳ್ಳಲು ಮೊದಲು ಹೆಣಗಾಡಿದ ಜೀವಕ್ಕೆ ಇಲ್ಲಿನ ಆಚಾರ ವಿಚಾರಗಳು ಎಲ್ಲವೂ ಒಂದೊಂದೇ ಅಭ್ಯಾಸವಾದಂತೆ ರೂಢಿಗತವಾಯಿತು.

ಪಶ್ಚಿಮ ಘಟ್ಟದಿಂದ ಬೆಟ್ಟಕ್ಕೆ ಮೊದಲ ಪಯಣ ವಿಚಿತ್ರದ ಜೊತೆಗೆ ವಿಶೇಷವಾದ ಹೊಸ ಅನುಭೂತಿಯನ್ನು ನೀಡಿದ್ದು ಸುಳ್ಳಲ್ಲ. ಆಗ ಹೊಸದಾಗಿದ್ದ ಬೆಟ್ಟ ಈಗ ಪೂರ್ತಿ ಪರಿಚಯವಿದೆ. ತಾಳ ಬೆಟ್ಟ ಬಿಟ್ಟರೆ ಬೆಟ್ಟವೇ ಇರುವುದು ಎಂದುಕೊಂಡಿದ್ದ ಜೀವಕ್ಕೆ ಮಧ್ಯೆ ಮಧ್ಯೆ ಸಿಗುವ ಊರಿನ ಪರಿಚಯವೂ ಆಗಿದೆ. ರಂಗಸ್ವಾಮಿ ಒಡ್ಡು, ಶನೇಶ್ವರನ ದೇವಾಲಯ, ಆನೆ ತಲೆ ದಿಂಬ, ನಾಗಮಲೆ, ಕೊಡಗಲ್ಲು ಎಲ್ಲವೂ ತಿಳಿದಿದೆ.ಅಲ್ಲಿಂದ ಇಲ್ಲಿಗೆ ಬಂದವಳು ಇಲ್ಲಿನ ಮನೆ ಮಗಳೇ ಆಗಿ ಹೋಗಿದ್ದಾಳೆ.
keerthana.manju.guha6@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ