• ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಹಕ
ಕಾಡುಗಳನ್ನು ಸುತ್ತುವುದು, ಅಲ್ಲಿನ ಜೀವ ಪರಿಸರದ ಚಿತ್ರ ಸೆರೆ ಹಿಡಿಯು ವುದು, ವಿವಿಧ ಪರಿಸರದ ಕುರಿತು ಒಂದಿಷ್ಟು ಅಧ್ಯಯನ, ಅಲ್ಲಿನ ಜನರ ಜೀವನ ಶೈಲಿ, ಮಾನವ- ಕಾಡುಪ್ರಾಣಿಗಳ ಸಂಘರ್ಷ ಹೀಗೆ ಒಂದಿಷ್ಟು ವಿಚಾರಗಳನ್ನು ತಿಳಿದು ಕೊಳ್ಳುವ ಕುತೂಹಲದಿಂದ ದೇಶದ ವಿವಿಧ ಕಾಡುಗಳಿಗೆ ಸ್ನೇಹಿತರೊಂದಿಗೆ ಭೇಟಿ ನೀಡುವುದು, ಸಫಾರಿ ಮಾಡು ವುದು ನನ್ನ ಪ್ರಮುಖ ಹವ್ಯಾಸ.
ಈವರೆಗೂ ಒಂದಿಷ್ಟು ಕಾಡುಗಳನ್ನು ಮಾತ್ರ ಸುತ್ತಿದ್ದೇನೆ. ಬಹಳಷ್ಟು ನೋಡಬೇಕಿದೆ. ನಾನು ನೋಡಿದ ಕಾಡುಗಳ ಪೈಕಿ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವುದು ಮಧ್ಯಪ್ರದೇಶದಲ್ಲಿನ ಪೆಂಚ್ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಹಾರಾಷ್ಟ್ರದ ಉಮ್ರಡ್ ಕರೆಂಡ್ಲ ಸಂರಕ್ಷಿತ ಅರಣ್ಯ ಪ್ರದೇಶ. ಈ ಕಾಡುಗಳು ಒಂದಿಷ್ಟು ಕುತೂಹಲವನ್ನು ತಮ್ಮೊಳಗೆ ಅಡಗಿಸಿಟ್ಟು ಕೊಂಡು, ಮನುಷ್ಯನ ಅತಿಯಾಸೆಯಿಂದಾಗಿ ನಶಿಸಿವೆ, ಬದುಕುಳಿಯಲು ಹೋರಾಡುತ್ತಿವೆ. ಇಲ್ಲಿನ ಜೀವಪರಿಸರದ ಸ್ಥಿತಿ ಕುಸಿದು, ಮತ್ತೆ ಮೇಲೇಳುವ ಪ್ರಯತ್ನದಲ್ಲಿದೆ.
ಉಮ್ರೇಡ್ ಮತ್ತು ಪೆಂಚ್ ಬಹಳ ವಿಶೇಷವಾದ ಕಾಡುಗಳು. ಬೃಹತ್ ಇಂದಿರಾ ಸಾಗರ್ ಅಣೆಕಟ್ಟೆಯ ದಂಡೆಯ ಮೇಲಿರುವ ಉಮ್ರಡ್ ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯಲ್ಲಿದೆ. ಕೇವಲ ಬೆರಣಿಕೆಯಷ್ಟು ಹುಲಿಗಳು, ಒಂದಿಷ್ಟು ಸಾರಂಗ, ಚುಕ್ಕೆ ಜಿಂಕೆ, ನೀಲ ಗಾಯಿ, ಲಂಗೂರ್‌ನಂತಹ ಪ್ರಾಣಿಪ್ರಪಂಚ ಇಲ್ಲಿದೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಕಾಡುಗಳ ಸಫಾರಿ ಬೆಳವಣಿಗೆ ಗಮನಿಸುತ್ತಿದ್ದ ನಮನ್ನು ಆಗ ಆಕರ್ಷಿಸಿದ್ದು ಉಗ್ರೇಡ್‌ನ ‘ಸೂರ್ಯ’ ಎಂಬ ಹುಲಿ ಮತ್ತು ಪೆಂಚ್‌ನ ಮರ ತಬ್ಬುವ ಹುಲಿಗಳು.

ನಾವು ಉಗ್ರೇಡ್‌ಗೆ ಭೇಟಿ ನೀಡಿದ್ದಾಗ ಅಲ್ಲಿ ಇದ್ದದ್ದು ಫೇರಿ ಎಂಬ ಹೆಣ್ಣು ಹುಲಿ. ಅದಕ್ಕೆ 5 ಮರಿ ಗಳು ಮತ್ತು ಇಡೀ ಕಾಡಿಗೆ ಒಂದೇ ಗಂಡು ಹುಲಿ ‘ಸೂರ್ಯ’. ಇಡೀ ಕಾಡಿನಲ್ಲಿರುವ ಆ ಒಂದು ಗಂಡು ಹುಲಿಯನ್ನು ಹುಡುಕುವುದೇ ಬಲು ಸವಾಲಿನ ಕೆಲಸ. ಅದೃಷ್ಟವೆಂಬಂತೆ ನಮ್ಮ ಮೂರನೇ ಸಫಾರಿಯಲ್ಲಿಯೇ ಸೂರ್ಯ ಸಿಕ್ಕಿದ. ಸೂರ್ಯನದು ಅದ್ಭುತವಾದ ಮೈಕಟ್ಟು, ಆಕರ್ಷಣೀಯ ಎತ್ತರ, ಹೊಳೆ ಯುವ ಕಣ್ಣುಗಳು, ಬಲಿಷ್ಠ ಕಾಲುಗಳು. ಆತನ ಗಾಂಭೀರ್ಯದ ನಡಿಗೆ ಎಂತಹವರನ್ನೂ ಪುಳಕಿತರನ್ನಾಗಿಸುತ್ತಿತ್ತು. ಸೂರ್ಯನನ್ನು ಕಾಣುವ ಉದ್ದೇಶದಿಂದ ಹೋಗಿದ್ದ ನಮಗೆ ಆತ ಕಂಡಿದ್ದು, ನಿಜಕ್ಕೂ ತೃಪ್ತಿ ತಂದಿತು.
ಇನ್ನು ಮಧ್ಯಪ್ರದೇಶದಲ್ಲಿನ ಪೆಂಚ್ ಕಾಡನ್ನು ಮರೆಯುವಂತೆಯೇ ಇಲ್ಲ. ಪೆಂಚ್ ಕಾಡಿನ ‘ರುಕ್ಕಡ್’ ಎಂಬ ಬಫರ್ ಜೋನ್‌ನಲ್ಲಿ ಎರಡು ದೈತ್ಯಾ ಕಾರದ ಹುಲಿಗಳು ಮರಗಳನ್ನು ತಬ್ಬಿ ನಿಂತು ಕ್ಯಾಮೆ ರಾಗೆ ಪೋಸ್ ಕೊಡುತ್ತಿರುವ ಬಗ್ಗೆ ತಿಳಿದ ನಾವು ಅಲ್ಲಿಗೆ ದೌಡಾಯಿಸಿದೆವು.
ಪೆಂಚ್‌ನ ರುಕ್ಕಡ್ ಬಫರ್ ವಲಯದ ಕಾಡು ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಎತ್ತರದ ಮರಗಳಿರುವ, ಸೂರ್ಯನ ಬೆಳಕು ಭೂಮಿಗೆ ತಲುಪಲು ಹೆಣಗಾಡುವಷ್ಟು ದಟ್ಟವಾಗಿ ಬೆಳೆದಿದ್ದ ಕಾಡು ಅದು. ಅಲ್ಲಿ ಕಾಣಿಸುವುದು ಮೂರೇ ಮೂರು ಹುಲಿಗಳು, ಕಂಡೊಡನೆ ಓಡುವ ನಾಚಿಕೆ ಸ್ವಭಾವದ ಹೆಣ್ಣುಹುಲಿ ಒಂದಾದರೆ, ಇನ್ನೆರಡು ಬೃಹದಾಕಾರದ ಗಂಡು ಹುಲಿಗಳು, ಅದರಲ್ಲೊಂದರ ಹುಬ್ಬಿನ ಮೇಲೆ ಹಾರಾಡುವ ಕಿಂಗ್‌ಫಿಶರ್ ಹಕ್ಕಿಯ ಗುರುತಿರುವ ಕಾರಣ ಆ ಹುಲಿಗೆ ಕಿಂಗ್ ಫಿಶರ್ ಎಂಬ ಹೆಸರನ್ನೇ ಇಟ್ಟಿದ್ದಾರೆ. (ಉತ್ತರ ಭಾರತ ಮತ್ತು ಮಧ್ಯ ಭಾರತದ ಕಾಡುಗಳಲ್ಲಿ ಸಫಾರಿಯಲ್ಲಿ ಕಾಣಸಿಗುವ ಹುಲಿಗಳನ್ನು ಗುರುತಿಸುವ ಸಲುವಾಗಿ ಅಲ್ಲಿನ ಗೈಡ್‌ಗಳು ಮತ್ತು ಸಫಾರಿ ಚಾಲಕರು ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ) ಇನ್ನೊಂದು ಹುಲಿ ಕುರೇಗಾರ್ಡ್ ಮೇಲ್. ನಾನು ವನ್ಯಜೀವಿ ಛಾಯಾಗ್ರಹಣ ಆರಂಭಿಸಿದ ಬಳಿಕ ವಿವಿಧ ಕಾಡುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಬೇರೆ ಬೇರೆ ಹುಲಿಗಳನ್ನು ನೋಡಿದ್ದೇನೆ. ಆದರೆ ಇಷ್ಟು ದೊಡ್ಡ ಗಾತ್ರದ ಹುಲಿಗಳನ್ನು ಕಂಡಿದ್ದು, ಪೆಂಚ್ ಮತ್ತು ಉಮೋಡ್‌ನಲ್ಲಿ ಮಾತ್ರ. ಈ ಹುಲಿಗಳ ವಯಸ್ಸು ಕಡಿಮೆ ಇದ್ದರೂ ಗಾತ್ರ ಮಾತ್ರ ಬೃಹತ್ತಾಗಿರುತ್ತವೆ.

ಪೆಂಚ್‌ನಲ್ಲಿ ಮರಗಳನ್ನು ತಬ್ಬುವ ಹುಲಿಗಳು: ಪೆಂಚ್ ಕಾಡಿನಲ್ಲಿ ಎರಡು ಗಂಡು ಹುಲಿಗಳು ಮರಗಳನ್ನು ತಬ್ಬುತ್ತಿವೆ ಎಂಬ ವಿಚಾರ ತಿಳಿದ ಕೂಡಲೇ ನಾವು ಅಲ್ಲಿಗೆ ಹೊರಟೆವು. ಆರಂಭದ ಕೆಲ ಸಫಾರಿಗಳು ಹುಲಿ ಮರ ತಬ್ಬುವುದಿರಲಿ ಅದರ ಹೆಜ್ಜೆ ಗುರುತಿನ ಹೊರತಾಗಿ ಬೇರೇನೂ ಸಿಗಲೇ ಇಲ್ಲ. ಮರ ತಬ್ಬುವ ಭಂಗಿಯಲ್ಲೇ ಹುಲಿ ನೋಡಬೇಕು ಎಂಬ ಹಠ ನಮ್ಮದು.
ನಾವು ಪೆಂಚ್‌ನಲ್ಲಿದ್ದ 10ದಿನಗಳ ಪೈಕಿ 7 ದಿನಗಳ ಬರೀ ಕಾಡು ಸುತ್ತುವುದು, ಹುಲಿಗಳ ಹೆಜ್ಜೆ ಗುರುತು ನೋಡುವುಷ್ಟೇ ಆಗಿ ಎಲ್ಲರ ಮುಖದಲ್ಲೂ ನಿರುತ್ಸಾಹ ಮನೆ ಮಾಡಿತ್ತು.
ಹುಲಿಯ ಜಾಡು ಹಿಡಿದು ಅದನ್ನು ಟ್ಯಾಕ್ ಮಾಡು ವುದರಲ್ಲಿ ಬಹುಕಾಲದ ಗೈಡ್ ದುರ್ಗೇಶ್ ನಿಸ್ಸಿಮರು. ಬಹಳ ಕಾಲದಿಂದ ಕಾಡಿನಲ್ಲಿ ಓಡಾಡಿರುವ, ಹುಲಿಗಳನ್ನು ಕಂಡಿರುವ ಅವರಿಗೆ ಹೀಗೆ ಅವುಗಳ ಚಲನೆ ಗ್ರಹಿಸುವುದು ಒಂದು ರೀತಿಯ ರೂಢಿಗತ ಜ್ಞಾನವಾಗಿ ಹೋಗಿದೆ.
7ನೇ ದಿನ ನಮಗೆ ಅಚ್ಚರಿ ಕಾದಿತ್ತು. ಮಳೆಯೂ ಬಂದು ನಿಂತಿತ್ತು. ಮಳೆ ಎಂಬ ನಿರಾಶೆಯಿಂದಲೇ ನಾವು ಕಾಡಿಗೆ ಹೋದೆವು. ಆದರೆ ನಮಗೆ ಅಲ್ಲಿ ನಿರಾಸೆಯಾಗಲಿಲ್ಲ. ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ರಸ್ತೆಯ ಉದ್ದ ಗಲಕ್ಕೂ ಮೈಚಾಚಿ ಬೃಹತ್ ಹುಲಿಯೊಂದು ಮಲಗಿತ್ತು. ಹುಲಿ ಕಾಣದೆ ಹತಾಶೆಯಾಗಿದ್ದ ನಾವು ಕ್ಯಾಮೆರಾ ಬಿಟ್ಟು ಹುಲಿ ನೋಡುತ್ತಲೇ ಮೈ ಮರೆತವು. ಬಳಿಕ ಅಲ್ಲಿಂದ ಎದ್ದ ಹುಲಿ ಕೊಂಚ ದೂರ ನಡೆದು ಹರಿಯುವ ನೀರಿನಲ್ಲಿ ಇಳಿಯಿತು. ಹುಲಿ ನೀರಿನಲ್ಲಿ ನಿಂತು ತಲೆ ಎತ್ತಿ ನಮ್ಮತ್ತ ನೋಡಿತು. ನಮ್ಮ ಕ್ಯಾಮೆರಾಗಳು ಕ್ಲಿಕ್ಕಿಸಲು ಆರಂಭಿಸಿದವು. ಹುಲಿ ಅದಷ್ಟಕ್ಕೇ ಸುಮ್ಮನಾಗಲಿಲ್ಲ. ನೀರಿನಲ್ಲಿ ನಿಂತೇ ಅಲ್ಲಿದ್ದ ಮರವನ್ನು ತಬ್ಬಿ ತನ್ನ ಕತ್ತನ್ನು ಮರಕ್ಕೆ ಉಜ್ಜತೊಡಗಿತು. ಆ ಸಂದರ್ಭದ ಅನುಭವವನ್ನು ನಾಲೈದು ಸಾಲಿನಲ್ಲಿ ವರ್ಣಿಸಿ ಹೇಳಲಾಗದು. ಬಹಳ ಕಾಲ ಕಾದಿದ್ದು ನಮಗೆ ಹುಲಿಯ ಆ ದೃಶ್ಯ ಆಯಾಸವನ್ನು ದೂರಾಗಿಸಿತು. ಅಲ್ಲಿಂದ ಹುಲಿ ಮುಂದೆ ಸಾಗಿತ್ತು. ಹುಲಿಯ ಮುಂದೆ ಸಾಗಿದಂತೆ ಜೀಪಿನಲ್ಲಿದ್ದ ನಾವು ಹುಲಿಯ ಹಿಂದೆಸಾಗಿದೆವು. ಸುಮಾರು ಎರಡೂವರೆ ಗಂಟೆಗಳ ಕಾಲ ನಮ್ಮೊಂದಿಗೆ ಹುಲಿಯೂ ನಡೆಯಿತು.
ಇದಾದ ಮಾರನೇ ದಿನ ಕುರೇ ಗಾರ್ಡ್ ಹುಲಿಯ ದರ್ಶನವೂ ಆಯಿತು. ಹುಲಿ ಸಮೀಪಕ್ಕೆ ಬಂತು. ಅದಂತೂ ರೋಮಾಂಚನಕಾರಿ ಅನುಭವ.





