• ನಾ.ದಿವಾಕರ
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೂಲ ಆಧಾರವೇ ದುಡಿಮೆ. ದುಡಿಮೆಯು ನೆಲೆಗಳು ಕಾಯಕವನ್ನು ದೈಹಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಎಂದು ವಿಂಗಡಿಸುವ ಮೂಲಕ ಭಾರತದ ಶ್ರೇಣಿ ವ್ಯವಸ್ಥೆ ಸಮಾಜವನ್ನು ಮೇಲು-ಕೀಳುಗಳ ಸ್ತರಗಳಲ್ಲಿ ಸ್ಥಾಪಿಸಿದೆ. ನಾಗರಿಕತೆಯು ಮುಂದುವರಿದಂತೆಲ್ಲಾ ಪ್ರಾಚೀನ ನಡವಳಿಕೆಗಳನ್ನು, ಆಚರಣೆಗಳನ್ನು ವರ್ಜಿಸಿ ಮುನ್ನಡೆವ ಯಾವುದೇ ಸಮಾಜದಲ್ಲಿ ಇಂತಹ ವ್ಯತ್ಯಯಗಳನ್ನು ಸುಧಾರಣೆಗೊಳಪಡಿಸುತ್ತಾ, ಹಿಂಬದಿಗೆ ಸರಿಸುತ್ತಾ ಒಂದು ಹಂತವನ್ನು ತಲುಪಿದ ಮೇಲೆ ಸಂಪೂರ್ಣವಾಗಿ ವರ್ಜಿಸುವ ಹಂತವನ್ನು ತಲುಪುತ್ತದೆ. ಇದು ವಿಶ್ವದಾದ್ಯಂತ ಎಲ್ಲ ನಾಗರಿಕತೆಗಳಲ್ಲೂ ಕಾಣಬಹುದಾದ ಸಮಾನ ಅಂಶ.
ಸಮಾಜದೊಳಗಿನ ಪ್ರಾಚೀನ ಆಚರಣೆಗಳು, ಚರಿತ್ರೆಯ ಪಳೆಯುಳಿಕೆಗಳಂತೆ ಕಾಣಬೇಕೇ ಹೊರತು, ಢಾಳಾಗಿ ಕಾಣುವಂತಹ ಜ್ವಲಂತ ನಿದರ್ಶನಗಳಾಗಿ ಕಾಣಬಾರದು. 21ನೆಯ ಶತಮಾನದ ಮಾನವ ಸಮಾಜ ಈ ಎಚ್ಚರಿಕೆ ಯೊಂದಿಗೆ ತನ್ನ ಜನಜೀವನದಮಾದರಿಗಳನ್ನು ಪುನಾರೂಪಿಸಿಕೊಳ್ಳುತ್ತಾ, ಸಮಾಜದ ಆಂತರ್ಯದಲ್ಲಿ ಉಳಿದಿರಬಹುದಾದ ಪ್ರಾಚೀನತೆಯ ಪಳೆಯುಳಿಕೆಗಳನ್ನೂ ಕಿತ್ತು ಹಾಕುವ ನಿಟ್ಟಿನಲ್ಲಿ ಸಾಗುವುದನ್ನು ಕಾಲದ ಅನಿವಾರ್ಯತೆ ಎನ್ನಬಹುದು.
ಆದರೆ ಆಧುನಿಕ ಭಾರತೀಯ ಸಮಾಜ, ವಿಜ್ಞಾನ-ತಂತ್ರಜ್ಞಾನದ ಕ್ರಾಂತಿಕಾರಕ ಹೆಜ್ಜೆಗಳನ್ನೂರುತ್ತಾ ಬಾಹ್ಯಾಕಾಶವನ್ನೇ ಭೇದಿಸಿ ಅನ್ಯ ಗ್ರಹಗಳ ಮೇಲೆ ನೆಲೆ ಕಾಣಲು ಸಜ್ಜಾಗುತ್ತಿದ್ದರೂ ತಾನು ಬದುಕುವ ಭೂಮಿಯ ಮೇಲಿರುವ ಪ್ರಾಚೀನ ಮನುಜ-ಸಹಜ ನಡವಳಿಕೆಗಳನ್ನು, ಪದ್ಧತಿಗಳನ್ನು ಸರಿಪಡಿಸಿಕೊಳ್ಳಲು ಹೆಣಗಾಡುತ್ತಿರುವುದು ವಿಡಂಬನೆಯೇ ಸರಿ.
ತನ್ನನ್ನು ಇತರರು ಸಮಾನವಾಗಿ ಕಾಣಬೇಕೆಂಬ ಸಹಜ ಹಂಬಲ ಮನುಷ್ಯಜೀವಿ ಗಳಲ್ಲಿ ನೈಸರ್ಗಿಕವಾಗಿ ಬಂದಿರಬಹುದಾದ ಮನೋವೃತ್ತಿಯಾಗಿರುತ್ತದೆ. ಒಂದು ಸಮಾಜದಲ್ಲಿ ಕಾಣುವಂತೆಯೇ ಯಾವುದೇ ಕುಟಂಬದೊಳಗೂ ಈ ಸಮಾನತೆಯ ಹಂಬಲ ಇದ್ದೇ ಇರುತ್ತದೆ. ಬಾಲ್ಯಾವಸ್ಥೆಯ ಮಕ್ಕಳೂ ಕುಟುಂಬ ದೊಳಗೆ ತಾರತಮ್ಯಗಳನ್ನು ವಿರೋಧಿಸುವುದನ್ನು ಗಮನಿಸಬಹುದು. ಇದೇ ಪ್ರಮೇಯವನ್ನು ವಿಶಾಲ ಸಮಾಜಕ್ಕೂ ವಿಸ್ತರಿಸಿದ್ದಾಗಿ ವ್ಯಕ್ತಿಗತವಾಗಿ ಸಮಾನತೆ ಎನ್ನುವುದು ಮನುಷ್ಯನ ಮೂಲಭೂತ ಹಕ್ಕು ಎನ್ನುವಷ್ಟು ಮಟ್ಟಿಗೆ ಮಾನವ ಸಮಾಜದಲ್ಲಿ ವ್ಯಕ್ತವಾಗುತ್ತಿರುತ್ತದೆ. ಈ ಸಮಾನತೆಯನ್ನೇ ‘ಮಾನವ ಘನತೆ’ ಎಂದು ಬಣ್ಣಿಸಲಾಗುತ್ತದೆ.
ಡಾ.ಬಿ.ಆರ್.ಅಂಬೇಡ್ಕರ್ ರಾಜಕೀಯ ಸಮಾನತೆಯೊಂದಿಗೆ ಸಾಮಾಜಿಕ- ಆರ್ಥಿಕ ಸಮಾನತೆಗಳಿಗಾಗಿಯೂ ಆಗ್ರಹಿಸಿದ್ದು ಈ ಮಾನವ ಘನತೆಯ ರಕ್ಷಣೆಯ ದೃಷ್ಟಿಯಿಂದಲೇ, ಮಾನವ ಸಮಾಜ ಆಚರಿಸಿಕೊಂಡು ಬಂದಿರುವ ಸಾಂಸ್ಕೃತಿಕ ಪದ್ಧತಿಗಳು, ಧಾರ್ಮಿಕ ಆಚರಣೆಗಳು, ಸಾಂಪ್ರದಾಯಿಕ ನಡಾವಳಿಗಳು ಮಾನವ ಘನತೆಗೆ ಚ್ಯುತಿ ಬರುವಂತಿದ್ದರೆ ಅಂತಹ ಯಾವುದೇ ವಿದ್ಯಮಾನಗಳು ತಿರಸ್ಕಾರಾರ್ಹವಾಗಿಯೇ ಕಾಣುತ್ತವೆ. ಈ ಅಪೇಕ್ಷಣೀಯ ನೈಸರ್ಗಿಕ ಘನತೆಯನ್ನು ನಿರಾಕರಿಸುವ ಕಾರಣಕ್ಕಾಗಿಯೇ ಫುಲೆ, ಅಂಬೇಡ್ಕರ್ ಮೊದಲಾದ ದಾರ್ಶನಿಕರು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸುತ್ತಾರೆ. 21ನೆಯ ಶತಮಾನದ ಭಾರತವು ತಂತ್ರಜ್ಞಾನ ಹಾಗೂ ವಿಜ್ಞಾನದ ಮೇರು ಶಿಖರ ತಲುಪಿದೆ. ಸಂವಿಧಾನಬದ್ಧ ರಾಜಕೀಯ ಸಮಾನತೆಯನ್ನು ಸಾಧಿಸಿದೆ. ಅತ್ಯಾಧುನಿಕ ಮೆಟ್ರೋಪಾಲಿಟನ್ ಸಂಸ್ಕೃತಿಯ ನಗರಗಳನ್ನು ಮೈಗೂಡಿಸಿ ಕೊಂಡಿದೆ. ಬೌದ್ಧಿಕವಾಗಿ ವಿಶ್ವಮಾನ್ಯತೆ ಗಳಿಸಿದೆ. ಆದಾಗ್ಯೂ ಇಂದಿಗೂ ‘ಮಾನವ ಘನತೆಯ ಅಂತಃಸತ್ವವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸೋತಿರುವುದು ವಿಪರ್ಯಾಸವಲ್ಲವೇ? ಇದಕ್ಕೆ ಅರಿವಿನ ಕೊರತೆ ಕಾರಣವಲ್ಲ ಅಥವಾ ಸಾರ್ವಜನಿಕ ಪ್ರಜ್ಞೆಯ ಕೊರತೆಯೂ ಅಲ್ಲ. ಬುದ್ಧ ಬಸವರಾದಿಯಾಗಿ ಗಾಂಧಿ-ಅಂಬೇಡ್ಕರರವರೆಗೂ ಸಮಾಜ ಸುಧಾರಣೆಯ ಧ್ವನಿಗಳು ಜನಸಾಮಾನ್ಯರಲ್ಲಿ ಸಕಲ ಜೀವಚರಗಳನ್ನೂ ಸಮಾನವಾಗಿ ಕಾಣಬೇಕು” ಎನ್ನುವ ಚಿಂತನೆಯ ಸೂಕ್ಷ್ಮ ಎಳೆಯನ್ನೇ ಸ್ಥಾಪಿಸಿವೆ. ಭಾರತದ ಸಾಹಿತ್ಯ ಹಾಗೂ ಕಲಾ ಪ್ರಕಾರಗಳಲ್ಲೂ ಸಮಾನತೆಯ ಧ್ವನಿ ಗಟ್ಟಿಯಾಗಿ ಕೇಳಿಬರುತ್ತಲೇ ಇದೆ.
ಆದರೆ ಸಮಾನತೆಯ ಆಶಯಗಳಿಗೂ, ಮಾನವ ಘನತೆಯ ರಕ್ಷಣೆಗೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಲು ನಮ್ಮ ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಶ್ರೇಣಿಕೃತ ಸಮಾಜ ದೈಹಿಕ ದುಡಿಮೆ ಮತ್ತು ಬೌದ್ಧಿಕ ದುಡಿಮೆಯ ನಡುವೆ ನಿರ್ಮಿಸಿರುವ ಬಹುದೊಡ್ಡ ಕಂದರ. ಮನುಷ್ಯನ ಕಾಯಕವನ್ನು ಉಚ್ಛಮಟ್ಟದಲ್ಲಿರಿಸಿ ದೈವೀಕರಿಸುವ ಒಂದು ಸಮಾಜವೇ ತನ್ನೊಡಲಲ್ಲಿ ಸದಾ ಕ್ರಿಯಾಶೀಲತೆಯಿಂದಿರುವ ಕೆಲವು ದುಡಿಮೆಗಳನ್ನು ಕೀಳರಿಮೆಯಿಂದ ಕಾಣುವ ಒಂದು ದ್ವಂದ್ವವನ್ನು ಈ ಹೊತ್ತಿನಲ್ಲೂ ಗುರುತಿಸಬಹುದು. ಆಧುನಿಕ ಕೌಟುಂಬಿಕ ಜೀವನದಲ್ಲೂ ಒಂದು ಕುಟುಂಬದಲ್ಲಿ ಕಡಿಮೆ ವಿದ್ಯಾರ್ಹತೆ ಅಥವಾ ಶಿಕ್ಷಣ ಪಡೆದ ಸದಸ್ಯರು ಹೆಚ್ಚಿನ ದೈಹಿಕ ದುಡಿಮೆಗೆ ಒಳಗಾಗುವುದನ್ನು ಗಮನಿಸಬಹುದು. ಅಥವಾ ನಿರ್ದಿಷ್ಟ ಸನ್ನಿವೇಶಗಳಲ್ಲಿ ಬೌದ್ಧಿಕವಾಗಿ ಉನ್ನತಿ ಪಡೆದಿರುವ ಸದಸ್ಯರು ಹೆಚ್ಚಿನ ಮಾನ್ಯತೆ ಪಡೆಯುವುದನ್ನು ಗಮನಿಸಬಹುದು.
ಇದು ಒಂದು ನೆಲೆಯಲ್ಲಿ ನಮ್ಮ ಶ್ರೇಣಿ ವ್ಯವಸ್ಥೆಯ ಮೂಲ ಧಾತುವನ್ನು ಬಿಂಬಿಸಿದರೆ ಮತ್ತೊಂದೆಡೆ ಶತಮಾನಗಳ ಯಜಮಾನಿಕೆಯ ಸಂಸ್ಕೃತಿಯನ್ನೂ ಬಿಂಬಿಸುತ್ತದೆ. ಕಲಿತವರು ಕಲಿಯದವರ ಮೇಲೆ, ಬಲ್ಲಿದರು ಬಡವರ ಮೇಲೆ ಯಜಮಾನಿಕೆಯನ್ನು ಸಾಧಿಸುವ ಸಾಮಾಜಿಕ ಪ್ರವೃತ್ತಿಯನ್ನು ವ್ಯಕ್ತಿಗತ ನೆಲೆಯಲ್ಲಿ ಕಾಣುವಷ್ಟೇ ಪ್ರಧಾನವಾಗಿ ಸಮಾಜದ ನೆಲೆಯಲ್ಲೂ ಕಾಣಬಹುದು.
ಆರ್ಥಿಕ ಪ್ರಗತಿಯ ಕಾರಣದಿಂದ ಬೌದ್ಧಿಕ ಉನ್ನತಿ ಸಾಧಿಸುವ ಸಮಾಜದ ಒಂದು ವರ್ಗ ಮೂಲ ಜಾತಿ ನೆಲೆಗಳನ್ನೂ ಲೆಕ್ಕಿಸದೆ ದೈಹಿಕ ಶ್ರಮವನ್ನು ಕೀಳರಿಮೆಯಿಂದ ನೋಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತದೆ. ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವ ತಳಸಮುದಾಯಗಳನ್ನು ಅಥವಾ ಅಲ್ಲಿಯೂ ನಿಕೃಷ್ಟರಾದವರನ್ನು ಯಾವುದೇ ಸಂಕೋಚ ಇಲ್ಲದೆ ಬಳಸಿಕೊಳ್ಳುತ್ತದೆ.
ಸ್ವಚ್ಛತಾ ಕಾರ್ಯದ ನಿಮಿತ್ತಗಳು: ಈ ಮನೋವೃತ್ತಿಯು ಶತಮಾನಗಳಿಂದ ಬೇರೂರಿರುವುದರಿಂದಲೇ ಇಂದಿಗೂ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಳ ಜಾತಿಸಮುದಾಯಗಳ ಹೆಗಲಿಗೆ ಹೊರಿಸಲಾಗಿದೆ. ತಾನು ವಿಸರ್ಜಿಸುವ ಮಲಮೂತ್ರಗಳನ್ನು ತೆಗೆದುಹಾಕಲು ಮತ್ತೊಂದು ಜೀವ ಇದ್ದೇ ಇರುತ್ತದೆ ಎಂಬ ಮನೋವೃತ್ತಿಯೇ ಸ್ವಚ್ಛತಾ ಕಾರ್ಯಗಳನ್ನು ಜಾತಿನಿರ್ದಿಷ್ಟ ಕಸುಬುಗಳನ್ನಾಗಿ ಮಾಡಿಬಿಟ್ಟಿದೆ.
ಈ ಹಿನ್ನೆಲೆಯಲ್ಲೇ ಇತ್ತೀಚಿನ ಹಲವು ಪ್ರಕರಣಗಳಲ್ಲಿ ಶಾಲೆ-ವಸತಿ ಶಾಲೆ-ಹಾಸ್ಟೆಲ್‌ಗಳಲ್ಲಿ ಶೌಚಾಲಯವನ್ನು ಮಕ್ಕಳಿಂದ ಶುಚಿಗೊಳಿಸುವ ಹೀನ ಕೃತ್ಯಗಳನ್ನು ನೋಡಬೇಕಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮೊರಾರ್ಜಿ
ದೇಸಾಯಿ ಶಾಲೆಯಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡುವ ನೆಪದಲ್ಲಿ ಮಲಗುಂಡಿಯನ್ನು ಸ್ವಚ್ಛಗೊಳಿಸುವಂತೆ ಮಾಡಿರುವುದು ವರದಿಯಾಗಿದ್ದು, ಈ ನಾಲ್ವರೂ ಮಕ್ಕಳು ಕೆಳಜಾತಿಗಳಿಗೆ ಸೇರಿದವರೆನ್ನುವುದು ಹೇಳದಿದ್ದರೂ ಅರ್ಥವಾಗುವ ವಿಚಾರ. ಏಕೆಂದರೆ ಮೇಲ್ವಾತಿಯ ಮಕ್ಕಳನ್ನು ಈ ರೀತಿಯ ದುಡಿಮೆಗೆ ಹಚ್ಚುವ ಸಾಧ್ಯತೆಗಳನ್ನು ಊಹಿಸಿಕೊಳ್ಳಲೂ ಸಾಧ್ಯವಾಗದು. ನಮ್ಮ ಸಮಾಜ ಇನ್ನೂ ಆ ಮಟ್ಟಿಗೆ ಪ್ರಜಾಸತ್ತಾತ್ಮಕವಾಗಿಲ್ಲ ಅಥವಾ ಪ್ರಬುದ್ಧವಾಗಿಲ್ಲ. ಈ ಪ್ರಸಂಗ ಮತ್ತು ಇಂತಹುದೇ ಹಲವು ಪ್ರಕರಣಗಳಲ್ಲಿ ನಾವು ಕೆಲವು ಸುಡು ವಾಸ್ತವಗಳನ್ನು ಕಾಣಬಹುದು.
ಜಾತಿ ಶ್ರೇಷ್ಠತೆಯ ನೆರಳಲ್ಲಿ :ಜಾತಿ ಶ್ರೇಣೀಕರಣದಲ್ಲಿ ಇಂದಿಗೂ ನಿಕೃಷ್ಟವಾಗಿ ಕಾಣಲ್ಪಡುವ ತಳಮಟ್ಟದ ಜನಸಮುದಾಯಗಳಿಗೆ ಈ ದೇಶದ ಸಂವಿಧಾನ ರಾಜಕೀಯ ಸಮಾನತೆಯನ್ನು ಕಲ್ಪಿಸಿದೆ. ಸಾಮಾಜಿಕವಾಗಿಯೂ ಎಲ್ಲರಂತೆ ತಾವೂ ಬದುಕಬಹುದಾದ ಸಮಾನತೆಯನ್ನು ಕೊಂಚ ಮಟ್ಟಿಗೆ ಕಲ್ಪಿಸಿದೆ. ಇಡೀ ಸಮಾಜವು ಜಾತಿಶ್ರೇಷ್ಠತೆ ಮತ್ತು ಪಾವಿತ್ರ್ಯತೆಯ ನೆಪದಲ್ಲಿ ಮರು ಅಗ್ರಹಾರೀಕರಣಕ್ಕೊಳಗಾಗುತ್ತಿರುವ ಸಂದರ್ಭದಲ್ಲಿ ಈ ಸಮಾನತೆ ಒಮ್ಮೊಮ್ಮೆ ಅಪಭ್ರಂಶದಂತೆ ಕಾಣುತ್ತದೆ.
ಈ ಮನಸ್ಥಿತಿಯೇ ಮಾಲೂರು ಶಾಲೆಯಲ್ಲಿ ನಡೆದಂತಹ ಘಟನೆಗಳಿಗೆ ಮೂಲ ಕಾರಣವಾಗಿರುತ್ತದೆ. ಸಂವಿಧಾನದ ಮೂಲ ಆಶಯಗಳಾದ ಸಮಾನತೆ-ಮಾನವ ಘನತೆಯನ್ನು ಎತ್ತಿಹಿಡಿಯಬೇಕಾದ ಶಿಕ್ಷಕ ವರ್ಗವೂ ಈ ಮನಸ್ಥಿತಿಯಿಂದ ಹೊರತಾಗಲು ಸಾಧ್ಯವಿಲ್ಲ. ಏಕೆಂದರೆ ಅವರು ವಿಶಾಲ ಸಮಾಜದ ಒಂದು ಭಾಗವಾಗಿಯೇ ಉಳಿದಿರುತ್ತಾರೆ. ಸಂವಿಧಾನವನ್ನು ವಿಧ್ಯುಕ್ತವಾಗಿ ಅನುಸರಿಸುತ್ತಲೇ ಮನುಸ್ಮೃತಿಯ ಮೂಲ ಧಾತುವನ್ನು ಅನುಸರಿಸುವ ಒಂದು ದ್ವಂದ್ವವನ್ನು ಇಲ್ಲಿ ಗುರುತಿಸಬಹುದು.
ಇದಕ್ಕೆ ಜಾತಿ ಶ್ರೇಷ್ಠತೆ-ಪಾರಮ್ಯ ಒಂದು ಕಾರಣವಾದರೆ, ಸಾಮಾಜಿಕ ಅಂತಸ್ತು ಮತ್ತೊಂದು ಕಾರಣವಾಗುತ್ತದೆ. ಆಧುನಿಕ ಸಮಾಜ ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ. ಸಂವಿಧಾನವನ್ನು ನಾವು ಅರಿತುಕೊಂಡಿದ್ದೇವೆ, ಸಾಂವಿಧಾನಿಕ ಆಶಯಗಳನ್ನು ಮೈಗೂಡಿಸಿಕೊಂಡಿರುವ ಭ್ರಮೆಯಲ್ಲಿದ್ದೇವೆ ಆದರೆ ಮಾನವ ಘನತೆಯನ್ನು ಎತ್ತಿಹಿಡಿಯುವ ಸಂವಿಧಾನದ ಅಂತಃಸತ್ವವನ್ನು ನಮ್ಮೊಳಗೆ ಇಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಇದು ನಮ್ಮನ್ನು ಕಾಡಬೇಕಾದ ಪ್ರಶ್ನೆ.