Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯುವ ಶಕ್ತಿ ಅಪವ್ಯಯವಾಗದಿರಲಿ

• ಆರ್.ಮಹಾದೇವಪ್ಪ, ಪ್ರಗತಿಪರ ಚಿಂತಕರು, ಮೈಸೂರು.

ಹಳ್ಳಿಗಾಡಿನ ಯುವಕ ಯುವತಿಯರು ವಿವಿಧ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಪಡೆದು ಉದ್ಯೋಗವಿಲ್ಲದೆ ತಂದೆ- ತಾಯಿಗಳಿಗೆ ಹೊರೆಯಾಗಿ, ಸಮಾಜದ ನಾನಾ ಸಮಸ್ಯೆಗಳಿಗೆ ಕಾರಣೀ ಭೂತರಾಗಿದ್ದಾರೆ. ವಿದ್ಯಾವಂತ ನಿರುದ್ಯೋಗಿ ಯುವಕರು ಜಮೀನೂ ಇಲ್ಲದೇ, ಇದ್ದರೂ ಕೀಳರಿಮೆಯಿಂದ ಕೃಷಿ ಅಥವಾ ಇನ್ನಿತರ ಕೆಲಸಗಳನ್ನು ನಿರ್ವಹಿಸದೆ ಸೋಮಾರಿಗಳಾಗಿ ಅವರಿರುವ ಪರಿಸರದಲ್ಲಿ ಸಮಸ್ಯಾತ್ಮಕ ರಾಗಿದ್ದಾರೆ. ಇದನ್ನು ಮನಗಂಡು ಕಾಂಗ್ರೆಸ್ ಪಕ್ಷದ ಬುದ್ಧಿಜೀವಿಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000 ರೂ, ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಿಸಿದ್ದರು. ಈಗ ಅದನ್ನು ಕಾರ್ಯರೂಪಕ್ಕೆ ತರಲು ಇಚ್ಛಿಸಿರುವುದು ಸ್ವಾಗತಾರ್ಹ.

ಈ ಸಂದರ್ಭದಲ್ಲಿ ನಾನು ಗಮನಿಸಿದ್ದ ಕೆಲವು ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲು ಇಚ್ಛಿಸುತ್ತೇನೆ. 3000 ರೂ. ಕೊಡುವುದರ ಮೂಲಕ ವಿದ್ಯಾವಂತರ ಹಸಿವು ನಿವಾರಿಸಬಹುದು. ಆದರೆ ಅವರು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಡೆಯಲು ಸಾಧ್ಯವೇ? ದಿನಕ್ಕೆ ನೂರು ರೂ.ಗಳಂತೆ 30 ದಿನಗಳಿಗೆ 3,000 ರೂ. ಸಾಕು. ಅಕ್ಕಿ, ಬೇಳೆ, ಉಪ್ಪು, ಮೆಣಸು ಹೀಗೆ ಒಂದು ದಿನಕ್ಕೆ ನೂರು ರೂ. ಖರ್ಚು ಮಾಡಿದರೂ ಹೇಗೋ ಬದುಕಬಹುದು. ಕುಡಿಯದೆ, ಜೂಜಾಡದೆ ಇತರೆ ಕೆಡಕಿನ ಮಾರ್ಗಗಳಿಲ್ಲದೆ ಇದ್ದರೂ ಬದುಕಬಹುದು.

ಆದರೆ ಉನ್ನಂಡು ಏನು ಮಾಡುತ್ತಾರೆ? ಇದು ನನ್ನ ಪ್ರಶ್ನೆ. 3,000 ರೂ. ಇಲ್ಲದೆ ಇದ್ದ ಸಂದರ್ಭದಲ್ಲಿ ಅವರಲ್ಲಿದ್ದ ಸೋಮಾರಿತನ 3,000 ರೂ. ಬಂದ ಬಳಿಕ ಕೊನೆಗೊಳ್ಳುವುದೇ ಅಥವಾ ಅವನ ಕೇಡಿನ ವರ್ತನೆ, ನಡವಳಿಕೆ ಬದಲಾಗುವುದೇ, ಅವನಿಂದ ಉಂಟಾಗಬಹುದಾದ ಸಾಮಾಜಿಕ ವಿಘಟನೆ ನಿಲ್ಲಬಹುದೇ? ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲನೇ? 3000 ರೂ. ತೆಗೆದುಕೊಂಡು ಏನು ಮಾಡಲು ಸಾಧ್ಯ? ಕುಟುಂಬದ ಖರ್ಚಿಗೆ ಸರಿದೂಗುವುದೇ? ಅಥವಾ ವೈಯಕ್ತಿಕ ಖರ್ಚಿಗೆ ವಿನಿಯೋಗಿಸಬಹುದೇ? ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರು ಈ ಹಣ ಬಳಸಿಕೊಂಡು ಚಾವಡಿಯಲ್ಲಿ ಕುಳಿತು ಜೂಜಾಡಬಹುದು. ಚಟಗಳಿಗೆ ಬಲಿಯಾಗಬಹುದು. (Amnotgenaralising to all youths). ಗಾಂಧೀಜಿಯವರು Young man is the salt of the nation ಎಂದು.

ಈ ಉಪ್ಪನ್ನು ಹೇಗೆ, ಯಾವ ಪ್ರಮಾಣದಲ್ಲಿ ಎಲ್ಲಿ ಬಳಸಬೇಕು ಅನ್ನುವುದು ಆಡಳಿತಗಾರರ ವಿವೇಚನೆಗೆ ಒಳಪಟ್ಟಿದ್ದು. ವಿವೇಕಾನಂದರು ಯುವಶಕ್ತಿಯ ಬಗ್ಗೆ, ಅವರ ಬಳಕೆಯ ಬಗ್ಗೆ ವಿರಾವೇಶದಿಂದ ಮಾತನಾಡಿದ್ದಾರೆ. ಶರಣರು ದುಡಿಮೆಗೆ ಆದ್ಯತೆ ನೀಡಿ, ದುಡಿಯದೇ ತಿನ್ನುವುದು ಧರ್ಮ ವಿರೋಧಿ ಎಂದಿದ್ದಾರೆ.

ಮುಖ್ಯ. ಯುವಕ- ಯುವತಿಯರ ಪ್ರಾಯ, ಪ್ರಾಯದ ಕನಸುಗಳು, ಆದರ್ಶ, ಸಾಂಸ್ಕೃತಿಕ ಹಿನ್ನೆಲೆ ಇವೆಲ್ಲವನ್ನೂ ಪರಿಗಣಿಸಿ ಅವರಿಗೆ ಮಾರ್ಗದರ್ಶನ ಮಾಡಬೇಕಾಗುತ್ತದೆ. ಕೆಳ ವರ್ಗದ ಅಥವಾ ಮಧ್ಯಮ ವರ್ಗದ ಮಕ್ಕಳು ಉದ್ಯೋಗಕ್ಕಾಗಿ ಶಿಕ್ಷಣ ಪಡೆಯುತ್ತಾರೆಯೇ ವಿನಾ ಜ್ಞಾನಾರ್ಜನೆಗಾಗಿ ಶಿಕ್ಷಣ ಪಡೆಯುವುದಿಲ್ಲ. ಶಿಕ್ಷಣ ಪಡೆದು ಗಳಿಸಿದ ಪದವಿಯ ಆಧಾರದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಸರ್ಕಾರ ಖಾಲಿ ಹುದ್ದೆಗಳನ್ನು ಪ್ರತಿ ವರ್ಷ ತುಂಬುತ್ತಾ ಹೋದರೆ ಪದವಿ ಪಡೆದದ್ದಕ್ಕೆ ಸಾರ್ಥಕತೆ ಇರುತ್ತದೆ. ಆದರೆ ಆರ್ಥಿಕ ಸಂಪನ್ಮೂಲದ ಕೊರತೆ ಎಂದು ಹೇಳಿ ಹುದ್ದೆಗಳನ್ನು ಭರ್ತಿ ಮಾಡದೆ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸಿ ತಾನೇ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಯಾವುದೇ ಇಲಾಖೆಯನ್ನು ಮತ್ತೊಂದರಲ್ಲಿ ವಿಲೀನಗೊಳಿಸುವುದು ಅಥವಾ ಖಾಸಗಿಯವರಿಗೆ ಮಾರುವುದು, ಸರ್ಕಾರದ ನೀತಿ, ನಿರ್ಧಾರಗಳು ಯುವಜನರ ಉದ್ಯೋಗಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಕೈಗಾರಿಕೀಕರಣ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಅನುವಂಶಿಯ ಕಸುಬುಗಳು ನಶಿಸಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ತಂತ್ರಜ್ಞಾನ ಮತ್ತು ಕೌಶಲಾಧಾರಿತ ಶಿಕ್ಷಣದ ಕೊರತೆಯಿಂದ ಯುವಕ- ಯುವತಿಯರು ಹೊಸ ಬೇಡಿಕೆಗಳಿಗೆ ಸ್ಪಂದಿಸಲಾರದೆ, ಹೊಂದಿಕೊಳ್ಳಲಾರದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಈಗ ನನ್ನ ಕಳಕಳಿ ಏನೆಂದರೆ 3,000 ರೂ. ಕೊಡಿ. ಅಥವಾ ಇನ್ನೂ ಒಂದು ಸಾವಿರ ರೂ. ಹೆಚ್ಚು ಕೊಡಿ. ಆದರೆ ಒಂದು ಗಂಟೆ ಅಥವಾ ಎರಡು ಗಂಟೆ ಏನಾದರೂ ಕೆಲಸ ಮಾಡಲು ತಿಳಿಸಿ. ಎಲ್ಲಿ ಕೆಲಸ ಮಾಡಬೇಕು, ಏನು ಕೆಲಸ ಮಾಡಬೇಕು ಎಂಬುದು ಅವನ ಆಸಕ್ತಿ ಅಥವಾ ಅವನು ಪಡೆದ ಪದವಿಗೆ ಸಂಬಂಧಪಟ್ಟಿದ್ದು. ಸುಮ್ಮನೆ ಕಾಲ ಕಳೆಯುವವನಿಗೆ ಹಣ ನೀಡಿದರೆ ಯುವಶಕ್ತಿ ಅಪವ್ಯಯವಾಗುತ್ತದೆ.

ಆದ್ದರಿಂದ ಯುವ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವುದು ಬಹಳ ಮುಖ್ಯ. ಪರಿಸರ ಸಂರಕ್ಷಣೆ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು, ಗಿಡಗಳನ್ನು ನೆಡುವುದು, ಕೆರೆ ಸಂರಕ್ಷಣೆ ಮಾಡುವುದು… ಉದಾಹರಣೆಗೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮರ -ಗಿಡಗಳನ್ನು ಬೆಳೆಸುವುದು, ಸಂರಕ್ಷಿಸು ವುದು, ನೀರು ಹಾಕುವುದು, ಆರೋಗ್ಯ, ಶಿಕ್ಷಣ, ಪರಿಸರ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಲು ತಿಳಿಸುವುದು ಅಥವಾ ಸ್ಥಳೀಯ ಅಂಗನವಾಡಿ, ಶಾಲೆಗಳಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುವುದು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ 1 ಗಂಟೆ ಪಾಠ ಮಾಡು ವುದು. ಹೀಗೆ ಯುವ ಸಮೂಹದಿಂದ ಸೇವೆಗಳನ್ನು ಪಡೆಯಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ