ಬಾ. ನಾ. ಸುಬ್ರಮಣ್ಯ
ಹೆಸರಾಂತ ನಿರ್ದೇಶಕ ಶಾಜಿ ಕರುಣ್ ಅವರು ಈಗ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರು. ನಿಗಮವು ಮಲಯಾಳ ಚಿತ್ರೋದ್ಯಮಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತಿದೆ. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಚಿತ್ರಮಂದಿರಗಳ ನಿರ್ಮಾಣ, ನಿರ್ವಹಣೆ, ಚಿತ್ರನಗರಿಯ ಮೇಲ್ವಿಚಾರಣೆ, ಚಿತ್ರಗಳ ನಿರ್ಮಾಣದಂತಹ ಯೋಜನೆ ಈ ಸಂಸ್ಥೆಯದು. ಪ್ರತಿ ವರ್ಷ ನಾಲ್ಕು ಚಿತ್ರಗಳ ನಿರ್ಮಾಣ ಅದರ ಯೋಜನೆಗಳಲ್ಲಿ ಸೇರಿದೆ. ಇವುಗಳಲ್ಲಿ ಎರಡು ಚಿತ್ರಗಳನ್ನು ಮಹಿಳಾ ನಿರ್ದೇಶಕರಿಗೆ, ಎರಡು ಚಿತ್ರಗಳನ್ನು ಪರಿಶಿಷ್ಟ ಪಂಗಡ/ವರ್ಗದವರಿಗೆ ಮೀಸಲಿಡಲಾಗಿದೆ.
ಶಾಜಿ ಅಧ್ಯಕ್ಷತೆಯ ನಿಗಮದ ಕನಸಿನ ಯೋಜನೆ ರಾಜ್ಯ ಸರ್ಕಾರದ್ದೇ ಆದ ಒಂದು ಒಟಿಟಿ ತಾಣದ ಸ್ಥಾಪನೆ. ಇಂತಹದೊಂದು ಯೋಚನೆಗೆ ಮೂಲ ಕಾರಣ, ಕೊರೊನಾ ದಿನಗಳು, ಕೊರೊನಾ ದಿನಗಳಲ್ಲಿ ಮನರಂಜನೆಗೆ ಏಕೈಕ ಮಾಧ್ಯಮವಾದದ್ದು ಒಟಿಟಿ ತಾಣಗಳು. ಮನೆಯೊಳಗೆ ಬಂಧಿಯಾಗಬೇಕಾಗಿದ್ದ ಅನಿವಾರ್ಯ ದಿನಗಳಲ್ಲಿ ಜನರಿಗೆ ಮನರಂಜನೆ ಒದಗಿಸಿದ್ದು, ನೆಟ್‌ಫಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಒಟಿಟಿ ತಾಣಗಳು.
ಎಲ್ಲ ದೇಶಗಳ, ಎಲ್ಲ ಭಾಷೆಗಳ ಚಲನಚಿತ್ರಗಳೂ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳನ್ನು ಮನೆಯಲ್ಲೇ ಕುಳಿತು, ವಾರ್ಷಿಕ, ಇಲ್ಲವೇ ಮಾಸಿಕ ಶುಲ್ಕನೀಡಿ ನೋಡಲು ಸಾಧ್ಯಮಾಡಿದ ದಿನಗಳವು. ಭಾರತೀಯ ಭಾಷಾ ಚಿತ್ರಗಳಲ್ಲಿ ಮಲಯಾಳಂ ಚಿತ್ರಗಳು ತಮ್ಮ ಗುಣಮಟ್ಟ, ವಸ್ತುಗಳ ಆಯ್ಕೆ, ನಿರೂಪಣೆಯ ವೈಶಿಷ್ಟ್ಯಗಳ ಕಾರಣದಿಂದ ದೇಶಾದ್ಯಂತ ಚಿತ್ರರಸಿಕರ ಗಮನ ಸೆಳೆದವು. ಮುಂದಿನ ದಿನಗಳಲ್ಲಿ ವ್ಯವಹಾರ ಮತ್ತು ಒಟಿಟಿ ತಾಣಗಳ ಮೂಲಕ ಅವುಗಳ ವೀಕ್ಷಣೆ ವೃದ್ಧಿಸಿದ್ದಂತೂ ಹೌದು.
ಹಿಂದಿ ಭಾಷೆಯ ಚಿತ್ರಗಳು, ಅವುಗಳನ್ನು ಹೊರತುಪಡಿಸಿದರೆ ಅದ್ದೂರಿಯಾಗಿ ತಯಾರಾಗುವ ತಮಿಳು, ತೆಲುಗು ಚಿತ್ರಗಳು ಬಹುತೇಕ ಒಟಿಟಿ ತಾಣಗಳ ಆದ್ಯತೆ. ವಸ್ತುಕೇಂದ್ರಿತ, ಸಮಾಜಮುಖಿ ಚಿತ್ರಗಳಿಗಿಂತಲೂ ಅದ್ಧೂರಿ, ಜನಪ್ರಿಯ ನಟರ ಚಿತ್ರಗಳಿಗಷ್ಟೇ ಅವುಗಳ ಬೇಡಿಕೆ. ಮಲಯಾಳಂ, ಕನ್ನಡ ಸೇರಿದಂತೆ ಇತರ ಭಾರತೀಯ ಭಾಷಾ ಚಿತ್ರಗಳ ಆಯ್ಕೆಯಲ್ಲೂ ಇದೇ ಮಾನದಂಡ, ಹೀಗಾಗಿ ಉತ್ತಮ, ಸದಭಿರುಚಿಯ ಚಿತ್ರಗಳಿಗೆ ಒಟಿಟಿ ತಾಣಗಳಲ್ಲಿ ಬೇಡಿಕೆ ಇಲ್ಲ.
ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರಗಳು, ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು ಒಟಿಟಿ ತಾಣಗಳ ಪಾಲಿಗೆ ಅತಿ ಬೇಡಿಕೆಯವಲ್ಲ. ತಮ್ಮ ಚಂದಾದಾರರ ಆಸಕ್ತಿ, ಬೇಡಿಕೆ ಇಂತಹ ಚಿತ್ರಗಳಲ್ಲ ಎಂದು ಈ ತಾಣಗಳೇ ನಿರ್ಧರಿಸಿಬಿಡುತ್ತವೆ! ಹಾಗಾಗಿಯೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಗಮನ ಸೆಳೆದ, ಪ್ರಶಸ್ತಿ ಪಡೆದ ಚಿತ್ರಗಳಿಗೆ ಅವು ಬೆನ್ನುಹಾಕುತ್ತವೆ.
ಒಟಿಟಿ ತಾಣಗಳ ಈ ಧೋರಣೆಯ ವಿರುದ್ಧ ದನಿ ಎತ್ತಿದವರು ಕಡಿಮೆ. ಕಳೆದ ನವೆಂಬರ್‌ನಲ್ಲಿ ನಡೆದ ಭಾರತದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇದನ್ನು ಖಂಡಿಸಿ ಮಾತನಾಡಿದ್ದು ‘ಕಾಂತಾರ’ ಚಿತ್ರದ ನಟ, ನಿರ್ದೇಶಕ ರಿಷಭ್ ಶೆಟ್ಟಿ. ಒಟಿಟಿ ತಾಣಗಳಿಗೆ ಅನುಮತಿ ಮತ್ತಿತರ ನೆರವು ನೀಡುವ ಕೇಂದ್ರ ಸರ್ಕಾರ, ಸದಭಿರುಚಿಯ, ಅಂತಾರಾಷ್ಟ್ರೀಯ, ರಾಷ್ಟ್ರೀಯ ಮನ್ನಣೆ, ಗೌರವ ಪಡೆಯುವ ಚಿತ್ರಗಳನ್ನು ಇಂತಹ ತಾಣಗಳು ಕೊಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಅವರ ನಿರ್ಮಾಣದ ಚಿತ್ರಗಳು ಚಿತ್ರೋತ್ಸವದ ಫಿಲಂ ಬಜಾರ್ ವಿಭಾಗದಲ್ಲಿ ಇದ್ದವು.
‘ಎಲ್ಲಿ ಉತ್ತಮ ಪ್ರೇಕ್ಷಕರಿರುತ್ತಾರೋ ಅಲ್ಲಿ ಉತ್ತಮ ಚಿತ್ರಗಳು ತಯಾರಾಗುತ್ತವೆ’ ಎನ್ನುವ ಸಿನಿಕೋವಿದರ ಮಾತು ಸಾರ್ವತ್ರಿಕ ಸತ್ಯ. ಚಲನಚಿತ್ರ ಸಂಸ್ಕೃತಿ ಪಸರಿಸಿರುವ ಕೇರಳ, ಪಶ್ಚಿಮ ಬಂಗಾಲದ ಬಹುತೇಕ ಚಿತ್ರಗಳು ಈ ಕಾರಣದಿಂದಲೇ ಸಮಾಜಮುಖಿ, ಸದಭಿರುಚಿಯವು. ಕೇರಳದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವ ಜನಸಾಮಾನ್ಯರ ಸಂಖ್ಯೆ ಇದಕ್ಕೆ ಇನ್ನೊಂದು ಸಾಕ್ಷಿ. ಆನ್‌ಲೈನ್‌ನಲ್ಲಿ ಪ್ರತಿನಿಧಿಗಳಾಗಲು ಕರೆ ನೀಡಿದ ಒಂದು ಗಂಟೆಯಲ್ಲಿ ಆರು ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರಂತೆ! ಹದಿಮೂರು ಸಾವಿರ ಮಂದಿಗೆ ಅಲ್ಲಿ ಪ್ರತಿನಿಧಿಗಳಾಗಲು ಅವಕಾಶ ನೀಡಲಾಯಿತು ಎನ್ನುತ್ತಿವೆ ಅಲ್ಲಿನ ಮೂಲಗಳು.
ಮಲಯಾಳಂ ಚಿತ್ರಗಳನ್ನು ನೋಡುವ ಅವಕಾಶವನ್ನು ಹೆಚ್ಚಿಸಲು ಕೇರಳ ಸರ್ಕಾರದ ಹೊಸ ಯೋಜನೆ ತನ್ನದೇ ಆದ ಒಟಿಟಿ ತಾಣವನ್ನು ಸ್ಥಾಪಿಸುವುದು ಮತ್ತು ಅದರ ಮೂಲಕ ಸದಭಿರುಚಿಯ, ಉತ್ತಮ ಚಿತ್ರಗಳನ್ನು ಆಸಕ್ತರಿಗೆ ನೋಡಲು ಅವಕಾಶ ಮಾಡಿಕೊಡುವುದು. ಕೊರೊನಾ ದಿನಗಳ ಬೆನ್ನಲ್ಲಿ ಈ ಯೋಚನೆಯನ್ನು ಅಲ್ಲಿನ ಚಲನಚಿತ್ರ ಅಭಿವೃದ್ಧಿ ನಿಗಮ ಮುಂದಿಟ್ಟಿತ್ತು. ಕಾರಣಾಂತರದಿಂದ ಅದು ಕಾರ್ಯಗತ ಆಗಲು ಸಾಕಷ್ಟು ಕಾಲಾವಕಾಶ
ತೆಗೆದುಕೊಂಡಿದೆ.
ನವೆಂಬರ್ 1, ಇಲ್ಲಿನಂತೆ ಅಲ್ಲೂ ರಾಜ್ಯೋತ್ಸವ. ಮಲಯಾಳಂ ಚಿತ್ರಗಳಿಗಷ್ಟೇ ಮೀಸಲಿರುವ ಕೇರಳ ಸರ್ಕಾರದ ಒಟಿಟಿ ಸಿ-ಸ್ಪೇಸ್ ತಾಣ ಉದ್ಘಾಟನೆಗೆ ಆ ದಿನ ನಿಗದಿಯಾಗಿತ್ತು. ಅಂದು ಆಗಲಿಲ್ಲ. ಮೊನ್ನೆ ಗಣರಾಜ್ಯೋತ್ಸವದ ದಿನ ನಿಗದಿಯಾಗಿತ್ತು ಅಂದೂ ಆಗಲಿಲ್ಲ. ‘ನಾವು ಸಿದ್ಧರಾಗಿದ್ದೇವೆ. ಚಲನಚಿತ್ರಗಳೂ ಇವೆ. ಮುಖ್ಯ ಮಂತ್ರಿಗಳು ಇದನ್ನು ಉದ್ಘಾಟಿಸಬೇಕಿದೆ. ಅವರಿಗಾಗಿ ಕಾದಿದ್ದೇವೆ’ ಎನ್ನುತ್ತಾರೆ ಈ ಒಟಿಟಿ ತಾಣದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ
ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ನಿರ್ದೇಶಕ ಶಾಜಿ ಕರುಣ್.
ಅವರ ಪ್ರಕಾರ, ಈ ಒಟಿಟಿ ತಾಣ, ಸಮಾನಾಂತರ ಸಾಂಸ್ಕೃತಿಕ ನಡೆ’. ಮಲಯಾಳಂ ಚಿತ್ರಗಳಿಗಷ್ಟೇ ಮೀಸಲಿರುವ ತಾಣ. ಇಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಗಳು, ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು, ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳು, ಪ್ರಶಸ್ತಿ ಪಡೆದ ಚಿತ್ರಗಳು ಇಲ್ಲಿ ಪ್ರಸಾರ ಮಾಡಬಹುದು. ಕಥಾ ಚಿತ್ರಗಳಲ್ಲದೆ, ಸಾಕ್ಷ್ಯ ಚಿತ್ರಗಳು, ಕಿರುಚಿತ್ರಗಳಿಗೂ ಇಲ್ಲಿ ಅವಕಾಶವಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ, ಬಿಡುಗಡೆ ಆಗದೆ ಇರುವ ಕಡಿಮೆ ನಿರ್ಮಾಣ ವೆಚ್ಚದ ಚಿತ್ರಗಳಿಗೂ ಇಲ್ಲಿ ಅವಕಾಶವಿದೆ. ಒಟಿಟಿಯಲ್ಲಿ ಪ್ರಸಾರಯೋಗ್ಯ ಚಿತ್ರಗಳ ಆಯ್ಕೆಗೆ ಸಮಿತಿಯೊಂದನ್ನು ರಚಿಸಲಾಗಿದೆ.
ಇತರ ಜನಪ್ರಿಯ ಒಟಿಟಿ ತಾಣಗಳಂತೆ ಇಲ್ಲಿ ಮೊದಲೇ ರಾಯಧನ ನೀಡುವುದಿಲ್ಲ. ಪ್ರತಿಚಲನಚಿತ್ರದವೀಕ್ಷಣೆಗೆ75ರೂ.ನಿಗದಿಮಾಡಲಾಗುತ್ತದೆ. ಅದರಲ್ಲಿ ಅರ್ಧದಷ್ಟು ಮೊತ್ತ ನಿರ್ಮಾಪಕರಿಗೆ, ಇನ್ನರ್ಧ ಒಟಿಟಿಗೆ. ಪ್ರಸಾರವಾಗುವುದು ಪ್ರಶಸ್ತಿ ವಿಜೇತ ಚಿತ್ರವಾದರೆ, ಅದರ ಗಳಿಕೆಯಲ್ಲಿ ಒಂದು ಭಾಗ ಅದರ ನಿರ್ದೇಶಕರಿಗೂ ಸಲ್ಲಲಿದೆ.
ಚಿತ್ರೋತ್ಸವಗಳಲ್ಲಿ ಅಥವಾ ಚಿತ್ರಮಂದಿರಗಳಲ್ಲಿ ಇಂತಹ ಮಲಯಾಳ ಚಿತ್ರಗಳನ್ನು ನೋಡುವವರ ಸಂಖ್ಯೆಗೆ ಮಿತಿ ಇರುತ್ತದೆ. ಆದರೆ ಒಟಿಟಿ ತಾಣಗಳ ಮೂಲಕ ಈ ಚಿತ್ರಗಳನ್ನು ಎಲ್ಲಿ ಬೇಕೆಂದರೆ ಅಲ್ಲಿ, ಯಾವಾಗ ಬೇಕೋ ಆಗ ನೋಡುವ ಅವಕಾಶವನ್ನು ಸಿ-ಸ್ಪೇಸ್ ಒದಗಿಸಿಕೊಡಲಿದೆ. ಆ ಮೂಲಕ ವಿಶ್ವಾದ್ಯಂತ ಮಲಯಾಳಿಗಳು ಕೇರಳದಲ್ಲಿ ತಯಾರಾಗುವ ಉತ್ತಮ ಚಿತ್ರಗಳನ್ನು ನೋಡಬಹುದು. ಅದು ಕೂಡ ಹೆಚ್ಚಿನ ವೆಚ್ಚವಿಲ್ಲದೆ. ಮುಂದಿನ ದಿನಗಳಲ್ಲಿ ಇತರ ತಾಣಗಳಂತೆ, ವಾರ್ಷಿಕ ಚಂದಾದಾರಿಕೆಯ ಯೋಚನೆಯೂ ಇದೆಯಂತೆ.
ಚಲನಚಿತ್ರ ಅಕಾಡೆಮಿಯನ್ನು ಮೊದಲು ಸ್ಥಾಪಿಸಿದ ರಾಜ್ಯ ಕೇರಳ; ಈಗ ತನ್ನದೇ ಆದ ಒಟಿಟಿ ತಾಣ ಸ್ಥಾಪಿಸಿದ ಹೆಗ್ಗಳಿಕೆಯೂ ಕೇರಳ ಸರ್ಕಾರದ್ದು ಎಂದು ಅದು ಹೇಳಿಕೊಳ್ಳುತ್ತಿದೆ. ‘ಏನನ್ನಾದರೂ ಮಾಡಬೇಕು ಎನಿಸಿದರೆ ಕೂಡಲೇ ಮಾಡು; ಇಲ್ಲದೇ ಹೋದರೆ ಬೇರೆಯವರು ಅದನ್ನು ಮಾಡುವುದನ್ನು ನೋಡು’ ಎನ್ನುವ ಮಾತು ಅಕಾಡೆಮಿ ವಿಷಯದಲ್ಲಿ ನಿಜವಾಗಿದೆ. ಚಲನಚಿತ್ರ ಅಕಾಡೆಮಿಯ ಸ್ಥಾಪನೆಯ ಕುರಿತು ಮೊದಲು ಯೋಚಿಸಿದ್ದು ಕರ್ನಾಟಕ ಸರ್ಕಾರ. 1995-96ರ ಮುಂಗಡ ಪತ್ರ ಅಧಿವೇಶನ ಇರಬೇಕು, ರಾಜ್ಯಪಾಲರು ಮೊದಲ ದಿನ ತಮ್ಮ ಭಾಷಣದಲ್ಲಿ ನನ್ನ ಸರ್ಕಾರವು ರಾಜ್ಯ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸಲಿದೆ’ ಎಂದು ಹೇಳಿದರು. ಅರ್ಥ ಸಚಿವರಾಗಿದ್ದ ಸಿದ್ದರಾಮಯ್ಯನವರು ಅಕಾಡೆಮಿಯ ಸ್ಥಾಪನೆಯ ಪ್ರಸ್ತಾಪವನ್ನು ತಮ್ಮ ಮುಂಗಡಪತ್ರದಲ್ಲಿ ಮಾಡಿದರು. ಅದರ ಸ್ಥಾಪನೆಗೆ ಹಣವನ್ನೂ ಮೀಸಲಿಟ್ಟರು.
ಕರ್ನಾಟಕ ಸರ್ಕಾರ ಚಲನಚಿತ್ರ ಅಕಾಡೆಮಿ ಸ್ಥಾಪಿಸುವ ಈ ಸುದ್ದಿ ದೇಶಾದ್ಯಂತ ಪ್ರಕಟವಾಯಿತು. ನಮ್ಮಲ್ಲಿ ಈ ಸುದ್ದಿ ಪ್ರಕಟವಾಗುತ್ತಲೇ, ಅದರ ಅಧ್ಯಕ್ಷರು ಇಂತಹವರೇ ಆಗಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರಲಾಯಿತು. ಯೋಜನೆ ನನೆಗುದಿಗೆ ಬಿತ್ತು. ಕೇರಳ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿತು. ಅಕಾಡೆಮಿಯನ್ನು ಸ್ಥಾಪಿಸಿತು. ಚಲನಚಿತ್ರ ಸಂಸ್ಕೃತಿಯನ್ನು ಪಸರಿಸಲು ಅದು ಕೂಡ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದೆ.
ಸ್ಥಾಪಕ ಅಧ್ಯಕ್ಷರಾಗಿ ಅಂತಾರಾಷ್ಟ್ರೀಯ ಖ್ಯಾತಿವೆತ್ತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿದ್ದರು. ಅಲ್ಲಿ ಅಧ್ಯಕ್ಷರಾಗಿದ್ದವರು ಬಹುತೇಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ನಿರ್ದೇಶಕರು, ಕರ್ನಾಟಕದಲ್ಲಿ ಕನ್ನಡ ಚಿತ್ರೋದ್ಯಮದ ವಜ್ರಮಹೋತ್ಸವದ ವೇಳೆ ಪ್ರಸ್ತಾಪವಾದ ಚಲನಚಿತ್ರ ಅಕಾಡೆಮಿ ಯೋಜನೆ ನನೆಗೆಗುದಿಗೆ ಬಿದ್ದು, ಮತ್ತೆ ಅದರ ಪ್ರಸ್ತಾಪವಾಗಿ ಜಾರಿಗೆ ಬಂದದ್ದು, ವಜ್ರಮಹೋತ್ಸವದ ವೇಳೆಗೆ ಕರ್ನಾಟಕದಲ್ಲೂ ಚಲನಚಿತ್ರ ಅಭಿವೃದ್ಧಿ ನಿಗಮ ಇತ್ತು. ಆದರೆ ಅದು ಲಾಭದಾಯಕ ಅಲ್ಲ ಎನ್ನುವ ಕಾರಣ ಮುಂದಿಟ್ಟು ಅದನ್ನು ಮುಚ್ಚಲಾಗಿದೆ. ಇತರ ಹೆಚ್ಚಿನ ರಾಜ್ಯಗಳಲ್ಲಿ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮಗಳು ಸ್ಥಾಪನೆಯಾಗಿವೆ. ಚಿತ್ರನಗರಿಗಳಿವೆ. ನಮ್ಮಲ್ಲಿ ಅಂತಹ ಯೋಚನೆ ಮೊದಲೇ ಆಗಿತ್ತು ಎನ್ನುವ ಹೆಗ್ಗಳಿಕೆ ನಮ್ಮದು. 1972ರಲ್ಲೇ ಹೆಸರಘಟ್ಟದಲ್ಲಿ ಚಿತ್ರನಗರಿಗೆ ಶಿಲಾನ್ಯಾಸ ಮಾಡಲಾಗಿತ್ತು! ಕಲ್ಲು ಹಾಕಲಾಗಿತ್ತು.