Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಷೇರು ಪೇಟೆಗಳು ಮತ್ತು ಷೇರು ಬೆಲೆಗಳು

ಪ್ರೊ. ಆರ್‌ ಚಿಂತಾಮಣಿ

ಭಾಗ-೧

 

ಕೌಟುಂಬಿಕ ಉಳಿತಾಯಗಳು ಷೇರುಪೇಟೆಯ ಕಡೆಗೆ ಹೆಚ್ಚು ಹರಿಯುತ್ತಿರುವುದರಿಂದ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಈ ಪೇಟೆಗಳನ್ನೇ ಸ್ಟಾಕ್ ಎಕ್ಸ್‌ಚೇಂಜ್‌ಗಳೆಂದು ಕರೆಯುವುದು. ನಮ್ಮಲ್ಲಿ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಎಂಬ ಎರಡು ಅತಿ ದೊಡ್ಡ ಅಖಿಲ ಭಾರತೀಯ ಎಕ್ಸ್‌ಚೇಂಜ್‌ಗಳಿವೆ.

ಎರಡೂ ಮಂಬೈ ನಗರದಲ್ಲೇ ಇವೆ. ಮೊದಲು ಇನ್ನೂ ೨೩ ಪ್ರಾದೇಶಿಕ ಎಕ್ಸ್‌ಚೇಂಜುಗಳು ಬೇರೆ ಬೇರೆ ನಗರಗಳಲ್ಲಿದ್ದವು. ಆದರೆ ಈಗ ತಂತ್ರಜ್ಞಾನ ದಿನಗಳಲ್ಲಿ ಅವೆಲ್ಲ ಈ ಎರಡೂ ಎಕ್ಸ್‌ಚೇಂಜುಗಳ ಅಂಗ ಸಂಸ್ಥೆಗಳಾಗಿ ಕೆಲಸ ಮಾಡುತ್ತಿವೆ. ಸರ್ಕಾರಿ ಕಂಪೆನಿಗಳು ಸೇರಿದಂತೆ ಸಾರ್ವಜನಿಕ (Public Limited) ಕಂಪೆನಿಗಳ ಷೇರುಗಳ ಮತ್ತು ಕಂಪೆನಿಗಳ ಮತ್ತು ಸರ್ಕಾರದ ಸಾಲಪತ್ರಗಳ (Debentures, Bonds and Govt Securities) ಖರೀದಿ ಮತ್ತು ಮಾರಾಟ ಕೇಂದ್ರಗಳೇ ಸ್ಟಾಕ್ ಎಕ್ಸ್‌ಚೇಂಜುಗಳು. ಹಾಗಂದ ಮಾತ್ರಕ್ಕೆ ಎಲ್ಲ ಕಂಪೆನಿಗಳ ಷೇರುಗಳು ವ್ಯವಹರಿಸಲ್ಪಡುತ್ತವೆ ಎಂದು ಅರ್ಥವಲ್ಲ. ನಿರ್ದಿಷ್ಟ ನಿಬಂಧನೆಗೊಳಪಟ್ಟು ಅರ್ಹ ಕಂಪೆನಿಗಳು ಭಾರತದ ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜಸ್ ಬೋರ್ಡ್ ಅನುಮತಿ ಪಡೆದು ಎಕ್ಸ್‌ಚೇಂಜ್‌ಗಳಿಗೆ ತಮ್ಮ ಷೇರುಗಳ ವ್ಯವಹಾರಕ್ಕಾಗಿ ನೋಂದಾಯಿಸಲು ಅರ್ಜಿ ಸಲ್ಲಿಸಬೇಕು. ಪರಿಶೀಲಿಸಿದ ಎಕ್ಸ್‌ಚೇಂಜ್ ಅಽಕಾರಿಗಳು ಎಲ್ಲವೂ ಸರಿ ಎಂದು ಕಂಡು ಬಂದಾಗ ವ್ಯವಹರಿಸಲಿಕ್ಕೆ ಅನುಮತಿ ಕೊಡುತ್ತಾರೆ.

ಈ ಪ್ರಕ್ರಿಯೆಯನ್ನೇ ವ್ಯವಹಾರಕ್ಕಾಗಿ ಪಟ್ಟೀಕರಿಸುವುದು (Listing) ಎಂದು ಕರೆಯುತ್ತಾರೆ. ಇದು ಎಲ್ಲ ಸೆಕ್ಯೂರಿಟಿಗಳಿಗೂ ಅನ್ವಯಿಸುತ್ತದೆ. ನಂತರವೂ ಕಂಪೆನಿಗಳು ಕಾಲ ಕಾಲಕ್ಕೆ ತಮ್ಮ ಹಣಕಾಸು ವರದಿಗಳನ್ನೂ ಆಡಳಿತದಲ್ಲಿಯ ಬದಲಾವಣೆ ಗಳನ್ನೂ ಇತರೆ ಘಟನೆಗಳಳನ್ನೂ ಎಕ್ಸ್‌ಚೇಂಜಿಗೆ ತಿಳಿಸುತ್ತಿರುವುದು ಕಡ್ಡಾಯ. ಈಗ ನಮ್ಮ ಎರಡೂ ಎಕ್ಸ್‌ಚೇಂಜುಗಳಲ್ಲಿ ಒಟ್ಟು ಆರು ಸಾವಿರಕ್ಕೂ ಹೆಚ್ಚು ಕಂಪೆನಿಗಳ ಷೇರುಗಳು ಪಟ್ಟೀಕರಿಸಲ್ಪಟ್ಟಿವೆ. ಅದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಷೇರುಗಳ ಖರೀದಿ ಮಾರಾಟ ದಿನವೂ ನಡೆಯುತ್ತಿರುತ್ತದೆ. ಉಳಿದ ವುಗಳ ಖರೀದಿ ಮಾರಾಟ ನಡೆಯುತ್ತಿದ್ದರೂ ಮೇಲಿನ ಗುಂಪಿನ ಷೇರುಗಳ ವ್ಯಾಪಾರ ನಡೆದಷ್ಟು ದೊಡ್ಡ ಸಂಖ್ಯೆಯಲ್ಲಿ ಖರೀದಿ ಮಾರಾಟ ಇಲ್ಲದಿರಬಹುದು.

ಷೇರುಪೇಟೆಯಲ್ಲಿ ವ್ಯವಹರಿಸುವ ವಿಧಾನ: ಇತರ ಪೇಟೆಗಳಂತೆ ಹೇಗೆಂದರೆ ಹಾಗೆ ಇಲ್ಲಿ ಖರೀದಿ ಮಾರಾಟ ಮಾಡುವಂತಿಲ್ಲ. ಇಲ್ಲಿ ವ್ಯವಹಾರ ಅಧಿಕೃತ ದಲ್ಲಾಳಿ ಸಂಸ್ಥೆಯ (ಬ್ರೋಕರ್) ಮುಖಾಂತರ ಮಾತ್ರ. ಆಯ್ದುಕೊಂಡು ಬ್ರೋಕರ್ ಸಂಸ್ಥೆಯಲ್ಲಿ ಒಂದು ಟ್ರೇಡಿಂಗ್ ಖಾತೆ ಹೊಂದಿರಬೇಕು. ಅದು ಖಾತೆದಾರರ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿರಬೇಕು. ಷೇರುಗಳು ಮೊದಲಿನಂತೆ ಸರ್ಟಿಫಿಕೇಟ್ ರೂಪದಲ್ಲಿ ಇರುವುದಿಲ್ಲ. ಈಗ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ರೂಪದಲ್ಲಿರುತ್ತವೆ. ಈ ಕಾರ್ಯವನ್ನು ಅಽಕೃತವಾಗಿ ನಿಭಾಯಿಸಲು ರಾಷ್ಟ್ರೀಯ ಮಟ್ಟದಲ್ಲಿ ಎನ್‌ಎಸ್‌ಡಿಎಲ್ ಮತ್ತು ಸಿಡಿಎಸ್‌ಎಲ್ ಎಂಬ ಎರಡು ಸಂಸ್ಥೆಗಳಿದ್ದು, ಇವುಗಳ ಪ್ರತಿನಿಽಗಳು ದೇಶಾದ್ಯಂತ ಇದ್ದಾರೆ. ಕೆಲವು ಬ್ಯಾಂಕುಗಳು ಮತ್ತು ಬ್ರೋಕರರು ಸಹಿತ ಈ ಕೆಲಸಕ್ಕಾಗಿ ಅಂಗ ಸಂಸ್ಥೆಗಳನ್ನು ಹೊಂದಿವೆ.

ಮೇಲಿನ ಟ್ರೇಡಿಂಗ್ ಖಾತೆದಾರರು ಈ ಪ್ರತಿನಿಽಗಳಲ್ಲಿ ಒಂದು ಡಿಮ್ಯಾಟ್ (ಡಿಮಟೀರಿಯಲೈಜೇಶನ್) ಖಾತೆ ತೆಗೆದು ತಮ್ಮ ಟ್ರೇಡಿಂಗ್ ಖಾತೆ ಮತ್ತು ಬ್ಯಾಂಕ್ ಖಾತೆಗೆ ಸಂಪರ್ಕಗೊಳಿಸಬೇಕು. ಈಗ ತಮ್ಮ ಖರೀದಿ ಮತ್ತು ಮಾರಾಟ ಆದೇಶಗಳನ್ನು ಕಂಪೆನಿಯ ಹೆಸರು, ಷೇರುಗಳ ಸಂಖ್ಯೆ ಮತ್ತು ಬೆಲೆಯ ಮಿತಿಯೊಂದಿಗೆ ಬ್ರೋಕರರಿಗೆ ಕೊಡಬೇಕು. ಎಕ್ಸ್‌ಚೇಂಜಿನಲ್ಲಿ ವ್ಯವಹಾರದ ಅಖಾಡ (Trading Ring) ಇದ್ದು ಕೆಲಸದ ದಿನಗಳಲ್ಲಿ ಅಽಕೃತ ವ್ಯವಹಾರದ ಸಮಯದಲ್ಲಿ (Trading Hour) ಎಕ್ಸ್‌ಚೇಂಜ್ ಅಽಕಾರಿಗಳ ಸಮ್ಮುಖದಲ್ಲಿ ಬ್ರೋಕರರು ಇತರ ಬ್ರೋಕರರೊಡನೆ ತಮ್ಮಲ್ಲಿಯ ಗ್ರಾಹಕರ ಆದೇಶಗಳನ್ನು ಅಂದಿನ ನಿಗದಿತ ಬೆಲೆಗಳಲ್ಲಿ ವ್ಯವಹಾರವಾಗಿ ಕುದುರಿಸುತ್ತಾರೆ ಮತ್ತು ಗ್ರಾಹರಿಗೆ ತಿಳಿಸುತ್ತಾರೆ.

ಇದೆಲ್ಲವೂ ಅಧಿಕೃತವಾಗಿ ದಾಖಲಾಗಿರುತ್ತದೆ ಮತ್ತು ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ನಂತರ ನಿಗದಿತ ದಿನದಂದು (Settlement Day) ವ್ಯವಹಾರವನ್ನು ಕೊನೆಗೊಳಿಸಲು ಬೆಲೆ ಮತ್ತು ಷೇರುಗಳು ವರ್ಗಾವಣೆಗಳಾಗುತ್ತವೆ. ಮಾರಾಟ ಮಾಡಿದವರ ಡಿಮ್ಯಾಟ್ ಖಾತೆಯಿಂದ ಖರೀದಿ ಮಾಡಿದವನ ಡಿಮ್ಯಾಟ್ ಖಾತೆಗೆ ಅಷ್ಟೂ ಷೇರುಗಳನ್ನು ವರ್ಗಾಯಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಖರೀದಿಸಿದವರ ಬ್ಯಾಂಕ್ ಖಾತೆಯಿಂದ ಮಾರಿದವರ ಬ್ಯಾಂಕ್ ಖಾತೆಗೆ ಬೆಲೆಯ ಮೊತ್ತವನ್ನು ವರ್ಗಾಯಿಸಲಾಗುತ್ತದೆ. ನಿಯಮದಂತೆ ಬ್ರೋಕರರಿಬ್ಬರೂ ತಮ್ಮ ತಮ್ಮ ಕಮಿಷನ್ ಪಡೆಯುತ್ತಾರೆ.

ಸೂಕ್ಷ್ಮ ಸಂವೇದಿ ಬೆಲೆಗಳು: ಸಾಮಾನ್ಯವಾಗಿ ಬೇಡಿಕೆ ಮತ್ತು ಪೂರೈಕೆಗಳನ್ನಾಧರಿಸಿ ಪ್ರತಿಯೊಂದೂ ಕಂಪೆನಿಯ ಷೇರುಗಳ ಬೆಲೆಗಳು ಪ್ರತಿ ಕೆಲಸದ ದಿನ ವ್ಯವಹಾರದ ಅವಧಿಯಲ್ಲಿ ಟ್ರೇಡಿಂಗ್ ರಿಂಗ್‌ನಲ್ಲಿ ನಿರ್ಧರಿಸಲ್ಪಡುತ್ತವೆ. ದಿನವಿಡೀ ಷೇರು ಬೆಲೆಗಳು ಬದಲಾಗುತ್ತಲೇ ಇರುತ್ತವೆ. ದಿನದ ಕೊನೆಯಲ್ಲಿ ವ್ಯವಹಾರದ ಸಮಯದ ಕಡೆಯಲ್ಲಿ ಇದ್ದ ಬೆಲೆಗಳನ್ನು ಅಂದಿನ ‘ಕೊನೆಯ ಬೆಲೆ’ ಎಂದು ಕರೆಯುತ್ತಾರೆ. ಇದು ಮರುದಿನದ ಆರಂಭದ ಬೆಲೆ ನಿರ್ಧಾರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಂತಾರಾಷ್ಟ್ರೀಯ ಆರ್ಥಿಕ ಮತ್ತು ರಾಜಕೀಯ ರಂಗಗಳಲ್ಲಿ ಪ್ರಮುಖ ಘಟನೆಗಳು, ಪ್ರಕೃತಿ ವೈಪರೀತ್ಯಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಮುಖ ನಿರ್ಧಾರಗಳು ವಿವಿಧ ಆರ್ಥಿಕ ವಲಯಗಳಲ್ಲಿ ಸಂಭವಿಸುವ ಪ್ರಮುಖ ಬದಲಾವಣೆಗಳು, ಪ್ರಭಾವಶಾಲಿ ಸಾಮಾಜಿಕ ಘಟನೆಗಳು, ವೈಜ್ಞಾನಿಕ ಆವಿಷ್ಕಾರಗಳು ಮುಂತಾದವುಗಳು ಷೇರುಬೆಲೆಗಳ ಮೇಲೆ ಪರಿಣಾಮ ಬೀರಿ ಏರಿಳಿತಗಳಿಗೆ ಕಾರಣಗಳಾಗುತ್ತವೆ.

ಕಂಪೆನಿಗಳಲ್ಲಾಗುವ ಬದಲಾವಣೆಗಳೂ ಮಹತ್ವದ ಘಟನೆಗಳೂ ಆ ಕಂಪೆನಿಗಳ ಷೇರುಗಳ ಬೆಲೆ ಏರಿಳಿತಗಳಿಗೆ ಕಾರಣವಾಗುತ್ತವೆ. ಇದರ ಪರಿಣಾಮ ಬೇರೆ ಪೇಟೆಗಳ ಮೇಲೂ ಆಗುವ ಸಾಧ್ಯತೆಗಳಿರುತ್ತವೆ. ಪ್ರಮುಖ ಅಧಿಕಾರ ಸ್ಥಾನದಲ್ಲಿರುವ ಪ್ರಭಾವಿ ವ್ಯಕ್ತಿಯು ಒಂದು ಮಾತನ್ನು ಹೇಳಿದರೆ ಷೇರು ಬೆಲೆಗಳು ಒಮ್ಮೆಲೇ ಮೇಲೆ ಏಳಬಹುದು ಅಥವಾ ಕುಸಿಯಬಹುದು. ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಇತ್ತೀಚಿನ ಲೋಕಸಭಾ ಚುನಾವಣೆಗಳ ಮತ ಎಣಿಕೆ ಹಿಂದಿನ ದಿನ ನಮ್ಮ ಪ್ರಧಾನಿ ಯವರು ತಮ್ಮ ಆಡಳಿತ ಪಕ್ಷ ಪ್ರಚಂಡ ಬಹುಮತದಿಂದ ಜಯಗಳಿಸುತ್ತದೆ ಎಂದು ಹೇಳಿದರು. ಅಂದು ಷೇರುಪೇಟೆ ಬೆಲೆಗಳು ದೊಡ್ಡ ಪ್ರಮಾಣದಲ್ಲಿ ಮೇಲೆ ಹೋದವು. ಆದರೆ ಮರುದಿನ ಎಣಿಕೆಯಲ್ಲಿ ನಿರೀಕ್ಷಿಸಿದಷ್ಟು ಬಹುಮತ ಬರದೇ ಇದ್ದುದರಿಂದ ಷೇರುಪೇಟೆ ಜರ್ರನೆ ಕೆಳಕ್ಕಿಳಿಯಿತು. ಇದರಿಂದ ಸುಧಾರಿಸಿಕೊಂಡು ಸಾಮಾನ್ಯ ಸ್ಥಿತಿಗೆ ಬರಬೇಕಾದರೆ ಒಂದು ವಾರವೇ ಬೇಕಾಯಿತು. ದೊಡ್ಡ ಕುಳಗಳೇನೋ ಸುಧಾರಿಸಿಕೊಳ್ಳಬಹುದು. ಸಣ್ಣ ಹೂಡಿಕೆದಾರರ ಪರದಾಟ?

 

Tags: