-ಪಂಜು ಗಂಗೊಳ್ಳಿ
ಕೋಲ್ಕತ್ತಾದ ನಿಶಾ ಚಕ್ರವರ್ತಿ ತಾರೀತ್‌ನನ್ನು ಪ್ರೀತಿಸಿ, ಅವನನ್ನೇ ಮದುವೆಯಾಗಲು ನಿರ್ಧರಿಸಿದಾಗ ತಾನು ಸಾವನ್ನೇ ಆಲಂಗಿಸುತ್ತಿದ್ದೇನೆಂಬುದು ಅವಳಿಗೂ ಗೊತ್ತಿದ್ದಿತ್ತು. ಆ ಸಾವಾದರೂ ಎಂತಹದು? ಪ್ರತಿದಿನ ಸ್ವಲ್ಪ ಸ್ವಲ್ಪವೇ ಬರುವಂತಹ ಸಾವು. ನಿಶಾಳ ನಿರ್ಧಾರ ಆತ್ಮಹತ್ಯೆಗಿಂತ ಹೆಚ್ಚು ಭಿನ್ನವಾದುದಾಗಿರಲಿಲ್ಲ. ಏಕೆಂದರೆ, ತಾರಿತ್ ಎಚ್‌ಐವಿ ಪಾಸಿಟಿವ್!
‘ಕೊಲ್ಕತ್ತಾ ನೆಟ್‌ವರ್ಕ್ ಆಫ್ ಪಾಸಿಟಿವ್ ಪೀಪಲ್’ ಎಂಬ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ತಾರೀತ್ ಒಮ್ಮೆ ಕುಡಿತದ ಅಮಲಿನಲ್ಲಿ ಮುನ್ನೆಚ್ಚರಿಕೆ
ವಹಿಸದೆ ವೇಶ್ಯೆಯೊಬ್ಬಳ ಸಂಗ ಮಾಡಿದ. ಆ ಸಂಗದಲ್ಲಿ ಅವನಿಗೆ ಎಚ್‌ಐವಿ ವೈರಸ್ ತಗಲಿತು. ಮುಂದೆ ಅದು ಗೊತ್ತಾದಾಗ ತಾರೀತ್‌ನ ತಂದೆ ತಾಯಿ
ಹೆಚ್ಚು ಕಡಿಮೆ ಅವನನ್ನು ಮನೆಯಿಂದ ಹೊರ ಹಾಕಿದರು. ತನಗೆ ಎಚ್‌ಐವಿ ತಗುಲಿದ ವಿಚಾರವನ್ನು ಹೇಳಿಕೊಂಡಾಗ ಅವನು ಪ್ರೀತಿಸುತ್ತಿದ್ದ ನಿಶಾ
ಚಕ್ರವರ್ತಿ ಕೂಡ ಅವನಿಂದ ದೂರವಾದಳು. ಆದರೆ, ಕೆಲ ಸಮಯದ ನಂತರ, ತಾನು ತಪ್ಪು ಮಾಡಿದರೂ ಅದನ್ನು ಮುಚ್ಚಿಟ್ಟುಕೊಳ್ಳದೆ ತನ್ನಲ್ಲಿ ಹೇಳಿಕೊಂಡ ಅವನ ಪ್ರಾಮಾಣಿಕತೆಯ ಬಗ್ಗೆ ಮೆಚ್ಚಿಗೆ ಹುಟ್ಟಿ ವಾಪಸ್ ಬಂದಳು.
ಇಷ್ಟಕ್ಕೂ ನಿಶಾ ಚಕ್ರವರ್ತಿಯ ಬದುಕಿನಲ್ಲಿ ದುರಂತಗಳು ಅಪರಿಚಿತವಾದವುಗಳೇನಲ್ಲ. ಅವಳು ತೀರಾ ಸಣ್ಣವಳಾಗಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಳು. ತಾಯಿ ಜೀವಂತವಿದ್ದರೂ ಲಕ್ವ ಪೀಡಿತರಾಗಿದ್ದರು. ಅಂತಹ ಸಮಯದಲ್ಲಿ ತಾರೀತ್ ಅವಳ ಬದುಕನ್ನು ಪ್ರವೇಶಿಸಿದಾಗ ಆಕೆಗೆ ಅದನ್ನು ನಿರಾಕರಿಸಲಾಗಲಿಲ್ಲ. ಅವಳ ತಾಯಿ ಮಾತ್ರವಲ್ಲ ತಾರೀತ್‌ನ ತಂದೆತಾಯಿಗಳೂ ತಮ್ಮ ಮಗನನ್ನು ಮದುವೆಯಾಗುವುದು ಸಾವನ್ನು ನೇರವಾಗಿ ಆಮಂತ್ರಿಸಿದಂತೆ ಎಂದು ಅವಳನ್ನು ಎಚ್ಚರಿಸಿದ್ದರು. ಯಾರ ಯಾವ ಎಚ್ಚರಿಕೆಯೂ ನಿಶಾಳ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ.
ಎಚ್‌ಐವಿ/ಏಡ್ಸ್ ಬಗ್ಗೆ ಸಂಪೂರ್ಣ ಮಾಹಿತಿಯಿದ್ದ ತಾರೀತ್ ಸ್ವತಃ ನಿಶಾಳನ್ನು ದೂರ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವನು ಅವಳನ್ನು ದೂರಮಾಡಿದಷ್ಟು ಅವಳು ಅವನಿಗೆ ಇನ್ನಷ್ಟು ಹತ್ತಿರವಾಗತೊಡಗಿದಳು. ಕೊನೆಗೂ ತಾರೀತ್ ನಿಶಾಳ ನಿರ್ಧಾರಕ್ಕೆ ಮಣಿದು, ಇಬ್ಬರೂ ಮದುವೆಯಾದರು. ಮದುವೆ ನಂತರ ಇಬ್ಬರೂ ಎಷ್ಟೇ ಮುಂಜಾಗ್ರತೆ ವಹಿಸಿದರೂ ಅನಾಹುತವನ್ನು ತಡೆಯಲಾಗಲಿಲ್ಲ. ತಾರೀತ್‌ನ ಎಚ್‌ಐವಿ ನಿಶಾಳ
ದೇಹವನ್ನೂ ಪ್ರವೇಶಿಸಿತು. ಆದರೆ, ಅವಳಿಗೆ ಆ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ. ತಾನೂ ತನ್ನ ಪ್ರಿಯಕರನಂತೆಯೇ ಎಚ್‌ಐವಿ ಪಾಸಿಟಿವ್ ಆದೆನೆಂಬ
ವಿಚಿತ್ರ ಸಂತೋಷ ಅವಳದ್ದು!
ಕಪಿಲ್ ಸಿಂಗ್ ಮತ್ತು ಸರಿತಾ ಇಬ್ಬರೂ ‘ಡೆಲ್ಲಿ ನೆಟ್‌ವರ್ಕ್ ಆಫ್ ಪಾಸಿಟಿವ್ ಪೀಪಲ್’ ಸಂಸ್ಥೆಯ ಉದ್ಯೋಗಿಗಳು. ಸರಿತಾ ಒಬ್ಬಳು ವಿಚ್ಚೇದಿತೆ. ಮಾದಕ
ವ್ಯಸನಿ ಗಂಡ ಆಗಾಗ್ಗೆ ವೇಶ್ಯೆಯರ ಸಂಗ ಮಾಡಿ ಬಂದುದರ ಫಲವಾಗಿ ಅವಳೂ ಅವನಂತೆ ಎಚ್‌ಐವಿ ಪಾಸಿಟಿವ್ ಆಗಿದ್ದಳು. ಅವಳಿಗೆ ನಮ್ರತಾ
ಎಂಬ ಹೆಸರಿನ ಒಂದು ಹೆಣ್ಣು ಮಗುವಿತ್ತು. ನಮ್ರತಾಳಿಗೆ ವೈರಸ್ ತಾಕಿರಲಿಲ್ಲ. ಕಪಿಲ್ ಸಿಂಗ್ ಕೂಡ ಒಬ್ಬ ವಿಚ್ಚೇದಿತ. ಅವನ ಹೆಂಡತಿ ಮೂರು ಮಕ್ಕಳನ್ನು ಜತೆಯಲ್ಲಿ ಕರೆದುಕೊಂಡು ಅವನನ್ನು ಬಿಟ್ಟು ಹೋದಂದಿನಿಂದ ಅವನು ಡ್ರಗ್ ವ್ಯಸನಿಯಾದ. ಸರಿತಾಳನ್ನು ಮೆಚ್ಚಿಕೊಂಡ ಕಪಿಲ್ ಸಿಂಗ್ ಒಂದು ದಿನ ಸರಿತಾಳಲ್ಲಿ ಮದುವೆ ಪ್ರಸ್ತಾಪ ಮಾಡಿದ. ತನ್ನ ಬಗ್ಗೆ ಆತನಿಗೇನೂ ತಿಳಿಯದು ಎಂದು ಭಾವಿಸಿದ ಸರಿತಾ, ತಾನು ಎಚ್‌ಐವಿ ಪಾಸಿಟಿವ್ ಆಗಿರುವ ವಿಷಯವನ್ನು ಅವನಿಗೆ ಹೇಳಿದಳು. ಅದಕ್ಕೆ ಕಪಿಲ್ ಸಿಂಗ್, ಆ ವಿಚಾರ ನನಗೂ ತಿಳಿದಿದೆ, ಆದರೂ ನಿಮ್ಮನ್ನೇ ಮದುವೆಯಾಗಲು ನಿರ್ಧರಿಸಿದ್ದೇನೆ ಅಂದಾಗ ಅವಳ ಬಾಯಿ ಕಟ್ಟಿತು. ಆತ ತನ್ನನ್ನೂ ತನ್ನ ಮಗಳು ನಮ್ರತಾಳನ್ನೂ ಪ್ರೀತಿಸುತ್ತಿದ್ದ ಪರಿ ಅವಳನ್ನು ಪೂರ್ತಿಯಾಗಿ ಗೆದ್ದಿತ್ತು. ಆದರೂ, ಸರಿತಾ ಮತ್ತು ಅವಳ ಅಕ್ಕ ಆ ಮದುವೆ ಎಷ್ಟು ಅಪಾಯಕಾರಿಯಾದುದು ಎಂದು ಎಷ್ಟೇ ಎಚ್ಚರಿಸಿದರೂ ಕಪಿಲ್ ಸಿಂಗ್ ತನ್ನ ನಿರ್ಧಾರವನ್ನು ಬದಲಾಯಿಸದೆ, ಇಬ್ಬರೂ ಮದುವೆಯಾದರು.
ಸುನಿಲ್ ಉದ್ಯೋಗ ಅರಸುತ್ತಾ ಕೊಲ್ಕತ್ತಾ ನಗರಕ್ಕೆ ಬಂದಾಗ ಅವನಿಗೆ ಹದಿನೇಳು ವರ್ಷ ಪ್ರಾಯ. ಅವನ ತಾಯಿ ಸತ್ತ ನಂತರ ಕುಡಿಯುವ ಚಟದ
ಅಪ್ಪನಿಂದಾಗಿ ಮನೆಯ ವಾತಾವರಣ ಅಸ್ತವ್ಯಸ್ತವಾಗಿತ್ತು. ಸುನಿಲ್ ಆ ವಾತಾವರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೊಲ್ಕತ್ತಾ ನಗರಕ್ಕೆ ಓಡಿ ಬಂದಿದ್ದ. ರೀನಾ ಒಬ್ಬಳು ಸುಂದರಳಾದ ವೇಶ್ಯೆ. ಅವಳ ಖಾಸಾ ಮಾವ ದುಡ್ಡಿನಾಸೆಗೆ ಅವಳನ್ನು ಒಬ್ಬ ತಲೆಹಿಡುಕನಿಗೆ ಮಾರಿದ ನಂತರ ಅವಳಿಗೆ ವೇಶ್ಯೆವಾಟಿಕೆಯೇ ಬದುಕಿನ ದಾರಿಯಾಯಿತು. ಬಾರೊಂದರಲ್ಲಿ ಅವಳು ಸುನಿಲ್‌ನನ್ನು ಭೇಟಿಯಾದಾಗ ಮೊದಲ ನೋಟಕ್ಕೆ ಅವನ ಮುಗ್ಧತೆಗೆ ಮಾರು ಹೋದಳು. ತನ್ನ ಗುರುತಿನವರ ಮೂಲಕ ಅವನಿಗೊಂದು ಉದ್ಯೋಗವನ್ನೂ ಕೊಡಿಸಿದಳು.
ರೀನಾ ಒಮ್ಮೆ ಆಸ್ಪತ್ರೆಯಲ್ಲಿದ್ದ ತನ್ನ ಒಬ್ಬಳು ಸ್ನೇಹಿತೆಗೆ ರಕ್ತದಾನ ಮಾಡಲು ಹೋದಾಗ ರಕ್ತ ಪರೀಕ್ಷೆಯಲ್ಲಿ ಅವಳು ಎಚ್‌ಐವಿ ಪಾಸಿಟಿವ್ ಅನ್ನುವುದು
ತಿಳಿಯಿತು! ರೀನಾಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಹ ಅನುಭವ! ಕಣ್ಣೀರು ಕೋಡಿ ಹರಿಸಿ ಗೋಳಿಡುತ್ತಿದ್ದ ರೀನಾಳಿಗೆ ಸಾಂತ್ವನ ಹೇಳಿದವನು ಸುನಿಲ್. ಅವನು ಆಗ ಎಚ್‌ಐವಿ/ಏಡ್ಸ್ ಬಗ್ಗೆ ಕೇಳಿದ್ದನಾದರೂ ಅವುಗಳ ಬಗ್ಗೆ ಅವನಿಗೆ ಹೆಚ್ಚಿನ ತಿಳಿವಳಿಕೆಯಿರಲಿಲ್ಲ. ಅವನು ರೀನಾಳನ್ನು ಒಬ್ಬ ತಜ್ಞ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ, ಸಂಪೂರ್ಣ ಮಾಹಿತಿ ಪಡೆದನು. ನಂತರ, ಒಬ್ಬ ಕೌನ್ಸಿಲರ್‌ನನ್ನು ಭೇಟಿಯಾದರು. ನಂತರ, ಇಬ್ಬರೂ ಮದುವೆಯಾದರು. ಈಗ ಅವರಿಗೊಂದು ಮಗುವಿದೆ. ಮಗು ಮತ್ತು ಸುನಿಲ್ ಇಬ್ಬರೂ ಎಚ್‌ಐವಿ ನೆಗೆಟಿವ್ ಆಗಿದ್ದಾರೆ. ರೀನಾ ಎಚ್‌ಐವಿ ಪಾಸಿಟಿವ್ ಆಗಿದ್ದರೂ ಅದು ಏಡ್ಸ್ ಆಗಿ ಪರಿಣಮಿಸದಂತೆ ಇಬ್ಬರೂ ಎಚ್ಚರಿಕೆ ವಹಿಸುತ್ತಿದ್ದಾರೆ.
ಆದರೆ, ಪ್ರೀತಿ ಪ್ರೇಮ ಏನೇ ಇದ್ದರೂ ಇಂತಹ ಮದುವೆಗಳ ಕೊನೆಯಲ್ಲಿ ಸಾಮಾನ್ಯವಾಗಿ ದುರಂತವೇ! ಎಷ್ಟೇ ಎಚ್ಚರ ವಹಿಸಿದರೂ ನೆಗೆಟಿವ್ ಆಗಿರುವ
ಸಂಗಾತಿ ಮತ್ತು ಇಂತಹ ಮದುವೆಗಳಲ್ಲಿ ಹುಟ್ಟುವ ಮಕ್ಕಳ ಬದುಕು ಮತ್ತು ಭವಿಷ್ಯ ಎರಡರ ಮೇಲೂ ಎಚ್‌ಐವಿ ವೈರಸಿನ ತೂಗುಗತ್ತಿ ನೇತಾಡುತ್ತಲೇ
ಇರುತ್ತದೆ. ಬಹುಶಃ ಇದನ್ನು ಮನಗಂಡೇ 1998ರಲ್ಲಿ ಸುಪ್ರೀಂ ಕೋರ್ಟು ಎಚ್ಐವಿ ಪಾಸಿಟಿವ್ ವ್ಯಕ್ತಿಗಳು ಮದುವೆಯಾಗುವಂತಿಲ್ಲ ಎಂದು ಒಂದು ಆದೇಶವನ್ನು ಹೊರಡಿಸಿತ್ತು. ಆದರೆ ಅದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾದ ಕಾರಣ ಕೋರ್ಟು ತನ್ನ ಆ ಆದೇಶವನ್ನು ಹಿಂಪಡೆಯಬೇಕಾಯಿತು.
ಎಚ್‌ಐವಿ ವೈರಸಿಗೆ ಇನ್ನೂ ಲಸಿಕೆ ಕಂಡು ಹುಡುಕಲಾಗಿಲ್ಲವಾದರೂ, ಎಚ್‌ಐವಿ ಬಗ್ಗೆ ಹೆಚ್ಚಿನ ಅರಿವು, ಜಾಗೃತಿ ಹುಟ್ಟಿ, ಹಾಗೂ ಎಚ್‌ಐವಿ ಪೀಡಿತ
ವ್ಯಕ್ತಿಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅನೇಕ ಔಷಧಿಗಳು ಆವಿಷ್ಕರಿಸಲ್ಪಟ್ಟು ಎಚ್‌ಐವಿ ಪಾಸಿಟಿವ್ ವ್ಯಕ್ತಿಗಳ ಸಾಮಾನ್ಯ ಬದುಕು
ಮೊದಲಿಗಿಂತಲೂ ಈಗ ಬಹಳಷ್ಟು ಸುಧಾರಿಸಿದೆ. ಅವರಿಗಾಗಿಯೇ ಹಲವಾರು ಡೇಟಿಂಗ್ ಹಾಗೂ ಮಾಟ್ರಿಮಾನಿ ಸೈಟ್‌ಗಳು ಹುಟ್ಟಿಕೊಂಡಿವೆ. ಎಚ್‌ಐವಿ
ಪಾಸಿಟಿವ್ ವ್ಯಕ್ತಿಗಳಿಗಾಗಿ ಮೊತ್ತ ಮೊದಲ ಬಾರಿಗೆ ಮಾಟ್ರಿಮಾನಿ ಸೈಟನ್ನು ಹುಟ್ಟು ಹಾಕಿದವರು ಅನಿಲ್ ವಲ್ಲಿವ್ ಎಂಬುವವರು. ಮಹಾರಾಷ್ಟ್ರದ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ ಅನಿಲ್ ವಲ್ಲಿವ್, ತಿಳಿದೋ ತಿಳಿಯದೆಯೋ ಎಚ್‌ಐವಿ ಪಾಸಿ ಟಿವ್ ವ್ಯಕ್ತಿಗಳು ತಮ್ಮ ಕಾಯಿಲೆಯನ್ನು ಬಹಿರಂಗಗೊಳಿಸದೆ ಮದುವೆಯಾಗಿ ಕುಟುಂಬಗಳು ದುರಂತಗಳನ್ನು ಎದುರಿಸಿದ ಹಲವು ಉದಾಹರಣೆಗಳನ್ನು ಕಂಡು ನೊಂದು, 2005ರಲ್ಲಿ ‘ಪಾಸಿಟಿವ್‌ಸಾಥಿ ಡಾಟ್ ಕಾಮ್’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರು. ಈವರೆಗೆ ಸಾವಿರಾರು ಜನ ಎಚ್‌ಐವಿ ಪಾಸಿಟಿವ್ ವ್ಯಕ್ತಿಗಳು ‘ಪಾಸಿಟಿವ್‌ಸಾಥಿ ಡಾಟ್ ಕಾಮ್’ ಮೂಲಕ ತಮ್ಮಂತೆಯೇ ಎಚ್‌ಐವಿ ಪಾಸಿಟಿವ್ ಆಗಿರುವ ಸೂಕ್ತ ಜೀವನ ಸಂಗಾತಿಗಳನ್ನು ಪಡೆದು, ಯಶಸ್ವೀ ವೈವಾಹಿಕ ಬದುಕನ್ನು ನಡೆಸುತ್ತಿದ್ದಾರೆ. ವಿಶೇಷವೆಂದರೆ, ‘ಪಾಸಿಟಿವ್‌ಸಾಥಿ ಡಾಟ್ ಕಾಮ್’ ಈ ಸೇವೆಯನ್ನು ಉಚಿತವಾಗಿ ನೀಡುತ್ತದೆ.
ಸುನಿಲ್ ಉದ್ಯೋಗ ಅರಸುತ್ತಾ ಕೊಲ್ಕತ್ತಾ ನಗರಕ್ಕೆ ಬಂದಾಗ ಅವನಿಗೆ ಹದಿನೇಳು ವರ್ಷ ಪ್ರಾಯ. ಅವನ ತಾಯಿ ಸತ್ತ ನಂತರ ಕುಡಿಯುವ ಚಟದ ಅಪ್ಪನಿಂದಾಗಿ ಮನೆಯ ವಾತಾವರಣ ಅಸ್ತವ್ಯಸ್ತವಾಗಿತ್ತು. ಸುನಿಲ್ ಆ ವಾತಾವರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೊಲ್ಕತ್ತಾ ನಗರಕ್ಕೆ ಓಡಿ
ಬಂದಿದ್ದ.
ರೀನಾ ಒಬ್ಬಳು ಸುಂದರಳಾದ ವೇಶ್ಯೆ. ಅವಳ ಖಾಸಾ ಮಾವ ದುಡ್ಡಿನಾಸೆಗೆ ಅವಳನ್ನು ಒಬ್ಬ ತಲೆಹಿಡುಕನಿಗೆ ಮಾರಿದ ನಂತರ ಅವಳಿಗೆ ವೇಶ್ಯೆವಾಟಿಕೆಯೇ ಬದುಕಿನ ದಾರಿಯಾಯಿತು. ಬಾರೊಂದರಲ್ಲಿ ಅವಳು ಸುನಿಲ್‌ನನ್ನು ಭೇಟಿಯಾದಾಗ ಮೊದಲ ನೋಟಕ್ಕೆ ಅವನ ಮುಗ್ಧತೆಗೆ ಮಾರು ಹೋದಳು. ತನ್ನ ಗುರುತಿನವರ ಮೂಲಕ ಅವನಿಗೊಂದು ಉದ್ಯೋಗವನ್ನೂ ಕೊಡಿಸಿದಳು.