Mysore
23
overcast clouds
Light
Dark

ಲೇಖಾನುದಾನಕ್ಕೆ ಚುನಾವಣೆಯ ‘ಶುಗರ್ ಕೋಟ್’

• ರಾಜಾರಾಂ ತಲ್ಲೂರು

ಯಾವುದೇ ಮಹತ್ವದ ನೇತ್ಯಾತ್ಮಕ ಬದಲಾವಣೆಗಳು ಇಲ್ಲದ, ಆದರೆ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಅಗತ್ಯ ಇರುವ ಪ್ರಚಾರ ಸಾಮಗ್ರಿಗಳು ದಂಡಿಯಾಗಿರುವ ಲೇಖಾನುದಾನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಪೂರ್ಣ ಪ್ರಮಾಣದ ಬಜೆಟ್‌ ನ್ನು ಚುನಾವಣೆಗಳ ಬಳಿಕ ತಮ್ಮದೇ ಸರ್ಕಾರ ಮಂಡಿಸಲಿದೆ ಎಂಬ ಭರವಸೆಯನ್ನೂ ಅವರು ಸದನಕ್ಕೆ ನೀಡಿದ್ದಾರೆ.

ಮುಂಗಾಣ್ಕೆಗೆ ಸೀಮಿತವಾಗಿರುವ ಇಂತಹದೊಂದು ‘ಬಜೆಟ್’ ಮಂಡಿಸಿದಾಗ ಅದನ್ನು ವಿಶ್ಲೇಷಿಸುವುದು ಎಂದರೆ, ಸರ್ಕಾರ ತನ್ನ ಹಣ ಕಾಸಿನ ಜವಾಬ್ದಾರಿಗಳನ್ನು ಕಳೆದ ಹಣಕಾಸು ವರ್ಷದಲ್ಲಿ ಹೇಗೆ ನಿರ್ವಹಿಸಿದೆ ಎಂದು ನೋಡಲು ಪ್ರಯತ್ನಿಸುವುದು.

2019ರ ಚುನಾವಣೆಗೆ ಮುನ್ನ, 2019-20ನೇ ಸಾಲಿಗೆ ಲೇಖಾನುದಾನ ಮಂಡಿಸಿದ್ದ ಅಂದಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು 2030ರ ಹೊತ್ತಿಗೆ ಭಾರತ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುವ ಕನಸನ್ನು ಬಿತ್ತಿದ್ದರು. ಈ ಬಜೆಟ್‌ನಲ್ಲಿ ಆ ಬಗ್ಗೆ ಸೊಲ್ಲೆತ್ತಿಲ್ಲವಾ ದರೂ, 2030ರ ಹೊತ್ತಿಗೆ ಭಾರತ 7 ಟ್ರಿಲಿಯನ್ ಡಾಲರ್ ಆರ್ಥಿಕತೆ (3 ಟ್ರಿಲಿಯನ್ ಕಡಿಮೆ!) ಆಗುವ ಹಾದಿ ಯಲ್ಲಿದೆ ಎಂಬುದು ಸರ್ಕಾರದ ಬದಲಾದ ನಿಲುವು. ಹೀಗಾಗಲು ಮುಂದಿನ ಆರು ವರ್ಷಗಳಲ್ಲಿ ದೇಶದ GDP ಬಹುತೇಕ ಈಗಿರುವುದರ ದುಪ್ಪಟ್ಟು ಗಾತ್ರದಲ್ಲಿ ಏರಬೇಕಿದೆ. 2023-24ರ ಬಜೆಟ್‌ನಲ್ಲಿ ಸರ್ಕಾರ ತನ್ನ GDP ಬೆಳವಣಿಗೆ ದರ 10.5% ಇರಲಿದೆ ಎಂದು ಅಂದಾಜಿಸಿತ್ತು.
ಆದರೆ ಈಗ ಅದು, 7.3% ಇರಬಹುದೆಂದು ಅಂದಾಜಿಸ ಲಾಗಿದೆ. ಈ ಬಾರಿ 2024-25ಕ್ಕೆ ಅದನ್ನು ಮತ್ತೆ 10.5% ಇರಲಿದೆ ಎಂದು ಅಂದಾಜು ಮಾಡಲಾಗಿದೆ.

ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯಿದೆಯ ಅನ್ವಯ, 2021ರ ಅಂತ್ಯಕ್ಕೆ ಬಜೆಟ್‌ನಲ್ಲಿ ಹಣಕಾಸಿನ ಕೊರತೆಯು GDP ಯ 3%ಗಿಂತ ಕಡಿಮೆ ಆಗಬೇಕಿತ್ತು. ಅದು 2023-24ರ ಬಜೆಟ್‌ನಲ್ಲಿ, 5.8% ಇತ್ತು, ಈಗ 2025-26ರಲ್ಲಿ ಅದನ್ನು 4.5%ಗೆ ಇಳಿಸುವ ಉದ್ದೇಶವನ್ನು ಹಣಕಾಸು ಸಚಿವರು ವ್ಯಕ್ತಪಡಿಸಿದ್ದಾರೆ. ಈ ಹಣಕಾಸು ಕೊರತೆಯನ್ನು ಮಾರುಕಟ್ಟೆಯಿಂದ ಸಾಲ ತಂದು ಭರ್ತಿ ಮಾಡಲಾಗುತ್ತಿದ್ದು, ಅದು 2023-24 GDP ನಲ್ಲಿ 68.89% ಕೊರತೆ ಭರ್ತಿ ಮಾಡುತ್ತಿದ್ದರೆ, 2024-25ನೇ ಸಾಲಿಗೆ 79.6% ಭಾಗ ಕೊರತೆಯನ್ನು ಭರ್ತಿ ಮಾಡಬೇಕಾಗಿ ಬರುತ್ತದೆ.ಈ ಆರ್ಥಿಕ ಶಿಸ್ತಿನ ಅಂಶಗಳನ್ನು ಯಾಕೆ ಎತ್ತಬೇಕಾಗು ತ್ತದೆ ಎಂದರೆ, ದೇಶ ಸಮಸ್ಯೆಗಳನ್ನೆಲ್ಲ ಮೀರಿ ನಿಂತಾಗಿದೆ, ಇನ್ನು 2047ಕ್ಕೆ ನಾವು ‘ವಿಕಸಿತ ಭಾರತ’ ಅರ್ಥಾತ್ ದೇಶ ಅಭಿವೃದ್ಧಿಶೀಲ ಹಂತದಿಂದ ಅಭಿವೃದ್ಧಿಹೊಂದಿದದೇಶವಾಗಿ ಬದಲಾಗಲಿದೆ ಎಂಬ ಕನಸನ್ನು ಈ ಬಜೆಟ್ ಮೂಲಕ ಬಿತ್ತಲಾಗಿದೆ.

ಶ್ವೇತಪತ್ರ: ಬಜೆಟ್ ಭಾಷಣದ ಕೊನೆಯಲ್ಲಿ ಹಣಕಾಸು ಸಚಿವರು 2014ರ ಮೊದಲು ಪರಿಸ್ಥಿತಿ ಹೇಗಿತ್ತು ಮತ್ತು ಅಲ್ಲಿಂದೀಚೆಗೆ ಪರಿಸ್ಥಿತಿ ಏನು ಬದಲಾಗಿದೆ ಎಂಬ ಕುರಿತು ಶ್ವೇತಪತ್ರವನ್ನು ಸದನದಲ್ಲಿ ಮಂಡಿಸಲಾಗುವುದು ಎಂಬ ಆಶ್ವಾಸನೆ ನೀಡಿದ್ದಾರೆ. ಇದು ಈ ಬಾರಿಯ ಚುನಾವಣೆಗಳಿಗೆ ತಯಾರಿಯಲ್ಲಿ ಸರ್ಕಾರವು ವಿರೋಧ ಪಕ್ಷಗಳಿಗೆ ಹೋಲಿಸಿದರೆ, ಮೈಲಿಗಟ್ಟಲೆ ಮುಂದಿದೆ ಎಂಬುದಕ್ಕೆ ಸೂಚನೆ. ಉದಾರೀಕರಣದ ಮೊದಲ ಹಂತ (1990-2014) ಎಂಬುದು ಹೊಸದೊಂದು ಆರ್ಥಿಕ ಹಾದಿಯ ತಳಪಾಯ ಕಟ್ಟಿದ ಸಮಯ. ನೆಲ ಹಸನುಗೊಳಿಸಿ ತಳಪಾಯ ಹಾಕುವಾಗ ಕಟ್ಟಡ ಕಾಣಿಸುವುದಿಲ್ಲ. ಕಲ್ಲು ಕಟ್ಟಲಾರಂಭಿಸಿದ ಮೇಲೆ ಕಟ್ಟಡ ಕಾಣಿಸಲಾರಂಭಿಸುತ್ತದೆ. ಈಗ ಕಟ್ಟಿದ ಕಲ್ಲುಗಳನ್ನು ಲೆಕ್ಕ ಹಾಕಿ ತೋರಿಸುವುದು ಸುಲಭ. ತಳಪಾಯ ಇಲ್ಲದಿದ್ದರೆ ಕಟ್ಟಡ ಸಾಧ್ಯವಾಗುತ್ತಿತ್ತೇ? ಎಂಬ ಅರಿವಿನೊಂದಿಗೆ ಸರ್ಕಾರ ಮುಂದುವರಿಯದಿದ್ದಲ್ಲಿ, ಆ ಶ್ವೇತಪತ್ರಕ್ಕೆ ಚುನಾವಣಾ ಕರಪತ್ರಕ್ಕಿಂತ ಹೆಚ್ಚಿನ ಮೌಲ್ಯ ಉಳಿಯದು.

ಕೊರತೆ:ಸಚಿವರು ಬಜೆಟ್ ಭಾಷಣದಲ್ಲಿ ಬಡವರು, ಮಹಿಳೆಯರು, ಯುವಕರು ಮತ್ತು ರೈತರು ಬೆಳವಣಿಗೆಯಲ್ಲಿ ಒಳಗೊಳ್ಳುವುದು ಮುಖ್ಯ ಗುರಿ ಎಂದು ಹೇಳಿ, ವಸತಿ, ನೀರು, ವಿದ್ಯುತ್, ಅಡುಗೆ ಅನಿಲ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಅಭಿವೃದ್ಧಿಯಲ್ಲಿ ಅವರನ್ನು ಒಳಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ವಾಸ್ತವದಲ್ಲಿ, ದೇಶದ ಸಂಪತ್ತಿನ ಹಂಚಿಕೆಯಲ್ಲಿನ ಅಸಮ ತೋಲನ ದಿನೇದಿನೇ ಹೆಚ್ಚುತ್ತಿದೆ ಎಂಬುದನ್ನು ಹಲವು ಲೆಕ್ಕಾ ಚಾರಗಳು ಎತ್ತಿ ತೋರಿಸುತ್ತಿವೆ. ಈ ಅಸಮತೋಲನ ನಿವಾರಣೆಗೆ ಇರುವ ಒಂದೇ ಹಾದಿ ಎಂದರೆ ‘ಅತಿ ಶ್ರೀಮಂತರಿಗೆ ಹೆಚ್ಚಿನ ತೆರಿಗೆ’ ಕಾರ್ಪೊರೇಟ್ ವಲಯ ಮತ್ತು ಅತಿ ಶ್ರೀಮಂತರ ತೆರಿಗೆಗಳಿಗೆ ಸರ್ಕಾರ ನೀಡಿರುವ ವಿನಾಯಿತಿಗಳಲ್ಲಿ ಬದಲಾವಣೆ ಆಗಿಲ್ಲ. 2023-24ರಲ್ಲಿ ಕಾರ್ಪೊರೇಟ್ ತೆರಿಗೆ 10.43 ಲಕ್ಷ ಕೋಟಿ ರೂ. ಇದ್ದುದು ಬಜೆಟ್ ವರ್ಷಕ್ಕೆ 11.56 ಲಕ್ಷ ಕೋಟಿ ರೂ.ಗಳಿಗೆ ಏರಲಿದೆ. ಆದರೆ ಸರ್ಕಾರ ಶ್ರೀಮಂತರಿಗೆ ಲಾಭ ತಂದು ಕೊಡುವ ಕ್ಯಾಪೆಕ್ಸ್ ಹೂಡಿಕೆಗೆ ಬಜೆಟ್ ವರ್ಷದಲ್ಲಿ 11.11 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಉದ್ದೇಶಿಸಿದ್ದು, ಕೆರೆಯ ನೀರು ಕೆರೆಗೆ ಹಿಂದಿರುಗಲಿದೆ!

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ