ನಾಗತಿಹಳ್ಳಿ ಸರ್ಕಾರಿ ಶಾಲೆಗೆ 100 ವರ್ಷ
ಇಂದಿನಿಂದ ಶತಮಾನೋತ್ಸವ ಸಂಭ್ರಮ
ತನ್ನೊಡಲೊಳಗೆ ಹಲವು ಅಸ್ಮಿತೆಗಳನ್ನು ಕಾಪಿಟ್ಟುಕೊಂಡಿರುವ ಈ ಶಾಲೆಯ ಶತಮಾನೋತ್ಸವ ಸಂಭ್ರಮ ಇದೇ ಮಾರ್ಚ್ 26 ರಿಂದ 30ರವರೆಗೆ ಐದು ದಿನಗಳ ಕಾಲ ಎ.ನಾಗತಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ.
ಮಾರ್ಚ್ 26ರಂದು ವಿಜ್ಞಾನ ದಿನ, 27ರಂದು ಆರೋಗ್ಯ ದಿನ, 28ರಂದು ಸಾಹಿತ್ಯ ದಿನ, 29ರಂದು ಕೃಷಿ ದಿನ, 30ರಂದು ನಾಗತಿಹಳ್ಳಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಮತ್ತು ಸಮಾರೋಪ ಎಂಬ ಪರಿಕಲ್ಪನೆಯಲ್ಲಿ 31ನೇ ಸಂಸ್ಕೃತಿ ಹಬ್ಬ-2025 ಆಯೋಜನೆಗೊಂಡಿದೆ.
– ನಟರಾಜು ಹಾನವಾಡಿ
ಇಂದು ಶೈಕ್ಷಣಿಕ ಬದುಕಿನ ಹಲವು ಏರಿಳಿತಗಳನ್ನು ಸ್ವತಃ ಕಂಡುಂಡ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳ, ವಿದ್ಯಾರ್ಥಿಗಳ ದಾಖಲಾತಿ ಕೊರತೆಗಳಿಂದಾಗಿ ತಮ್ಮ ಗತಕಾಲದ ವೈಭವವನ್ನು ಕಳೆದುಕೊಂಡು ಪಾಳು ಬಿದ್ದು ಪರದೇಸಿತನವನ್ನು ಸಾರುತ್ತ ಮರುಜೀವಣಿಕೆಗೆ ಕಾಯುತ್ತ ನಿಂತಿವೆ.
ಇಂತಹ ಸಂದಿಗ್ಧ ಸ್ಥಿತಿಯ ನಡುವೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಎ.ನಾಗತಿಹಳ್ಳಿಯಲ್ಲಿ1925ರಲ್ಲಿ ಆರಂಭವಾಗಿ ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದ ಆಚರಣೆಗೆ ಅನುವಾಗಿದೆ.
ಜಾನಪದ ಲೋಕದ ನಿರ್ಮಾತೃ ಡಾ.ಎಚ್.ಎಲ್.ನಾಗೇಗೌಡ, ಮಾಜಿ ಸಚಿವರಾದ ಎಚ್.ಟಿ.ಕೃಷ್ಣಪ್ಪ, ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಅಮೆರಿಕದಲ್ಲಿರುವ ವೈದ್ಯ ಡಾ.ನಾಗರಾಜ್, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಎಲ್.ಎನ್.ಗಂಗಾಧರಗೌಡ, ನ್ಯಾಯಾಧೀಶರಾಗಿರುವ
ಎಸ್.ಪಿ. ಸುಧಾ, ನ್ಯಾಯವಾದಿ ಎಸ್.ಪಿ.ಸೋಮಶೇಖರ ಅವರನ್ನು ಒಳಗೊಂಡಂತೆ ನಾಗತಿಹಳ್ಳಿ ಹಾಗೂ ಸುತ್ತಲಿನ ಹತ್ತು ಹಳ್ಳಿಗಳ ಅಸಂಖ್ಯಾತರಿಗೆ ನಾಗತಿಹಳ್ಳಿಯ ಸರ್ಕಾರಿ ಶಾಲೆಯು ಶಿಕ್ಷಣದೊಂದಿಗೆ ಸಂಸ್ಕೃತಿಯನ್ನೂ ಧಾರೆಯೆರೆದಿದೆ.
ಮೊದಲಿಗೆ ಎಲ್ಲ ಸರ್ಕಾರಿ ಶಾಲೆಗಳಂತೆಯೇ ಇದ್ದ ಈ ಶಾಲೆ ಈಗ ತನ್ನ ಖದರ್ ಬದಲಿಸಿಕೊಂಡು ಸರ್ಕಾರಿ ಸ್ಕೂಲ್ ಅಂದರೆ ಹೀಗೂ ಇರಬಹುದೇ ಎಂದು ಎಲ್ಲರೂ ಚಕಿತಗೊಂಡು ಅತ್ತ ತಿರುಗಿ ನೋಡುವಂತೆ ರೂಪುಪಡೆದಿದೆ. 1 ರಿಂದ 7ನೇ ತರಗತಿಯವರೆಗೆ ನಡೆಯುತ್ತಿರುವ ಶಾಲೆಯು ವಿಶಿಷ್ಟ ವಿನ್ಯಾಸದ ವಿಶಾಲವಾದ ಪರಿಸರ ಸ್ನೇಹಿ ಕಟ್ಟಡ ಹೊಂದಿದ್ದು, ಹಾಲೋಬ್ಲಾಕ್‌ನಿಂದ ಕಟ್ಟಿರುವ ಗೋಡೆಗಳು ಗಾಳಿ-ಬೆಳಕಿನಿಂದ ಕೂಡಿವೆ. ಬೋಧನ ತರಗತಿಗಳಿಗೆ ಶಬ್ದ ಗ್ರಹಿಕೆ (ಅಕೋಸ್ಟಿಕ್) ತಂತ್ರಜ್ಞಾನ ಅಳವಡಿಸಲಾಗಿದೆ. ವೈಜ್ಞಾನಿಕ ಒಳಾಂಗಣದ ತಾಂತ್ರಿಕತೆಯೊಂದಿಗೆ ಕೆಂಪು ಇಟ್ಟಿಗೆಗಳು ಶಾಲೆಯ
ಅಂದಕ್ಕೆ ಮೆರುಗು ತಂದಿವೆ. ಈಗ ಅದು ಬರಿ ಶಾಲೆಯ ಕಟ್ಟಡವಾಗಿ ಉಳಿಯದೆ ನಾಗತಿಹಳ್ಳಿಯ ಸಾಂಸ್ಕೃತಿಕ ಕೇಂದ್ರವಾಗಿದೆ.
ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಯಶಸ್ಸಿನ ಎತ್ತರಕ್ಕೇರಿ ಜನಮನ್ನಣೆ ಗಳಿಸಿರುವ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರ ಹುಟ್ಟೂರು ನಾಗತಿಹಳ್ಳಿ. ಅವರಿಗೆ ಬಾಲ್ಯದ ಬದುಕನ್ನು ನೀಡಿದ ತನ್ನೂರ ಹಿತದ ಮೇಲೆ ತುಂಬು ಮಮಕಾರವಿದೆ. ಆ ಋಣ ಪ್ರಜ್ಞೆಯಿಂದ ಈ ಶಾಲೆಯನ್ನೇ ಮುಖ್ಯ ಕೇಂದ್ರವಾಗಿರಿಸಿಕೊಂಡು ಹಲವು ಚಿಕಿತ್ಸಾತ್ಮಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ.
ಅಲ್ಲದೆ ಶಾಲೆಯ ಆವರಣದಲ್ಲಿ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ತಂದೆ ಶ್ರೀ ತಿಮ್ಮಶೆಟ್ಟಿಗೌಡ ಹಾಗೂ ತಾಯಿ ಪಾರ್ವತಮ್ಮ ಅವರ ಹೆಸರಿನಲ್ಲಿ
ಸುಸಜ್ಜಿತ ಗ್ರಂಥಾಲಯವನ್ನು, ಮಕ್ಕಳಾದ ಸಿಹಿ, ಕನಸು ಅವರ ಹೆಸರಿನಲ್ಲಿ ರಂಗಮಂದಿರ ಹಾಗೂ ಮಡದಿ ಶೋಭ ಅವರ ಹೆಸರಿನಲ್ಲಿ ಕಂಪ್ಯೂಟರ್ ಕೇಂದ್ರ ಸ್ಥಾಪಿಸಿದ್ದಾರೆ. ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳು ಶಾಲೆಯ ಆವರಣ ಗೋಡೆಗಳಿಗೆ ವರ್ಲಿ ಕಲೆಯ ಚಿತ್ರ ಬಿಡಿಸುವುದರ ಮೂಲಕ ಶಾಲೆಯನ್ನು ಮತ್ತಷ್ಟು ಸಿಂಗಾರಗೊಳಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ ಅವರು ತಾವು ಕಟ್ಟಿದ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯ ಮೂಲಕ ಕಳೆದ 35ಕ್ಕೂ ಹೆಚ್ಚು ವರ್ಷಗಳಿಂದ ಸಾಹಿತ್ಯಕ ಕಾರ್ಯಕ್ರಮ, ಪುಸ್ತಕ ಪ್ರಕಟಣೆ, ರಂಗಭೂಮಿ ಚಟುವಟಿಕೆ, ಅಂತರ್ಜಾತಿ -ಅಂತರ್ಧರ್ಮೀಯ ಮತ್ತು ಸರಳ ವಿವಾಹಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ; ನಡೆಸಿಕೊಂಡು ಬರುತ್ತಿದ್ದಾರೆ.
ನಾಗತಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೋಟಕ್ಕೆ ಮಾತ್ರ ಚಂದವಾಗಿರದೇ ಪ್ರತಿವರ್ಷ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ
ಕುಟುಂಬ ವರ್ಗ ಮತ್ತು ಸಮಾನ ಮನಸ್ಕ ಒಡನಾಡಿಗಳ ಸಹಕಾರದಿಂದ, ಊರಿನ ಜನರ ಬೆಂಬಲದಿಂದ ಶಾಲೆಯ ಆವರಣದಲ್ಲಿ ಯುಗಾದಿ ವೇಳೆ
ಹಮ್ಮಿಕೊಳ್ಳುವ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ ಕಳೆದ ಇಪ್ಪತ್ತೊಂದು ವರುಷಗಳಿಂದ ಗ್ರಾಮ ಬದುಕಿಗೆ ಅಗತ್ಯವಾದ ಲೋಕ ಗ್ರಹಿಕೆಯ ಚಿಂತನೆ,
ಚಿಕಿತ್ಸೆ, ಚೈತನ್ಯ ತುಂಬುವ ಹಲವು ಪ್ರಯತ್ನಗಳ ಪ್ರಯೋಗಶಾಲೆಯಾಗಿಯೂ ರೂಪಿತಗೊಂಡಿದೆ. ಆ ಮೂಲಕ ತನ್ನ ಅಂಗಳಕ್ಕೆ ನಾಡಿನ ಶ್ರೇಷ್ಠ
ಚಿಂತಕರು, ಸಾಹಿತಿಗಳು, ಪತ್ರಕರ್ತರು, ಕೃಷಿ ವಿಜ್ಞಾನಿಗಳು, ವೈದ್ಯರು, ಕವಿ-ಕಲಾವಿದರನ್ನು ಬರಸೆಳೆದುಕೊಂಡಿದೆ.
ಮಾ.26ರಿಂದ ಐದು ದಿನಗಳ ಕಾಲಗಳ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜು, ಸದಸ್ಯರಾದ ಎಚ್.ಆರ್.ಸುಜಾತ, ರಿಜಿಸ್ಟ್ರಾರ್ ಕರಿಯಪ್ಪ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ, ಲಯನ್ ದೇದೇವೇಗೌಡ, ದೊಡ್ಡೇಗೌಡ, ಡಾ.ಶಿಲ್ಪಶ್ರೀ ಹರವು, ಡಾ.ರವಿಕುಮಾರ ನೀಹ, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಖ್ಯಾತ ಚಿತ್ರನಟರಾದ ಪ್ರಕಾಶ್ ರಾಜ್, ಕಿಶೋರ್, ಮಂಡ್ಯ ರಮೇಶ್, ಶಿಕ್ಷಣ ತಜ್ಞ ವೂಡೇ ಪಿ.ಕೃಷ್ಣ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಪ್ರೊ.ಎಂ.ಕೃಷ್ಣೇಗೌಡ ಸಮಾರೋಪ ನುಡಿಗಳನ್ನಾಡಲಿದ್ದಾರೆ.
‘21ನೇ ಸಂಸ್ಕೃತಿ ಹಬ್ಬ-2025’ ಹಾಗೂ ‘ನಾಗತಿಹಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮ’ಕ್ಕೆ ‘ಗ್ರಾಮ ಬದುಕನ್ನು ನೇರ್ಪುಗೊಳಿಸಬೇಕು’ ಎಂಬ
ಮಣ್ಣಋಣ ಪ್ರಜ್ಞೆಯಿಂದ ಮಾಡಬೇಕಾದ ನೂರಾರು ಕನಸುಗಳನ್ನು ಎದೆಯೊಳಗೆ ಇಟ್ಟುಕೊಂಡು ನಿರತರಾಗಿರುವ ನಾಗತಿಹಳ್ಳಿ ಚಂದ್ರಶೇಖರ ಹಾಗೂ ಅವರ ಒಡನಾಡಿಗಳು ಮತ್ತು ನಾಗತಿಹಳ್ಳಿಯ ಸಮಸ್ತ ಗ್ರಾಮಸ್ಥರು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದ ಕಾರ್ಯ, ಗ್ರಾಮ ಸಂಸ್ಕೃತಿಯನ್ನು ಉಳಿಸಬಯಸುವ ಎಲ್ಲರಿಗೂ ಮಾದರಿಯಾಗಲಿ.