Mysore
20
overcast clouds
Light
Dark

ವಿಶ್ವಕಪ್‌: ಹರಿಣಗಳ ವಿರುದ್ಧ ಆಸ್ಟ್ರೇಲಿಯಾಗೆ ರೋಚಕ ಜಯ; ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿ

ಇಂದು ( ನವೆಂಬರ್‌ 16 ) ಕೊಲ್ಕತ್ತಾದ ಈಡನ್‌ ಗಾರ್ಡನ್ಸ್‌ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಎರಡೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್‌ಗಳ ಗೆಲುವು ಸಾಧಿಸುವುದರ ಮೂಲಕ ಫೈನಲ್‌ ಪಂದ್ಯಕ್ಕೆ ಪ್ರವೇಶವನ್ನು ಪಡೆದುಕೊಂಡಿದ್ದು, ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಚಾಂಪಿಯನ್‌ ಪಟ್ಟಕ್ಕಾಗಿ ಭಾರತದ ಜತೆ ಸೆಣಸಾಡಲಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲ್‌ಔಟ್‌ ಆಗಿ ಆಸ್ಟ್ರೇಲಿಯಾಗೆ ಗೆಲ್ಲಲು 213 ರನ್‌ಗಳ ಗುರಿಯನ್ನು ನೀಡಿತ್ತು. ಈ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿತಾದರೂ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಆಟ ಬಾರದ ಕಾರಣ ತಿಣುಕಾಡಿ ರೋಚಕ ಜಯ ಸಾಧಿಸಿತು ಎಂದೇ ಹೇಳಬಹುದು.

ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 215 ರನ್‌ ಕಲೆಹಾಕಿ ಗೆಲುವಿನ ನಗೆ ಬೀರಿತು. ಈ ಮೂಲಕ ಐದು ಬಾರಿ ವಿಶ್ವಕಪ್‌ ಎತ್ತಿ ಹಿಡಿದಿರುವ ಆಸ್ಟ್ರೇಲಿಯಾ ಮತ್ತೊಮ್ಮೆ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:‌ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್‌ ಡಿ ಕಾಕ್‌ 3 ರನ್‌ ಗಳಿಸಿ ಔಟ್‌ ಆದರೆ, ನಾಯಕ ತೆಂಬಾ ಬವುಮಾ ಶೂನ್ಯಕ್ಕೆ ಪೆವಿಲಿಯನ್‌ ಸೇರಿಕೊಂಡರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಸ್ಸಿ ವಾನ್‌ಡರ್‌ ಡಸನ್‌ 6 ರನ್‌ ಗಳಿಸಿದರು, ಏಡನ್‌ ಮಾರ್ಕ್ರಮ್‌ 10 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಹೀಗೆ ಕೇವಲ 24 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಐದನೇ ವಿಕೆಟ್‌ಗೆ ಜತೆಯಾದ ಹೈನ್‌ರಿಚ್‌ ಕ್ಲಾಸೀನ್‌ ಹಾಗೂ ಡೇವಿಡ್‌ ಮಿಲ್ಲರ್‌ ಆಸರೆಯಾದರು. ಕ್ಲಾಸೀನ್‌ 47 ರನ್‌ ಗಳಿಸಿದರೆ, ಡೇವಿಡ್‌ ಮಿಲ್ಲರ್‌ 101 ರನ್‌ ಗಳಿಸಿ ದಕ್ಷಿಣ ಆಫ್ರಿಕಾವನ್ನು ತೀವ್ರ ಮುಖಭಂಗದಿಂದ ಪಾರು ಮಾಡಿದರು. ಉಳಿದಂತೆ ಮಾರ್ಕೊ ಯಾನ್‌ಸೆನ್‌ ಶೂನ್ಯ, ಗೆರಾಲ್ಡ್‌ ಜೀಟ್ಜ್‌ 19. ಕೇಶವ್‌ ಮಹಾರಾಜ್‌ 4, ಕಗಿಸೊ ರಬಾಡಾ 10 ಮತ್ತು ತಬ್ರೈಜ್‌ ಸಂಶಿ ಔಟ್‌ ಆಗದೇ ಅಜೇಯ 1 ರನ್‌ ಕಲೆಹಾಕಿದರು.

ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ ಹಾಗೂ ಪ್ಯಾಟ್‌ ಕಮಿನ್ಸ್‌ ತಲಾ 3 ವಿಕೆಟ್ ಕಬಳಿಸಿದರೆ, ಜೋಶ್‌ ಹೇಜಲ್‌ವುಡ್‌ ಹಾಗೂ ಟ್ರೇವಿಸ್‌ ಹೆಡ್‌ ತಲಾ 2 ವಿಕೆಟ್‌ ಪಡೆದರು.

ಆಸ್ಟ್ರೇಲಿಯಾ ಇನ್ನಿಂಗ್ಸ್:‌ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಟ್ರೇವಿಸ್‌ ಹೆಡ್‌ 62 ರನ್‌, ಡೇವಿಡ್‌ ವಾರ್ನರ್‌ 29 ರನ್‌, ಮಿಚೆಲ್‌ ಮಾರ್ಷ್‌ ಡಕ್ ಔಟ್‌, ಸ್ಟೀವನ್‌ ಸ್ಮಿತ್‌ 30 ರನ್‌, ಮಾರ್ನಸ್‌ ಲಾಂಬುಶ್ಚಗ್ನ್‌ 18, ಗ್ಲೆನ್‌ ಮ್ಯಾಕ್ಸ್‌ವೆಲ್‌ 1, ಜೋಶ್‌ ಇಂಗ್ಲಿಸ್‌ 28, ಮಿಚೆಲ್‌ ಸ್ಟಾರ್ಕ್‌ ಅಜೇಯ 16 ಹಾಗೂ ನಾಯಕ ಪ್ಯಾಟ್‌ ಕಮಿನ್ಸ್‌ ಅಜೇಯ 14 ರನ್‌ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಗೆರಾಲ್ಡ್‌ ಹಾಗೂ ತಬ್ರೈಜ್‌ ಸಂಶಿ ತಲಾ 2 ವಿಕೆಟ್‌ ಕಬಳಿಸಿದರೆ, ಕಗಿಸೊ ರಬಾಡಾ, ಏಡನ್‌ ಮಾರ್ಕ್ರಮ್‌ ಹಾಗೂ ಕೇಶವ್‌ ಮಹಾರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದರು. 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ