Mysore
20
few clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಜುಂಜುಂ ಫ್ಯಾಕ್ಟರಿ ಮಾಲೀಕನ ಸಾವಿನ ವೃತ್ತಾಂತ 

ಎಡಗೈಯಲ್ಲಿದ್ದ ಸಿಗರೇಟ್ ಅನ್ನು ಬಾಯಲ್ಲಿಟ್ಟು ಹೊಗೆ ಎಳೆದುಕೊಂಡವನು ಅದನ್ನು ಹೊರಬಿಟ್ಟಾಗ ಸುರುಳಿ ಸುರುಳಿಯಾಗಿ ಹೊಗೆ ಮೇಲೇರತೊಡಗಿತು.

ಹೀಗೆ ಬಾಯೊಳಗೆ ಎಳೆದುಕೊಂಡ ಸಿಗರೇಟಿನ ಹೊಗೆಯನ್ನು ಹೊರಬಿಡುವುದು,ಅದು ಸುರುಳಿ ಸುರುಳಿಯಾಗಿ ಮೇಲಕ್ಕೇರುವುದನ್ನು ನೋಡುತ್ತಾ ಖುಷಿಪಡುವುದು ಚಂದನ್ ಋಗ್ವೇದಿಯ ಪ್ರಿಯವಾದ ಹವ್ಯಾಸ.ಬಾಲ್ಯದಲ್ಲಿ ತನ್ನ ನೆಚ್ಚಿನ ನಟ ರವಿಕಾಂತನ ಈ ಟೆಕ್ನಿಕ್ ಅನ್ನು ತೆರೆಯ ಮೇಲೆ ನೋಡುತ್ತಾ, ನೋಡುತ್ತಾ ಬೆಳೆಸಿಕೊಂಡ ಹವ್ಯಾಸ ಅದು. ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ರಪ್ಪಂತ ಮೇಲಕ್ಕೆಸೆಯುವುದು,ಅದು ಬಾಯೊಳಗೆ ಬಂದು ವಿರಾಜಮಾನವಾದಾಗ,ಲೈಟರ್ ಮೂಲಕ ಬೆಂಕಿ ಹಚ್ಚಿಕೊಳ್ಳುವುದನ್ನು ಚಂದನ್ ಋಗ್ವೇದಿ ಮಾಡಿದರೆ ಮನಮೋಹಕವಾಗಿ ಕಾಣುತ್ತಿತ್ತು. ಇವತ್ತು ಕೂಡ ಹಾಗೆ ಬಾಯಲ್ಲಿಟ್ಟುಕೊಂಡ ಸಿಗರೇಟಿನ ಹೊಗೆಯನ್ನು ಸುರುಳಿ ಸುರುಳಿಯಾಗಿ ಮೇಲಕ್ಕೆ ಬಿಟ್ಟಾಗ ಇದ್ದಕ್ಕಿದ್ದಂತೆ ಚೇಂಬರಿನ ಬೆಲ್ ಹೊಡೆದುಕೊಂಡಿತು.‘ಯಸ್ ಕಮ್ ಇನ್’ ಎಂದ ಚಂದನ್ ಬಂದವರು ಯಾರು ಎಂದು ನೋಡಿದ. ಹೀಗೆ ಅವನು ನೋಡುತ್ತಿದ್ದಂತೆಯೇ ಬಾಗಿಲು ತೆರೆದು ಅವನ ಆಪ್ತ ಕಾರ್ಯದರ್ಶಿ ನೀಲಂ ಒಳಗೆ ಬಂದಳು. ಅವಳನ್ನು ನೋಡುತ್ತಲೇ:‘ಹಲೋ ನೀಲಂ. ಏನು ವಿಷಯ?’ಎಂದು ಕೇಳಿದ. ಸಹಜ ಸ್ಥಿತಿಯಲ್ಲಿದ್ದಾಗ ನೀಲಂ ನಗು ತುಳುಕಿಸಿ ವಿಷಯಕ್ಕೆ ಬರುತ್ತಿದ್ದಳು. ಆದರೆ ಇವತ್ತು ಆಕೆಯ ಮುಖದಲ್ಲಿ ನಗುವಿರಲಿಲ್ಲ. ಬದಲಿಗೆ,‘ಸಾರ್,ಒಂದು ಸೀರಿಯಸ್ ವಿಷಯ ಎಂದಳು.

ಸೀರಿಯಸ್ ವಿಷಯ ಏನದು?ಎಂದ.ಆದರೆ ಹೀಗೆ ಕೇಳುವಾಗ ಆತನ ಮುಖದಲ್ಲಿ ಧಾವಂತದ ಲವಲೇಶವೂ ಕಾಣಲಿಲ್ಲ. ಯಾಕೆಂದರೆ ಕಳೆದ ಎರಡು ದಶಕಗಳ ಬದುಕಿನಲ್ಲಿ ಆತ ನಿರಂತರವಾಗಿ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾನೆ. ಅವನೇ ಹೇಳುವಂತೆ ಇಂತಹ ಸವಾಲುಗಳು ಹಲವು ಬಾರಿ ಆತನ ಪ್ರಾಣಕ್ಕೇ ಸಂಚಕಾರ ತಂದಿದ್ದಿದೆ.

ಹೀಗೆ ಪದೇ ಪದೇ ಸಾವಿನ ಮನೆಯ ಬಾಗಿಲು ತಟ್ಟಿ ಬಂದಿದ್ದ ಅನುಭವದಿಂದ ಜಡ್ಡುಗಟ್ಟಿ ಹೋಗಿದ್ದ ಅವನ ಮನಸ್ಸು ಈಗ ಸೀರಿಯಸ್ ವಿಷಯಗಳಿಗೆಲ್ಲ ಚಿಂತಿಸುವುದಿಲ್ಲ. ವಿಷಯ ಸೀರಿಯಸ್ ಆಗಿದೆ ಎಂದರೆ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು, ಆ ಸೀರಿಯಸ್ ವಿಷಯಕ್ಕೇ ಸಡ್ಡು ಹೊಡೆಯಬೇಕು ಎಂಬುದು ಚಂದನ್ ಋಗ್ವೇದಿಯ ಜೀವನ ಸಿದ್ಧಾಂತ.

ಬದುಕಿನಲ್ಲಿ ಯಾವ ಕೆಲಸ ಮಾಡಲು ಹೋದರೂ ರಿಸ್ಕ್ ಇರುತ್ತದೆ. ಎರಡು ದಶಕಗಳ ಹಿಂದೆ ತಾನು ಜುಂಜುಂ ಡಿಸ್ಟಿಲರಿ ಮಾಡಲು ಹೊರಟಾಗ ನಕ್ಕವರಿದ್ದರು.‘ಅಯ್ಯೋ,ಈಗ ಡಿಸ್ಟಿಲರಿಯಲ್ಲಿ ತಯಾರಾಗುವ ಮದ್ಯವನ್ನೆಲ್ಲ ಸರ್ಕಾರ ರೂಪಿಸಿರುವ ಪಾನೀಯ ನಿಗಮಕ್ಕೆ ಕೊಡಬೇಕು. ಪಾನೀಯ ನಿಗಮ ಕೊಡುವ ದುಡ್ಡನ್ನು ಪಡೆದುಕೊಂಡು ಸುಮ್ಮನಿರಬೇಕು. ಎಸ್.ಎಂ.ಮಾಧವ್ ಮುಖ್ಯಮಂತ್ರಿಯಾಗುವವರೆಗೆ ಪರಿಸ್ಥಿತಿ ಹೀಗಿರಲಿಲ್ಲ. ಡಿಸ್ಟಿಲರಿಯಲ್ಲಿ ಉತ್ಪಾದನೆಯಾಗುತ್ತಿದ್ದ ಮದ್ಯದಲ್ಲಿ ಒಂದು ಭಾಗಕ್ಕೆ ತೆರಿಗೆ ಕಟ್ಟಿ, ಉಳಿದ ಮದ್ಯವನ್ನು ಸೆಕೆಂಡ್ಸ್, ಥರ್ಡ್ಸ್ ರೂಪದಲ್ಲಿ ಹೊರಗೆ ಮಾರಾಟ ಮಾಡಬಹುದಿತ್ತು.ಅದರಿಂದ ಬಂಪರ್ ಆದಾಯವೂ ಬರುತ್ತಿತ್ತು.ಆದರೆ ಈಗ ಉತ್ಪಾದಿಸಿದ ಮದ್ಯವನ್ನೆಲ್ಲ ಪಾನೀಯ ನಿಗಮಕ್ಕೆ ಸರಬರಾಜು ಮಾಡಿದರೆ, ನಿಗದಿತ ಮೊತ್ತ ಕೈಗೆ ಬರುತ್ತದೆ. ಹೀಗಾಗಿ ಡಿಸ್ಟಿಲರಿಯನ್ನು ಸ್ಥಾಪಿಸಿ ಲಾಭ ಮಾಡಿಕೊಳ್ಳಬಹುದೇನೋ ನಿಜ. ಆದರೆ ದುಡ್ಡು ನದಿಯಂತೆ ಹರಿದು ಬರುವುದಿಲ್ಲ ಎಂಬುದು ಹಲವರ ಮಾತಾಗಿತ್ತು. ಆದರೆ ಚಂದನ್ ಋಗ್ವೇದಿ ಅಳುಕಲಿಲ್ಲ.ಯಾವುದಕ್ಕೂ ಅಳುಕದ ಆತನ ಧೈರ್ಯವೇ ಆತನ ದಾರಿಯನ್ನು ಸಾಫ್ ಮಾಡುತ್ತಾ ನೋಡು, ನೋಡುತ್ತಿದ್ದಂತೆಯೇ ಆತ ದೈತ್ಯನಂತೆ ಬೆಳೆದ. ಡಿಸ್ಟಿಲರಿಯೊಂದೇ ಅಲ್ಲದೆ ಷೇರು ಮಾರುಕಟ್ಟೆಯಿಂದ ಹಿಡಿದು, ಹಲವು ಮೂಲಗಳಲ್ಲಿ ಹಣ ತೊಡಗಿಸಿದ. ದುಡ್ಡು ಸಣ್ಣ ನದಿಯಂತೆ ಹರಿದು ಬರಲಿಲ್ಲ. ಬದಲಿಗೆ ಗಂಗಾ ನದಿಯಂತೆ ಹರಿದು ಬಂತು.

ಹೀಗೆ ಹರಿದು ಬಂದ ದುಡ್ಡಿನಲ್ಲಿ ಒಂದು ಪಾಲನ್ನು ಸಮಾಜ ಸೇವೆಗೆ ಅಂತ ತೆಗೆದಿಡತೊಡಗಿದ ಚಂದನ್ ಋಗ್ವೇದಿ, ಗ್ಲಾಮರ್ ಲೋಕಕ್ಕೂ ಕಾಲಿಟ್ಟ. ಹೀಗೆ ಆತನ ಸಾಮ್ರಾಜ್ಯ ಯಾವ ಪರಿ ವಿಸ್ತರಿಸತೊಡಗಿತು ಎಂದರೆ ಅವನ ಯಶಸ್ಸನ್ನು ಕಂಡು ದೊಡ್ಡ ದೊಡ್ಡ ಉದ್ಯಮಿಗಳೇ ಕರುಬತೊಡಗಿದರು. ರಾಜ್ಯದ ಘಟಾನುಘಟಿ ನಾಯಕರು ಅವನ ಆಪ್ತ ವಲಯಕ್ಕೆ ಬಂದರು.

ಹೀಗಿರುವಾಗ ನೀಲಂ ಬಂದು ಹೇಳಿದ ಸೀರಿಯಸ್ ಎಂಬ ಪದದ ಬಗ್ಗೆ ಚಂದನ್ ಋಗ್ವೇದಿ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ:‘ಏನು ವಿಷಯ’ ಎಂದಷ್ಟೇ ಕೇಳಿದ. ತನ್ನ ಬಾಸ್ ಇಷ್ಟು ನಿರುಮ್ಮಳವಾಗಿರುವುದನ್ನು ಕಂಡ ನೀಲಂ ಮುಖದಲ್ಲಿ ಪುನಃ ವೈಯ್ಯಾರದ ಛಾಯೆ ಕಾಣಿಸಿಕೊಂಡಿತಾದರೂ, ಆ ಸೀರಿಯಸ್ ವಿಷಯದ ಬಗ್ಗೆ ಅವಳಲ್ಲೇ ಒಂದು ಅಳುಕು ಇದ್ದುದರಿಂದ ಆಕೆ ಸುಮ್ಮನೆ ಕೈಯಲ್ಲಿದ್ದ ಒಂದು ಪತ್ರವನ್ನು ಕೊಟ್ಟಳು.

ಆ ಪತ್ರ ಒಡೆದು ನೋಡಿದರೆ ಆದಾಯ ತೆರಿಗೆ ಇಲಾಖೆಯ ನೋಟಿಸ್ ಕುಳಿತಿತ್ತು. ಬಿಚ್ಚಿ ನೋಡಿದರೆ,‘ನಿಮ್ಮ ಸಂಸ್ಥೆಗಳ ಆದಾಯಕ್ಕೂ, ಚಲಾವಣೆಯಾಗುತ್ತಿರುವ ಹಣಕ್ಕೂ ವತ್ಯಾಸವಿದೆ. ಇದಕ್ಕೆ ಸೂಕ್ತ ಉತ್ತರವನ್ನು ಒಂದು ವಾರದಲ್ಲಿ ನೀಡಬೇಕು’ ಅಂತಿತ್ತು.‘ಓ,ಷಿಟ್,ಇದು ಐಟಿಯವರ ಮಾಮೂಲಿ ಪತ್ರ. ನಮ್ಮ ಆಡಿಟರ್ ಗೋವಿಂದರಾವ್ ಅವರಿಗೆ ಹೇಳಿ ಆದಾಯ ತೆರಿಗೆ ಇಲಾಖೆಗೆ ವಿವರ ಸಲ್ಲಿಸಲು ಹೇಳಿ’ಎಂದ ಚಂದನ್ ಋಗ್ವೇದಿ.

ಅವನ ಮಾತು ಕೇಳಿ ‘ಯಸ್ ಸಾರ್’ ಎಂದ ನೀಲಂ ಹೊರಗೆ ಹೋದ ಮೇಲೆ ಚಂದನ್ ಋಗ್ವೇದಿ ಮೌನವಾಗಿ ತನ್ನ ಚೇಂಬರಿನಲ್ಲಿದ್ದ ಆರಾಮ ಕುರ್ಚಿಯ ಮೇಲೆ ಕುಳಿತ. ಇನ್ನೇನು ಕೆಲವೇ ದಿನ. ತಾನು ಹೂಡಿದ ಬಂಡವಾಳ ಕ್ಲಿಕ್ ಆದರೆ ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಬಹುದು. ರಾಜಕೀಯಕ್ಕೂ ಬರಬಹುದು.ಇದಕ್ಕೇ ತಾನೇ ನಾನು ದೊಡ್ಡ ಮಟ್ಟದ ಬಂಡವಾಳವನ್ನು ಜೀವನ್ ಸಂದೇಶ್ ಪಕ್ಷಕ್ಕೆ ಪಾರ್ಟಿ ಫಂಡ್ ಆಗಿ ನೀಡಿದ್ದು?ಎಂದು ಯೋಚಿಸಿದ. ಹೀಗೆ ಯೋಚಿಸಿದವನು ಜೀವನ್ ಸಂದೇಶ್ ಪಕ್ಷದ ನಾಯಕ ಜಗಜಿತ್‌ಗೆ ಫೋನು ಮಾಡಿದ. ಆ ಕಡೆಯಿಂದ ಫೋನು ಎತ್ತಿದ ಜಗಜೀತ್ ವಿಶ್ವಾಸದ ಧಾಟಿಯಲ್ಲಿ: ‘ಹಲೋ ಮಿಸ್ಟರ್ ಚಂದನ್.ಯಾವಾಗ ನಿಮ್ಮ ಮಲೇಷ್ಯಾ, ಮಾರಿಷಸ್ ಬಿಸಿನೆಸ್ ಶುರುವಾಗಲಿದೆ? ನೀವು ಹೀಗೆ ಉದ್ಯಮ ಸಾಮ್ರಾಜ್ಯ ವಿಸ್ತರಿಸಿದ ಮೇಲೆ ನಾವು ಕಣ್ಣಿಗೆ ಕಾಣುತ್ತೇವೋ ಇಲ್ಲವೋ’ ಎಂದು ತಮಾಷೆ ಮಾಡಿದ. ‘ನೋ,ನೋ ಸಾರ್,ನನ್ನ ಬೆಳವಣಿಗೆಗೆ ನೀವು ಕಾರಣರು. ಹೀಗಾಗಿ ನಿಮ್ಮನ್ನು ಮರೆಯುವುದೇ? ನೋ ಚಾನ್ಸ್’ ಎಂದ. ಹೀಗೇ ತುಂಬ ಹೊತ್ತು ಜಗಜಿತ್ ಜತೆ ಮಾತನಾಡಿದ ಮೇಲೆ ಫೋನು ಕಟ್ ಮಾಡಿದ ಚಂದನ್ ಋಗ್ವೇದಿ, ಅವತ್ತು ಸಂಜೆ ರಾಜಧಾನಿ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ನಟಿ ಜ್ವಾಲಾಮಾಲಿನಿ ಏರ್ಪಡಿಸಿದ್ದ ಪಾರ್ಟಿಗೆ ಹೊರಟ.

ಇದಾಗಿ ಒಂದು ವಾರ ಕಳೆದಿರಬೇಕು. ಆವತ್ತು ಬೆಳಿಗ್ಗೆ ಏಳುವ ಹೊತ್ತಿಗೆ ನೀಲಂಳಿಂದ ಆತಂಕದ ಮೆಸೇಜು ಸ್ವೀಕರಿಸಿದ.‘ಸಾರ್,ಐಟಿಯ ಆರು ಮಂದಿ ಅಧಿಕಾರಿಗಳು ನಮ್ಮ ಆಫೀಸ್ ಹೈ ಹೆವೆನ್‌ಗೆ ಬಂದಿದ್ದಾರೆ. ಬಂದವರೇ ಪರಿಶೀಲನೆಗೆ ಸಹಕಾರ ಕೊಡಿ ಎಂದು ಖಡಕ್ಕಾಗಿ ಹೇಳಿ ಆಫೀಸಿನ ಮೂಲೆ ಮೂಲೆಗಳಲ್ಲಿ ಹರಡಿಕೊಂಡಿದ್ದಾರೆ’ ಎಂದಳು.

ಈಗ ಚಂದನ್ ಋಗ್ವೇದಿಗೆ ಅನುಮಾನ ಶುರುವಾಯಿತು. ಐಟಿಯವರು ಬಂದು ಹುಡುಕುವುದಕ್ಕೆ ಏನಿದೆ?ನಾನು ಮಾಡುವ ಡಿಸ್ಟಿಲರಿ ಬಿಸಿನೆಸ್ಸಿನಿಂದ ಹಿಡಿದು ಎಲ್ಲ ಬಿಸಿನೆಸ್ಸುಗಳ ಪಕ್ಕಾ ಡಿಟೈಲ್ಸ್ ಇಟ್ಟಿದ್ದೇನೆ. ನಮ್ಮ ಆಡಿಟರ್ ಕಾಲಕಾಲಕ್ಕೆ ಆದಾಯ ತೆರಿಗೆಗೆ ಸಂಬಂಧಿಸಿದ ಫೈಲನ್ನು ಕ್ಲಿಯರ್ ಮಾಡಿಬಿಡುತ್ತಾರೆ.ಆದರೂ ಯಾಕೆ ಹೀಗೆ ಐಟಿ ದಾಳಿ?ಎಂದು ಯೋಚಿಸಿದ. ಆದರೆ ಎಷ್ಟು ಯೋಚಿಸಿದರೂ ಬಗೆಹರಿಯದಿದ್ದಾಗ ಐಟಿಯವರು ಸೂಚನೆ ನೀಡಿದ್ದಾರೆ ಎಂಬ ಮಾತಿನ ಪ್ರಕಾರ ಹೈ ಹೆವೆನ್‌ಗೆ ಹೊರಟ. ಹೀಗೆ ಹೋದವನು ಕಚೇರಿಗೆ ಬಂದಾಗ ಆವರಿಸಿಕೊಂಡಿದ್ದ ಐಟಿ ಅಧಿಕಾರಿಗಳು ವಿಶ್ವಾಸದಿಂದಲೇ ಮಾತನಾಡಿಸಿದರು. ಕೊನೆಗೆ ತನ್ನನ್ನು ಕೂರಿಸಿಕೊಂಡು ಒಂದೊಂದೇ ಪ್ರಶ್ನೆಗಳನ್ನು ಕೇಳತೊಡಗಿದರು.

‘ಮಿಸ್ಟರ್ ಚಂದನ್ ಋಗ್ವೇದಿ ನಿಮ್ಮ ಬಿಸಿನೆಸ್‌ಗೆ ಸಂಬಂಧಿಸಿದ ಎಲ್ಲ ವಿವರಗಳೂ ಪಕ್ಕಾ. ನೋ ಡೌಟ್.ಆದರೆ ನಮಗೆ ಸಿಕ್ಕ ಮತ್ತೊಂದು ಮಾಹಿತಿಯ ಬಗ್ಗೆ ಸಣ್ಣ ಅನುಮಾನವಿದೆ. ಹೀಗಾಗಿ ಅದರ ಬಗ್ಗೆ ಕೇಳಲು ಬಂದಿದ್ದೇವೆ’ ಎಂದರು.‘ನೋ ಪ್ರಾಬ್ಲಂ ಹೇಳಿ ಸಾರ್’ ಎಂದ ಚಂದನ್‌ಗೆ ಈಗಲೂ ದೊಡ್ಡ ಮಟ್ಟದ ಆತಂಕವೇನಾಗಲಿಲ್ಲ.

ಆದರೆ ಐಟಿಯ ಹಿರಿಯ ಅಧಿಕಾರಿ ನವೀನ್ ಮಲ್ಹೋತ್ರಾ ಅವರು ತಮ್ಮ ಜೇಬಿನಿಂದ ಒಂದು ಚೀಟಿಯನ್ನು ಮುಂದಿಟ್ಟು:‘ಮಿಸ್ಟರ್ ಚಂದನ್ ಋಗ್ವೇದಿ. ನೆರೆ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ಜೀವನ್ ಸಂದೇಶ್ ಪಕ್ಷಕ್ಕೆ ನಿಮ್ಮ ಸಂಬಂಧಿ ಗಗನ್ ಅವರಿಂದ ಪಾರ್ಟಿ ಫಂಡ್ ರೂಪದಲ್ಲಿ ಮುನ್ನೂರು ಕೋಟಿ ರೂಪಾಯಿ ಹಣ ಟ್ರಾನ್ಸ್ ಫರ್ ಆಗಿದೆ. ನಿಮ್ಮ ಸಂಬಂಧಿ ಹಣ ಕಳಿಸಬಾರದು ಎಂದು ನಾವು ಹೇಳುವುದಿಲ್ಲ. ಆದರೆ ನಿಮ್ಮ ಸಂಸ್ಥೆಯಲ್ಲೇ ಕೆಲಸ ಮಾಡುವ ಒಬ್ಬ ಉದ್ಯೋಗಿಗೆ ಅಷ್ಟು ದೊಡ್ಡ ಪ್ರಮಾಣದ ಹಣ ಎಲ್ಲಿಂದ ಬಂತು?ಎಂಬುದೇ ನಮ್ಮ ಅನುಮಾನ.’

‘ಅಂದ ಹಾಗೆ ನಿಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯನ್ನು ನೆಚ್ಚಿಕೊಂಡು ಆ ಪ್ರಮಾಣದ ಹಣ ಕೊಡುವವರು ಯಾರು? ಮತ್ತು ಅಷ್ಟು ಹಣವನ್ನು ಪಾರ್ಟಿ ಫಂಡ್ ಅಂತ ಕೊಡುವುದರಲ್ಲಿ ನಿಮ್ಮ ಸಂಬಂಧಿ ಗಗನ್ ಅವರಿಗೆ ಯಾವ ಲಾಭವಿದೆ? ಎಂಬುದೇ ನಮ್ಮ ಅನುಮಾನ. ಹೀಗಾಗಿ ಇದಕ್ಕೆ ನೀವು ಉತ್ತರಿಸಿದರೆ ಸಾಕು’ಅಂತ ವಿವರಿಸಿದಾಗ ಚಂದನ್ ಋಗ್ವೇದಿಯ ಹಣೆಯಲ್ಲಿ ಚಳ್ಳಂತ ಬೆವರು ಹರಿಯತೊಡಗಿತು.

ಇಡೀ ವಹಿವಾಟು ರಹಸ್ಯವಾಗಿರಲಿ ಅಂತ ನಾನು ಗಗನ್ ಹೆಸರಿನಲ್ಲಿರುವ ಒಂದು ಟ್ರಸ್ಟ್ ಮೂಲಕ ಪಾರ್ಟಿ ಫಂಡ್ ಕಳಿಸಿದ್ದೆ. ಆದರೆ ಇವರು ಅದರ ಮೂಲವನ್ನೇ ಹಿಡಿದುಕೊಂಡು ಬಂದಿದ್ದಾರೆ ಎಂಬುದು ಅರಿವಾಗಿ ಗಾಬರಿಯಾಯಿತು. ಹೀಗಾಗಿ ನವೀನ್ ಮಲ್ಹೋತ್ರಾ ಅವರ ಪ್ರಶ್ನೆಗೆ ಉತ್ತರಿಸುತ್ತಾ:‘ಸಾರ್, ಈ ವಹಿವಾಟಿನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನಗೆ ಟೈಮು ಕೊಡಿ.ಅದರ ವಿವರ ಪಡೆದು ಇಲಾಖೆಯ ಗಮನಕ್ಕ ತರುತ್ತೇನೆ’ ಎಂದ. ಆದರೆ ನವೀನ್ ಮಲ್ಹೋತ್ಸಾ ಜಗ್ಗಲಿಲ್ಲ.‘ನೋ ಮಿಸ್ಟರ್ ಚಂದನ್ ಋಗ್ವೇದಿ. ಇದು ಒಂದು ಪತ್ರದಲ್ಲಿ ವಿವರಿಸುವ ಕೇಸ್ ಅಲ್ಲ. ನಮಗಿರುವ ಖಚಿತ ಮಾಹಿತಿಯ ಪ್ರಕಾರ,ಈ ರಾಜ್ಯದ ಪವರ್ ಪುಲ್ ರಾಜಕಾರಣಿ ಜಗಜಿತ್ ಸೇರಿದಂತೆ ಕೆಲವರ ದುಡ್ಡು ನಿಮಗೆ ತಲುಪಿ, ಆ ಮೂಲಕ ನೆರೆ ರಾಜ್ಯದ ಚುನಾವಣೆಗೆ ರವಾನೆಯಾಗಿದೆ’ ಎಂದರು.

ಅವರ ಧ್ವನಿಯಲ್ಲಿದ್ದ ಬಿಗುವನ್ನು ಗಮನಿಸಿದ ಚಂದನ್ ಋಗ್ವೇದಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಈಗ ಅವರ ಪ್ರಶ್ನೆಗೆ ಉತ್ತರಿಸಬೇಕೆಂದರೆ ತಮ್ಮನ್ನು ಬಳಸಿಕೊಂಡು ಹಣ ರವಾನೆ ಮಾಡಿದ ರಾಜಕಾರಣಿಗಳ ಬಗ್ಗೆ ವಿವರ ನೀಡಬೇಕು. ಹಾಗೇನಾದರೂ ವಿವರ ನೀಡಿದರೆ ತಾನು ನೆಮ್ಮದಿ ಕಳೆದುಕೊಳ್ಳುವುದಷ್ಟೇ ಅಲ್ಲ, ತನ್ನ ಉದ್ಯಮ ಸಾಮ್ರಾಜ್ಯವೂ ನಾಶವಾಗಿ ಹೋಗುತ್ತದೆ ಅನ್ನಿಸಿತು.ಹೀಗಾಗಿಯೇ ಮುಖದಲ್ಲಿ ಅಳುಕು ತೋರಿಸಿಕೊಳ್ಳದೆ:‘ಸಾರ್,ಐದೇ ನಿಮಿಷ ಟೈಮು ಕೊಡಿ.ನಾನು ಇಲ್ಲಿಂದ ಹೊರಹೋಗುವುದಿಲ್ಲ.ಬದಲಿಗೆ ನನ್ನ ಚೇಂಬರಿಗೆ ಹೋಗಿ ಕೆಲ ದಾಖಲೆಗಳನ್ನು ತೆಗೆದುಕೊಂಡು ಬರುತ್ತೇನೆ.ನಿಮಗೆ ಉತ್ತರ ಸಿಗುತ್ತದೆ’ ಎಂದ. ಅವನ ಧ್ವನಿಯಲ್ಲಿದ್ದ ಶಾಂತತೆಯನ್ನು ಕಂಡು ನವೀನ್ ಮಲ್ಹೋತ್ರಾ ಅವರು ‘ಯಸ್’ ಎಂದರು.ಅವರು ಹಾಗೆ ಹೇಳಿದ್ದೇ ತಡ, ಹಾಲ್‌ನ ಪಕ್ಕದಲ್ಲೇ ಇದ್ದ ತನ್ನ ಚೇಂಬರಿಗೆ ಹೋದ ಚಂದನ್ ಋಗ್ವೇದಿ ತನ್ನ ಟೇಬಲ್ಲಿನ ಡ್ರಾಯರಿನಲ್ಲಿದ್ದ ಪಿಸ್ತೂಲನ್ನು ಕೈಗೆ ತೆಗೆದುಕೊಂಡ.ಅದರ ನಳಿಕೆಯನ್ನು ತಲೆಯ ಬಲಭಾಗಕ್ಕೆ ತಗಲಿಸಿ:‘ಈಗ ನಾನು ಬದುಕಲು ಬಯಸಿದರೆ ಏನಾಗಬಹುದು? ಎಂದುಕೊಂಡ.ಆದರೆ ಒಂದು ಕಡೆ ಜೈಲು,ಮತ್ತೊಂದು ಕಡೆ ಸಮಾಜದಲ್ಲಿ ತಾನು ಬೆಳೆಸಿಕೊಂಡ ವರ್ಚಸ್ಸು ಕುಸಿಯುತ್ತಿರುವ ಚಿತ್ರ ಕಾಣಿಸತೊಡಗಿತು.

ಹಾಗಾಗಿದ್ದೇ ತಡ,ಚಂದನ್ ಋಗ್ವೇದಿ ಮರು ಯೋಚನೆ ಮಾಡದೆ ಪಿಸ್ತೂಲಿನ ಟ್ರಿಗರ್ ಅನ್ನು ಎಳೆದ.ಸಿಡಿದ ಬುಲೆಟ್ ತಲೆಯೊಳಗೆ ನುಗ್ಗುತ್ತಿದ್ದಂತೆಯೇ ಸುತ್ತಲ ದೃಶ್ಯ ಮಸುಕಾಗತೊಡಗಿತು.

” ‘ನೆರೆ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ಜೀವನ್ ಸಂದೇಶ್ ಪಕ್ಷಕ್ಕೆ ನಿಮ್ಮ ಸಂಬಂಧಿ ಗಗನ್ ಅವರಿಂದ ಪಾರ್ಟಿ ಫಂಡ್ ರೂಪದಲ್ಲಿ ಮುನ್ನೂರು ಕೋಟಿ ರೂಪಾಯಿ ಹಣ ಟ್ರಾನ್ಸ್ ಫರ್ ಆಗಿದೆ. ನಿಮ್ಮ ಸಂಬಂಧಿ ಹಣ ಕಳಿಸಬಾರದು ಎಂದು ನಾವು ಹೇಳುವುದಿಲ್ಲ.  ಆದರೆ ನಿಮ್ಮ ಸಂಸ್ಥೆಯಲ್ಲೇ ಕೆಲಸ ಮಾಡುವ ಒಬ್ಬ ಉದ್ಯೋಗಿಗೆ ಅಷ್ಟು ದೊಡ್ಡ ಪ್ರಮಾಣದ ಹಣ ಎಲ್ಲಿಂದ ಬಂತು?ಎಂಬುದೇ ನಮ್ಮ ಅನುಮಾನ.’ ‘ಅಂದ ಹಾಗೆ ನಿಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯನ್ನು ನೆಚ್ಚಿಕೊಂಡು ಆ ಪ್ರಮಾಣದ ಹಣ ಕೊಡುವವರು ಯಾರು? ಮತ್ತು ಅಷ್ಟು ಹಣವನ್ನು ಪಾರ್ಟಿ ಫಂಡ್ ಅಂತ ಕೊಡುವುದರಲ್ಲಿ ನಿಮ್ಮ ಸಂಬಂಧಿ ಗಗನ್ ಅವರಿಗೆ ಯಾವ ಲಾಭವಿದೆ? ಎಂಬುದೇ ನಮ್ಮ ಅನುಮಾನ. ಹೀಗಾಗಿ ಇದಕ್ಕೆ ನೀವು ಉತ್ತರಿಸಿದರೆ ಸಾಕು’ಅಂತ ವಿವರಿಸಿದಾಗ ಚಂದನ್ ಋಗ್ವೇದಿಯ ಹಣೆಯಲ್ಲಿ ಚಳ್ಳಂತ ಬೆವರು ಹರಿಯತೊಡಗಿತು.”

 

 

Tags:
error: Content is protected !!