ರಾಜ್ಯವೊಂದು ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದಾಗ, ರಾಜ್ಯ ವಿಧಾನಮಂಡಲದ ಅಧಿಕಾರವನ್ನು ಕೇಂದ್ರ ಸರ್ಕಾರವು ತಾನೇ ವಹಿಸಿಕೊಂಡು ಏನು ಬೇಕಾದರೂ ಮಾಡಬಹುದೇ? ಆ ರಾಜ್ಯದ ಮೂಲಸ್ವರೂಪವನ್ನೇ ಬದಲಿಸಬಹುದೇ? ಕೇಂದ್ರಾಡಳಿತ ಪ್ರದೇಶ ಮತ್ತು ಒಂದಕ್ಕಿಂತ ಹೆಚ್ಚು ರಾಜ್ಯಗಳನ್ನಾಗಿ ಅದನ್ನು ವಿಂಗಡಿಸಿ ಒಡೆಯಲುಬಹುದೇ? ಇಂತಹ ಅಧಿಕಾರ ಕೇಂದ್ರ ಸರ್ಕಾರಕ್ಕೆ ಉಂಟೇ? ಈ ನಡೆ ಸಂವಿಧಾನಬದ್ಧವೇ? ಈ ಎಲ್ಲ ಪ್ರಶ್ನೆಗಳಿಗೂ ಹೌದು ಎಂಬ ತೀರ್ಪು ನೀಡಿದೆ ಸುಪ್ರೀಂ ಕೋರ್ಟು.
‘ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸುವ ಅಧಿಕಾರವನ್ನು ಸಂವಿಧಾನದ ಮೂರನೆಯ ಅನುಚ್ಛೇದವು ಸಂಸತ್ತಿಗೆ ನೀಡುತ್ತದೆ. ಇದೇ ಅಧಿಕಾರ ದೇಶದ ಉಳಿದ ಭಾಗಗಳಿಗೂ ಅನ್ವಯಿಸುತ್ತದೆ. ರಾಜ್ಯವೊಂದನ್ನು ಒಂದು ಅಥವಾ ಹೆಚ್ಚು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲೂಬಹುದು. ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಅಧಿಕಾರವನ್ನು ಪ್ರಯೋಗಿಸಬಹುದು. ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯ ಅಂಶಗಳನ್ನು ಕೇಂದ್ರ ಸರ್ಕಾರ ನ್ಯಾಯಾಲಯದ ಮುಂದೆ ವಿವರಿಸಿ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ’ ಎಂಬುದಾಗಿ ನ್ಯಾಯಾಲಯ ಸಾರಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೆಯ ಪರಿಚ್ಛೇದವನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಅಧಿಕಾರವನ್ನು ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಇತ್ತೀಚೆಗೆ ಎತ್ತಿ ಹಿಡಿಯಿತು. ಭಾರತದ ಐಕಮತ್ಯವನ್ನು ಎತ್ತಿ ಹಿಡಿದಿರುವ ಘನವಾದ ನಡೆ ಎಂದು ಪ್ರಧಾನಮಂತ್ರಿ ಮೋದಿಯವರು ಸ್ವಾಗತಿಸಿದರು.
ರಾಜ್ಯವೊಂದು ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದಾಗ, ರಾಜ್ಯ ವಿಧಾನಮಂಡಲದ ಅಧಿಕಾರವನ್ನು ತಾನೇ ವಹಿಸಿಕೊಂಡು ಕೇಂದ್ರ ಸರ್ಕಾರ ಏನು ಬೇಕಾದರೂ ಮಾಡಬಹುದು. ಈ ಅಧಿಕಾರಕ್ಕೆ ಇತಿಮಿತಿಗಳಿಲ್ಲ ಎಂಬ ನ್ಯಾಯಾಲಯದ ನಿಲುವು ರಾಜ್ಯಗಳ ಹಕ್ಕುಗಳನ್ನು ತೀವ್ರ ಗಂಡಾಂತರಕ್ಕೆ ಒಡ್ಡಿದೆ. ಇಂದು ಜಮ್ಮು-ಕಾಶ್ಮೀರಕ್ಕೆ ಒದಗಿದ ‘ದುರ್ಗ’ ದೇಶದ ಯಾವ ರಾಜ್ಯಕ್ಕೆ ಬೇಕಾದರೂ ತಗುಲಿಕೊಳ್ಳಬಹುದು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಯಾವುದೇ ರಾಜ್ಯದ ಯಾವುದೇ ಭಾಗಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಬಹುದು. ಈ ಬೆಳವಣಿಗೆಯು ಬಿಜೆಪಿಗೆ ದೊರೆತ ಭಾರೀ ರಾಜಕೀಯ ಬಲವರ್ಧನೆಯಷ್ಟೇ ಅಲ್ಲದೆ ಒಕ್ಕೂಟ ತತ್ವಗಳ ಬುಡಮೇಲು ಕ್ರಿಯೆಯನ್ನು ನ್ಯಾಯಬದ್ಧಗೊಳಿಸುವ ನಡೆ ಎಂದು ವ್ಯಾಖ್ಯಾನ ಮಾಡಲಾಗಿದೆ. ಬ್ರಿಟಿಷರು ಭಾರತ-ಪಾಕಿಸ್ತಾನಕ್ಕೆ ನೀಡಿದ್ದ ಸ್ವಾತಂತ್ರ್ಯವು ಎರಡೂ ಭೂಭಾಗಗಳಲ್ಲಿನ ಸುಮಾರು 565 ಅರಸೊತ್ತಿಗೆಗಳಿಗೆ ನೀಡಿದ ಸ್ವಾತಂತ್ರ್ಯವೂ ಆಗಿತ್ತು. 1947ರ ಭಾರತ ಸ್ವಾತಂತ್ರ್ಯ ಕಾಯಿದೆಯ ಪ್ರಕಾರ ಭಾರತ ಇಲ್ಲವೇ ಪಾಕಿಸ್ತಾನದ ಜೊತೆ ವಿಲೀನಗೊಳ್ಳುವ ಇಲ್ಲವೇ ಸ್ವತಂತ್ರವಾಗಿ ಉಳಿಯುವ ಆಯ್ಕೆಯನ್ನು ಜಮ್ಮು-ಕಾಶ್ಮೀರವೂ ಸೇರಿದಂತೆ ಈ ಎಲ್ಲ ಅರಸೊತ್ತಿಗೆಗಳಿಗೆ ನೀಡಲಾಗಿತ್ತು. ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರದ ಹಿಂದೂ ರಾಜ ಹರಿಸಿಂಗ್ 1947ರಲ್ಲಿ ಭಾರತದೊಂದಿಗೆ ಸೇರುವ ಒಪ್ಪಂದಕ್ಕೆ ಸಹಿ ಹಾಕಿದ್ದ. ಈ ಒಪ್ಪಂದದ ಭಾಗವಾಗಿ ನೀಡಲಾಗಿದ್ದ ವಿಶೇಷ ಸ್ಥಾನಮಾನವೇ 370ನೆಯ ಪರಿಚ್ಛೇದ.
ವಿಲೀನ ಒಪ್ಪಂದ 1949ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದಿತ್ತು. ಈ ಒಪ್ಪಂದದ ಪ್ರಕಾರ ಆಂತರಿಕ ಆಡಳಿತದಲ್ಲಿ ಸ್ವಾಯತ್ತ ಅಧಿಕಾರದ ಜೊತೆಗೆ ತನ್ನದೇ ಸಂವಿಧಾನ, ಧ್ವಜ ಹಾಗೂ ಅಪರಾಧ ಸಂಹಿತೆ ಹೊಂದಲು ಕಾಶ್ಮೀರಕ್ಕೆ ಅವಕಾಶ ನೀಡಿತ್ತು ಭಾರತ. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರಗಳು ಹಾಗೂ ಸಂಪರ್ಕದ ವಿನಾ ಉಳಿದೆಲ್ಲ ವಿಷಯಗಳಲ್ಲಿ ತನ್ನದೇ ಕಾನೂನುಗಳನ್ನು ರಚಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕಲ್ಪಿಸಿತ್ತು. ಹೊರರಾಜ್ಯಗಳವರು ಅಲ್ಲಿ ಆಸ್ತಿಪಾಸ್ತಿಯನ್ನು ಖರೀದಿಸುವಂತಿರಲಿಲ್ಲ. 1953ರಲ್ಲಿ ಕಾಶ್ಮೀರದ ಪ್ರಧಾನಮಂತ್ರಿ ಶೇಖ್ ಅಬ್ದುಲ್ಲಾ ಅವರನ್ನು ನೆಹರೂ ಸರ್ಕಾರ ಬಂಧಿಸಿತ್ತು. ಆನಂತರ ಕಾಶ್ಮೀರದ ಪ್ರಧಾನಮಂತ್ರಿ ಹುದ್ದೆಯನ್ನು ರದ್ದುಗೊಳಿಸಿತ್ತು.
ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೆಯ ಕಲಮಿನ ಪ್ರಕಾರ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದಾಗಬೇಕು ಎಂಬ ತಮ್ಮ ಮೂಲ ಕಾರ್ಯಸೂಚಿಯ ದಾಳವನ್ನು ಬಿಜೆಪಿ-ಆರ್ ಎಸ್‌ಎಸ್ 2019ರಲ್ಲಿ ಕಡೆಗೂ ಉರುಳಿಸಿದ್ದವು. ಈ ಕ್ರಮಕ್ಕೆ ಮುನ್ನವೇ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರದ ಕ್ರಮವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಈ ಅರ್ಜಿಗಳನ್ನು ಕಡೆಗೂ ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟು ಇದೇ 13ರಂದು ತೀರ್ಪು ನೀಡಿತು. ಸಾಂವಿಧಾನಿಕ ವಿಶೇಷ ಸ್ಥಾನಮಾನವು ಅಂದಿನ ಯುದ್ಧದ ವಾತಾವರಣದಲ್ಲಿ ನೀಡಲಾಗಿದ್ದ “ಹಂಗಾಮಿ ಸ್ವರೂಪದ್ದು’ ಎಂದು ಸಾರಿತು ಕಾಶ್ಮೀರ ಕಣಿವೆಯನ್ನು ಕದಗಳ ಹಿಂದೆ ಕೂಡಿ ಹಾಕಿ ಬೀಗ ಜಡಿದು, ಕಣ್ಣು ಕಟ್ಟಿ, ಕಿವಿ-ಬಾಯಿಗಳಿಗೆ ಬಿರಟೆ ಬಡಿದು ಅದರ ವಿಶೇಷ ಸ್ಥಾನಮಾನವನ್ನು ಕಾಯಿದೆ ಬದ್ಧವಾಗಿ ಅಪಹರಿಸಿತ್ತು ಮೋದಿ ಸರ್ಕಾರ ಮುಸ್ಲಿಂ ಬಹುಸಂಖ್ಯಾತ ರಾಜ್ಯವನ್ನು ಪಳಗಿಸಿ ಮೂಗುದಾರ ತೊಡಿಸಿ ಹಿಂದು-ಹಿಂದಿ-ಹಿಂದುಸ್ತಾನದ ನೊಗಕ್ಕೆ ಬಿಗಿಯುವ ಸಂಘಪರಿವಾ ರದ ಏಳು ದಶಕಗಳ ಯೋಜನೆಯನ್ನು ಮೋದಿ-ಶಾ ಜೋಡಿ ಈಡೇರಿಸಿಕೊಟ್ಟಿತ್ತು.
‘ವಿಶೇಷ ಸ್ಥಾನಮಾನ ನೀಡಿದ ಚಾರಿತ್ರಿಕ ಸಂದರ್ಭವನ್ನು ಗ್ರಹಿಸುವಲ್ಲಿ ನ್ಯಾಯಾಲಯ ಸೋತಿದೆ. ಸಾಂವಿಧಾನಿಕ ಪ್ರಕ್ರಿಯೆಯನ್ನು ಕಡೆಗಣಿಸಿದೆ. ಜಮ್ಮು ಕಾಶ್ಮೀರಕ್ಕೆ ಸಾರ್ವಭೌಮ ಅಧಿಕಾರವಿಲ್ಲ ಹೌದು. ಆದರೆ ಆ ರಾಜ್ಯಕ್ಕೆ ಮಾಡಲಾಗಿದ್ದ ಚಾರಿತ್ರಿಕ ಪ್ರತಿಬದ್ಧತೆಗಳನ್ನು, ಪ್ರಧಾನಮಂತ್ರಿ ಮತ್ತು ಗೃಹಮಂತ್ರಿಯಂತಹ ಸಾಂವಿಧಾನಿಕ ಹುದ್ದೆಗಳು ನೀಡಿದ್ದ ಭರವಸೆಗಳನ್ನು ಕೇಂದ್ರ ಸರ್ಕಾರವೊಂದು ತನಗೆ ಮನಸಿಗೆ ಬಂದಂತೆ ರದ್ದುಪಡಿಸಿ ಗಾಳಿಗೆ ತೂರುವುದು ತೀವ್ರ ಆತಂಕದ ಸಂಗತಿ’ಯೆಂದು ಈ ತೀರ್ಪನ್ನು ವ್ಯಾಖ್ಯಾನಿಸಲಾಗಿದೆ. ಭಾರತದೊಂದಿಗೆ ಕಾಶ್ಮೀರದ ವಿಲೀನ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತು ಕಾಶ್ಮೀರದ ನಾಯಕರ ನಡುವಣ ನಿರಂತರ ಸಂವಾದ ಮತ್ತು ವಿಲೀನಗೊಳ್ಳಲು ಕಾರಣವಾದ ಅಂದಿನ ಸಂದರ್ಭ ಸನ್ನಿವೇಶಗಳು, ಸಾಂವಿಧಾನಿಕ ಮುನ್ನೇರ್ಪಾಡುಗಳು, ವಿಲೀನ ಒಪ್ಪಂದದ ಷರತ್ತುಗಳು ಹಾಗೂ ರಾಜ್ಯ ಸರ್ಕಾರದ ಅನುಮೋದನೆಯ ಮೇಲೆ ಕಟ್ಟಲಾಗಿತ್ತು.
ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದೇ ಅಲ್ಲದೆ ರಾಜ್ಯದ ಸ್ಥಾನಮಾನವನ್ನೂ ಕೇಂದ್ರ ಸರ್ಕಾರ 2019ರ ಆಗಸ್ಟ್‌ನಲ್ಲಿ ಕಿತ್ತುಕೊಂಡಿತ್ತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿಸಿತ್ತು. ಜಮ್ಮು-ಕಾಶ್ಮೀರವನ್ನು ವಿಧಾನಸಭೆಸಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದರೆ, ಲದ್ದಾಮ್ ಈ ಸವಲತ್ತಿನಿಂದ ವಂಚಿತವಾಗಿತ್ತು. ಜಮ್ಮು-ಕಾಶ್ಮೀರ ಪುನರ್ವಿಂಗಡಣಾ ವಿಧೇಯಕ ಮಂಡಿಸಿ ಸಂಸತ್ತಿನ ಒಪ್ಪಿಗೆ ಪಡೆದಿತ್ತು. ಭಾರತವು ರಾಜ್ಯಗಳ ಒಕ್ಕೂಟ ಎಂಬುದು ಸಂವಿಧಾನದ ಮೂಲಸ್ಥರೂಪಗಳಲ್ಲೊಂದು. ರಾಜ್ಯವೊಂದು ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿರುವ ಸ್ಥಿತಿಯಲ್ಲಿ, ಅದರ ಮೂಲಭೂತ ಸ್ವರೂಪವನ್ನು ಕಾಯವಾಗಿ ಬದಲಾಯಿಸುವ ಯಾವುದೇ ಕ್ರಮಗಳನ್ನು ಜರುಗಿಸುವಂತಿಲ್ಲ ಎಂಬುದು ಸುಪ್ರೀಂ ಕೋರ್ಟಿನ ಮುಂದೆ ಅರ್ಜಿದಾರರ ವಾದವಾಗಿತ್ತು. ಈ ವಾದವನ್ನು ಸುಪ್ರೀಂ ಕೋರ್ಟು ತಳ್ಳಿ ಹಾಕಿದೆ. ರಾಜ್ಯ ವಿಧಾನಮಂಡಲದ ಅನುಮೋದನೆ ಇಲ್ಲದೆಯೇ ಕೇಂದ್ರ ಸರ್ಕಾರ, ನಿರ್ದಿಷ್ಟ ರಾಜ್ಯದ ಮೂಲಸ್ವರೂಪದಲ್ಲಿ ಏಕಪಕ್ಷೀಯವಾಗಿ ಕಾಯಂ ಬದಲಾವಣೆಗಳನ್ನು ತರಬಹುದು. ರಾಜ್ಯದ ಮರುವಿಂಗಡಣೆಯ ಕುರಿತು ಸಂಬಂಧಪಟ್ಟ ವಿಧಾನಮಂಡಲದ ನಿಲುವುಗಳು ಕೇವಲ ಶಿಫಾರಸುಗಳು, ಅವುಗಳನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳುವುದು ಕಡ್ಡಾಯ ಅಲ್ಲ ಎಂದೂ ಹೇಳಿತು. ಕೇಂದ್ರ ಸರ್ಕಾರದ ಅಧಿಕಾರವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟು ಕೆಲವು ಎಚ್ಚರಿಕೆಯ ಮಾತುಗಳನ್ನೂ ತೀರ್ಪಿನಲ್ಲಿ ಸೇರಿಸಿದೆ.
“ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸುವ ಕ್ರಿಯೆ ಸ್ವಾಯತ್ತತೆಯನ್ನು ಕುಗ್ಗಿಸುವುದೂ ಆಗಿರುತ್ತದೆ. ಇಂತಹ ಕ್ರಮವು ಚಾರಿತ್ರಿಕ ಸಂದರ್ಭ, ಒಕ್ಕೂಟ ತತ್ವಗಳು ಹಾಗೂ ಪ್ರಾತಿನಿಧಿಕ ಜನತಂತ್ರದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಾಯಿಸುವುದು ಗಂಭೀರ ಸಾಧಕಬಾಧಕಗಳನ್ನು ಉಂಟು ಮಾಡುತ್ತದೆ. ನಿರ್ದಿಷ್ಟ ರಾಜ್ಯದ ನಾಗರಿಕರ ಪಾಲಿಗೆ ಚುನಾಯಿತ ಸರ್ಕಾರವನ್ನು ನಿರಾಕರಿಸುತ್ತದೆ. ಒಕ್ಕೂಟ ತತ್ವಸ್ಥೆ ಧಕ್ಕೆ ತರುತ್ತದೆ. ಇಂತಹ ಮರುವಿಂಗಡಣೆಗೆ ಬಲವಾದ ಮತ್ತು ಸಮಂಜಸ ಕಾರಣಗಳನ್ನು ನೀಡಬೇಕಾಗುತ್ತದೆ”. ಸಾಂವಿಧಾನಿಕ ವಿಶೇಷ ಸ್ಥಾನಮಾನ ರದ್ದತಿ ಮತ್ತು ರಾಜ್ಯ ಪುನರ್ವಿಂಗಡಣೆಯ ಅಧಿಕಾರವನ್ನೇ ಎತ್ತಿ ಹಿಡಿದ ನಂತರ ಈ ಎಚ್ಚರಿಕೆಯ ಮಾತುಗಳನ್ನು ಕೇಂದ್ರ ಸರ್ಕಾರಗಳು ಎಷ್ಟು ಗಂಭೀರವಾಗಿ ಪರಿಗಣಿಸುತ್ತವೆ ಎಂಬುದು ಪ್ರಜ್ಞಾವಂತರ ಊಹೆಗೆ ಬಿಟ್ಟ ಸಂಗತಿ.





