Mysore
29
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಡಿಜಿಟಲ್ ಲೋಕವೂ ಕನ್ನಡ ಚಿತ್ರರಂಗವೂ

ಬಾ.ನಾ.ಸುಬ್ರಹ್ಮಣ್ಯ

ಕೇಂದ್ರ ಸರ್ಕಾರ ಎವಿಜಿಸಿ (ಅನಿಮೇಶನ್, ವರ್ಚುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್)ನತ್ತ ಈಗ ಗಮನ ಹರಿಸುತ್ತಿದೆ. ರಾಜ್ಯದಲ್ಲಿ 2012ರಲ್ಲೇ ಈ ನಿಟ್ಟಿನಲ್ಲಿ ಕೆಲಸ ಆರಂಭವಾಗಿತ್ತು. ಎರಡು ಬಾರಿ ಎವಿಜಿಸಿ ನೀತಿಯ ಮೂಲಕ ಈ ಕ್ಷೇತ್ರದಲ್ಲಿ ಹೆಜ್ಜೆ ಹಾಕಿದ ಸರ್ಕಾರ ಇದೀಗ ಮೂರನೇ ಬಾರಿ ನೀತಿಯನ್ನು ಹೊರತರುತ್ತಿದೆ. ರಾಜ್ಯ ಸರ್ಕಾರದ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಕ್ಷೇತ್ರದ ಹೊಣೆ ಹೊತ್ತಿದೆ.

ಮೊನ್ನೆ ಬುಧವಾರ ಮುಗಿದ ಜಿಎಎಫ್‌ಎಕ್ಸ್ 2024ರಲ್ಲಿ ಹೊಸ ಎವಿಜಿಸಿ ನೀತಿಯನ್ನು ಪ್ರಕಟಿಸಲಾಗಿದೆ. ಅನಿಮೇಶನ್, ವರ್ಚುವಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್ ಜೊತೆಗೆ ಹೊಸ ಡಿಜಿಟಲ್ ಬೆಳವಣಿಗೆ ಎಕ್ಸ್ ಟೆಂಡೆಡ್ ರಿಯಾಲಿಟಿ ಸೇರಿದಂತೆ, ಎವಿಜಿಸಿ-ಎಕ್ಸ್‌ಆರ್ ನೀತಿ’ಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಕಟಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಪ್ರಗತಿಯ ಜೊತೆಗೆ ಸುಮಾರು 50,000 ಮಂದಿಗೆ ಉದ್ಯೋಗ, ಅನಿಮೇಶನ್ ಚಿತ್ರಗಳು ಮತ್ತು ಸರಣಿಗಳನ್ನು ನಿರ್ಮಿಸುವವರಿಗೆ ಸಹಾಯಧನ, ವಿಎಫ್‌ಎಕ್ಸ್ ತಂತ್ರಜ್ಞಾನದಲ್ಲಿ ತೊಡಗಿಸಿಕೊಳ್ಳುವವರಿಗೆ ಅನುದಾನವೇ ಮೊದಲಾಗಿ ಈ ನೀತಿಯಲ್ಲಿ ಪ್ರಕಟಿಸಲಾಗಿದೆ.

ಮೂರು ದಿನಗಳ ಕಾಲ ನಡೆದ ಜಿಎಎಫ್‌ಎಕ್ಸ್ 2024 ಸಮಾವೇಶದಲ್ಲಿ ದೇಶವಿದೇಶಗಳಲ್ಲಿ, ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡತಜ್ಞರು ಪಾಲ್ಗೊಂಡಿದ್ದರು. ಅನಿಮೇಶನ್, ಗೇಮಿಂಗ್, ಕಾಮಿಕ್ಸ್, ಸ್ಪೆಶಲ್ ಎಫೆಕ್ಟ್, ಎಕ್ಸ್‌ಟೆಂಡೆಡ್ ರಿಯಾ ಲಿಟಿ ವಿಭಾಗಗಳಲ್ಲಿನ ಸಾಧನೆ, ಸಾಧ್ಯತೆಗಳ ಕುರಿತಂತೆ ಸಾಕಷ್ಟು ಚರ್ಚೆ, ವಿಚಾರ ಸಂಕಿರಣ, ಪ್ರದರ್ಶನ, ತಜ್ಞರ ಜೊತೆ ಮಾತುಕತೆ ಮುಂತಾದವು ಗಳಿದ್ದವು. ಹೊಂಬಾಳೆ, ಲಹರಿ, ರಾಕ್‌ಲೈನ್, ವಾಸವಿ, ಕೆವಿಎನ್ ಮುಂತಾದ ಸಂಸ್ಥೆಗಳು ತಮ್ಮ ನಿರ್ಮಾಣದ ಚಿತ್ರಗಳ ಹಿನ್ನೆಲೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮವೂ ಇತ್ತು ಎನ್ನುವುದನ್ನು ಕಾರ್ಯಕ್ರಮದ ವಿವರ ಪಟ್ಟಿ ಹೇಳಿತ್ತು.

ಹೊಸ ನೀತಿಯಲ್ಲಿ ಮುಂದಿನ ದಿನಗಳಲ್ಲಿ ಎವಿಜಿಸಿ ತರಬೇತಿಯನ್ನು ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸುವ, ಬೆಂಗಳೂರು ಮಾತ್ರವಲ್ಲದೆ, ಮಂಗಳೂರು, ಮೈಸೂರು, ಹುಬ್ಬಳ್ಳಿ ಮುಂತಾದ ನಗರಗಳಿಗೆ ಈ ಕ್ಷೇತ್ರವನ್ನು ವಿಸ್ತರಿಸುವ ಕುರಿತೂ ನೀತಿ ಹೇಳಿದೆ. ಆಸಕ್ತರಿಗೆ ಅನಿಮೇಶನ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಶೇಷ ಪರಿಣಾಮಗಳ ತಾಂತ್ರಿಕ ತರಬೇತಿ ನೀಡುವ ಸಂಸ್ಥೆಗಳಿಗೆ ಅನುದಾನವೂ ಇದೆ.

ಅನಿಮೇಶನ್ ಚಿತ್ರಗಳನ್ನು ನಿರ್ಮಿಸುವವರಿಗೆ, ಅದರ ವೆಚ್ಚದ ಶೇ.20ರಷ್ಟು ಸಹಾಯಧನವನ್ನು ರೂ. ಒಂದು ಕೋಟಿಗೆ ಮಿತಿಗೊಳಪಟ್ಟು ಮತ್ತು ಅನಿಮೇಶನ್ ಸರಣಿಗಳನ್ನು ನಿರ್ಮಿಸುವವರಿಗೆ ಶೇ.20ರಷ್ಟು ಸಹಾಯಧನವನ್ನು 30 ಲಕ್ಷ ರೂ. ಮಿತಿಗೊಳಪಟ್ಟು ನೀಡುವ ಪ್ರಸ್ತಾಪವೂ ಇದರಲ್ಲಿದೆ. ಅಂತಾರಾಷ್ಟ್ರೀಯಮಟ್ಟದ ಚಿತ್ರಗಳಾದರೆ, ಅದರಸಹಾಯಧನದ ಮಿತಿ ಐದು ಕೋಟಿ ರೂ. ಆಗಿದೆ. ಹಿಂದಿನ ಎರಡು ನೀತಿಗಳಲ್ಲಿ ಈ ಪ್ರಸ್ತಾಪ ಇತ್ತು. ಆದರೆ ಇದರ ಪ್ರಯೋಜನವನ್ನು ಎಷ್ಟು ಮಂದಿ ಪಡೆದರು ಎನ್ನುವ ವಿವರ ಲಭ್ಯವಿಲ್ಲ.

ಪ್ರತಿ ವರ್ಷ ಈ ಸಮಾವೇಶವನ್ನು ರಾಜ್ಯ ಸರ್ಕಾರಕ್ಕಾಗಿ ಬೆಂಗಳೂರು ಅನಿಮೇಶನ್ ಉದ್ಯಮಗಳ ಸಂಸ್ಥೆ (ABAI) ಹಮ್ಮಿಕೊಳ್ಳುತ್ತದೆ. ಮನರಂಜನೋದ್ಯಮದ ವಿವಿಧ ಮಜಲುಗಳು ಡಿಜಿಟಲ್ ಮಾಧ್ಯಮಗಳಲ್ಲಿ ತೆರೆದುಕೊಳ್ಳುತ್ತಿರುವುದರ ಅರಿವು ಮೂಡಿಸುವ ಕೆಲಸವೂ ಇಲ್ಲಿ ನಡೆಯುತ್ತದೆ. ಇದರ ಕುರಿತಂತೆ ಕನ್ನಡ ಚಿತ್ರೋದ್ಯಮದ ಮಂದಿಗೆ ಎಷ್ಟು ಮಾಹಿತಿ ಇದೆ ಎಂದು ಕೇಳಿದರೆ ಉತ್ತರ ನಿರುತ್ತರ. ಸಮಾವೇಶದ ಆಹ್ವಾನ ನಮಗೆ ಶನಿವಾರವಷ್ಟೇ ಬಂತು. ಅದರ ಸಂಘಟನೆಯ ವೇಳೆ, ನಮಗೆ ಯಾವ ಮಾಹಿತಿಯೂ ಇರಲಿಲ್ಲ ಎನ್ನುತ್ತಾರೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ.ಸುರೇಶ್.

ಬೆಂಗಳೂರಿನಲ್ಲಿ ಸಾಕಷ್ಟು ಡಿಜಿಟಲ್ ಸ್ಟುಡಿಯೋಗಳಿವೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡವುಗಳಿವೆ. ‘ಲಯನ್ ಕಿಂಗ್’ ಸೇರಿದಂತೆ ಹಲವು ಅನಿಮೇಶನ್ ಮುಖ್ಯವಾದ ಹಾಲಿವುಡ್ ಚಿತ್ರಗಳ ಬಹುತೇಕ ಭಾಗ ಬೆಂಗಳೂರಿನಲ್ಲೇ ತಯಾರಾಗಿದೆ ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿರಲಾರದು. ಮನರಂಜನೋದ್ಯಮಕ್ಕೆ ಪೂರಕವಾದಎಲ್ಲ ವಿಭಾಗಗಳನ್ನೂ ಒಂದೆಡೆ ಸೇರಿಸುವ ಪ್ರಯತ್ನ ಆಗಬೇಕಾಗಿದೆ. ಆದರೆ ಅದು ಆಗುವ ಪ್ರಯತ್ನ ಆದಂತಿಲ್ಲ. ಆ ಕುರಿತ ಆಸಕ್ತಿಯಾಗಲೀ, ಉತ್ಸಾಹವಾಗಲೀ ಕನ್ನಡ ಚಿತ್ರೋದ್ಯಮದ ಪ್ರಾತಿನಿಧಿಕ ಸಂಸ್ಥೆ ಎನಿಸಿಕೊಂಡಲ್ಲಿ ಕುಳಿತವರಿಗೂ ಇದೆ ಎನ್ನುವುದು ಕಷ್ಟ.

ಮಾಹಿತಿ ತಂತ್ರಜ್ಞಾನ ಸಚಿವಾಲಯ ಎವಿಜಿಸಿ -ಎಕ್ಸ್ಆರ್ ಆಂಗಲ್ ಪ್ರಕಟಿಸುತ್ತದೆ. ಪ್ರವಾಸೋದ್ಯಮ ಇಲಾಖೆ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸುತ್ತದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಲನಚಿತ್ರ ನೀತಿಯನ್ನು ಪ್ರಕಟಿಸುತ್ತದೆ (ರಾಜ್ಯ ಚಲನಚಿತ್ರ ನೀತಿ -2011 ಪ್ರಕಟವಾದಾಗ ಅದು ಐದು ವರ್ಷಕ್ಕೆ ಎಂದು ಹೇಳಲಾಗಿತ್ತು. ಅದಾದ ನಂತರ ನೀತಿ ಪ್ರಕಟವಾಗಿಲ್ಲ). ಸಹಾಯಧನ, ಪ್ರಶಸ್ತಿಗಳನ್ನೂ ಕಳೆದ ಐದು ವರ್ಷಗಳಿಂದ ನೀಡಿರಲಿಲ್ಲ. ಇದೀಗ 2019, 2020, 2021ರ ಪ್ರಶಸ್ತಿ ಆಯ್ಕೆ ಸಮಿತಿ ಮತ್ತು 2019, 2020, 2021 ಮತ್ತು 2022ರ ಸಹಾಯಧನ ಆಯ್ಕೆ ಸಮಿತಿ ಆಯ್ಕೆಯ ಸರ್ಕಾರಿ ಆದೇಶ ಹೊರಬಿದ್ದಿದೆ.

ಪ್ರವಾಸೋದ್ಯಮ ಇಲಾಖೆ 2018ರಲ್ಲಿ ಚಲನಚಿತ್ರ ಪ್ರವಾಸೋದ್ಯಮ ನೀತಿ ಪ್ರಕಟಿಸಿತ್ತು. ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇತರ ದೇಶಗಳಲ್ಲಿ ಮತ್ತು ದೇಶದ ಇತರ ರಾಜ್ಯಗಳಲ್ಲಿ ಇರುವಂತೆ ಈ ನೀತಿ ಇದೆ. ಪ್ರತಿ ವರ್ಷ 2.5 ಕೋಟಿ ರೂ.ಗಳಂತೆ ಮತ್ತು ಒಂದು ಕೋಟಿ ರೂ.ನಂತೆ ಸಹಾಯಧನವನ್ನು ಅರ್ಹ ಚಿತ್ರಗಳಿಗೆ ನೀಡುವುದು ಪ್ರವಾಸೋದ್ಯಮ ಇಲಾಖೆಯ ಈ ನೀತಿಯಲ್ಲಿ ಹೇಳಿದೆ. ಆದರೆ ಅದಕ್ಕೆ ವಿಸ್ತ್ರತವಾದ ಪ್ರಚಾರ ಸಿಕ್ಕಿದಂತಿಲ್ಲ. ಜಾಲತಾಣದಲ್ಲೂ ಹೆಚ್ಚಿನ ವಿವರಗಳಿಲ್ಲ.

ಉತ್ತರ ಭಾರತದ ಹಲವು ರಾಜ್ಯಗಳು ತಮ್ಮ ಪ್ರವಾಸೋದ್ಯಮದ ಪ್ರಚಾರಕ್ಕೆ ಪೂರಕವಾಗಿ ಈ ನೀತಿಯನ್ನು ಹೊರತಂದಿದೆ. ಕನ್ನಡ ಚಿತ್ರ ನಿರ್ಮಾಪಕರೂ ಅಲ್ಲಿ ಹೋಗಿ ಚಿತ್ರಗಳನ್ನು ನಿರ್ಮಿಸಿ, ಸಹಾಯಧನ ಪಡೆದ ಉದಾಹರಣೆಗಳು ಇವೆ. ಈಗಲೂ ಕೆಲವು ಕನ್ನಡ ಚಿತ್ರಗಳು ಉತ್ತರ ಭಾರತದ ರಾಜ್ಯಗಳಲ್ಲಿ ಚಿತ್ರೀಕರಣವಾಗುತ್ತಿವೆ. ಅಲ್ಲಿ ಇಲ್ಲಿನಂತೆ ಸಹಾಯಧನ ಎಂದೋ ಕೊಡುವುದಿಲ್ಲ. ಆದರೆ ಸಹಾಯಧನಕ್ಕೆ ಅರ್ಹತೆಯನ್ನು ಆ ರಾಜ್ಯಗಳು ಮೊದಲೇ ನಿರ್ಧರಿಸುತ್ತವೆ. ಮೊದಲೇ ತಾವು ಚಿತ್ರಿಸುವ ಚಿತ್ರದ ಕಥೆಯ ವಿವರ, ಅಲ್ಲಿ ಚಿತ್ರೀಕರಿಸುವ ದಿನಗಳು ಇವೇ ಮೊದಲಾದ ವಿವರಗಳನ್ನು ನೀಡಿ, ಚಿತ್ರದ ನಿರ್ಮಾಣ ವೆಚ್ಚವನ್ನೂ ದಾಖಲಿಸಬೇಕು. ಇದಕ್ಕೆ ಸಂಬಂಧಪಟ್ಟ ಸಮಿತಿ ಅದನ್ನು ಪರಿಶೀಲಿಸಿ, ಆ ಚಿತ್ರಕ್ಕೆ ನೀಡಬಹುದಾದ ಸಹಾಯಧನದ ಮೊತ್ತದ ವಿವರ ನೀಡುತ್ತದೆ. ಚಿತ್ರ ಸಿದ್ಧವಾಗಿ ಪ್ರಮಾಣಪತ್ರ ಪಡೆದ ನಂತರ ಸಹಾಯಧನ ಪಡೆಯಲು ಅದು ಅರ್ಹವಾಗುತ್ತದೆ.

ಮನರಂಜನೋದ್ಯಮ, ವಿಶೇಷವಾಗಿ ಚಲನಚಿತ್ರಗಳು ಡಿಜಿಟಲ್‌ಗೆ ಹೊರಳಿದ ನಂತರ ಅದು ವೇಗೋತ್ಕರ್ಷ ಪಡೆದುಕೊಂಡಿದೆ. ಇತ್ತೀಚೆಗಂತೂ ಕೃತಕ ಬುದ್ಧಿಮತ್ತೆ ಚಲನಚಿತ್ರ ಮಾಧ್ಯಮದ ದಿಕ್ಕನ್ನೇ ಬದಲಾಯಿಸತೊಡಗಿದೆ. ಡೀಪ್‌ಫೇಕ್ ಒಂದೆಡೆ ಅಚ್ಚರಿ ಮೂಡಿಸಿದರೆ, ಮತ್ತೊಂದೆಡೆ ಆತಂಕಕ್ಕೆ ದೂಡಿದೆ. ಅದರ ಸಾಧಕ, ಬಾಧಕಗಳೆರಡರ ಚರ್ಚೆ, ಜಿಜ್ಞಾಸೆ ಇನ್ನೂ ಮುಗಿಯದ ಕಥೆ.

ಚಿತ್ರಮಂದಿರದಲ್ಲಿ ಕತ್ತಲೆಯಲ್ಲಿ ಕುಳಿತು ನೋಡುತ್ತಿದ್ದ ಚಿತ್ರಗಳನ್ನು ಮನೆಯೊಳಗೆ ಹೋಮ್ ಥಿಯೇಟರ್‌ನಲ್ಲಿ, ಅಂಗೈಯಲ್ಲಿ ಮೊಬೈಲ್‌ನಲ್ಲಿ ನೋಡುವ ದಿನಗಳಿವು. ಸಿನಿಮಾ ಮಾತ್ರ ಮನರಂಜನೆ ಎನ್ನುವುದು ಹಳೆಯ ದಿನಗಳ ಮಾತು. ಕಿರುತೆರೆ ಸರಣಿಗಳು, ವೆಬ್ ಸರಣಿಗಳು, ರೀಲ್‌ಗಳು, ಟ್ರೋಲ್‌ಗಳು ಎಲ್ಲವೂ ಮನರಂಜನೆಗೆ ಜೊತೆಯಾಗಿವೆ.

ಹಾಲಿವುಡ್ ಚಿತ್ರಜಗತ್ತು ಬಹುತೇಕ ಗ್ರಾಫಿಕ್ಸ್, ಅನಿಮೇಶನ್, ವಿಶೇಷ ಪರಿಣಾಮಗಳ ಆಚೆ ಇಣುಕತೊಡಗಿದೆ. ಸಿನಿಮಾ ಮಾಧ್ಯಮ ಡಿಜಿಟಲ್‌ಗೆ ಹೊರಳಿದ ನಂತರ ಸಾಂಪ್ರದಾಯಿಕ ಸಿನಿಮಾ ಮಂದಿಯಲ್ಲಿ ಅತ್ತ ಹೊರಳಿದವರು ಕಡಿಮೆ. ಮಾಹಿತಿ ತಂತ್ರಜ್ಞಾನ ಲೋಕದ ಮಂದಿಗೆ ಇದರಲ್ಲಿ ಆಸಕ್ತಿ ಹೆಚ್ಚಿದೆ. ಈಗ ಕನ್ನಡವೂ ಸೇರಿದಂತೆ ಈ ರಂಗದತ್ತ ಹೆಚ್ಚು ಆಕರ್ಷಿತರಾಗುತ್ತಿರುವವರು ಇವರೇ. ಕನ್ನಡ ಚಿತ್ರೋದ್ಯಮ ಹೊಸ ತಂತ್ರಜ್ಞಾನವನ್ನು ಅಳಡಿಸಿಕೊಳ್ಳಲು, ಎವಿಜಿಸಿ ಎಕ್ಸ್ಆರ್ ನೀತಿಯೂ ಸೇರಿದಂತೆ ಇರುವ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕು, ನೆರವಾಗಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ