ಬೆಂಗಳೂರು : ಉತ್ತಮ ವಾತಾವರಣಕ್ಕೆ ಹೆಸರಾದ ‘ಸಿಲಿಕಾನ್ ಸಿಟಿ’ ಬೆಂಗಳೂರು ದೇಶ– ವಿದೇಶದ ಜನರನ್ನೂ ತನ್ನತ್ತ ಸೆಳೆಯುತ್ತಿದೆ. ನವೋದ್ಯಮ, ಐ.ಟಿ–ಬಿ.ಟಿ, ಸಂಶೋಧನೆ ಹಾಗೂ ಕೈಗಾರಿಕಾ ಬೆಳವಣಿಗೆಯಲ್ಲಿ ನಗರ ಅಗ್ರಸ್ಥಾನದಲ್ಲಿದೆ ಎಂದು ಜನಪ್ರತಿನಿಧಿಗಳೇ ಹೇಳುತ್ತಾರೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳು ವೃದ್ಧಿ ಆಗಿವೆಯೇ ಎಂಬ ಪ್ರಶ್ನೆ ಎದುರಾಗಿದೆ.
ರಾಜಧಾನಿಯಲ್ಲಿ ಮೂಲಸೌಕರ್ಯ ಕೊರತೆಯಿದ್ದು, ಜನರ ಬವಣೆ ಮಾತ್ರ ತಪ್ಪಿಲ್ಲ. ಶಾಶ್ವತ ಪರಿಹಾರ ದೂರವಾಗಿದೆ.
ಮಳೆಗಾಲದ ‘ಪ್ರವಾಹ’ ಪರಿಸ್ಥಿತಿಯು ಹಲವು ಬಡಾವಣೆಗಳ ನಿವಾಸಿಗಳನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಕೊಳೆಗೇರಿ, ಪ್ರತಿಷ್ಠಿತ ಬಡಾವಣೆಗಳು, ಐ.ಟಿ ಉದ್ಯೋಗಿಗಳು ನೆಲೆಸಿರುವ ಬಡಾವಣೆಗಳಲ್ಲೂ ಪ್ರವಾಹ ತಲೆದೋರುತ್ತಿದೆ. ಐ.ಟಿ ಕಂಪನಿಗಳ ಆವರಣದಲ್ಲೂ ನೀರು ಆವರಿಸುತ್ತಿದೆ.
ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಧೋ… ಎಂದು ಸುರಿಯುವ ಮಳೆಯಿಂದ ಪ್ರವಾಹ ಸಹಜ. ಆದರೆ, ಮೂಲಸೌಕರ್ಯಕ್ಕೆ ಹೆಚ್ಚು ಅನುದಾನ ಬಳಕೆಯಾಗುತ್ತಿರುವ ಬೆಂಗಳೂರಿನಲ್ಲಿ ಎರಡು ದಿನಗಳ ಮಳೆಗೇ ತತ್ತರಿಸುವ ಸ್ಥಿತಿಯಿದೆ.
ರಾಜಧಾನಿಯ ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದಾಗ ಪರಿಸ್ಥಿತಿ ವೀಕ್ಷಣೆ ಮಾಡಿ ಭರವಸೆ ನೀಡುವ ಜನಪ್ರತಿನಿಧಿಗಳು, ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಬಳಿಕ ಅತ್ತ ತಿರುಗಿಯೂ ನೋಡುತ್ತಿಲ್ಲ. ಮತ್ತೊಂದು ಪ್ರವಾಹ ಬಂದಾಗಲೇ ಸ್ಥಳಕ್ಕೆ ಬರುತ್ತಾರೆ ಎಂಬ ಆರೋಪವಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿಲ್ಲ. ಹೀಗಾಗಿಯೇ ಪ್ರವಾಹ ಸ್ಥಿತಿ ಪ್ರತಿ ವರ್ಷವೂ ತಲೆದೋರುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.
2022ರ ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಬೆಂಗಳೂರು ಪೂರ್ವವಲಯದಲ್ಲಿ ಬಹುತೇಕ ಭಾಗವು ಪ್ರವಾಹದಲ್ಲಿ ಮುಳುಗಡೆಯಾಗಿತ್ತು. ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯಿತು. ಅಪಾರ್ಟ್‌ಮೆಂಟ್, ವಿಲ್ಲಾಗಳು ಹಾಗೂ ಮನೆಗಳು ಮುಳುಗಿದ್ದವು. ನಿವಾಸಿಗಳನ್ನು ರಬ್ಬರ್ ಬೋಟ್‌ಗಳ ಮೂಲಕ ಮನೆಯಿಂದ ಹೊರಗೆ ಕರೆ ತರಬೇಕಾಯಿತು. ಸರ್ಜಾಪುರ ವ್ಯಾಪ್ತಿಯ ಪ್ರತಿಷ್ಠಿತ ಬಡಾವಣೆಗಳ ನಿವಾಸಿಗಳು ಆಶ್ರಯ ಕಳೆದುಕೊಂಡು ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡಿದ್ದರು. ಬಟ್ಟೆ, ಚಿನ್ನಾಭರಣ, ವಿದ್ಯಾರ್ಥಿಗಳ ಪುಸ್ತಕಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದವು. ಇದು ರಾಜಧಾನಿಯ ಒಡಲಿನ ಬಡಾವಣೆಗಳು ಮಳೆಗಾಲದಲ್ಲಿ ಪಡುವ ಪಾಡು.
ಕೆ.ಆರ್.ಪುರ ಕ್ಷೇತ್ರದ ಹೊರಮಾವು ವಾರ್ಡ್‌ನ ಸಾಯಿ ಬಡಾವಣೆ, ಕಾವೇರಿ ಲೇಔಟ್‌ನಲ್ಲಿ ಪ್ರತಿವರ್ಷದ ಮಳೆಗಾಲದಲ್ಲಿ ಜನರಿಗೆ ಸಂಕಷ್ಟ ತಪ್ಪಿಲ್ಲ. ಇತ್ತೀಚೆಗೆ ಸಮಸ್ಯೆ ತೀವ್ರವಾಗಿದೆ. ದೇವಸಂದ್ರ ವಾರ್ಡ್‌ನ ನೇತ್ರಾವತಿ ಲೇಔಟ್‌ನಲ್ಲೂ ರಾಜಕಾಲುವೆ ಒತ್ತುವರಿಯಾಗಿದೆ. ಇದರಿಂದ ಮಳೆಗಾಲದಲ್ಲಿ ಬಡಾವಣೆ ಹೊಳೆಯಂತಾಗುತ್ತಿದೆ. ಮಹದೇವಪುರದ
145 ಕಡೆ ಪ್ರವಾಹ ಪರಿಸ್ಥಿತಿ ಉದ್ಭವಿಸಿತ್ತು. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಅಧಿಕಾರಿಗಳು ನಗರ ಪ್ರದಕ್ಷಿಣೆ ಮಾಡಿದ್ದರು. ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಕೆಲವು ಭಾಗದಲ್ಲಿ ಒತ್ತುವರಿ ತೆರವು ಮಾಡಿದ್ದರೂ ಪೂರ್ಣ ಪ್ರಮಾಣದಲ್ಲಿ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ತೂಬರಹಳ್ಳಿ, ಹೆಣ್ಣೂರು ಬಂಡೆ, ಎಚ್.ಬಿ.ಆರ್. ಲೇಔಟ್, ಭೈರೇಶ್ವರ ಬಡಾವಣೆ, ಅರ್ಕಾವತಿ ಬಡಾವಣೆ, ಸೂರ್ಯ ಗಾರ್ಡನ್, ಥಣಿಸಂದ್ರ, ವಡ್ಡರಪಾಳ್ಯ ಬಸವನಪುರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಹಾಗೂ ಮನೆಗಳು ಪ್ರತಿಬಾರಿಯೂ ಪ್ರವಾಹಕ್ಕೆ ಸಿಲುಕುತ್ತಿವೆ. ರಾಜಕಾಲುವೆಗಳಲ್ಲಿ ತುಂಬಿರುವ ಹೂಳು, ಒತ್ತುವರಿ ಸಮಸ್ಯೆ, ಅವೈಜ್ಞಾನಿಕ ಬಡಾವಣೆ ನಿರ್ಮಾಣ, ಚರಂಡಿಗಳಿಗೆ ಪ್ಲಾಸ್ಟಿಕ್– ಕಸಕಡ್ಡಿ ಎಸೆಯುವುದರಿಂದ ಸಮಸ್ಯೆ ತೀವ್ರವಾಗುತ್ತಿದೆ.
ವಲಸೆ ಕಾರ್ಮಿಕರಿಗೂ ತೊಂದರೆ : ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ನಗರಕ್ಕೆ ಬರುವ ಕಾರ್ಮಿಕರು ಶೆಡ್‌ಗಳನ್ನು ನಿರ್ಮಿಸಿಕೊಂಡು ನೆಲೆಸುತ್ತಾರೆ. ಎಷ್ಟು ಜೋರು ಮಳೆ ಬಂದರೂ ಅವರಿಗೆ ಅದೇ ಶೆಡ್ ಆಶ್ರಯ ತಾಣ. ಕಳೆದ ವರ್ಷದ ಮಳೆಯಲ್ಲಿ ಸಾವಿರಾರು ಮಂದಿ ಸಂಕಷ್ಟಕ್ಕೆ ತುತ್ತಾಗಿದ್ದರು. ಅವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅದನ್ನು ಬಿಟ್ಟರೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ವಲಸೆ ಕಾರ್ಮಿಕರಿಗೆ ಸುರಕ್ಷಿತ ತಾಣದಲ್ಲಿ ಆಶ್ರಯ ಕಲ್ಪಿಸುವ ವ್ಯವಸ್ಥೆ ಆಗಬೇಕು ಎಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸುತ್ತಿವೆ.