Mysore
20
scattered clouds

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಹಿಟ್ ಅಂಡ್ ರನ್ ಹೊಸ ನಿಯಮ ಸಾಧಕ-ಬಾಧಕ 

• ವಿವೇಕ ಕಾರಿಯಪ್ಪ, ಪ್ರಗತಿಪರ ರೈತ, ಚಿಂತಕ

ಹಿಟ್‌ ಅಂಡ್ ರನ್ ಅಪಘಾತ ಪ್ರಕರಣಗಳ ಸಂಬಂಧ ಕೇಂದ್ರ ಸರ್ಕಾರವು ಇತ್ತೀಚೆಗೆ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ತಪ್ಪಿತಸ್ಥ ವಾಹನ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ. ಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ. ಇದು ಬಹುತೇಕ ಟ್ರಕ್‌ಗಳು ಮತ್ತು ಲಾರಿ ಚಾಲಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲ್ಪಟ್ಟಿರುವ ನಿಯಮವಾಗಿದೆ. ಆದರೆ, ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ಬಗೆಯ ಚಾಲಕರಿಗೂ ಈ ಹೊಸ ನಿಯಮ ಅನ್ವಯವಾಗುತ್ತದೆ. ಇದು ಚಾಲಕರ ಶೋಷಣೆಗೆ ಮತ್ತೊಂದು ದಾರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಹಿಟ್ ಅಂಡ್ ರನ್ ಅಪಘಾತದ ಬಹಳಷ್ಟು ಪ್ರಕರಣಗಳಲ್ಲಿ ಚಾಲಕರ ನಿರ್ಲಕ್ಷ್ಯ ಇರುತ್ತದೆ. ಅದನ್ನು ಮೀರಿದ ಒಂದಿಷ್ಟು ನಿಜಾಂಶಗಳನ್ನು ಸಮಚಿತ್ತದಿಂದ ಅವಲೋಕಿಸುವುದು ಅಗತ್ಯ. ಹಾಗಾಗಿ ಆಟೊ ಮೊಬೈಲ್ಸ್ ಅಸೋಸಿಯೇಷನ್‌, ಈ ಹೊಸ ನಿಯಮವನ್ನು ವಿರೋಧಿಸುತ್ತಿರುವುದರ ಹಿಂದೆ ವಾಸ್ತವತೆ ಅರಿವು ಇದೆ ಎನ್ನಬಹುದು. ಪೊಲೀಸರು, ಹಿಟ್ ಅಂಡ್ ರನ್ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಚಾಲಕರಿಂದ ಲಂಚ ಪಡೆಯುವ ಸಾಧ್ಯತೆಯೂ ಇದೆ.

ಇದಕ್ಕೆ ಸಂಬಂಧಿಸಿದಂತೆ ನನ್ನದೇ ಅನುಭವ ಇದೆ. ಸುಮಾರು 25 ವರ್ಷಗಳ ಹಿಂದೆ ಮೈಸೂರಿನಲ್ಲಿ ನಾನು ರೈತರ ರಾಲಿಯೊಂದರಲ್ಲಿ ಪಾಲ್ಗೊಂಡ ಬಳಿಕ, ನನ್ನ ಜೀಪ್ ನಲ್ಲಿ ಊರಿಗೆ ಹಿಂದಿರುಗುತ್ತಿದ್ದೆ. ದಾರಿಯಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಕೆಳಗೆ ಬಿದ್ದುಬಿಟ್ಟ, ಸ್ವಲ್ಪ ದೊಡ್ಡ ಪ್ರಮಾಣದಲ್ಲೇ ಗಾಯಗೊಂಡಿದ್ದ. ಕೂಡಲೇ ಆತನನ್ನು ನಾನು, ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದೆ. ನಂತರ ಸಂಬಂಧಪಟ್ಟ ಪೊಲೀಸರಿಗೂ ವಿಷಯ ತಿಳಿಸಿದೆ. ಅವರು ಬಂದ ನಂತರ ನಾನು ಮನೆಗೆ ಹಿಂದಿರುಗಿದ್ದೆ.

ಮಾರನೇ ದಿನ ಬೆಳಿಗ್ಗೆ ಪೊಲೀಸರು, ನನಗೆ ಫೋನ್ ಮಾಡಿದರು. ನಿಮ್ಮ ವಾಹನ ತೆಗೆದುಕೊಂಡು ನ್ಯಾಯಾಲಯಕ್ಕೆ ಬರಬೇಕು. ನಿಮ್ಮ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಲಾಗಿದೆ ಎಂದರು.

ನಂತರ ಅದೇನೋ ಆಯಿತು ಬಿಡಿ. ಆದರೆ, ಹೊಸ ನಿಯಮದಿಂದ ಇಂತಹ ದುರುಪಯೋಗ ಹೆಚ್ಚಾಗುತ್ತವೆ ಎಂಬುದೇ ನನ್ನ ಆತಂಕ.

ವಾಹನಗಳ ಚಾಲಕರಿಗೂ ಕುಟುಂಬ ಇರುತ್ತದೆ. ಅದಕ್ಕಾಗಿ ಅವರು ಹಗಲಿರುಳು ಶ್ರಮಿಸುತ್ತಿರುತ್ತಾರೆ ಎಂಬುದನ್ನೂ ಗಮನಿಸಬೇಕು. ಹಾಗಾಗಿ ಯಾರೂ ಉದ್ದೇಶ ಪೂರ್ವಕವಾಗಿ ಅಪಘಾತ ಉಂಟು ಮಾಡು ವುದಿಲ್ಲ. ಕೆಲವೊಮ್ಮೆ ಅಪಘಾತ ನಡೆಸಿದ ಚಾಲಕರು, ಸ್ಥಳದಿಂದ ಸ್ವಲ್ಪ ದೂರ ಹೋಗಿ ವಾಹನ ನಿಲ್ಲಿಸುವ ಇರಾದೆ ಹೊಂದಿರುತ್ತಾರೆ. ಆದರೆ, ಅಲ್ಲಿ ಜಮಾಯಿಸುವ ಸಾರ್ವಜನಿಕರ ಅಬ್ಬರ, ಹಾರಾಟಗಳು ಅವರನ್ನು ಪಲಾಯನ ಮಾಡುವಂತೆ ಪ್ರೇರೇಪಿಸುವುದು ಸಹಜ. ಅಲ್ಲದೆ, ಇಂತಹ ಕಠಿಣ ನಿಯಮಗಳಿಂದ ಒಂದು ರಾಜ್ಯದ ವಾಹನ ಚಾಲಕರು, ಇನ್ನೊಂದು ರಾಜ್ಯಕ್ಕೆ ವಾಹನ ತೆಗೆದುಕೊಂಡು ಹೋಗುವುದಕ್ಕೆ ಹೆದರುವಂತಾಗುತ್ತದೆ. ಏಕೆಂದರೆ ಅಲ್ಲಿ ಅವರ ಪರ ಸಾಕ್ಷ್ಯಗ ಗಳು ಸಿಗುವುದೇ ಇಲ್ಲ.

ಇನ್ನು ಕುಟುಂಬ ಸಹಿತ ಪ್ರಯಾಣ ಮಾಡುವ ನಾಲ್ಕು ಚಕ್ರಗಳ ವಾಹನ ಚಾಲಕರ ಸ್ಥಿತಿ ಏನಾಗಬಹುದು ಎಂದು ಊಹಿಸುವುದೂ ಕಷ್ಟವಾಗುತ್ತದೆ. ಒಂದು ವೇಳೆ ಪ್ರಯಾಣದ ದಾರಿಯಲ್ಲಿ ಅಪಘಾತ ಸಂಭವಿಸಿ ಎದುರಿನವರಿಗೆ ಗಾಯವಾದರೆ, ವಾಹನ ಚಾಲಕ ಸ್ಥಳದಲ್ಲೇ ವಾಹನ ನಿಲ್ಲಿಸುವುದು ಸಾಧ್ಯವೇ? ಅಲ್ಲದೆ, ಆತ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿ ಬರೋಣ ಎಂದುಕೊಂಡು ಮುಂದೆ ಹೋಗಿಬಿಟ್ಟರೆ, ವಾಪಸ್ ಬರುವಷ್ಟರಲ್ಲಿ ಹಿಟ್ ಅಂಡ್ ರನ್ ಪ್ರಕರಣ ಆತನ ವಿರುದ್ಧ ದಾಖಲಾಗಿಬಿಟ್ಟಿರುತ್ತದೆ. ಹಾಗಂತ ಸ್ಥಳದಲ್ಲೇ ವಾಹನ ನಿಲ್ಲಿಸಿದರೆ ಆತನ ಕುಟುಂಬಕ್ಕೆ ರಕ್ಷಣೆ ಸಿಗುವ ಯಾವುದೇ ಗ್ಯಾರಂಟಿಯೂ ಇರುವುದಿಲ್ಲ.

ಈ ಹೊಸ ಕಾನೂನಿಂದ ವಾಹನಗಳ ಚಾಲಕರು, ಸಾರ್ವಜನಿಕರಲ್ಲಿ ನಂಬಿಕೆ ಕಳೆದುಕೊಳ್ಳುವಂತಾಗುತ್ತದೆ. ಸೌಜನ್ಯಯುತವಾಗಿ ವರ್ತಿಸುವುದೂ ಅವರಿಗೆ ಸಾಧ್ಯವಾಗದಿರಬಹುದು. ಕೇಂದ್ರ ಸರ್ಕಾರ ಹಿಟ್ ಅಂಡ್ ರನ್ ಅಪಘಾತ ಪ್ರಕರಣಗಳಲ್ಲಿ ಸಾರ್ವಜನಿಕರನ್ನು ನಿಯಂತ್ರಿಸುವುದಕ್ಕೂ ಯಾವುದಾದರೂ ನಿಯಮ ತರಲೇಬೇಕು. ಅದು ಸಾಧ್ಯವಾಗದಿದ್ದರೆ ಹೊಸ ನಿಯಮವನ್ನು ವಾಪಸ್ ಪಡೆಯುವುದು ಸೂಕ್ತ ಅನಿಸುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!