Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನನ್ನ ಮದುವೆಯ ಪುರೋಹಿತ ದಲಿತ

-ಕಾಳೇಗೌಡ ನಾಗವರ, ಪ್ರಗತಿಪರ ಚಿಂತಕ

ಜೂ. 7ಕ್ಕೆ ನಾನು ಮದುವೆಯಾಗಿ 50 ವರ್ಷಗಳು ತುಂಬಿತು. ನನ್ನ ಹದಿನೈದನೆಯ ವಯಸ್ಸಿಗಾಗಲೇ (1962ರ ಸುಮಾರು) ವಚನಕಾರರು, ಗಾಂಧಿ, ಅಂಬೇಡ್ಕರ್, ಕುವೆಂಪು, ಬುದ್ಧ ಮುಂತಾದವರು ನನ್ನ ಮನಸ್ಸನ್ನು ತುಂಬಿಕೊಂಡಿದ್ದರು. ಪ್ರೀತಿ, ಸ್ವಾತಂತ್ರತ್ಯೃ ಮತ್ತು ಸಮಾನತೆಯ ಬಗೆಗಿನ ಕನಸುಗಳು ಆವರಿಸಿಕೊಳ್ಳತೊಡಗಿದವು. ಇದಾದ ಒಂದೆರಡು ವರ್ಷಗಳಲ್ಲಿ ಇದಕ್ಕೆಲ್ಲ ಪೂರಕವಾಗಿ ರಾಮಮನೋಹರ ಲೋಹಿಯಾ ಅವರ ಚಿಂತನೆ ಮತ್ತು ಕಾರ್ಯಶೀಲತೆಯು ಇನ್ನಿಲ್ಲದಂತೆ ಮನಸ್ಸನ್ನು ಗೆದ್ದುಕೊಂಡಿತು.

ಜಾತಿಪದ್ಧತಿ ಮತ್ತು ಅಸ್ತೃಶ್ಯತೆಯ ಸೋಂಕಿಲ್ಲದ ಆತ್ಮೀಯವೂ, ನಿರಾಡಂಬರವೂ ಮತ್ತು ಸ್ವಾಭಿಮಾನದ ಪ್ರತೀಕವೂ ಆಗಿರುವ ಪವಿತ್ರ ಕಾರ್ಯಕ್ರಮವಾಗಿ ನಮ್ಮ ಬದುಕಿನ ಅಮೂಲ್ಯ ಘಟನೆಯಾದ ಮದುವೆಯ ನೆರವೇರಬೇಕಲ್ಲವೆ? ಈ ಬಗೆಯ ಆತ್ಮೀಯ ಚಳುವಳಿಯೇ ದೊಡ್ಡ ಪ್ರಮಾಣದಲ್ಲಿ ಆಗಬೇಕೆಂದು ನಾವೆಲ್ಲ ಹಂಬಲಿಸುತ್ತಿದ್ದೆವು. ಜತೆಗೆ ಯಾರಿಗೂ ಹೊರೆಯಾಗದ ಮದುವೆಯಾಗಬೇಕು. ಕೊಡುವುದು ಹಾಗೂ ತೆಗೆದುಕೊಳ್ಳುವುದು ಇರಕೂಡದು. ಜಾತಿಪದ್ಧತಿಯ ಕುರುಡು ಕೊಂಡಿಯಾಗಿರುವ ಮೇಲು -ಕೀಳಿನ ನೀಚತನ ನಿಲ್ಲಬೇಕು ಎಂಬುವ ಗಟ್ಟಿ ಆಶಯ ನಮ್ಮದಾಗಿತ್ತು.

ನಾವೆಲ್ಲ ಈ ತನಕ ಕಡೆಗಣಿಸಿರುವ ನಮ್ಮ ಅಸ್ತೃಶ್ಯ ಸೋದರನೇ ನನ್ನ ಮದುವೆಯ ಪುರೋಹಿತನಾಗಲಿ. ನಮ್ಮ ಹಳ್ಳಿಗಾಡಿನಲ್ಲೇ ಈ ಆಶಯಗಳನ್ನು ಆಧರಿಸಿದ ಶುಭಕಾರ್ಯಗಳನ್ನು ಹಮ್ಮಿಕೊಳ್ಳೋಣ ಎಂದು ದೃಢವಾಗಿ ನಿಂತೆ. ಹುಟ್ಟಿನಿಂದಅಸ್ತೃಶ್ಯ ವರ್ಗಕ್ಕೆ ಸೇರಿದ ಅಧ್ಯಾಪಕನೊಬ್ಬನ ನೇತೃತ್ವದಲ್ಲಿ ಈ ಘಟನೆ ನಡೆಯಬೇಕೆಂದು ನಿರ್ಧರಿಸಿದೆವು. ೮-೬-೧೯೭೨ ರಂದು ನನ್ನ ಹುಟ್ಟೂರಾದ ಚನ್ನಪಟ್ಟಣ ತಾಲ್ಲೂಕು ನಾಗವಾರದಲ್ಲಿ ಮದುವೆಯ ಕಾರ್ಯಕ್ರಮ ನಿಶ್ಚಯವಾಯಿತು.

ಇಡೀ ಊರಿನ ಜನ ಬೆರಗಿನಿಂದ, ಗೌರವದಿಂದ ಹಾಗೆಯೇ ಆತಂಕದಿಂದ ಕುದಿಯುತ್ತಿದ್ದರು. ನಮ್ಮ ಜನರು ಉಳಿದುದೆಲ್ಲಾ ಒಪ್ಪಲು ಸಿದ್ಧರಿದ್ದರು. ಆದರೆ ಮದುವೆಯು ಊರಿನ ದಲಿತ ಬಂಧುವಿನ ನೇತೃತ್ವದಲ್ಲಿ ನಡೆಯಲು ವಿಚಿತ್ರವಾಗಿ ಅಡ್ಡಿಯಾದರು. ಪುರೋಹಿತನಾಗಲು ಒಪ್ಪಿದ್ದ ದಲಿತ-ಅಧ್ಯಾಪಕ ಮಿತ್ರ ಸಿಂಗ್ರಯ್ಯನನ್ನು ನನ್ನ ಗೈರುಹಾಜರಿಯಲ್ಲಿ ಅವರೆಲ್ಲ ಒಂದು ರೀತಿಯಲ್ಲಿ ಹೆದರಿಸಿದ್ದರು; ‘ಈ ಕಾಳೇಗೌಡ ಮೊದಲೇ ಓದಿ ತಲೆಕೆಡಿಸಿಕೊಂಡಿರುವವನು. ಗಡ್ಡಬಿಟ್ಟು ಸನ್ಯಾಸಿಯಾಗಿ ತಿರುಗುವ ಹುಚ್ಚ. ಆತನ ಮಾತು ಕಟ್ಟಿಕೊಂಡು ನೀನು ಪುರೋಹಿತ – ಗಿರೋಹಿತ ಅಂತ ಮುಂದೆ ನಿಂತರೆ ನಾವು ಕೇಳುವುದಿಲ್ಲ.

ನಮ್ಮ ಕುಲಾಚಾರಕ್ಕೆ, ದೇವರು – ದಿಂಡರಿಗೆ ಅಪಚಾರವಾಗುತ್ತದೆ. ಗಲಾಟೆ ಆಗಿ ಆ ದಿನ ಯಾರಾದರೂ ಸಿಟ್ಟಿನಲ್ಲಿ ಕೈಕಾಲು ಮುರಿದರೆ ನಾವು ಜವಾಬ್ದಾರರಲ್ಲ ಎಂದೆಲ್ಲ ಹೇಳಿ ಉದ್ವಿಗ್ನರಾಗಿದ್ದರು’. ಗೆಳೆಯ ಸಿಂಗ್ರಯ್ಯ ಕ್ರಮೇಣ ತೀರಾ ಗಾಬರಿಯಾದರು. ತಮ್ಮ ನಿಸ್ಸಾಹಯಕತೆಯನ್ನು ತೋಡಿಕೊಂಡರು. ಈ ವಿಚಾರಗಳ ಬಗ್ಗೆ ಅಷ್ಟೇನೂ ಖಚಿತವಾದ ನಿಲುವಿಲ್ಲದ ಅವರನ್ನು ನಾನು ಒತ್ತಾಯ ಪಡಿಸಲಿಲ್ಲ.

ಈ ಎಲ್ಲ ಸಂಗತಿಗಳನ್ನು ಹಿರಿಯರಾದ ಕೆ. ಎಚ್.ರಂಗನಾಥ್ ಅವರಿಗೆ ವಿವರಿಸಿದೆ. ಮೊದಲೇ ಗಂಭೀರವಾಗಿದ್ದ ರಂಗನಾಥ್ ನನ್ನ ಹೆಗಲ ಮೇಲೆ ಪ್ರೀತಿಯಿಂದ ಕೈ ಇಟ್ಟು ಇನ್ನಷ್ಟು ದೃಢವಾದ ದನಿಯಲ್ಲಿ ‘ಈ ನಿಮ್ಮಉದ್ದೇಶ ಶ್ರೇಷ್ಟ್ರವಾದದ್ದು . ಇಂತಹದ್ದು ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆೆುೀಂ ಆಗಿದೆ. ಆ ದಿನ ಯಾವುದೇ ಮುಖ್ಯಕಾರ್ಯ ಇದ್ದರೂ, ಅದನ್ನು ಪಕ್ಕಕ್ಕಿಟ್ಟು ನಿಮ್ಮ ಹಳ್ಳಿಗೆ ನಾನು ಬರುತ್ತೇನೆ. ಏನೇ ಬಂದರೂ ಸಂತೋಷದಿಂದ ಸ್ವೀಕರಿಸೋಣ’ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ನಮ್ಮ ಜನಸಮುದಾಯಕ್ಕೆ ಅನೇಕ ವಿಚಾರಗಳಲ್ಲಿ ತಿಳುವಳಿಕೆ ನೀಡುವ ಉದ್ದೇಶ ನನಗೆ ಇತ್ತು. ಇದನ್ನು ಒಂದು ಅಪರಿಮಿತ ಅಕ್ಕರೆಯ ಕಾರ್ಯವೆಂದು ನಾವು ಭಾವಿಸಿ ‘ಮೂಢಸಂಪ್ರದಾಯ ವಿರೋದಿ ಸಮ್ಮೇಳನ’ ಎಂದು ಕರೆದೆವು. ಮದುವೆಯ ದಿನ ವಿಪರೀತ ಜನ ಸೇರಿದರು. ಆ ದಿನ ಮುಂಜಾನೆ ನಮ್ಮ ಪ್ರೌಢಶಾಲೆಯ ಹೊರಗೋಡೆಯಲ್ಲಿದ್ದ ಸುಭಾಷಿತಗಳನ್ನು ಬರೆಯುವ ಕಪ್ಪು ಹಲಗೆಯ ಮೇಲೆ ಲೋಹಿಯಾ ಅವರ ವಾಕ್ಯಗಳನ್ನು ಬರೆದಿದ್ದೆ -‘ಈ ದೇಶಕ್ಕೆ ಜೀವದಾನ ಮಾಡುವ ಹೊಸದೇನಾದರೂ ಇದ್ದರೆ, ಅದು ಎಷ್ಟೇ ಅಪಾಯಕಾರಿ,ಅಪಖ್ಯಾತಿಕಾರಿಯಾಗಿದ್ದರೂ ಗಾಂಧೀಜಿ ಮಾಡದೆ ಬಿಡುತ್ತಿರಲಿಲ್ಲ. ಕೆಲವರನ್ನು ಕೋಪಾವಿಷ್ಟರನ್ನಾಗಿ ಮಾಡದೆ ಏನನ್ನೂ ಸಾದಿಸಲಾಗದು. ನಮ್ಮ ಜನಪ್ರಿಯತೆಯನ್ನು ಪಣವನ್ನಾಗಿ ಒಡ್ಡಿ ಇಂಥವರೊಡನೆ ಸೆಣಸಬೇಕು’.
ಸರಳ ವಿವಾಹ ಮಹೋತ್ಸವ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷ ರಂಗನಾಥ್ ನೀಡಿದ ಪ್ರಮಾಣ ವಚನಗಳನ್ನು ಪಠಿಸಿದರು. ಈ ಕ್ಷಣದಿಂದ ನನ್ನ ಜೀವನದ ಸಂಗಾತಿಯನ್ನಾಗಿ ತುಂಬು ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದೇನೆ ಎಂದು ಹೇಳಿ ತಾಳಿಕಟ್ಟಿದೆ. ಭಾರಿ ಜನಸ್ತೋಮ ದೀರ್ಘ ಕರತಾಡನ ಉಂಟು ಮಾಡಿತು. ನೂತನ ದಂಪತಿಗಳನಗಳನ್ನು ನೋಡಿ ಅಭಿನಂದಿಸಲು ನೂಕು ನುಗ್ಗಲು ಆರಂಭವಾಯಿತು.

Tags: