Mysore
20
overcast clouds
Light
Dark

ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರದ ವಿಶ್ವ ದಾಖಲೆ : ರಾಹುಲ್‌ ಗಾಂಧಿ ವಾಗ್ದಾಳಿ

ಆನೇಕಲ್‌ : ನಿಮ್ಮ ಸರಕಾರವನ್ನು ಕಳ್ಳತನ ಮಾಡಿ 3 ವರ್ಷಗಳಾಗಿವೆ. ನೀವು ಆರಿಸಿದ್ದು ಬೇರೆ ಸರಕಾರ. ಆದರೆ, ಆಡಳಿತ ಮಾಡಿದ್ದು ಬೇರೆ ಸರಕಾರ. ಶಾಸಕರನ್ನು ಹಣದಿಂದ ಖರೀದಿಸಿ ಸರಕಾರವನ್ನು ಕದಿಯಲಾಗಿದೆ. ಕಳ್ಳತನದಿಂದ ರಚನೆಯಾದ ಸರಕಾರವು ಕಳ್ಳತನದ ಹೊರತಾಗಿ ಬೇರೇನೂ ಮಾಡುವುದಿಲ್ಲ. ಅವರಿಗೆ ಬೇರೆ ಏನೂ ಗೊತ್ತಿಲ್ಲ, ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಆನೇಕಲ್‌ನಲ್ಲಿ  ನಡೆದ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, 400 ರೂ. ಇದ್ದ ಸಿಲಿಂಡರ್‌ 1,100 ರೂ. ಆಗಿದೆ. 70 ರೂ. ಇದ್ದ ಪೆಟ್ರೋಲ್‌ 100 ರೂ. ಆಗಿದೆ. ಡೀಸೆಲ್‌ 90 ರೂ. ಆಗಿದೆ. ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಸಣ್ಣಪುಟ್ಟ ವ್ಯಾಪಾರಿಗಳನ್ನು ನಾಶ ಮಾಡಿದೆ. ಕರ್ನಾಟಕದಲ್ಲಿ40 ಪರ್ಸೆಂಟ್‌ ಕಮಿಷನ್‌ ಭ್ರಷ್ಟಾಚಾರ ಸರಕಾರ ಎಂದು ನೀವೆಲ್ಲರೂ ಹೇಳಿದ್ದೀರಿ. ಈ ಸರಕಾರ ಭ್ರಷ್ಟಾಚಾರದಲ್ಲಿ ವಿಶ್ವ ದಾಖಲೆ ಮುರಿದಿದೆ, ಎಂದು ಲೇವಡಿ ಮಾಡಿದರು.

ನಾನು ಇಲ್ಲಿಗೆ ಬಂದಾಗ ನಮ್ಮ ನಾಯಕರ ಹೆಸರು ಪ್ರಸ್ತಾಪಿಸಿದೆ. ಆದರೆ, ಮೋದಿ ತಮ್ಮ ಭಾಷಣದಲ್ಲಿ ಪಕ್ಷದ ಯಾರೊಬ್ಬರ ಹೆಸರೂ ಹೇಳುವುದಿಲ್ಲ. ಅವರು ರೋಡ್‌ ಶೋಗಳಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರನ್ನು ಹೊರಗೆ ಹಾಕಿದ್ದಾರೆ. ಮೋದಿ ಅವರು ಗಾಡಿಯಲ್ಲಿ ಹೋದರೆ ಉಳಿದವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಇದೆಲ್ಲಾ ಯಾಕೆ ಆಗುತ್ತಿದೆ ಎಂದು ಕೇಳಿಕೊಂಡೆ. ಆಗ ನನಗೆ ಎರಡು ಉತ್ತರ ಸಿಕ್ಕಿತು. ಒಂದು ಮೋದಿ ಅವರು ಕೇವಲ ಮೋದಿಯನ್ನು ನೋಡಿಕೊಳ್ಳಲು ಮಾತ್ರ ಬಯಸುತ್ತಾರೆ. ಮತ್ತೊಂದು ಅವರ ಹೊರತಾಗಿ ಉಳಿದವರನ್ನು ಕೀಳಾಗಿ ಕಾಣುತ್ತಾರೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಭ್ರಷ್ಟರೆಂದು ತಿಳಿದು ಅವರನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ, ಎಂದು ವ್ಯಂಗ್ಯವಾಡಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ