ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಕಳೆದ ವಾರ ನಡೆದ ಒಂದು ಬೆಳವಣಿಗೆ ಪುನಃ ಕರ್ನಾಟಕದ ರಾಜಕಾರಣದಲ್ಲಿ ಸಂಚಲನ ಮೂಡಿಸಿತು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರದ ಜಾರಿ ನಿರ್ದೇಶನಾಲಯ ರಾಜ್ಯದ ಐದು ಮಂದಿ ಶಾಸಕರ ವಿರುದ್ಧ ದಾಳಿಮಾಡಿದ್ದು ಇದಕ್ಕೆ ಕಾರಣ.
ಅಂದ ಹಾಗೆ ಹೀಗೆ ದಾಳಿಗೆ ಒಳಗಾದ ಶಾಸಕರು ಆಡಳಿತಾರೂಢ ಕಾಂಗ್ರೆಸ್ ಪಕ್ಷದವರು, ರಾಜಕೀಯವಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ನಿಂತಿರುವವರು ಎಂಬುದು ಮುಖ್ಯ.
ಹೀಗೆ ಅವರು ಸಿದ್ದರಾಮಯ್ಯ ಅವರ ಜತೆ ನಿಲ್ಲಲು ಅವರ ಕ್ಷೇತ್ರಗಳ ಜಾತಿ ಸಂರಚನೆ ಕಾರಣ. ಅರ್ಥಾತ್, ಈ ಐದೂ ಮಂದಿ ಶಾಸಕರ ಕ್ಷೇತ್ರಗಳು ಕುರುಬ, ಮುಸ್ಲಿಂ ಸೇರಿದಂತೆ ಅಹಿಂದ ವರ್ಗಗಳ ಸಾಲಿಡ್ ಮತಬ್ಯಾಂಕ್ ನೆಲೆಯಾಗಿವೆ.
ಹೀಗಾಗಿ ಇವರು ಚುನಾವಣೆಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಅವರ ಬೆಂಬಲ ಬೇಕು. ಕಳೆದ ಚುನಾವಣೆಯಲ್ಲಿ ಈ ಎಲ್ಲರ ಕ್ಷೇತ್ರಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಿದ್ದರಾಮಯ್ಯ, ಅವರಿಗೆ ಸಾಲಿಡ್ ಸಂಖ್ಯೆಯಲ್ಲಿ ಅಹಿಂದ ಮತಗಳು ಬೀಳುವಂತೆ ಮಾಡಿದ್ದರು. ಗಮನಿಸಬೇಕಾದ ಸಂಗತಿ ಎಂದರೆ ಈ ಐದೂ ಮಂದಿ ಶಾಸಕರ ವಿರುದ್ಧ ಕೇಂದ್ರದ ಇಡಿ ದಾಳಿ ನಡೆಸಿದ ನಂತರ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಹೇಳಿಕೆ ನೀಡಿದರು. ಅವರ ಪ್ರಕಾರ, ಕೇಂದ್ರದ ಆರ್ಥಿಕ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ ಎಂದರೆ ಅದು ಕಾಂಗ್ರೆಸ್ ಪಕ್ಷವನ್ನು ಒಡೆಯುವ ಯತ್ನವಲ್ಲದೆ ಬೇರೇನೂ ಅಲ್ಲ.
ಹೀಗೆ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ಹೇಳಿಕೆ ಏನಿದೆ, ಇವತ್ತು ಕಾಂಗ್ರೆಸ್ ಪಾಳೆಯದಲ್ಲಿನ ಚರ್ಚೆ ಅದರ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಅದರ ಪ್ರಕಾರ, ಸರ್ಕಾರವನ್ನು ಉರುಳಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಯತ್ನ ಏನಿದೆ, ಅದರ ಭಾಗವಾಗಿ ಈ ದಾಳಿ ನಡೆದಿದೆ. ಅಂದರೆ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಸಿದ್ಧವಾಗುತ್ತಿರುವ ವೇದಿಕೆಗೆ ಈ ದಾಳಿ ಬಲ ನೀಡಿದೆ. ಕಾಂಗ್ರೆಸ್ ಪಾಳೆಯದ ಈ ಅನುಮಾನವನ್ನು ಮುಂದಿಟ್ಟುಕೊಂಡುನೋಡುತ್ತಾ ಹೋದರೆ, ಇದು ವಿಸ್ತ ತವಾಗಿ ಕಾಣತೊಡಗುತ್ತದೆ. ಏಕೆಂದರೆ, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಕೇಂದ್ರದ ಬಿಜೆಪಿ ನಾಯಕರು ಹಿಂದಿನಿಂದಲೇ ಪ್ರಯತ್ನ ಮಾಡುತ್ತಿದ್ದಾರೆ.
ಈ ವಿಷಯದಲ್ಲಿ ಅವರಿಗಿರುವ ಪ್ರಮುಖ ಅಸ್ತ್ರವೆಂದರೆ ಕಾಂಗ್ರೆಸ್ ಪಾಳೆಯದಲ್ಲಿರುವ ಅಧಿಕಾರ ಹಂಚಿಕೆಯ ಮಾತು. ಅರ್ಥಾತ್, ಅಧಿಕಾರ ಹಂಚಿಕೆ ಒಪ್ಪಂದದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ಹಿಂದಿನಿಂದಲೂ ಶೀತಲ ಸಮರ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದು ಬಹಿರಂಗ ಸಮರವಾಗಿ ಮಾರ್ಪಟ್ಟಿರುವುದು ರಹಸ್ಯವಾಗೇನೂ ಉಳಿದಿಲ್ಲ. ತಮ್ಮ ಕೈಯಲ್ಲಿ ಇರುವ ಜಲಸಂಪನ್ಮೂಲ ಖಾತೆಯ ಉನ್ನತಾಧಿಕಾರಿಗಳನ್ನು ತಮಗೆ ತಿಳಿಸದೇ ವರ್ಗಾವಣೆ ಮಾಡಲಾಗಿದೆ ಅಂತ ಕಳೆದ ತಿಂಗಳು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಅವರ ಈ ಅಸಮಾಧಾನ ಪತ್ರದ ರೂಪದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ತಲುಪಿತ್ತಲ್ಲದೆ, ದೊಡ್ಡ ಮಟ್ಟದ ಸುದ್ದಿಯೂ ಆಗಿತ್ತು. ಇದರರ್ಥ? ಅಧಿಕಾರ ಹಂಚಿಕೆ ಎಂಬುದು ನಿಗದಿತ ಕಾಲದಲ್ಲಿ ಆಗಬೇಕು ಎಂದು ಪಟ್ಟು ಹಿಡಿದಿರುವ ಡಿಕೆಶಿ ಮತ್ತು ಅಧಿಕಾರ ಹಂಚಿಕೆ ಒಪ್ಪಂದ ಆಗಿಯೇ ಇಲ್ಲ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ನಡುವೆ ಜಂಗಿ ಕುಸ್ತಿ ಅಧಿಕೃತವಾಗಿಯೇ ಆರಂಭವಾಗಿದೆ.
ಈ ಅಂಶವೇ ಭವಿಷ್ಯದಲ್ಲಿ ಸರ್ಕಾರವನ್ನು ಉರುಳಿಸಲು ತಮಗೆ ಅನುಕೂಲ ಒದಗಿಸಲಿದೆ ಎಂಬುದು ಬಿಜೆಪಿ ವರಿಷ್ಠರ ನಂಬಿಕೆ. ಹೀಗಾಗಿಯೇ ಇಬ್ಬರ ನಡುವಣ ಸಂಘರ್ಷ ಯಾವ ಸ್ವರೂಪ ಪಡೆಯಬಹುದು ಎಂಬುದನ್ನು ಗಮನಿಸುತ್ತಿರುವ ಅವರು, ಇದೇ ಕಾರಣಕ್ಕಾಗಿ ಎರಡು ತಂಡಗಳನ್ನು ರಚಿಸಿದ್ದಾರೆ. ಈ ಪೈಕಿ ಒಂದು ತಂಡದಲ್ಲಿ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮತ್ತೊಂದು ತಂಡದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವ ಅನಿವಾರ್ಯತೆ ಸೃಷ್ಟಿಯಾದರೆ ಅವರ ಬೆಂಬಲಿಗರು ಪಕ್ಷ ತೊರೆಯಲು ಸಜ್ಜಾಗುತ್ತಾರೆ. ಹೀಗೆ ಸಜ್ಜಾಗುವವರನ್ನು ಸೆಳೆದುಕೊಳ್ಳುವುದು ಸಾವಂತ್ ಮತ್ತು ಫಡ್ನವೀಸ್ ಅವರ ಕೆಲಸ.
ಒಂದು ವೇಳೆ ಸಿದ್ದರಾಮಯ್ಯ ಅವರು ಡಿಕೆಶಿ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು ಕೊಡದಿದ್ದರೆ ಉಪ ಮುಖ್ಯಮಂತ್ರಿ ಡಿಕೆಶಿ ಕಾಂಗ್ರೆಸ್ ತೊರೆಯಲು ಸಜ್ಜಾಗುತ್ತಾರೆ. ಹೀಗಾಗಿ ಆ ಸಂದರ್ಭದಲ್ಲಿ ಸನ್ನಿವೇಶ ವನ್ನು ಬಳಸಿಕೊಳ್ಳಲು ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಬಿಜೆಪಿ ವರಿಷ್ಠರು ನೇಮಿಸಿದ್ದಾರೆ.
ಆದರೆ ಹೀಗೆ ಎರಡು ತಂಡಗಳನ್ನು ರಚಿಸಿರುವ ಬಿಜೆಪಿ ವರಿಷ್ಠರಿಗೆ ಇತ್ತೀಚಿನ ದಿನಗಳಲ್ಲಿ ತಲುಪುತ್ತಿರುವ ಸಂದೇಶವೆಂದರೆ, ಕಾಂಗ್ರೆಸ್ ಹೈಕಮಾಂಡ್‌ನ ಬಹುತೇಕ ಪ್ರಮುಖರು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ವಿಷಯದಲ್ಲಿ ಸಹಮತ ಹೊಂದಿಲ್ಲ. ಕಾರಣ ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಾಗಿರುವ ಅಹಿಂದ ವರ್ಗಗಗಳಿಗೆ ಸಿದ್ದರಾಮಯ್ಯ ನಂಬರ್ ಒನ್ ನಾಯಕ ಎಂಬುದು. ಹೀಗಾಗಿ ಅವರನ್ನು ಇಳಿಸುವುದು ಎಂದರೆ, ಅಹಿಂದ ವರ್ಗಗಳ ಮತ ಬ್ಯಾಂಕ್ ಒಡೆಯಲಿದೆ ಎಂಬುದೇ ಹೊರತು ಇನ್ನೇನಲ್ಲ ಎಂಬುದು ಅವರ ವಾದ. ಇದ್ದುದರಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು, ಡಿಕೆಶಿ ಅವರಿಗೆ ಸಿಎಂ ಪಟ್ಟ ಒದಗಿಸಿಕೊಡುವ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರಾದರೂ ರಾಹುಲ್ ಗಾಂಧಿ, ಕೆ.ಸಿ.ವೇಣು ಗೋಪಾಲ್ ಸೇರಿದಂತೆ ಬಹುತೇಕರಿಗೆ ಸಿದ್ದರಾಮಯ್ಯ ಕೆಳಗಿಳಿಯುವುದು ಬೇಕಾಗಿಲ್ಲ.
ಹೀಗಾಗಿ ಸದ್ಯದ ಸನ್ನಿವೇಶವನ್ನು ನೋಡಿದರೆ ಸಿದ್ದರಾಮಯ್ಯ ಕೆಳಗಿಳಿಯುವುದು ಕಷ್ಟ. ಹೀಗಾದ ಮೇಲೆ ಮತ್ತೊಂದು ದಾರಿಯನ್ನು ಸಾಫ್ ಮಾಡುವುದು ಬಿಜೆಪಿ ನಾಯಕರಿಗೆ ಅನಿವಾರ್ಯ ತಾನೇ? ಅರ್ಥಾತ್, ಡಿಕೆಶಿ ಅಂಡ್ ಟೀಮನ್ನು ಹೊರಗೆಳೆಯುವುದು ಅವರ ಸದ್ಯದ ಗುರಿ. ಆದರೆ ಇಂತಹ ಗುರಿ ಹೊಂದಿದ್ದರೂ ಅವರಿಗೆ ದಕ್ಕುತ್ತಿರುವ ಮಾಹಿತಿಗಳ ಪ್ರಕಾರ ಡಿಕೆಶಿ ಜತೆ ದೊಡ್ಡ ಸಂಖ್ಯೆಯ ಶಾಸಕರಿಲ್ಲ. ಹೀಗಾಗಿ ಅವರ ಹಿಂದೆ ಕನಿಷ್ಠ ಮೂವತ್ತೈ ದು ಮಂದಿ ಶಾಸಕರು ಬಂದರೆ, ಅವರನ್ನು ವಿಧಾನಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಕೂರಿಸಿ ಪರ್ಯಾಯ ಸರ್ಕಾರ ರಚನೆಗೆ ಯತ್ನಿಸಬಹುದು. ಹಾಗಲ್ಲದೆ ಹೆಚ್ಚು ಕಡಿಮೆಯಾದರೆ ಸರ್ಕಾರವನ್ನು ಉರುಳಿಸಿ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಬಹುದು. ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಕೇಂದ್ರದ ಆರ್ಥಿಕ ಜಾರಿ ನಿರ್ದೇಶನಾಲಯ ಅವರ ವಿರುದ್ಧ ದಾಳಿ ಮಾಡಿದ ಕೂಡಲೇ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, ಇಂತಹ ದಾಳಿಯ ಹಿಂದೆ ಗುರುತರ ರಾಜಕೀಯ ಕಾರಣಗಳಿವೆ ಎಂದು ಪಿಸುಗುಟ್ಟುತ್ತಿದೆ.
ಆದರೆ ಬಿಜೆಪಿ ವರಿಷ್ಠರಿಗೆ ತಲುಪುತ್ತಿರುವ ಸಂದೇಶವೆಂದರೆ, ಡಿಕೆಶಿ ಜತೆ ಅಷ್ಟು ಪ್ರಮಾಣದ ಶಾಸಕರಿಲ್ಲ. ಹೀಗಾಗಿ ಅವರ ಬಣದ ಶಾಸಕರ ಸಂಖ್ಯೆ ಏರಿದರೆ ಆಟ ಆಡಬಹುದು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ ಎಂಬುದು ಕಾಂಗ್ರೆಸ್ ಪಾಳೆಯದ ಮಾತು. ಹೀಗಾಗಿಯೇ ಡಿಕೆಶಿ ಪಾಳೆಯದ ಶಕ್ತಿಯನ್ನು ಹೆಚ್ಚಿಸಲು ಬಿಜೆಪಿ ವರಿಷ್ಠರೇ ಮುಂದಾಗಿದ್ದಾರೆ ಎಂದು ಅನುಮಾನಿಸುತ್ತಿರುವ ಕಾಂಗ್ರೆಸ್ ಪಾಳೆಯ: ಇಂತಹದೇ ಕಾರಣಕ್ಕಾಗಿ ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಹೊತ್ತ ತಮ್ಮ ಪಕ್ಷದ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಬಿಜೆಪಿ ವರಿಷ್ಠರು ಉಚ್ಚಾಟಿಸಿದ್ದರು ಎಂದು ಬೊಟ್ಟು ಮಾಡುತ್ತವೆ.
ಅಂದ ಹಾಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರನ್ನು ಉಚ್ಚಾಟನೆ ಮಾಡಿದರೆ ಅವರು ನಿರಾಯಾಸವಾಗಿ ಬೇರೆ ಪಕ್ಷ ಸೇರುತ್ತಾರೆ. ಅಲ್ಲಿಗೆ ಅದು ಅವರಿಗೆ ಶಿಕ್ಷೆಯಲ್ಲ; ಬದಲಿಗೆ ವರ. ಅರ್ಥಾತ್, ಬಿಜೆಪಿಯಿಂದ ಉಚ್ಚಾಟನೆಯಾದ ಇವರಿಬ್ಬರೂ ನಾಳೆ ಕಾಂಗ್ರೆಸ್ ಸೇರಿ ಡಿಕೆಶಿ ಜತೆ ನಿಲ್ಲುತ್ತಾರೆ. ಇವತ್ತು ಇ.ಡಿ. ದಾಳಿಗೆ ಗುರಿಯಾದ ಐವರು ಶಾಸಕರ ಕತೆಯೂ ಇದೇ. ಅಂದರೆ ಈ ದಾಳಿಯಿಂದ ಅವರು ಬಚಾವಾಗಬೇಕು ಎಂದರೆ ದಿಲ್ಲಿಯ ಬಿಜೆಪಿ ನಾಯಕರ ಸಿಗ್ನಲ್ಲಿನಂತೆ ನಡೆಯಬೇಕು. ಅರ್ಥಾತ್, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಡಿಕೆಶಿ ಬಣದಲ್ಲಿ ಗುರುತಿಸಿಕೊಳ್ಳಬೇಕು. ಆಳವಾಗಿ ನೋಡಿದರೆ ಇದು ಡಿಕೆಶಿ ಬಣದ ಶಕ್ತಿಯನ್ನು ಹಿಗ್ಗಿಸುವ ತಂತ್ರವಲ್ಲದೆ ಇನ್ನೇನು ಎಂಬುದು ಕೈ ಪಾಳೆಯದ ವಾದ. ನಿಜಕ್ಕೂ ಕುತೂಹಲಕಾರಿ ಅಲ್ಲವೇ?
” ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಕೇಂದ್ರದ ಆರ್ಥಿಕ ಜಾರಿ ನಿರ್ದೇಶನಾಲಯ ತನ್ನ ಶಾಸಕರ ವಿರುದ್ಧ ದಾಳಿ ಮಾಡಿದ ಕೂಡಲೇ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, ಇಂತಹ ದಾಳಿಯ ಹಿಂದೆ ಗುರುತರ ರಾಜಕೀಯ ಕಾರಣಗಳಿವೆ ಎಂದು ಪಿಸುಗುಟ್ಟುತ್ತಿದೆ.”





