ನಾನು ಮಲ್ಲಮ್ಮಾ ಗಾಣಿಗಿ, ಉತ್ತರ ಕರ್ನಾಟಕದ ಮಮಾದಾಪುರ ಎಂಬ ಸಣ್ಣ ಹಳ್ಳಿಯವಳು. ಸದ್ಯಕ್ಕೆ ಮೈಸೂರಿನಲ್ಲಿ ವಾಸಿಸುತ್ತಿದ್ದೇನೆ. ವಿದ್ಯುನ್ಮಾನ ಮತ್ತು ಸಂವಹನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನ ಹೆಸರಾಂತ ಐ.ಟಿ. ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ‘ಟೆಸ್ಟ್ ಆರ್ಕಿಟೆಕ್ಟ್’ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಮಹಿಳಾ ಸಬಲೀಕರಣ ನಾನು ಅಪಾರ ಆಸಕ್ತಿ ಹೊಂದಿರುವ ಮತ್ತು ನನ್ನನ್ನು ತೊಡಗಿಸಿಕೊಂಡಿರುವ ಕ್ಷೇತ್ರ, ಅದರಲ್ಲೂ ಬಡ ಹೆಣ್ಣುಮಕ್ಕಳ ಸಬಲೀಕರಣ ನನ್ನ ಕನಸು, ಮಹಿಳೆಯರು ಸ್ವಾವಲಂಬಿಗಳಾಗಿರಬೇಕು ಎಂಬುದೇ ನನ್ನ ಧ್ಯೇಯ.
ನಾನು ಪರಿಸರ ಪ್ರಿಯೆಯೂ ಹೌದು. ಪರಿಸರ ರಕ್ಷಣೆಯ ವಿಚಾರದಲ್ಲಿ ಹೆಚ್ಚು ಒಲವು ಹೊಂದಿದ್ದೇನೆ. ಮೈಸೂರಿನ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಸಂಸ್ಥೆಗಳು ಆಯೋಜಿಸುವ ಅನೇಕ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತೇನೆ.
ಶಿಕ್ಷಣವು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು. ಪ್ರತಿ ಮಕ್ಕಳೂ ಶಿಕ್ಷಣ ಪಡೆಯಬೇಕು. ಇದಕ್ಕಾಗಿ ನಾನು ಮತ್ತು ನನ್ನ ಪತಿ ಸೇರಿ ಬಡ ಕುಟುಂಬದ ಒಂದೆರಡು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಬೆಂಬಲವನ್ನು ನೀಡುತ್ತಾ ಬಂದಿದ್ದೇವೆ. ಹಾಗೆಯೇ ಹಲವು ಸಮ ಮನಸ್ಕರ ಜೊತೆಗೂಡಿ ನಾನು ಓದಿದ ಶಾಲೆ ಹಾಗೂ ಕೆಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳು, ಕಂಪ್ಯೂಟರ್, ಶಾಲಾ ಶುಲ್ಕ ಇವುಗಳಿಗೆ ಅಗತ್ಯವಾದ ನೆರವನ್ನು ನೀಡುತ್ತಾ ಬಂದಿದ್ದೇವೆ. ಇದು ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಪ್ರಯತ್ನ.
ಇದರೊಂದಿಗೆ ರೂಪ ದರ್ಶಿಯಾಗಿಯೂ ನನ್ನ ಬದುಕು ಉತ್ತಮವಾಗಿದೆ. ಪ್ರತಿ ಮಹಿಳೆಯೂ ತನ್ನದೇ ಆದ ರೀತಿಯಲ್ಲಿ ಅನನ್ಯ ಮತ್ತು ಸುಂದರ, ವಿವಾಹಿತ ಮಹಿಳೆಯರಿಗಾಗಿ ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಈ ಸ್ಪರ್ಧೆಯಲ್ಲಿ ಕೇವಲ ಬಾಹ್ಯ ಸೌಂದರ್ಯಕ್ಕೆ ಮಾತ್ರವಲ್ಲದೆ, ಆಂತರಿಕ ಸೌಂದರ್ಯ, ಪ್ರತಿಭೆ, ಬುದ್ಧಿವಂತಿಕೆ ಜತೆಗೆ ವಿವಾಹಿತ ಮಹಿಳೆಯ ವ್ಯಕ್ತಿತ್ವವನ್ನೂ ಗುರುತಿಸಲಾಗುತ್ತದೆ.
ಈ ಸ್ಪರ್ಧೆಯು ಎಲ್ಲ ವಯಸ್ಸಿನ, ಜನಾಂಗದ ಮಹಿಳೆಯರಿಗೆ ತೆರೆದಿರುತ್ತದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು, ನಿಮ್ಮ ಗುರಿಗಳನ್ನು ತಲುಪಲು ಇಲ್ಲಿ ಉತ್ತಮ ಮಾರ್ಗದರ್ಶನ ಸಿಗಲಿದೆ.
ಈ ಸ್ಪರ್ಧೆಯು ಮನರಂಜನಾ ಪ್ರಪಂಚದೊಂದಿಗೆ ಸಂಬಂಧ ಹೊಂದಿರುವುದರಿಂದ ಈ ಸ್ಪರ್ಧೆಯ ಕಾರ್ಯಕ್ರಮಗಳು ನಮಗೆ ಬಹಳಷ್ಟು ಅವಕಾಶಗಳನ್ನು
ಒದಗಿಸಿಕೊಡುತ್ತದೆ.
ಮಾಡೆಲಿಂಗ್, ನಟನೆ, ಸೌಂದರ್ಯ ಪ್ರದರ್ಶನದಂತಹ ಅನೇಕ ಅವಕಾಶಗಳನ್ನು ದೊರಕಿಸಿಕೊಡುತ್ತದೆ. ಮನರಂಜನೆಯ ಕ್ಷೇತ್ರ ಎಂಬುದು ನಮ್ಮ ಕನಸನ್ನು ನನಸು ಮಾಡಲು ಸಹಾಯ ಮಾಡಬಹುದು. ನಾನು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಿಂದ ಇತ್ತೀಚೆಗೆ ರಾಜಸ್ಥಾನದ ರಾಣತಂಬೂರ್‌ನಲ್ಲಿ ವಿವಾಹಿತ ಹೆಣ್ಣು ಮಕ್ಕಳಿಗೆ ನಡೆದ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಾಹಿಸಿ Mrs India Corporate Queen ಎಂಬ ಬಿರುದು ಪಡೆದಿದ್ದೇನೆ.
ಇದು ನನಗೆ ಬಹಳಷ್ಟು ಹೆಮ್ಮೆ ತಂದಿದೆ. ಬಿರುದು, ಪ್ರಶಸ್ತಿಗಳು ಒಂದೆಡೆ ಇರಲಿ. ಈ ಸ್ಪರ್ಧೆ ಯಿಂದ ನಾನು ಅನೇಕ ವಿಷಯಗಳನ್ನು ಕಲಿತೆ. ನನ್ನೊಳಗಿನ ಆಂತರಿಕ ಶಕ್ತಿ, ಆತ್ಮಸ್ಥೆರ್ಯ, ಪ್ರತಿಭೆಗಳನ್ನು ವೇದಿಕೆಗೆ ತರಲು ಸಹಾಯ ಮಾಡಿ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ. 7-8 ವರ್ಷಗಳ ಕಲಿಕೆ 6 ತಿಂಗಳಿನಲ್ಲಿ ಆಯಿತು. ವಿಭಿನ್ನ ರೀತಿಯ ಉಡುಪು – ಅಲಂಕಾರ, ಆತ್ಮ ವಿಶ್ವಾಸ ಮತ್ತು ಮುಗುಳ ನಗೆಯ ನಡಿಗೆ, ಒಳ್ಳೆಯ ಮಾತುಗಾರಿಕೆ, ನಾವು ಜಗತ್ತಿಗೆ ನಮ್ಮನ್ನು ಪ್ರಸ್ತುತಪಡಿಸುವ ರೀತಿ, ಒಟ್ಟಾರೆ ವಕ್ತಿತ್ವ ವಿಕಸನಕ್ಕೆ ದಾರಿಯಾಯಿತು.
ನನ್ನ ಜೀವನದ ಓದು, ಮದುವೆ, ಉದ್ಯೋಗ, ಎಲ್ಲ ಹಂತಗಳಲ್ಲಿಯೂ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಕಠಿಣ ಪರಿಶ್ರಮ, ಧೈರ್ಯ, ದೃಢ ನಿಶ್ಚಯದಿಂದ ಆ ಸವಾಲುಗಳನ್ನು ನಿಭಾಯಿಸಿದ್ದೇನೆ. ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ಏನನ್ನಾದರೂ ಸಾಧಿಸಬೇಕು ಎಂಬುದು ನಮ್ಮ ಮನಸ್ಸಿನಲ್ಲಿ ದೃಢವಾಗಿದ್ದರೆ ಸಾಕು ನಾವು ಸಣ್ಣ ಹಳ್ಳಿಯ ಬಡ ಕುಟುಂಬದಿಂದ ಬಂದಿದ್ದರೂ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೂ ಯಾವ ಸಾಧನೆ ಬೇಕಿದ್ದರೂ ಮಾಡಬಹುದು. ಇದರ ಜೊತೆಗೆ ನಾನು ಹಾಡುವುದು, ಓದುವುದು, ಮೋಟಾರ್ ಬೈಕ್ ಓಡಿಸುವುದು ಹೀಗೆ ಅನೇಕ ಹವ್ಯಾಸಗಳಲ್ಲಿಯೂ ತೊಡಗಿದ್ದೇನೆ. ಬಲವಾದ ಮಹಿಳೆ ತನ್ನನ್ನು ತಾನೇ ಪ್ರತಿನಿಧಿಸುತ್ತಾಳೆ, ಬಲಿಷ್ಠವಾದ ಮಹಿಳೆ ಪ್ರತಿಯೊಬ್ಬರ ಪರವಾಗಿಯೂ ನಿಲ್ಲುತ್ತಾಳೆ ನಾವೆಲ್ಲರೂ ಬಲಿಷ್ಠವಾದ ಮಹಿಳೆಯರಾಗೋಣ.





