Mysore
23
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಚಳಿಯಲ್ಲಿ ತ್ವಚೆಯ ಆರೋಗ್ಯಕ್ಕೆ ತೆಂಗಿನ ಎಣ್ಣೆಯ ರಕ್ಷಣೆ

• ಡಾ.ಚೈತ್ರ ಸುಖೇಶ್

ತೆಂಗಿನ ಎಣ್ಣೆಯು ನಮ್ಮ ಚರ್ಮ, ಕೂದಲು ಮತ್ತು ದೇಹದ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತೆಂಗಿನ ಎಣ್ಣೆಯಲ್ಲಿ ಒಲಿಕ್‌ ಆಸಿಡ್‌ ಅಂಶ ಇರುವುದರಿಂದ ಇದು Omega-9 ಕೊಬ್ಬಿನ ಆಮ್ಲವಾಗಿದೆ. ಇದನ್ನು ಬಳಸುವುದರಿಂದ ದೇಹ ಮತ್ತು ಕೂದಲಿನ ಶುಷ್ಕತೆಯು ಕಡಿಮೆಯಾಗಲಿದ್ದು, ಚರ್ಮ ಸ್ನೇಹಿ ಕೊಬ್ಬಿನ ಆಮ್ಲವಾಗಿದೆ. ವರ್ಜಿನ್ ತೆಂಗಿನ ಎಣ್ಣೆ ಈಗ ಪ್ರಚಲಿತದಲ್ಲಿರುವ ಹೆಸರು. ಈ ಎಣ್ಣೆಯನ್ನು ಯಾವುದೇ ಬಾಹ್ಯ ಶಾಖವಿಲ್ಲದೆ ಶೀತ ಒತ್ತಿದ (Cold-prenel) ವಿಧಾನದ ಮೂಲಕ ಉತ್ಪಾದಿಸಲಾಗುತ್ತದೆ. ಇದಕ್ಕಾಗಿ ತಾಜಾ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಇದು ಸಂಪೂರ್ಣ ನೈಸರ್ಗಿಕವಾಗಿದ್ದು, ಯಾವುದೇ ಭೀಚಿಂಗ್, ರಿಫೈನಿಂಗ್ ನಂತಹ ವಿಧಾನಕ್ಕೆ ಒಳಪಡುವುದಿಲ್ಲ. ಅಲ್ಲದೆ ನೋಡಲು ಹಾಲಿನಂತೆಯೇ ಇದ್ದು, ಉತ್ತಮ ಪರಿಮಳ ಹಾಗೂ ರುಚಿಯನ್ನು ಹೊಂದಿರುತ್ತದೆ.

ಇಂತಹ ವರ್ಜಿನ್ ತೆಂಗಿನ ಎಣ್ಣೆಯನ್ನು ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್‌ಗಳಂತೆ ಬಳಸಬಹುದು. ಇದು ಬಹಳ ಸುಲಭವಾಗಿ ಚರ್ಮದಲ್ಲಿ ಹೀರಿಕೊಳ್ಳುವುದರಿಂದ ದೀರ್ಘಕಾಲದವರೆಗೆ ಚರ್ಮವು ಒಣಗದಂತೆ, ಬಿರುಕು ಬಿಡದಂತೆ ಕಾಪಾಡುತ್ತದೆ. ಚಳಿಗಾಲದಲ್ಲಿ ತುಟಿಗಳನ್ನು ಮೃದುವಾಗಿಡಲು, ಚರ್ಮದ ಸುಕ್ಕುಗಳನ್ನು ತಡೆಗಟ್ಟಲು, ಒಡೆದ ಹಿಮ್ಮಡಿಗಳಿಗೆ, ಆಯುರ್ವೇದ ಮಸಾಜ್‌ಗಳಿಗೆ ಈ ವರ್ಜಿನ್ ತೆಂಗಿನೆಣ್ಣೆ ಅತ್ಯುತ್ತಮವಾಗಿದೆ. ಸಾಮಾನ್ಯವಾಗಿ ತೆಂಗಿನೆಣ್ಣೆಯ ಮಸಾಜ್ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದ್ದು, ದೇಹಕ್ಕೆ ಉತ್ತಮ ವಿಶ್ರಾಂತಿಯನ್ನು ನೀಡುತ್ತದೆ.

ನಿಯಮಿತವಾಗಿ ತೆಂಗಿನ ಎಣ್ಣೆಯ ಮಸಾಜ್ ಮಾಡಿಕೊಳ್ಳುವುದರಿಂದ ಕೂದಲು ಉದುರುವಿಕೆ ತಡೆದು ಕೂದಲು ಉತ್ತಮವಾಗಿ ಬೆಳೆಯಲು ಮತ್ತು ದಪ್ಪವಾಗಲು ಸಹಕಾರಿಯಾಗುತ್ತದೆ. ಇದರಿಂದ ತಲೆ ಹೊಟ್ಟು, ನೆತ್ತಿ ತುರಿಕೆ, ಅಕಾಲಿಕ ಬಾಲನೆರೆ ಮುಂತಾದ ಸಮಸ್ಯೆಗಳು ನಿವಾರಣೆಯಾ ಗುತ್ತವೆ. ತೆಂಗಿನೆಣ್ಣೆಯೊಂದಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಹಚ್ಚುವುದರಿಂದ ತಲೆ ಹೊಟ್ಟು ಸಮಸ್ಯೆ ನಿವಾರಣೆಯಾಗಲಿದೆ. ಇನ್ನು ಬಿಳಿ ಮೇಣವನ್ನು ತೆಂಗಿನ ಎಣ್ಣೆಯೊಂದಿಗೆ ಕುದಿಸಿ ಪೇಸ್ಟ್ ರೀತಿ ಮಾಡಿಕೊಂಡು ಒಡೆದ ತುಟಿ, ಪಾದಗಳಿಗೆ ಹಚ್ಚಿ ದರೆ ಉತ್ತಮ ಫಲಿತಾಂಶವು ಕಂಡುಬರುತ್ತದೆ. ವಾರದಲ್ಲಿ ಒಂದು ದಿನವಾದರೂ ವರ್ಜಿನ್ ತೆಂಗಿನ ಎಣ್ಣೆಯನ್ನು ಬಳಸಿ ದೇಹಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮದ ಸೌಂದರ್ಯವು ಹೆಚ್ಚಿ, ದೇಹಕ್ಕೆ ಉತ್ತಮ ವಿಶ್ರಾಂತಿಯೂ ದೊರೆಯುತ್ತದೆ.

ಇದು ಚಳಿಗಾಲವಾದ್ದರಿಂದ ತುಟಿಗಳ ರಕ್ಷಣೆ ಬಹಳ ಮುಖ್ಯ. ಅವುಗಳನ್ನು ರಕ್ಷಿಸಲು ಮತ್ತೊಂದು ಸರಳ ವಿಧಾನ ಒಡೆದ ತುಟಿಗಳಿಗೆ ಸಕ್ಕರೆಯನ್ನು ಹಚ್ಚಿಕೊಂಡು 10 ನಿಮಿಷ ಹಾಗೆಯೇ ಬಿಡಿ. ನಂತರ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ತುಟಿಯ ಒಣ ಚರ್ಮ ಕಿತ್ತು ಬರುತ್ತದೆ. ನಂತರ ಚೆನ್ನಾಗಿ ತೊಳೆದು ತೆಂಗಿನ ಎಣ್ಣೆಯನ್ನು ಹಚ್ಚಬೇಕು. ದೇಹದ ಇತರೆ ಭಾಗಗಳಲ್ಲೂ ಒಡೆದಿದ್ದರೆ ಕೊಬ್ಬರಿ ಎಣ್ಣೆಯನ್ನು ತುಸು ಬಿಸಿ ಮಾಡಿ ಇಡಿ ದೇಹಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. 20ರಿಂದ 30 ನಿಮಿಷಗಳು ಬಿಟ್ಟು ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ. ಪ್ರತಿದಿನ ಒಂದು ಚಮಚ ಶುದ್ಧ ತೆಂಗಿನ ಎಣ್ಣೆಯನ್ನು ಸೇವನೆ ಮಾಡುವುದರಿಂದಲೂ ಚಳಿಗಾಲದಲ್ಲಿ ಕಾಡುವ ಚರ್ಮದ ಶುಷ್ಕತೆ, ಕೀಲುಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಒಣ ತ್ವಚೆಯ ಸಮಸ್ಯೆಗೆ ಫೇಸ್‌ ಪ್ಯಾಕ್ : ಒಣಗಿಸಿ ಪುಡಿ ಮಾಡಿಟ್ಟ ಕಿತ್ತಳೆ ಸಿಪ್ಪೆ ಪುಡಿಗೆ ರೋಜ್ ವಾಟರ್ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ಮುಖಕ್ಕೆ ಹಚ್ಚಿ. ಅದು ಒಣಗಿದ ಮೇಲೆ ತೊಳೆದುಕೊಳ್ಳಿ. ಇದು ಚಳಿಗಾಲದ ಒಣ ಒಡೆದ ತ್ವಚೆಗೆ ಅತ್ಯುತ್ತಮ ಮಾಯಿಶ್ಚರೈಸರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದಿಷ್ಟು ನಾವು ಮನೆಯಲ್ಲಿಯೇ ಸರಳ ವಿಧಾನಗಳನ್ನು ಬಳಸಿಕೊಂಡು ಚಳಿಗಾಲದಿಂದ ನಮ್ಮ ಮುಖ, ತುಟಿ ಮತ್ತು ಚರ್ಮವನ್ನು ರಕ್ಷಿಸಿಕೊಳ್ಳಬಹುದಾಗಿದೆ.
(chaitrasukesh18@gmail.com)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!