Mysore
28
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವೈಡ್‌ ಆಂಗಲ್: ಉದ್ಯಮದತ್ತ ಸರ್ಕಾರದ ಗಮನ; ಚಿತ್ರನಗರಿ ಯೋಜನೆಗೆ ಮತ್ತೆ ಚಾಲನೆ

ಬಾ.ನಾ. ಸುಬ್ರಹ್ಮಣ್ಯ

ದೇಶದಲ್ಲೇ ಚಿತ್ರನಗರಿಯ ಕುರಿತಂತೆ ಮೊದಲು ಯೋಜಿಸಿದ್ದ ರಾಜ್ಯ ಮೈಸೂರು. ಆಗಿನ್ನು ಕರ್ನಾಟಕ ಎಂದು ಹೆಸರಾಗಿರಲಿಲ್ಲ. ಆಗ ಬೆಂಗಳೂರಿನ ಹೊರವಲಯದ ಹೆಸರ ಘಟ್ಟದಲ್ಲಿ ಚಿತ್ರನಗರಿ ಸ್ಥಾಪನೆಗೆ 1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಅಡಿಗಲ್ಲು ಹಾಕಿದ್ದರು.

ಅದಾಗಿ 52 ವರ್ಷಗಳಾಗಿವೆ. ಮುಂದಿನ ವರ್ಷ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡಲಾಯಿತು. ಅದರ ಸುವರ್ಣ ವರ್ಷ ಸಂಭ್ರಮವನ್ನು ಇದೀಗ ಆಚರಿಸಲಾಗುತ್ತಿದೆ. ಚಿತ್ರನಗರಿ ಯೋಜನೆ ಮಾತ್ರ ಯಾವುದೇ ರೀತಿಯಲ್ಲೂ ಮುಂದುವರಿಯಲಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ನಡುವೆ ಚಿತ್ರನಗರಿಯ ಸ್ಥಾಪನೆ ಎಲ್ಲಿ ಆಗಬೇಕು ಎನ್ನುವುದರ ಕುರಿತಂತೆ ಸರ್ಕಾರಗಳು ಬದಲಾದಂತೆ ಯೋಜನೆಯೂ ಬದಲಾಗುತ್ತಿತ್ತು. ಮೊದಲ ಬಾರಿ ಚಿತ್ರನಗರಿ ಯೋಜನೆಯನ್ನು ಕೈಗೆತ್ತಿಕೊಂಡಾಗ ಅದು ಮೂರು ಹಂತಗಳಲ್ಲಿ ತಲೆಎತ್ತುವ ಯೋಜನೆ ಆಗಿತ್ತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಮಾದರಿಯಲ್ಲಿ ಕರ್ನಾಟಕದಲ್ಲಿ ಸ್ಥಾಪನೆಯಾಗಿದ್ದ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.

ಚಿತ್ರನಗರಿ ಯೋಜನೆ, ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಇವೆರಡನ್ನೂ ಮೊದಲು ಯೋಜಿಸಿದ್ದು ಮಾತ್ರ ಕರ್ನಾಟಕ. ಆದರೆ ಈಗ ದೇಶದ ಬಹುತೇಕ ರಾಜ್ಯಗಳಲ್ಲಿ ಚಿತ್ರನಗರಿಗಳು ತಲೆ ಎತ್ತಿವೆ. ಹೆಚ್ಚಿನ ರಾಜ್ಯಗಳಲ್ಲಿ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮಗಳಿವೆ. ನಮ್ಮಲ್ಲಿ ಸ್ಥಾಪನೆಯಾಗಿದ್ದ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮವನ್ನು ಅದು ನಷ್ಟದಲ್ಲಿರುವ ಸಂಸ್ಥೆ ಎನ್ನುವ ಕಾರಣದಿಂದ ಮುಚ್ಚಲಾಯಿತು. ನಿಗಮದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಶಿಸ್ತು ಈ ಬೆಳವಣಿಗೆಗೆ ಕಾರಣ ಎನ್ನಲಾಗುತ್ತಿದೆ. ಮದರಾಸಿನಲ್ಲಿ ನೆಲೆಯಾಗಿದ್ದ ಕನ್ನಡ ಚಿತ್ರರಂಗವನ್ನು ರಾಜ್ಯಕ್ಕೆ ತರುವ ಪ್ರಯತ್ನವಾಗಿ ಸರ್ಕಾರ, 1960ರ ದಶಕದ ಕೊನೆಯಲ್ಲಿ ಸಹಾಯಧನ, ತೆರಿಗೆ ವಿನಾಯಿತಿ, ಪ್ರಶಸ್ತಿಗಳೇ ಮೊದಲಾಗಿ ರಾಜ್ಯದಲ್ಲಿ ಉತ್ತೇಜಕ ಯೋಜನೆಗಳನ್ನು ಜಾರಿಗೆ ತಂದಿತು.

ಅದರ ನಂತರ ಚಿತ್ರಗಳ ನಿರ್ಮಾಣ ಸಂಖ್ಯೆ ಗಣನೀಯ ವಾಗಿ ಏರಲಾರಂಭಿಸಿತು. ಮೈಸೂರಿನಲ್ಲಿ ಪ್ರೀಮಿಯರ್, ಬೆಂಗಳೂರಿನಲ್ಲಿ ಕಂಠೀರವ ಮತ್ತು ಅಭಿಮಾನ್ ಸ್ಟುಡಿಯೊಗಳು ಚಿತ್ರೋದ್ಯಮಕ್ಕೆ ಸಾಕಷ್ಟು ಪೂರಕವಾಗಿದ್ದವು. ಅಭಿಮಾನ್ ಸ್ಟುಡಿಯೊ ಮೊನ್ನೆ ಮತ್ತೆ ಸುದ್ದಿ ಮಾಡಿತ್ತು. ಸರ್ಕಾರದ ಇಚ್ಛಾಶಕ್ತಿಯ ಕೊರತೆ ಇದ್ದರೆ ಏನಾಗಬಹುದು ಎನ್ನುವುದಕ್ಕೆ ಒಳ್ಳೆಯ ಉದಾಹರಣೆ ಅಲ್ಲಿನ ಬೆಳವಣಿಗೆ. ಹಿರಿಯ ನಟ ಬಾಲಣ್ಣನವರಿಗೆ ಸ್ಟುಡಿಯೊ ಸ್ಥಾಪನೆಗಾಗಿ ಸರ್ಕಾರ ದೀರ್ಘಾವಽ ಗುತ್ತಿಗೆಯ ಮೇಲೆ ಜಾಗವನ್ನು ನೀಡುತ್ತದೆ. ಅಲ್ಲಿ ಸಿನಿಮಾ ಹೊರತಾದ ಯಾವುದೇ ಕೆಲಸಗಳಿಗೆ ಅವಕಾಶ ಇರಕೂಡದು ಎನ್ನುವುದಾಗಿತ್ತು ನಿಯಮ. ಆದರೆ ಬಾಲಣ್ಣನ ನಿಧನದ ನಂತರ, ಅವರ ಮಕ್ಕಳು, ಅದನ್ನು ತಮ್ಮ ತಂದೆಯವರ ಪಿತ್ರಾರ್ಜಿತ ಆಸ್ತಿ ಎನ್ನುವಂತೆ ನಡೆದುಕೊಂಡರು. ಗಂಡುಮಕ್ಕಳಿಬ್ಬರೂ ಅದನ್ನು ತಲಾ ಹತ್ತು ಎಕರೆಗಳಂತೆ ಪಾಲು ಮಾಡಿಕೊಂಡರು. ನಂತರ, ಸ್ಟುಡಿಯೊ ಅಭಿವೃದ್ಧಿ ಹೆಸರಿನಲ್ಲಿ ಹತ್ತು ಎಕರೆ ಜಾಗವನ್ನು ಮಾರಿದರು. ಮಾರಾಟಕ್ಕೆ ಅನುಮತಿ ಕೊಡುವ ವೇಳೆ ಜಿಲ್ಲಾಽಕಾರಿಗಳು, ಎರಡು ವರ್ಷಗಳಲ್ಲಿ ಸ್ಟುಡಿಯೊವನ್ನು ಮೇಲ್ದರ್ಜೆಗೇರಿಸಿ ತಿಳಿಸಬೇಕು ಎನ್ನುವ ಷರತ್ತನ್ನೂ ವಿಽಸಿದ್ದರು. ಆದರೆ ಹಾಗಾಗಲಿಲ್ಲ.

2009ರಲ್ಲಿ ನಟ ವಿಷ್ಣುವರ್ಧನ್ ನಿಧನರಾದರು, ಅವರ ಅಂತ್ಯ ಸಂಸ್ಕಾರವನ್ನು ಅಭಿಮಾನ್ ಸ್ಟುಡಿಯೊದಲ್ಲಿ ಮಾಡಲಾಯಿತು. ಅಲ್ಲೇ ಎರಡು ಎಕರೆಯಲ್ಲಿ ಅವರ ಸ್ಮಾರಕ ಮಾಡುವುದು ಎಂದೂ ಸರ್ಕಾರ ಹೇಳಿತ್ತು. ಅದಕ್ಕಾಗಿ ಎಕರೆಗೆ ಒಂದು ಕೋಟಿ ರೂ. ಗಳಂತೆ ಪರಿಹಾರ ಧನ ಕೊಡುವುದಾಗಿಯೂ ಹೇಳಿತು. ಇಲ್ಲೇ ಆರಂಭವಾಯಿತು ತಕರಾರು. ಬಾಲಣ್ಣನವರ ಮಕ್ಕಳಲ್ಲಿ ಇತರರೂ ಅದರ ಹಕ್ಕಿಗಾಗಿ ಕೋರ್ಟಿನ ಮೆಟ್ಟಿಲನ್ನೇರಿದರು. ವಿಷ್ಣುವರ್ಧನ್ ಸ್ಮಾರಕಕ್ಕೆ ಅಲ್ಲಿ ಜಾಗ ಕೊಡಲು ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ. ಅದು ಮನಸ್ಸು ಮಾಡಿದ್ದರೆ, ಹಿಂದಿನ ಅಧಿಕಾರಿಯೊಬ್ಬರು ಹೇಳಿದಂತೆ ಅದನ್ನು ಮುಟ್ಟುಗೋಲು ಹಾಕಿ ತನ್ನ ವಶಕ್ಕೆ ತೆಗೆದುಕೊಂಡು ಮುಂದುವರಿಯಬಹುದಿತ್ತು. ಆದರೆ ಆಗಲಿಲ್ಲ. ಈಗ ಸ್ಮಾರಕ ಮೈಸೂರಿನಲ್ಲಿ ತಲೆ ಎತ್ತಿದೆ ಎನ್ನಿ. ಆದರೆ ಅಭಿಮಾನ್ ಸ್ಟುಡಿಯೊದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ

ನಡೆದದ್ದರಿಂದ ಅಲ್ಲಿ ಅವರ ಸಮಾಧಿ ಇರಬೇಕು ಎನ್ನುವುದು ಅವರ ಅಭಿಮಾನಿಗಳ ಆಗ್ರಹ. ಅವರ ಹುಟ್ಟುಹಬ್ಬ ಮತ್ತು ಪುಣ್ಯತಿಥಿಯಂದು ತಮಗೆ ಅಲ್ಲಿ ಹೋಗಿ ಗೌರವ ನಮನ ಸಲ್ಲಿಸಲು ಅವಕಾಶ ಸಿಗಬೇಕು ಎನ್ನುವುದು ಅವರ ಹಂಬಲ. ಆದರೆ ಅದಕ್ಕೆ ಕೂಡ ಬಾಲಣ್ಣನ ಕುಟುಂಬ ವರ್ಗ ಒಪ್ಪಿಲ್ಲ. ಮೊನ್ನೆಯ ಆ ಸುದ್ದಿ ನಿನ್ನೆ ವರದಿಯಾಗಿತ್ತು. ಸ್ಟುಡಿಯೊ ಕುರಿತ ಈ ವಿವರಕ್ಕೆ ಕಾರಣ ಮೊನ್ನೆ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯ ಕುರಿತಂತೆ ಮತ್ತೆ ಗಮನ ಹರಿಸಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಹಿಂದಿನ ಆಡಳಿತಾವಧಿಯಲ್ಲಿ ಮೈಸೂರಿನ ಇಮ್ಮಾವಿನಲ್ಲಿ 110 ಎಕರೆ ಜಾಗವನ್ನು ಚಿತ್ರನಗರಿಗಾಗಿ ಮೀಸಲಿಡುವ ವ್ಯವಸ್ಥೆ ಮಾಡಿದ್ದರು.

ಅದಾದ ನಂತರ ಆಡಳಿತ ವಹಿಸಿಕೊಂಡ ಚಿತ್ರೋದ್ಯಮಿಯೂ ಆಗಿದ್ದ ಕುಮಾರಸ್ವಾಮಿಯವರು, ಚಿತ್ರನಗರಿಯನ್ನು ರಾಮನಗರದಲ್ಲಿ ಸ್ಥಾಪಿಸುವುದಾಗಿ ಪ್ರಕಟಿಸಿದರು. ಚಿತ್ರನಗರಿ ಮಾತ್ರವಲ್ಲ, ಸಿನಿಮಾ ಅಧ್ಯಯನಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸುವ ನಿರ್ಧಾರವನ್ನೂ ಪ್ರಕಟಿಸಿದರು. ಒಮ್ಮೆ ಸಮಾರಂಭವೊಂದರಲ್ಲಿ ಈ ಇಬ್ಬರೂ ವೇದಿಕೆಯಲ್ಲಿದ್ದಾಗ ಇದರ ಪ್ರಸ್ತಾಪವೂ ಆಯಿತೆನ್ನಿ. ಕೊನೆಗೆ ರಾಮನಗರ, ಮೈಸೂರು ಎರಡೂ ಕಡೆ ಚಿತ್ರನಗರಿ ಸ್ಥಾಪಿಸುವ ಆಶ್ವಾಸನೆಯೂ ಇತ್ತು. ಆದರೆ ಅದು ಆಗ ಆಶ್ವಾಸನೆ ಆಗಿಯೇ ಉಳಿದಿತ್ತು. ಈ ನಡುವೆ, ದೇಶದ ಕೆಲವು ರಾಜ್ಯಗಳಲ್ಲಿ ಚಿತ್ರನಗರಿಯ ಸ್ಥಾಪನೆ ಆಗಿದೆ. ಅತಿ ಹೆಚ್ಚು ಸೌಲಭ್ಯಗಳನ್ನು ನೀಡುವ ಉತ್ತರಪ್ರದೇಶದಲ್ಲಿ ಎರಡನೆಯ ಬಹು ದೊಡ್ಡ ಚಿತ್ರನಗರಿ ಸ್ಥಾಪನೆಗೆ ಅಲ್ಲಿನ ಸರ್ಕಾರ ಹೆಜ್ಜೆ ಇಟ್ಟಿದೆ. ಸುಮಾರು 60,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದೆ ಯಮುನಾ ಕಾರಿಡಾರ್‌ನಲ್ಲಿ ಈ ಚಿತ್ರನಗರಿ.

ಮಹಾರಾಷ್ಟ್ರ ಸರ್ಕಾರವೂ ಮುಂಬೈ, ಕೊಲ್ಹಾಪುರ ಅಲ್ಲದೆ ಇನ್ನೊಂದು ಹೊಸ ಚಿತ್ರನಗರಿಯ ನೀಲನಕ್ಷೆ ಸಿದ್ಧಪಡಿಸಿದೆ. ಕಾನ್ ಚಿತ್ರೋತ್ಸವದ ವೇಳೆ ಅಲ್ಲಿನ ಅಽಕಾರಿಗಳು ಇದನ್ನು ಪ್ರಕಟಿಸಿದ್ದರು. ಎಲ್ಲ ರಾಜ್ಯಗಳಲ್ಲೂ ಚಿತ್ರನಗರಿಗಳಿವೆ. ಆದರೆ ಕರ್ನಾಟಕದಲ್ಲಿ ಇನ್ನೂ ಮೀನಮೇಷ ಎಣಿಸುವ ಸ್ಥಿತಿಯಿಂದ ಹೊರಬಂದಂತೆ ಇರಲಿಲ್ಲ. ಆದರೆ ಮೊನ್ನೆ ರಾಜ್ಯ ಸರ್ಕಾರ ಈ ಕುರಿತು ಮತ್ತೆ ಗಮನ ಹರಿಸಿದೆ. ಚಿತ್ರನಗರಿಗಾಗಿ ಕಾದಿರಿಸಿದ ಜಾಗವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರಿಸುವಂತೆ ಕೈಗಾರಿಕಾ ಇಲಾಖೆಯನ್ನು ಕೋರಲಾಗಿದೆ. ಮೊನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ಚಿತ್ರನಗರಿ ಕುರಿತ ಸಭೆಯಲ್ಲಿ ಈ ಯೋಜನೆಗೆ ಬೇಕಾದ ರೂಪರೇಷೆಗಳನ್ನು ಹಾಕಲಾಗಿದೆ.

ಚಿತ್ರನಗರಿಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ಸ್ಥಾಪಿಸುವ ನಿರ್ಧಾರ ಆಗಿದೆ. ಹಿಂದಿನ ದಿನಗಳ ಚಿತ್ರನಗರಿಗಳಿಗೂ ಈ ದಿನಗಳದ್ದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಳೆದ ಶತಮಾನದಲ್ಲಿ ಸೆಲ್ಯುಲಾಯಿಡ್ ಮಾಧ್ಯಮವಾದರೆ, ಈಗ ಡಿಜಿಟಲ್ ಮಾಧ್ಯಮ. ಗ್ರಾಫಿಕ್ಸ್, ಅನಿಮೇಶನ್, ಎಐ ಸೇರಿದಂತೆ ಸಾಕಷ್ಟು ಹೊಸ ತಾಂತ್ರಿಕತೆಯದೇ ಈಗಿನ ದಿನಮಾನ. ಚಿತ್ರನಗರಿ ಕೂಡ ಅದಕ್ಕೆ ತೆರೆದುಕೊಳ್ಳಬೇಕು. ಈ ನಿಟ್ಟಿನಲ್ಲೂ ಚಿತ್ರನಗರಿಯ ಯೋಜನೆಯ ಹಿಂದಿರುವವರ ಮುಂದಾಲೋಚನೆ ಇರಬೇಕು. ಈಗಿರುವ ನೂರು ಎಕರೆಯ ಜೊತೆ ಇನ್ನೂ ಐವತ್ತು ಎಕರೆ ಜಾಗವನ್ನು ನೋಡಲು ಮುಖ್ಯಮಂತ್ರಿಗಳು ಹೇಳಿದ್ದಾಗಿ ವರದಿಯಾಗಿದೆ. ಒಟ್ಟಿನಲ್ಲಿ ಚಿತ್ರನಗರಿ ಸ್ಥಾಪನೆಯ ಕುರಿತಂತೆ ಸರ್ಕಾರ ಕಟಿಬದ್ಧವಾದಂತೆ ಕಾಣುತ್ತದೆ.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಸುವರ್ಣ ಮಹೋತ್ಸವ ಆಚರಿಸುವ ವೇಳೆ ಚಿತ್ರನಗರಿಗೂ ಶಿಲಾನ್ಯಾಸ ಆದರೆ ಆಶ್ಚರ್ಯವಿಲ್ಲ. ಇಲ್ಲೇ ಪ್ರವಾಸೋದ್ಯಮಕ್ಕೂ ಪೂರಕವಾಗುವ ಸಾಧ್ಯತೆ ಇರಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದು ಕೂಡ ಇದೆ. ಈಗಾಗಲೇ ಚಲನಚಿತ್ರ ಪ್ರವಾಸೋದ್ಯಮ ನೀತಿ ಜಾರಿಯಲ್ಲಿದೆ. ಆದರೆ ಈ ತನಕ ಯಾರೂ ಅದರ ಉಪಯೋಗ ಪಡೆದಂತೆ ಇಲ್ಲ. ಚಲನಚಿತ್ರಕ್ಕೆ ಸಂಬಂಧಪಟ್ಟಂತೆ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲೂ ಅನಿಮೇಶನ್ ಚಿತ್ರಗಳಿಗೆ ಸಹಾಯಧನ ನೀಡುವ ಕುರಿತ ಆದೇಶ ಇದೆ. ಅಲ್ಲಿ ಕೂಡ ಯಾರೂ ಈ ತನಕ ಸೌಲಭ್ಯ ಬಳಸಿದ್ದಿಲ್ಲ. ಸಾರ್ವಜನಿಕ ಮತ್ತು ಖಾಸಗಿ ಉದ್ಯಮಿಗಳನ್ನು ಜೊತೆ ಸೇರಿಸಿಕೊಂಡು ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಮಧ್ಯವರ್ತಿ ಅಥವಾ ಸಂಸ್ಥೆಯ ಆಯ್ಕೆ ಮೊದಲ ಹೆಜ್ಜೆ. ಅದು ಕೂಡಲೇ ಆಗುತ್ತದೆ ಎನ್ನುವುದು ನಿರೀಕ್ಷೆ.

 

Tags: