Mysore
23
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಉದ್ಯೋಗಗಳಿಗೆ ನಮ್ಮ ಪದವೀಧರರೆಷ್ಟು ಅರ್ಹರು?

ಪ್ರೊ.ಆರ್.ಎಂ.ಚಿಂತಾಮಣಿ

ಒಳ್ಳೆಯ ಕೆಲಸ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ತಂದೆ ತಾಯಿಯಂದಿರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಯಾವುದಾದರೂಂದು ಪದವಿಯವರೆಗೆ ಓದಿಸುತ್ತಾರೆ. ಕಾಲೇಜುಗಳಲ್ಲಿ ಪಠ್ಯಕ್ರಮಗಳೊಡನೆ ವೃತ್ತಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಮಾನವ ಸಹಜ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ವಿಶೇಷ ಉಪನ್ಯಾಸಗಳು, ಚರ್ಚೆಗಳು, ಫ್ಯಾಕ್ಟರಿ ಮತ್ತು ಮಾರುಕಟ್ಟೆಗಳಿಗೆ ಭೇಟಿಗಳು ಮತ್ತು ಚರ್ಚೆಗಳು, ಅಲ್ಲಿರುವ ತಜ್ಞರಿಂದ ಪ್ರಾತ್ಯಕ್ಷಿಕೆಗಳು ಮತ್ತು ಪ್ರತ್ಯಕ್ಷ
ಕೆಲಸದ ಅನುಭವ ಮುಂತಾದವುಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಅವರು ಕಲಿಯುತ್ತಾರೆ ಎನ್ನುವ ನಂಬಿಕೆಯಿಂದ ಇಷ್ಟೆಲ್ಲ ಮಾಡಲಾಗುತ್ತದೆ.

ಸಾಮಾನ್ಯವಾಗಿ Soft Skills ಎಂದು ಕರೆಯಲಾಗುವ ಇವುಗಳಲ್ಲಿ 1.ಸಂವಹನ ಕೌಶಲ ( Communication Skill), 2.ನಾಯಕತ್ವದ ಕೌಶಲ (Leadership Skill), 3.ಸೃಜನಶೀಲತೆ ಅಥವಾ ಹೊಸದನ್ನು ಸೃಷ್ಟಿಸುವ ಕೌಶಲ( Creativty Skill), 4. ಕಲಿಯುವ ಸಾಮರ್ಥ್ಯ(Learning Ability), 5. ಸಮಸ್ಯೆಗೆ ಉತ್ತರ ಹುಡುಕುವ ಸಾಮರ್ಥ್ಯ ಮತ್ತು ವಿಶ್ಲೇಷಿಸುವ ಕೌಶಲ( Problem solving ability and Analytical Skill) ಮತ್ತು 6.ಚಿಕಿತ್ಸಕ ಚಿಂತನೆ ಪ್ರಮುಖವಾದವುಗಳೆಂದು ಹೇಳಲಾಗುತ್ತದೆ.

ನಮ್ಮ ವಿದ್ಯಾರ್ಥಿಗಳು ಇವುಗಳನ್ನು ಪಡೆದುಕೊಂಡು ಸಮರ್ಥರಾಗಿದ್ದರೆ ಯಾವುದೇ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಅವರಿಗೆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗಿ( Employabilty) ಇರುತ್ತವೆ. ಆಸಕ್ತಿಯಿಂದ ಕೇಳುವುದು, ಕೇಳಿದ್ದನ್ನು ವಿಶ್ಲೇಷಿಸುವುದು, ಚರ್ಚಿಸುವುದು, ಅದೇ ರೀತಿ ತದೇಕಚಿತ್ತದಿಂದ ಗಮನಿಸುವುದು ಅದನ್ನು ತನ್ನದೇ ರೀತಿಯಲ್ಲಿ ಅರ್ಥೈಸುವುದು ಮತ್ತು ಚಿಕಿತ್ಸಕ ಬುದ್ಧಿಯಿಂದ ಅದರಲ್ಲಿಯ ಸಾಧ್ಯತೆಗಳನ್ನು ಕಂಡುಕೊಳ್ಳುವುದು ಮುಂತಾದವುಗಳಿಂದ ಕೌಶಲಗಳು ವೃದ್ಧಿಯಾಗುತ್ತವೆ.

ಹೊಸ ವಾತಾವರಣಕ್ಕೆ ಯುವ ಪೀಳಿಗೆ ಹೊಂದಿಕೊಳ್ಳಬೇಕು: ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್‌ಗಳಂತಹ ಕ್ರಾಂತಿಕಾರಿ ಬೆಳವಣಿಗೆಗಳನ್ನು ಕಾಣುತ್ತಿರುವ ಈ ಸಮಯದಲ್ಲಿ ನಮ್ಮ ಪದವೀಧರರು ತಮ್ಮ ಕೌಶಲ ವ್ಯವಸ್ಥೆಯನ್ನು ಹೊಸ ಪರಿಸ್ಥಿತಿಗೆ ಹೊಂದಿಸಿಕೊಳ್ಳಬೇಕು. ಇಲ್ಲದಿದ್ದರೆ ಉದ್ಯೋಗ ಪೇಟೆಯಲ್ಲಿ ಅವರಿಗೆ ಬೇಡಿಕೆ ಇರುವುದಿಲ್ಲ. ಸರ್ಕಾರದ ಪದವೀಧರರ ಕೆಲಸಕ್ಕೆ ಸೇರುವ ಸಾಧ್ಯತೆ ಸೂಚ್ಯಂಕ ( Index) ಪ್ರಕಾರ ಎಲ್ಲ ಪದವೀಧರರ ಉದ್ಯೋಗ ಪಡೆಯುವಿಕೆ ಸೂಚ್ಯಂಕವು 2023 ರಲ್ಲಿ ಶೇ.44.3 ಇದ್ದದ್ದು 2024 ರಲ್ಲಿ ಶೇ.42.6ಕ್ಕೆ ಇಳಿದಿದೆ. ಅದರಲ್ಲಿಯೂ ತಾಂತ್ರಿಕ ಪದವೀಧರರ ಸ್ಥಿತಿ ಉತ್ತಮವಾಗಿದ್ದು, ಇದೇ ಅವಧಿಯಲ್ಲಿ ಈ ಸೂಚ್ಯಂಕವು ಶೇ.41.3 ರಿಂದ ಶೇ.42.0ಗೆ ಏರಿದೆ. ಆದರೆ ಇತರೆ ಪದವೀಧರರ ಈ ಸೂಚ್ಯಂಕ ಶೇ.48.3ರಿಂದ ಶೇ.43.5ಕ್ಕೆ ಕುಸಿದಿದೆ. ಇದು ನಮ್ಮ ಸರ್ಕಾರ ಮತ್ತು ಶಿಕ್ಷಣ ತಜ್ಞರು ಚಿಂತಿಸಲೇಬೇಕಾದ ವಿಚಾರ. ಪೋಷಕರೂ ವಿಶೇಷ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ. ಪದವೀಧರರು ತಮ್ಮ ಸಾಮರ್ಥ್ಯಗಳಲ್ಲಿಯ ಕೊರತೆಗಳನ್ನು ಗುರುತಿಸಿಕೊಂಡು ಸರಿಪಡಿಸಿ ಕೊಳ್ಳಬೇಕಾದ ಅವಶ್ಯಕತೆಯೂ ಇದೆ.

ಇನ್ನು ನಮ್ಮ ದೇಶದಲ್ಲಿಯ ನಿರುದ್ಯೋಗ ಸಮಸ್ಯೆಗೆ ಬಂದರೆ ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರ ಯುವ ಪೀಳಿಗೆಯಲ್ಲಿಯೇ ( 15 ವರ್ಷದಿಂದ 29ವರ್ಷದ ಒಳಗಿನವರು) ನಿರುದ್ಯೋಗ ಹೆಚ್ಚು. ಒಟ್ಟಾರೆ ದುಡಿಯುವ
ವಯಸ್ಸಿನವರನ್ನು ತೆಗೆದುಕೊಂಡರೆ (15 ವರ್ಷದಿಂದ 65 ವರ್ಷ) ಇದು ತೀರಾ ಕಡಿಮೆ. ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರ 2017-18ರಿಂದ ಎರಡೂ ಗುಂಪಿನಲ್ಲಿಯೂ ನಿರುದ್ಯೋಗ ಪ್ರಮಾಣ ಇಳಿಯುತ್ತಾ ಬಂದಿದೆ. ಅಂದು ಯುವ ಪೀಳಿಗೆಯಲ್ಲಿ ನಿರುದ್ಯೋಗ ಪ್ರಮಾಣ ಶೇ.17.8 ಇದ್ದದ್ದು 2023-24ರಲ್ಲಿ ಶೇ.10.2ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ದುಡಿಯುವ ವಯಸ್ಸಿನ ಎಲ್ಲರ ನಿರುದ್ಯೋಗ ಪ್ರಮಾಣ ಶೇ.6.0ಯಿಂದ ಶೇ.3.2ಕ್ಕೆ ಇಳಿದಿದೆ. ಇದು ಸ್ವಾಗತಾರ್ಹ ಎಂದರೂ ವಿವರಣೆ ಬೇಕು.

ಯುವಕ ಯುವತಿಯರಲ್ಲಿ ಬಹುತೇಕರು ಉದ್ಯೋಗವನ್ನು ಅರಸುತ್ತಿರುತ್ತಾರೆ. ಆದರೆ 29 ವರ್ಷ ವಯಸ್ಸಿನ ಮೇಲ್ಪಟ್ಟವರು ಪೂರ್ಣ ಪ್ರಮಾಣದಲ್ಲಿ ನಿರುದ್ಯೋಗಿಗಳಾಗಿರುವುದು ಕಡಿಮೆ. ಸಾಮಾನ್ಯವಾಗಿ ಪದವಿ ಪಡೆದ ನಂತರ 3-4 ವರ್ಷಗಳು ಕೆಲಸಕ್ಕಾಗಿ ಅಲೆಯುತ್ತಾರೆ. ನಂತರ ಯಾವುದೋ ಒಂದು ಕೆಲಸವನ್ನು ಬಂದಷ್ಟು ಆದಾಯಕ್ಕೆ ಮಾಡುತ್ತಿರುತ್ತಾರೆ. ಅವರಲ್ಲಿ ಕೆಲವರು ಹೆಚ್ಚಿನ ಆದಾಯದ ಕೆಲಸವನ್ನು ಹುಡುಕುತ್ತಿರಲೂಬಹುದು. ಆದರೆ ಅವರು ಪೂರ್ಣಪ್ರಮಾಣದ ನಿರುದ್ಯೋಗಿ ಎಂದು ಹೇಳಲಿಕ್ಕಾಗದು. ಆದ್ದರಿಂದ 29 ವರ್ಷದ ಒಳಗಿನ ನಿರುದ್ಯೋಗಿಗಳ ಗುಂಪಿನಲ್ಲಿ ಇವರನ್ನು ಸೇರಿಸುವುದು ಅಷ್ಟೊಂದು ಸಮಂಜಸವಲ್ಲ.

ಕೌಶಲಗಳಲ್ಲಿ ನಮ್ಮ ಪದವೀಧರರು: ಈಗ ಒಂದೊಂದೇ ಕೌಶಲದ ವಿಷಯದಲ್ಲಿ ನಮ್ಮ ಪದವೀಧರರ ಉದ್ಯೋಗ (ನೌಕರಿ) ಪಡೆಯುವ ಅರ್ಹತೆಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿದುಕೊಳ್ಳುವುದು ಅವಶ್ಯ. ನಮ್ಮ ಯುವ ಪೀಳಿಗೆ ತಮ್ಮಲ್ಲಿರುವ ವಿವಿಧ ಕೌಶಲಗಳನ್ನು ಗುರುತಿಸಿಕೊಂಡು ಅವುಗಳನ್ನು ಕಾಲಕ್ಕೆ ತಕ್ಕಂತೆ ವೃದ್ಧಿಗೊಳಿಸಿಕೊಳ್ಳುವುದು ಒಳ್ಳೆಯದು. ಸಮೀಕ್ಷೆಯೊಂದರ ಪ್ರಕಾರ ವಿವಿಧ ಕೌಶಲಗಳಲ್ಲಿ ನಮ್ಮ ಪದವೀಧರ ನೌಕರಿಗೆ ಅರ್ಹತೆಯ (Employality) ಪ್ರಮಾಣವನ್ನು ಇಲ್ಲಿನ ಸಂಖ್ಯಾ ಪಟ್ಟಿಯಲ್ಲಿ ಕೊಡಲಾಗಿದೆ.

ಈ ಅಂಕಿ ಸಂಖ್ಯೆಗಳ ಪ್ರಕಾರ ನಮ್ಮ ಪದವೀಧರರು ಸಂವಹನ ಕಲೆಯಲ್ಲಿ ಸ್ವಲ್ಪ ಮುಂದಿದ್ದಾರೆ. ಆದರೆ ಸೃಜನಶೀಲತೆಯಲ್ಲಿ ಹಿಂದಿದ್ದಾರೆ. ಕಲಿಕೆಯೆಂದರೆ ಕೇವಲ ಪಠ್ಯಪುಸ್ತಕಗಳಲ್ಲೇ ಮುಳುಗಿದ್ದು, ಹೆಚ್ಚು ಅಂಕಗಳನ್ನುಪಡೆಯುವುದಷ್ಟೇ ಅಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಬದುಕಿನ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಿಸಿದಾಗ ಅಲ್ಲಿ ಪ್ರತಿ ನಿಮಿಷವೂ ಪರೀಕ್ಷೆಗಳನ್ನು ಎದುರಿಸಲು ಸಾಮಾನ್ಯ ಜ್ಞಾನ ಅಥವಾ ಕೌಶಲಗಳು ಅತ್ಯವಶ್ಯ. ತಮ್ಮಲ್ಲಿಯೇ ಇರುವ ಕೌಶಲಗಳನ್ನು ಜಾಗೃತಗೊಳಿಸಿ ಬೆಳೆಸಿಕೊಳ್ಳಬೇಕು. ಇತರರ ನಡೆನುಡಿಗಳನ್ನು ಗಮನಿಸಿ ಕಲಿಯುವುದು ಸಾಕಷ್ಟಿದೆ. ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ತಮಗೆ ಮಾದರಿ ಎನಿಸಿ ದವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಇಲ್ಲಿ ಚರ್ಚೆ, ಓದು, ತನ್ನ ಸುತ್ತಲೂ ನಡೆಯುತ್ತಿರುವುದನ್ನು ಗಮನಿಸಿ ಸೂಕ್ತವಾದ ತನ್ನದೇ ನಿರ್ಧಾರ ಮಾಡುವುದು ಮುಖ್ಯವಾಗುತ್ತದೆ.

 

Tags:
error: Content is protected !!