Mysore
22
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕೋಟಿ ಕೋಟಿ ಅವ್ವಂದಿರಿಗೆ ಸ್ವಾತಂತ್ರ್ಯ ದಿನದ ಸಲಾಂ

mothers

ನನ್ನಮ್ಮ ನನಗೆ ಯಾವಾಗಲೂ ಎರಡು ವಿಷಯಗಳನ್ನು ಹೇಳುತ್ತಿರುತ್ತಾಳೆ ; ಒಂದು ಮಹಿಳೆಯಾಗುವುದು, ಇನ್ನೊಂದು ಸ್ವತಂತ್ರಳಾಗುವುದು. ಅಮ್ಮನ ಕುರಿತು ಹೇಳಬೇಕೆಂದರೆ ನನಗೆ ಅರ್ಥವಾಗದ ವಯಸ್ಸಿನಲ್ಲಿಯೇ ಅವಳ ಬದುಕಿನ ಹೋರಾಟ ಆರಂಭವಾಗಿತ್ತು.

ಆಗಲೇ ನನ್ನ ಅಮ್ಮ ಅಚ್ಚರಿಯಾಗಿ ಕಂಡಿದ್ದಳು. ಅದಕ್ಕೆ ಕಾರಣ ಅವಳು ಬದುಕಿಗಾಗಿ ನಡೆಸಿದ ಹೋರಾಟ. ನಾನು ಕಂಡಂತೆ ಅವಳ ಜೀವನ ಘೋರವಾಗಿತ್ತು. ಹಾಗಾಗಿ ಅಮ್ಮ ನನ್ನೊಳಗಿನ ಮಿಳಿತವಾದಳು.

ಅಮ್ಮ ಅಕ್ಷರ ಕಲಿತವಳಲ್ಲ; ನಾನು ಬರಹ ಲೋಕದ ಆಕರ್ಷಣೆ; ಮೋಹ ಇತ್ಯಾದಿಗಳನ್ನು ಕಂಡವಳು, ನನ್ನಮ್ಮ ಇವ್ಯಾವು ಅರಿಯದ ಮುಗ್ಧೆ. ನನ್ನ ರೀತಿ-ನೀತಿ ಅಮ್ಮನ ರೀತಿ-ನೀತಿಯು ಒಂದೇ ಅಲ್ಲ. ನಾನು ಅಮ್ಮನೊಟ್ಟಿಗೆ ಯಾವಾಗಲೂ ಜಗಳ ಮಾಡುತ್ತಲೇ ಇರುತ್ತೇನೆ. ಅವಳಿಗೆ ಗೊತ್ತಿಲ್ಲದೆ ಇನ್ನೊಬ್ಬರಿಗೆ ಮಾದರಿಯಾದ ನನ್ನಮ್ಮ ಸ್ವಲ್ಪಮಟ್ಟಿಗಿನ ಸಂಪ್ರದಾಯಸ್ಥೆ.

ನಾನು ಅವಳನ್ನು ಕಂಡಂತೆ ಅವಳು ಮಹಾನ್ ಸ್ವಾವಲಂಬಿ. ತನ್ನ ದುಡಿಮೆಯಿಂದ ಸಂಸಾರ ನಡೆಸಿದ ದಿಟ್ಟೆ. ಯಾರ ಮೇಲೆಯೂ ಅವಲಂಬಿತಳಾಗದೆ ಬದುಕು ಕಟ್ಟಿಕೊಂಡ ಧೀರೆ. ಇಂದಿಗೂ ಹಾಗೇ ಬದುಕು ನಡೆಸುತ್ತಿದ್ದಾಳೆ. ತನ್ನ ಎಳೆಯ ವಯಸ್ಸಿನಲ್ಲಿ ಒಬ್ಬಂಟಿಯಾಗಿ ಮೂರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಸಂಸಾರ ನಡೆಸಿದ ನನ್ನಮ್ಮ ಸ್ತ್ರೀ ಸ್ವಾತಂತ್ರ್ಯದ ದೊಡ್ಡ ಮಾದರಿ ಎಂತಲೇ ನನಗನಿಸುತ್ತದೆ.

ಅಮ್ಮ ನನಗೆ ರೆಕ್ಕೆ ಕಟ್ಟಿ ಸ್ವತಂತ್ರವಾಗಿ ಹಾರಲು ಕಲಿಸಿದ್ದಾಳೆ. ಆ ಹಾರಾಟವನ್ನು ಇನ್ನಷ್ಟು ಎತ್ತರಕ್ಕೆ ಹೋಗುವುದನ್ನು ನಾನು ನನ್ನ ಮಗಳಿಗೆ ಕಲಿಸುತ್ತೇನೆ. ಆ ಮೂಲಕ ತಾಯ್ತನದ ಯಶಸ್ಸನ್ನು ಗುರುತಿಸಲು ಕಲಿಯುತ್ತಿದ್ದೇನೆ. ನನ್ನಲ್ಲಿ ಅಮ್ಮ ತುಂಬಿದ ಚೈತನ್ಯವಿದೆ.

ಅವಳು ಯಾವಾಗಲೂ ನನ್ನ ನೆರಳಾಗಿ ಬಂದಿದ್ದಾಳೆ. ಅವಳನ್ನು ನೋಡಿದಾಗ ನಾನೂ ಹಾಗೆ ಬದುಕಬೇಕೆಂದು ಅನೇಕ ಬಾರಿ ಎನಿಸಿದೆ. ಯೌವ್ವನ ಮಸುಕಾಗುತ್ತದೆ, ಪ್ರೀತಿ ಬತ್ತುತ್ತದೆ, ಸ್ನೇಹದ ಎಲೆಗಳು ಉದುರಿ ಹೋಗುತ್ತವೆ, ಆದರೆ ತಾಯಿಯ ಪ್ರೀತಿ, ಮಮತೆ, ಬತ್ತದ ಚಿಲುಮೆ, ಉಳಿದೆಲ್ಲ ಸಂಬಂಧಗಳ ಭರವಸೆ ಇವೆಲ್ಲವನ್ನೂ ಮೀರಿಸುತ್ತದೆ. ತಾಯ್ತನದಿಂದಲೇ ಎಲ್ಲ ಪ್ರೀತಿಯೂ ಪ್ರಾರಂಭವಾಗುತ್ತದೆ ಮತ್ತು ಅಲ್ಲಿಯೇ ಕೊನೆಗೊಳ್ಳುತ್ತದೆ.

ಒಬ್ಬ ಅಮ್ಮನಿಗೆ ಒಬ್ಬ ಮಗ ಅಥವಾ ಮಗಳನ್ನು ಒಳ್ಳೆಯ, ದಯೆ, ನೈತಿಕ, ಜವಾಬ್ದಾರಿಯುತ ಮನುಷ್ಯರನ್ನಾಗಿ ಬೆಳೆಸುವ ಭರವಸೆಗಿಂತ ದೊಡ್ಡ ಆಕಾಂಕ್ಷೆ ಮತ್ತು ಸವಾಲು ಇನ್ನೊಂದಿಲ್ಲ. ತಾಯ್ತನಕ್ಕಿಂತ ದೊಡ್ಡ ಸಂತಸದ ಸಂಭ್ರಮಕ್ಕಿಂತ ಬೇರೇನೂ ಊಹಿಸಲೂ ನನ್ನಿಂದ ಸಾಧ್ಯವಿಲ್ಲ. ನಾನು ಏನಾಗಿದ್ದೇನೋ ಅಥವಾ ಏನಾಗಬೇಕೆಂದು ಬಯಸುತ್ತೇನೋ, ಅದೆಲ್ಲವೂ ನನಗೆ ಅಮ್ಮನಿಂದಲೇ ದಕ್ಕಿದ್ದು.

ಲೋಕದಲ್ಲಿ ತಾಯ್ತನದ ಪಾತ್ರಕ್ಕಿಂತ ಮಿಗಿಲಾದ ಪಾತ್ರ ಇನ್ನೊಂದಿಲ್ಲ. ಅದು ಜಗತ್ತಿನ ಅತಿ ದೊಡ್ಡ ಅದ್ಭುತವಾದ ಜೀವ ಶಕ್ತಿ.

ಒಬ್ಬ ತಾಯಿಗೆ ಅತ್ಯಂತ ಕಷ್ಟಕರವಾದ ಕೆಲಸವೆಂದರೆ ಮಗಳು ಸ್ವತಂತ್ರವಾಗಿರಲು ಸಾಧ್ಯವಾಗುವಂತೆ ಮಾಡುವುದು ಮತ್ತು ತನ್ನಷ್ಟಕ್ಕೆ ಹಾರುವುದು ಎಷ್ಟು ಅವಶ್ಯ ಎಂದು ಮಗಳಿಗೆ ತಿಳಿಸುವುದು. ಅದನ್ನು ನನ್ನಮ್ಮ ಕಲಿಸಿಕೊಟ್ಟಿದ್ದಾಳೆ. ಅಮ್ಮನಿಗೆ ತನ್ನ ಮಗಳನ್ನು ಸಾಧನೆಗೈದ ಮತ್ತು ಸ್ವತಂತ್ರಳಾಗಿದ್ದನ್ನು ನೋಡುವುದಕ್ಕೆ ಹಾತೊರೆ ಯುತ್ತಿರುತ್ತಾಳೆ.

ಅಮ್ಮಂದಿರು ತಮ್ಮ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯದ ಉಡುಗೊರೆಯನ್ನು ನೀಡಬೇಕು. ಅವಳು ತಾನೇ ಆಗಲು ಪ್ರೋತ್ಸಾಹಿಸಬೇಕು. ಮಗಳು ತನ್ನದೇ ಆದ ವಿಶಿಷ್ಟ ವ್ಯಕ್ತಿಯಾಗಬೇಕು. ನಾನು ನಾನಾಗುವಂತೆ, ರೆಕ್ಕೆ ಬಿಚ್ಚಿ ಹಾರುವಂತೆ ಮಾಡಿದ ನನ್ನ ಅವ್ವನಿಗೆ ಮತ್ತು ಆಕೆಯ ಹಾಗೆಯೇ ಅನಾಮಿಕರಾಗಿ ಉಳಿದಿರುವ ಈ ದೇಶದ ಕೋಟಿ ಕೋಟಿ ಅವ್ವಂದಿರಿಗೆ ಈ ಸ್ವಾತಂತ್ರ್ಯ ದಿನದ ಗೌರವಗಳನ್ನು ಅರ್ಪಿಸುತ್ತಿದ್ದೇನೆ.

-ಡಾ.ರಾಧಮಣಿ ಎಂ.ಎ

Tags:
error: Content is protected !!