Mysore
25
broken clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಕರಿಮುಲ್ಲಾ ಹಖ್ ಎಂಬ ‘ಬೈಕ್ ಆಂಬ್ಯುಲೆನ್ಸ್’ ದಾದ!

-ಪಂಜು ಗಂಗೊಳ್ಳಿ

ಕರೀಮುಲ್ಲಾ ಖಾನ್‌ರ ಬೈಕ್  ಆಂಬ್ಯುಲೆನ್ಸ್‌ನ ಯಶಸ್ಸನ್ನು ನೋಡಿ, ದೇಶದ ಹಲವೆಡೆ, ಮುಖ್ಯವಾಗಿ ಸೂಕ್ತ ರಸ್ತೆಗಳಿಲ್ಲದ, ಬಡವರು ಹೆಚ್ಚಿರುವ ಕುಗ್ರಾಮಗಳಲ್ಲಿ, ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು ಬೈಕ್ ಆಂಬ್ಯುಲೆನ್ಸ್ ಸೇವೆಗಳನ್ನು ಶುರು ಮಾಡಿದ್ದಾರೆ. ಗುಡ್ಡಗಾಡುಗಳ ಬಡ ರಾಜ್ಯವಾಗಿರುವ ಛತ್ತೀಸ್‌ಗಢ್ ನೂರಾರು ಸಂಖ್ಯೆಯಲ್ಲಿ ಬೈಕ್ ಆಂಬ್ಯುಲೆನ್ಸ್‌ಗಳನ್ನು ನಡೆಸುತ್ತಿದೆ. ತಮಿಳುನಾಡು ಕೂಡ ತನ್ನ ಕುಗ್ರಾಮಗಳಲ್ಲಿ ಬೈಕ್ ಆಂಬ್ಯುಲೆನ್ಸ್ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ.

ಈ ಜೀವ ಜೀವನ

ಪಶ್ಚಿಮ ಬಂಗಾಳದ ಧಾಲಾಬಾರಿ ಎಂಬ ಗ್ರಾಮದ 59 ವರ್ಷ ಪ್ರಾಯದ ಕರಿಮುಲ್ಲಾ ಹಖ್‌ರ ತಾಯಿ ಜಫ್ರಾನ್ ನಸ್ಸಾ 1995ರ ಒಂದು ಮಧ್ಯ ರಾತ್ರಿ ಹೊತ್ತು ಬಹಳ ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ಒಯ್ಯಬೇಕಾದರೆ 40 ಕಿ.ಮೀ. ದೂರ ಹೋಗಬೇಕು. ಅಪರಾತ್ರಿ ಹೊತ್ತು ಅಷ್ಟು ದೂರ ಹೋಗಲು ಚಹ ತೋಟದ ಕೆಲಸಗಾರನಾದ ಬಡ ಕರಿಮುಲ್ಲಾ ಬಳಿ ಯಾವ ವ್ಯವಸ್ಥೆಯೂ ಇರಲಿಲ್ಲ. ಆ ರಾತ್ರಿ ಹೊತ್ತಲ್ಲಿ ಕರಿಮುಲ್ಲಾ ಯಾರ ಬಳಿ ಅಂಗಲಾಚಿದರೂ ಯಾವುದೇ ಸಾರಿಗೆ ವ್ಯವಸ್ಥೆ ಮಾಡಲಾಗದೆ, ಅವರ ತಾಯಿ 2.45ರ ಹೊತ್ತಿಗೆ ಪ್ರಾಣ ಬಿಟ್ಟರು.

ಈಗಲೂ ಭಾರತದ ಎಷ್ಟೋ ಕುಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಎಷ್ಟೋ ಜನ ಸೂಕ್ತ ಆಂಬ್ಯುಲೆನ್ಸ್‌ನ ವ್ಯವಸ್ಥೆಯಿಲ್ಲದೆ, ಇದ್ದರೂ ಅದರ ಬಾಡಿಗೆ ಕೊಡಲು ಹಣವಿಲ್ಲದೆ ಸೈಕಲ್ ಮೇಲೋ, ಬೈಕು, ಸ್ಕೂಟರ್‌ಗಳ ಮೇಲೋ ರೋಗಿಗಳನ್ನು ಕುಳ್ಳಿರಿಸಿಕೊಂಡು ಆಸ್ಪತ್ರೆಗೆ ದೌಡಾಯಿಸುವ ದೃಶ್ಯ, ಸುದ್ದಿಗಳು ಮಾಧ್ಯಮಗಳಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಬೈಕು, ಸ್ಕೂಟರ್, ಸೈಕಲ್‌ಗಳಿಗೂ ವ್ಯವಸ್ಥೆಯಿಲ್ಲದೆ ಬಟ್ಟೆ ಅಥವಾ ಬಿದಿರುಗಳ ಜೂಲಾಗಳ ಮೇಲೆ ಅಥವಾ ಜನ ತಮ್ಮ ಹೆಗಲುಗಳ ಮೇಲೆ ರೋಗಿಗಳನ್ನು ಕುಳ್ಳಿರಿಸಿಕೊಂಡು ಆಸ್ಪತ್ರೆಗೆ ಓಡುವ ದೃಶ್ಯವೂ ಇಲ್ಲಿ ಸಾಮಾನ್ಯ.

ಇಂತಹದೇ ಪರಿಸ್ಥಿತಿಯಿಂದಾಗಿ ತನ್ನ ತಾಯಿಗೆ ಸಕಾಲದಲ್ಲಿ ವೈದ್ಯಕೀಯ ಆರೈಕೆ ಪಡೆಯಲಾಗದೆ ನಿಧನರಾದುದು ಕರಿಮುಲ್ಲಾ ಹಖ್‌ರನ್ನು ತೀವ್ರವಾದ ದುಃಖಕ್ಕೆ ತಳ್ಳಿತು. ಇಂತಹದೇ ಪರಿಸ್ಥಿತಿಗೆ ಒಳಗಾಗಿ ತನ್ನ ಹಳ್ಳಿಯ ಅದೆಷ್ಟು ಜನ ಸತ್ತಿರಬಹುದು ಎಂಬ ಆಲೋಚನೆ ಅವರನ್ನು ಇನ್ನಷ್ಟು ಕುಗ್ಗಿಸಿತು. ಅದೇ ದುಃಖದಲ್ಲಿದ್ದಾಗ ಅವರಿಗೆ ಏನೋ ಒಂದು ಆಲೋಚನೆ ಹೊಳೆಯಿತು. ಕೆಲವು ತಿಂಗಳ ನಂತರ ಕರಿಮುಲ್ಲಾ ಸಾಲದ ಮೇಲೆ ಒಂದು ಬೈಕನ್ನು ಖರೀದಿಸಿದರು. ಬೈಕಿನ ಹಿಂದೆ ಮತ್ತು ಮುಂದೆ ‘ಆಂಬ್ಯುಲೆನ್ಸ್’ ಎಂದು ಬರೆದ ಫಲಕಗಳನ್ನು ಜೋಡಿಸಿದರು.

ಹಿಂದೆ ಮುಂದೆ ‘ಆಂಬ್ಯುಲೆನ್ಸ್’ ಎಂದು ಬೋರ್ಡು ಅಂಟಿಸಿಕೊಂಡು ಓಡಾಡುತ್ತಿದ್ದ ಕರಿಮುಲ್ಲಾ ಹಖ್‌ರ ಬೈಕನ್ನು ಕಂಡು ಧಾಲಾಬಾರಿ ಗ್ರಾಮದ ಜನ ಮೊದಲು ನಕ್ಕು ಅಪಹಾಸ್ಯ ಮಾಡಿದರು. ಆದರೆ, ಕರಿಮುಲ್ಲಾ ಜನರ ಅಪಹಾಸ್ಯಕ್ಕೆ ಎದೆಗುಂದಲಿಲ್ಲ. ಅವರು ಅದೇ ಬೈಕ್ ಆಂಬ್ಯುಲೆನ್ಸ್‌ನಲ್ಲಿ ಕೆಲವು ರೋಗಿಗಳನ್ನು ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಯಶಸ್ವಿಯಾಗಿ ಸಾಗಿಸಿದ ನಂತರ ಹಳ್ಳಿಯ ಜನರ ಅಪಹಾಸ್ಯ ಮೆಚ್ಚುಗೆಯಾಗಿ ಬದಲಾಯಿತು. ಇವರ ಬೈಕ್ ಆಂಬ್ಯುಲೆನ್ಸ್ ನೋಡಿ ನಕ್ಕವರಲ್ಲೂ ಕೆಲವರು ತಮ್ಮ ಸಂಬಂಧಿಕರನ್ನು ಇದೇ ಬೈಕ್ ಆಂಬ್ಯುಲೆನ್ಸ್‌ನಲ್ಲಿ ಕುಳ್ಳಿರಿಸಿಕೊಂಡು ಆಸ್ಪತ್ರೆಗೆ ಹೋಗಬೇಕಾಗಿ
ಬಂದಿತು. ಅಂದು ಕರಿಮುಲ್ಲಾರನ್ನು ಗೇಲಿ ಮಾಡಿದ ಜನ ಇಂದು ಅವರನ್ನು ಪ್ರೀತಿ, ಮೆಚ್ಚುಗೆಯಿಂದ ‘ಆಂಬ್ಯುಲೆನ್ಸ್ ದಾದಾ (ಆಂಬ್ಯುಲೆನ್ಸ್ ಅಣ್ಣ)’ ಎಂದು ಕರೆಯತ್ತಾರೆ.

ಕರಿಮುಲ್ಲಾ ರೋಗಿಯನ್ನು ಬೈಕಿನ ಮೇಲೆ ಕುಳ್ಳಿರಿಸಿಕೊಂಡು, ಒಂದು ಉದ್ದನೆಯ ಬಟ್ಟೆಯಿಂದ ತನ್ನ ಬೆನ್ನಿಗೆ ರೋಗಿಯನ್ನು ಕಟ್ಟಿಕೊಳ್ಳುತ್ತಾರೆ. ನೀವು ಒಂದು ಕಾರು ಖರೀದಿಸಿ ಅದನ್ನು ಆಂಬ್ಯುಲೆನ್ಸ್ ಆಗಿ ನಡೆಸುವ ಬದಲು ಬೈಕನ್ನು ಏಕೆ ಆರಿಸಿಕೊಂಡಿರಿ? ಎಂದು ಕೇಳಿದರೆ ಕರಿಮುಲ್ಲಾ ಹಖ್ ಉತ್ತರಿಸುವುದು ಹೀಗೆ-‘ಮೊತ್ತ ಮೊದಲ ಕಾರಣವೆಂದರೆ ನಾನೊಬ್ಬ ಬಡವ. ಕಾರು ಖರೀದಿಸಲು ನನಗೆಲ್ಲಿಂದ ಹಣ ಬರಬೇಕು? ಈ ಬೈಕು ಕೂಡ ಸಾಲದ ಹಣದಲ್ಲಿ ಖರೀದಿಸಿದುದು. ಇನ್ನೂ ಬೇರೆ ಕಾರಣಗಳೆಂದರೆ ನಮ್ಮದು ಹಳ್ಳಿಗಾಡು. ಇಲ್ಲಿ ಕಾಡುಗಳು, ನೀರಿನ ತೊರೆ, ಕಾಲುವೆಗಳು ಯಥೇಚ್ಛವಾಗಿವೆ. ಇಂತಹ ಪ್ರದೇಶದಲ್ಲಿ ಕಾರು ಹೆಚ್ಚಿನ ಉಪಯೋಗಕ್ಕೆ ಬಾರದು. ಬೈಕಿನಲ್ಲಾದರೆ ಎಂತಹ ಕಿರುದಾರಿಯಲ್ಲೂ, ಎಂತಹ ಏರುತಗ್ಗಿನಲ್ಲೂ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯ. ಎಷ್ಟು ಸಾಧ್ಯವೋ ಅಷ್ಟು ಜನ ರೋಗಿಗಳನ್ನು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಿಸುವುದು ನನ್ನ ಉದ್ದೇಶ. ಅವರ‍್ಯಾರಿಗೂ ನನ್ನ ತಾಯಿ ಪರಿಸ್ಥಿತಿ ಬರಬಾರದು. ಬಹುಶಃ ನನ್ನ ತಾಯಿ ಮೇಲೆಲ್ಲೋ ನಿಂತು ನಾನು ಮಾಡುತ್ತಿರುವುದನ್ನು ನೋಡಿ ಸಂತೋಷಪಡುತ್ತಿದ್ದಾಳೆ ಅಂತ ನನಗನ್ನಿಸುತ್ತದೆ.’

ಕರಿಮುಲ್ಲಾ ಹಖ್ ಈವರೆಗೆ ಪಶ್ಚಿಮ ಬಂಗಾಳದ ಜಲ್ಪಾಯ್‌ಗುರಿ ಜಿಲ್ಲೆಯ  20 ಹಳ್ಳಿಗಳಿಂದ ಕನಿಷ್ಠವೆಂದರೂ 7,000ಕ್ಕೂ ಹೆಚ್ಚು ರೋಗಿಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ಒಯ್ದು ಅವರ ಜೀವ ಉಳಿಸಿದ್ದಾರೆ. ಮತ್ತು, ರೋಗಿಯ ಯಾರಾದರೊಬ್ಬ ಸಂಬಂಧಿಯನ್ನು ಜೊತೆಯಲ್ಲಿರಿಸಿಕೊಳ್ಳುತ್ತಾರೆ. ಕರಿಮುಲ್ಲಾ ಇವುಗಳಲ್ಲಿ ಒಂದು ಘಟನೆಯನ್ನು ಸದಾ ಕಾಲ ನೆನಪಿಟ್ಟುಕೊಂಡಿದ್ದಾರೆ. ಒಂದು ದಿನ ಅವರು ಮಧ್ಯಾಹ್ನದ ಹೊತ್ತು ಮನೆಯಲ್ಲಿ ಉಣ್ಣಲು ಕುಳಿತಿದ್ದರು. ಒಂದು ತುತ್ತು ಬಾಯಿಗಿಟ್ಟಿದ್ದರು ಅಷ್ಟೇ, ಆಗ ಅವರಿಗೊಂದು ಟೆಲಿಫೋನ್ ಕರೆ ಬಂದಿತು. ಆಗಷ್ಟೇ ಹುಟ್ಟಿದ ಮಗುವೊಂದು ಗಂಭೀರವಾಗಿ ಅಸ್ವಸ್ಥಗೊಂಡು,
ಮಗುವಿನ ತಂದೆ ಈಗಲೇ ಬರುವಂತೆ ಕೇಳಿಕೊಂಡ. ಕರೀಮುಲ್ಲಾ ಊಟ ಮಾಡುವುದನ್ನು ನಿಲ್ಲಿಸಿ, ಹೊರಟು ನಿಂತರು. ಅವರ ಹೆಂಡತಿ ಊಟ ಮುಗಿಸಿ ಹೋಗಿ ಅಂತ ಎಷ್ಟೇ ಒತ್ತಾಯ ಮಾಡಿದರೂ ಕರೀಮುಲ್ಲಾ ಬೈಕ್ ಏರಿ, ಮಗುವಿನ ಮನೆಗೆ ಹೋಗಿ, ಮಗು ಮತ್ತು ಅದರ ತಂದೆಯನ್ನು ಕುಳ್ಳಿರಿಸಿಕೊಂಡು 70 ಕಿ. ಮೀ. ದೂರದ ಆಸ್ಪತ್ರೆ ತಲುಪಿದರು. ಆದರೆ, ಮಗುವನ್ನು ಪರೀಕ್ಷಿಸಿದ ಡಾಕ್ಟರ್ ಮಗು ಬರುವಾಗಲೇ ಸತ್ತಿದೆ ಎಂದು ಹೇಳಿದಾಗ, ಮಗುವಿನ ತಂದೆಯ ಜೊತೆಗೆ ಕರಿಮುಲ್ಲಾ ಹಖ್ ಕೂಡ ದುಃಖದ ಮಡುವಿಗೆ ಜಾರಿದರು.

ಆ ಘಟನೆಯ ನಂತರ ಕರಿಮುಲ್ಲಾ ತಮ್ಮ ಬೈಕ್ ಆಂಬ್ಯುಲೆನ್ಸಿಗೆ ಒಂದು ಸೈಡ್ ಕಾರಿನಂತಹ ರಚನೆಯನ್ನು ಜೋಡಿಸಿಕೊಂಡರು. ಅದರಲ್ಲಿ ಒಂದು ಆಕ್ಸಿಜನ್ ಸಿಲಿಂಡರ್ ಕೂಡ ಇದೆ. ರೋಗಿಯನ್ನು ಸೈಡ್ ಕಾರಲ್ಲಿ ಕುಳ್ಳಿರಿಸಿ, ರೋಗಿಯ ಸಂಬಂಧಿಯನ್ನು ಹಿಂದಿನ ಸೀಟ್‌ನಲ್ಲಿ ಕುಳ್ಳಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೆಲವು ವೈದ್ಯರ ಸಹಾಯದಿಂದ ಕೆಲವು ಪ್ರಥಮ ಚಿಕಿತ್ಸಾ ವಿಧಾನಗಳನ್ನು ಮತ್ತು ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಗತ್ಯ ಸಂದರ್ಭಗಳಲ್ಲಿ ಕೊಡಬಹುದಾದ ಔಷಧಿಗಳ ಹೆಸರುಗಳನ್ನು ತಿಳಿದುಕೊಂಡರು. ಕೆಲವು ಸಂದರ್ಭಗಳಲ್ಲಿ ಕರಿಮುಲ್ಲಾ ವೈದ್ಯರಿಗೆ ಫೋನ್ ಮೂಲಕ ರೋಗಿಯ ಕಾಯಿಲೆ ಹಾಗೂ ಆಗಿನ ಪರಿಸ್ಥಿತಿಯನ್ನು ವಿವರಿಸಿ, ಆಸ್ಪತ್ರೆ ತಲುಪುವ ತನಕ ಏನು ಮಾಡಬೇಕೆಂಬುದನ್ನು ತಿಳಿದುಕೊಂಡು ಅದರಂತೆ ರೋಗಿಯನ್ನು ಉಪಚರಿಸುತ್ತಾರೆ. ಮತ್ತು, ಕೆಲವೊಮ್ಮೆ ರೋಗಿಯನ್ನು ಉಳಿಸಲಾಗದೆ, ಹೆಣವನ್ನು ಮನೆಗೆ ತರಬೇಕಾಗುವ ಪ್ರಸಂಗ ಬರುತ್ತದೆ. ಅದಕ್ಕಾಗಿ ಕರಿಮುಲ್ಲಾ ಚಕ್ರಗಳನ್ನು ಜೋಡಿಸಿದ ಒಂದು ಶವ ಪೆಟ್ಟಿಗೆಯನ್ನು ತಯಾರಿಸಿಕೊಂಡಿದ್ದಾರೆ.

ಹಗಲು ರಾತ್ರಿಯೆನ್ನದೆ ಯಾವ ಹೊತ್ತಲ್ಲೂ ಅವರಿಗೆ ಕರೆ ಬರುತ್ತದೆ. ಅದಕ್ಕಾಗಿ ಅವರ ಮೊಬೈಲ್ ಫೋನ್ ಯಾವತ್ತೂ ಆನ್‌ನಲ್ಲಿರುತ್ತದೆ. ಕೋವಿಡ್  ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನವರು ಜೀವ ಭಯದಿಂದ ತಮ್ಮ ತಮ್ಮ ಮನೆಯೊಳಗೆ ಸುರಕ್ಷಿತವಾಗಿ ಕುಳಿತಿದ್ದರೆ, ಕರಿಮುಲ್ಲಾ ತಮ್ಮ ಗಂಡು ಮಕ್ಕಳಿಬ್ಬರನ್ನು ಜತೆಯಲ್ಲಿರಿಸಿಕೊಂಡು ರೋಗಿಗಳನ್ನು ಆಸ್ಪತ್ರೆಗೆ ಒಯ್ಯುವುದರಲ್ಲಿ ನಿರತರಾಗಿದ್ದರು. ಆಗ ಅವರ ಹಳ್ಳಿಯ ಜನಗಳಿಗೆ ಉದ್ಯೋಗವಿಲ್ಲದೆ ಉಪವಾಸ ಬೀಳುವ ಪರಿಸ್ಥಿಯಲ್ಲಿದ್ದಾಗ ಕರಿಮುಲ್ಲಾ ಯಾರ‍್ಯಾರನ್ನೋ ಭೇಟಿಯಾಗಿ ಅವರ ಸಹಕಾರದಿಂದ ಆಹಾರ ಪದಾರ್ಥಗಳನ್ನು ತಂದು ಹಂಚುತ್ತಿದ್ದರು.

ಕರಿಮುಲ್ಲಾ ಹಖ್‌ಗೆ ಎರಡು ಹೆಣ್ಣು, ಎರಡು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಹಿರಿ ಮಗ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಕಿರಿ ಮಗ ಅಪ್ಪನಿಗೆ ಸಹಾಯ ಮಾಡುತ್ತಾನೆ. ಕರಿಮುಲ್ಲಾ
ಚಹ ತೋಟದ ಕೆಲಸಗಾರನಾಗಿ ತಿಂಗಳಿಗೆ ಏಳೆಂಟು ಸಾವಿರ ರೂಪಾಯಿಗಳಿಸುತ್ತಾರೆ. ಅದರಲ್ಲಿ ಪ್ರತಿ ತಿಂಗಳು ಒಂದು ಒಂದೂವರೆ ಸಾವಿರ ರೂಪಾಯಿ ಬೈಕ್ ಆಂಬ್ಯುಲೆನ್ಸಿಗೆ ಖರ್ಚಾಗುತ್ತದೆ. ಇವರ ಸೇವೆಯನ್ನು ನೋಡಿ ಆಗಾಗ್ಗೆ ಕೆಲವು ದಾನಿಗಳು ಇವರಿಗೆ ಏನಾದರೂ ಆರ್ಥಿಕ ಸಹಾಯ ಮಾಡುತ್ತಾರೆ.

ಇಷ್ಟೇ ಅಲ್ಲದೆ, ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್  ಬರುವಾಗ ಕರಿಮುಲ್ಲಾ ಬರಿಗೈಯಲ್ಲಿ ಬರುವುದಿಲ್ಲ. ಬಡವರಿಗೆ ಬಟ್ಟೆ ಬರೆ, ಆಹಾರ ಪದಾರ್ಥಗಳನ್ನು ಹಂಚುವ ಸಮಾಜ ಸೇವಕರು, ಸಂಸ್ಥೆಗಳನ್ನು ಪತ್ತೆ ಹಚ್ಚಿ, ಅವರಿಂದ ಆಹಾರ, ಬಟ್ಟೆ ಬರೆ, ಮಕ್ಕಳ ಶಾಲಾ ಸಾಮಗ್ರಿಗಳನ್ನು ತಂದು ತನ್ನ ಹಳ್ಳಿಯ ಬಡವರಿಗೆ ಹಂಚುತ್ತಾರೆ. ಈಗ ಕರಿಮುಲ್ಲಾ ಹಖ್ ಎರಡು ಬೈಕ್ ಆಂಬ್ಯುಲೆನ್ಸ್ ಹಾಗೂ ಎರಡು ನಾಲ್ಕು ಚಕ್ರಗಳ ಸಾಮಾನ್ಯ ಆಂಬ್ಯುಲೆನ್ಸ್‌ಗಳನ್ನು ನಡೆಸುತ್ತಿದ್ದಾರೆ. ತಮ್ಮ ಮನೆಯಿರುವ ಜಾಗದ ಒಂದು ಪಾರ್ಶ್ವದಲ್ಲಿ ಚಿಕ್ಕ ಆಸ್ಪತ್ರೆಯಂತಹ ಒಂದು ಕಟ್ಟಡವನ್ನು ಕಟ್ಟಿಸಿ, ಅದರಲ್ಲಿ ಸಲೈನ್ ನೀಡುವಂತಹ, ಬಿಪಿ ಚೆಕ್ ಮಾಡುವಂತಹ ಸಾಮಾನ್ಯ ರೀತಿಯ ವೈದ್ಯಕೀಯ ಆರೈಕೆಗಳನ್ನು ಮಾಡುತ್ತಾರೆ.

ಕರಿಮುಲ್ಲಾ ಖಾನ್‌ರ ಬೈಕ್ ಆಂಬ್ಯುಲೆನ್ಸ್‌ನ ಯಶಸ್ಸನ್ನು ನೋಡಿ, ದೇಶದ ಹಲವೆಡೆ, ಮುಖ್ಯವಾಗಿ ಸೂಕ್ತ ರಸ್ತೆಗಳಿಲ್ಲದ, ಬಡವರು ಹೆಚ್ಚಿರುವ ಕುಗ್ರಾಮಗಳಲ್ಲಿ, ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು ಬೈಕ್ ಆಂಬ್ಯುಲೆನ್ಸ್  ಸೇವೆಗಳನ್ನು ಶುರು ಮಾಡಿದ್ದಾರೆ. ಗುಡ್ಡಗಾಡುಗಳ ಬಡ ರಾಜ್ಯವಾಗಿರುವ ಛತ್ತೀಸ್‌ಗಢ್ ನೂರಾರು ಸಂಖ್ಯೆಯಲ್ಲಿ ಬೈಕ್ ಆಂಬ್ಯುಲೆನ್ಸ್ ಗಳನ್ನು ನಡೆಸುತ್ತಿದೆ. ತಮಿಳುನಾಡು ಕೂಡ ತನ್ನ ಕುಗ್ರಾಮಗಳಲ್ಲಿ ಬೈಕ್ ಆಂಬ್ಯುಲೆನ್ಸ್ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ.

2017ರಲ್ಲಿ ಭಾರತ ಸರ್ಕಾರ ಕರಿಮುಲ್ಲಾ ಹಖ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಬಿಸ್ವಜೀತ್ ಝಾ ಎಂಬ ಒಬ್ಬರು ಪತ್ರಕರ್ತರು ‘ಬೈಕ್ ಆಂಬ್ಯುಲೆನ್ಸ್ ದಾದಾ: ದಿ ಇನ್ಸ್ಪೈರಿಂಗ್ ಸ್ಟೋರಿ ಆಫ್ ಕರಿಮುಲ್ಲಾ ಹಖ್’
ಎಂಬ ಹೆಸರಿನ ಇವರ ಆತ್ಮಚರಿತ್ರೆಯನ್ನು ಬರೆದಿದ್ದು, ಪೆಂಗ್ವಿನ್ ಇಂಡಿಯಾ 2021ರಲ್ಲಿ ಅದನ್ನು ಪ್ರಕಟಿಸಿದೆ. 2021ರಲ್ಲಿ ಇವರು ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮಕ್ಕೆ ಆಮಂತ್ರಿಸಲ್ಪಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಲ್ಛಿ ತೆಗೆಸಿಕೊಳ್ಳುವ ಅವಕಾಶವನ್ನೂ ಪಡೆದಿದ್ದರು.

 

Tags:
error: Content is protected !!