Mysore
18
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಎಂಬತ್ತರ ಹರಯದಲ್ಲೂ ಕ್ರಿಯಾಶೀಲ ಕೃಷಿಕ ದಂಪತಿ

• ಡಿ.ಎನ್.ಹರ್ಷ

ಕೃಷಿ ಇಂದು ದಿನೇ ದಿನೇ ಸಂಕೀರ್ಣವಾಗುತ್ತಿದೆ. ದಶಕಗಳ ಹಿಂದೆ ಕೃಷಿಯಲ್ಲಿ ಮನೆಯ ಮಂದಿಯೆಲ್ಲಾ ಒಟ್ಟಾಗಿ ದುಡಿಯುತ್ತಿದ್ದರು. ಆಗ ಸಮೃದ್ಧಿ ನೆಲೆಸಿತ್ತು.

ಜಗತ್ತು ವೇಗವಾಗಿ ಬೆಳೆದ ಹಾಗೆ, ಕೂಡು ಕುಟುಂಬ ವ್ಯವಸ್ಥೆ ನಿಧಾನವಾಗಿ ಕರಗಿ, ಈಗ ನ್ಯೂಕ್ಲಿಯರ್ ಫ್ಯಾಮಿಲಿಗಳು ಹೆಚ್ಚಾಗಿವೆ. ಇನ್ನು ಕೆಲ ಕಡೆ ಸ್ವಾವಲಂಬಿ ಬದುಕು ಹೆಚ್ಚಾಗಿದೆ. ತಮ್ಮ ಕುಟುಂಬದಿಂದ ದೂರಾದವರೂ ಇಂದು ಕೃಷಿಯಲ್ಲಿ ಜತೆಯಾಗಿ ದುಡಿಯುತ್ತಿದ್ದಾರೆ. ಅಂತಹ ಬೆರಳು ಎಣಿಕೆಯ ವ್ಯಕ್ತಿಗಳಲ್ಲಿ ದೇವೀರಮ್ಮ ಮತ್ತು ಪುಟ್ಟಸ್ವಾಮಿಗೌಡ ದಂಪತಿ ಇದ್ದಾರೆ.

ಈ ದಂಪತಿ ತಮ್ಮ ಎಂಬತ್ತರ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಕೃಷಿ ಮಾಡುತ್ತಿದ್ದಾರೆ. ಕೆ.ಆರ್. ನಗರ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿನ ಈ ದಂಪತಿ ತಮ್ಮ ಏಳು ಎಕರೆ ಜಮೀನಿನಲ್ಲಿ ತೆಂಗು, ಅಡಕೆ, ಮಾವು, ಸಪೋಟ, ಕಾಫಿ ಇತ್ಯಾದಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾ ಅಲ್ಲಿಯೇ ಒಂದು ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಆ ತೋಟಕ್ಕೆ ಮೂಡಲಗಿರಿ ಎಂಬ ಹೆಸರನ್ನೂ ಇಟ್ಟಿದ್ದಾರೆ.

ಕೆ.ಜೆ.ಪುಟ್ಟಸ್ವಾಮಿಗೌಡ ಮೂಲತಃ ಕೃಷ್ಣರಾಜನಗರ ತಾಲ್ಲೂಕಿನ ಚುಂಚನಕಟ್ಟೆ ಸಮೀಪದ ಕುಪ್ಪೆ ಗ್ರಾಮದವರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕುಪ್ಪೆ, ಮತ್ತು ಪ್ರೌಢಶಿಕ್ಷಣವನ್ನು ಚುಂಚನಕಟ್ಟೆಯಲ್ಲಿ ಮುಗಿಸಿದ್ದಾರೆ. ಮನೆಯಲ್ಲಿನ ಬಡತನದ ಕಾರಣದಿಂದಾಗಿ ಓದನ್ನು ಅರ್ಧಕ್ಕೆ ಬಿಟ್ಟ ಇವರು, ತಂದೆಯವರೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿಕೊಂಡರು.

ಇದರ ನಡುವೆ ಆಕಸ್ಮಿಕ ಎಂಬಂತೆ ಕೆಎಸ್‌ಆರ್‌ಟಿಸಿಯಲ್ಲಿ ಕೆಲಸಕ್ಕೆ ಸೇರಿದರು. ಒಮ್ಮೆ ಪುಟ್ಟಸ್ವಾಮಿಗೌಡರು ಡಿ.ದೇವರಾಜ ಅರಸುರವರ ಜಮೀನಿನಲ್ಲಿ ಉಳುಮೆ ಮಾಡುವ ಅವಕಾಶ ಬಂದಾಗ ಅಚ್ಚುಕಟ್ಟಾಗಿ ಉತ್ತಿದ್ದರು. ಇದನ್ನು ಗಮನಿಸಿದ ಅರಸರು ಮುಂದೆ ಕೆಎಸ್‌ಆರ್‌ಟಿಸಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಉದ್ಯೋಗ ನೀಡಿದರು. ಮುಂದೆ ಕಾಳೇನಹಳ್ಳಿಯಲ್ಲಿ ಜಮೀನು ಖರೀದಿಸಿ ಇಂದು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ದೇವೀರಮ್ಮನವರು ಮೂಲತಃ ಹುಣಸೂರು ತಾಲ್ಲೂಕಿನ ದೊಡ್ಡಕೊಪ್ಪಲು ಸಮೀಪದ ಶಿರಿಯೂರು ಗ್ರಾಮದವರು. ಶಿಕ್ಷಕಿಯಾಗಿ ಸೇವೆ ಆರಂಭಿಸಿದ ಇವರು 1991 ರಲ್ಲಿ, ಕೆ.ಆರ್. ನಗರ ಸಮೀಪದ ಕಾಳೇನಹಳ್ಳಿಯಲ್ಲಿ ಏಳು ಎಕರೆ ಭೂಮಿ ಖರೀದಿಸಿದರು. ಅಲ್ಲಿ ತೋಟ ಮಾಡುವ ನಿರ್ಧಾರ ಕೈಗೊಂಡರು.

ಇವರ ಜಮೀನಿನಲ್ಲಿ 250ಕ್ಕೂ ಹೆಚ್ಚು ತೆಂಗಿನಮರಗಳು, 1,300ರಷ್ಟು ಅಡಕೆ ಮರಗಳು ಇದ್ದು, ಇದರ ಹಿಂದೆ ಈ ಹಿರಿ ಜೀವಗಳ ಶ್ರಮ ಅಪಾರವಾಗಿದೆ. ಮುಂಜಾನೆ 5 ಗಂಟೆಗೆ ಎದ್ದು ತೋಟಕ್ಕೆ ಹೋಗಿ ಕೆಲಸ ಆರಂಭಿಸುವ ಇವರು, ನಂತರ ಡಿಪೋ ಕೆಲಕ್ಕೆ ಹೋಗಿಬಂದು ಮತ್ತೆ ಸಂಜೆ ಜಮೀನಿನ ಕೆಲಸದಲ್ಲಿ ತೊಡಗುತ್ತಿದ್ದರು. ದೇವೀರಮ್ಮ ನವರಿಗೂ ಜಮೀನು ಶಾಲೆ ಕೆಲಸ ಹೊರತಾಗಿ ಬೇರೇನೂ ಇರಲಿಲ್ಲ. ಇವರ ಮಕ್ಕಳಾದ ಗಿರೀಶ, ಹರೀಶ, ರವೀಶ ಮತ್ತು ಸತೀಶ ಅವರು ರಜೆ ಇದ್ದಾಗಲೆಲ್ಲಾ ಜಮೀನಿನ ಕೆಲಸ ಮಾಡುತ್ತಿದ್ದಾರೆ. ಇಂದು ವಾರ್ಷಿಕವಾಗಿ ತೆಂಗಿನಿಂದ ಐದು ಲಕ್ಷ ರೂ. ಅಡಕೆಯಿಂದ ಆರು ಲಕ್ಷ ರೂ.ಗಳಿಗೂ ಅಧಿಕ ಆದಾಯ ಬರುತ್ತಿದೆ.

ಮಾವು, ಮೆಣಸು ಬೆಳೆಗಳು ಕೂಡ ಒಂದು ಲಕ್ಷ ರೂ. ಗಳವರೆಗೆ ಆದಾಯ ತಂದುಕೊಡುತ್ತಿವೆ. ಉಳಿದ ಹಾಗೆ ತೋಟದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು ಇರುವುದು ವಿಶೇಷ. ಹಸಿ ಅಡಕೆಯನ್ನು ನೇರವಾಗಿ ಮಾರಲು ಹೋಗದೆ, ಒಣಗಿಸಿ ಚಾಲೀ ಅಡಕೆ ಮಾಡಿದ್ರೆ, ತೆಂಗಿನ ಕಾಯಿ ಬದಲು ಕೊಬ್ಬರಿ ಮಾಡಿ ಮಾರುವ ಕಾರಣ, ಇವರ ಆದಾಯ 2 ಲಕ್ಷ ರೂ.ಗಳವರೆಗೆ ಹೆಚ್ಚಾಗಿದೆ.

ಪುಟ್ಟಸ್ವಾಮಿ ಗೌಡರ ಮೂರನೇ ಮಗ ರವೀಶ್ ಬಿ.ಕಾಂ. ಪದವಿ ಪಡೆದಿದ್ದು, ವೈಲ್ಡ್ ಲೈಫ್ ಫೋಟೋಗ್ರಫಿ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಕೃಪಾಕರ್ ಸೇನಾನಿ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಜೊತೆ ಒಡನಾಟವಿರಿಸಿಕೊಂಡಿದ್ದಾರೆ. ಮಗನ ಕೃಷಿ ಆಸಕ್ತಿ ಕಂಡು, ದಂಪತಿ ದಶಕಗಳ ಹಿಂದೆ ಹಣ ಕೂಡಿ ಹಾಕಿ ಕೊಂಡಿದ್ದ, ಮೈಸೂರಿನ ಸೈಟ್‌ವೊಂದನ್ನು ಮಾರಿ ಎಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಬಳಿ ನಲವತ್ತು ಎಕರೆ ಭೂಮಿ ಖರೀದಿಸಿ ಅಲ್ಲಿ ತೆಂಗು, ಮಾವು ಕೃಷಿ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ದಂಪತಿಗೆ ಕೃಷಿ ರತ್ನ ಪ್ರಶಸ್ತಿ ಸೇರಿದಂತೆ, ಇತರ ಕೃಷಿ ಪೂರಕ ಸಂಸ್ಥೆಗಳ ಗೌರವ ಸಂದಿದೆ. (ಪುಟ್ಟಸ್ವಾಮಿಗೌಡರ ಮೊಬೈಲ್ ಸಂಖ್ಯೆ 94814 86053) harshayogi@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ