ಹೊಸದಿಲ್ಲಿ : ಭಾರತದಲ್ಲಿ 2017ರಲ್ಲಿಯೇ ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೂ ಓಡಿಶಾದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ಅನ್ನು ಹೇಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪತ್ನಿ ಸೈಬರ್ ವಂಚನೆಗೆ ಒಳಗಾದ ಬಳಿಕ ತ್ರಿವಳಿ ತಲಾಖ್ ಹೇಳಿದ 45 ವರ್ಷದ ವ್ಯಕ್ತಿಯನ್ನು ಶನಿವಾರ ಓಡಿಶಾ ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 32 ವರ್ಷದ ಮಹಿಳೆ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಸೈಬರ್ ವಂಚಕರಿಂದ 1.5 ಲಕ್ಷ ರೂ. ಕಳೆದುಕೊಂಡಿದ್ದನ್ನು ಪತ್ನಿ ಒಪ್ಪಿಕೊಂಡ ಬೆನ್ನಲ್ಲಿಯೇ ಪತಿ ತ್ರಿವಳಿ ತಲಾಖ್ ಹೇಳಿ ಅಕ್ರಮವಾಗಿ ವಿಚ್ಛೇದನ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ. ಮಹಿಳೆಯ ದೂರಿನಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೇವಲ ತ್ರಿವಳಿ ತಲಾಖ್ ಮಾತ್ರವಲ್ಲದೇ ವರದಕ್ಷಿಣೆ ಸಂಬಂಧಿತ ಪತಿ ನನಗೆ ಚಿತ್ರಹಿಂಸೆ ಕೂಡ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ. ಮಹಿಳೆಯ ದೂರಿನಂತೆ ಆರೋಪಿಯ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ ಮತ್ತು ವರದಕ್ಷಿಣೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರಪಾರಾ ಸದರ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸರೋಜ್ ಕುಮಾರ್ ಸಾಹೂ ತಿಳಿಸಿದ್ದಾರೆ.
15 ವರ್ಷಗಳ ಹಿಂದೆ ಈ ದಂಪತಿ ವಿವಾಹವಾಗಿದ್ದರು. ಇವರಿಗೆ ಮೂರು ಜನ ಮಕ್ಕಳಿದ್ದಾರೆ. ಈಗ ಸೈಬರ್ ವಂಚಕರಿಂದ 1.5 ಲಕ್ಷ ರೂ. ಕಳೆದುಕೊಂಡಿದ್ದಕ್ಕೆ ಪತಿ ಪತ್ನಿಗೆ ನಿಷೇಧಿತ ತ್ರಿವಳಿ ತಲಾಖ್ ಹೇಳುವ ಮೂಲಕ ಅಕ್ರಮವಾಗಿ ವಿಚ್ಛೇದನ ನೀಡಿದ್ದಾನೆ. ಸೈಬರ್ ವಂಚನೆಯಲ್ಲಿ ಮಹಿಳೆ ಯಾವ ರೀತಿ ಹಣ ಕಳೆದುಕೊಂಡಳು ಎನ್ನುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.
2017ರಲ್ಲಿ ತ್ರಿವಳಿ ತಲಾಖ್ ನಿಷೇಧ : 2017ರಲ್ಲಿ ಸುಪ್ರೀಂ ಕೋರ್ಟ್ ಇಸ್ಲಾಂ ಧರ್ಮದಲ್ಲಿ ಆಚರಣೆಯಲ್ಲಿದ್ದ ತ್ವರಿತ ವಿಚ್ಛೇದನ ಪದ್ಧತಿಯಾಗಿದ್ದ ತ್ರಿವಳಿ ತಲಾಖ್ ಅನ್ನು ನಿಷೇಧ ಮಾಡಿತ್ತು. ಇದು ಪವಿತ್ರ ಕುರಾನ್‌ನ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ವಿವಾದಾತ್ಮಕ ಪದ್ಧತಿಯನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ತ್ರಿವಳಿ ತಲಾಖ್ ಪದ್ಧತಿಯನ್ನು ಅನುಸರಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ನೀಡಬಹುದಾಗಿದೆ.
ಏನಿದು ತ್ರಿವಳಿ ತಲಾಖ್ : ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್ ಪದ್ಧತಿಗೆ ಸಮ್ಮತಿ ಇತ್ತು. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿತ್ತು. ಮುಸ್ಲಿಂ ಧರ್ಮದ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್‌ಗೆ ಬೇರೆಯೇ ವಿಧಿವಿಧಾನಗಳು ಇದ್ದವು. ಆದರೆ, ಅದು ಆಧುನಿಕತೆಗೆ ತಕ್ಕಂತೆ ತ್ವರಿತ ವಿಚ್ಛೇದನ ಆಗಿಬಿಟ್ಟಿತ್ತು. ನಿಂತಲ್ಲೇ ಮೂರು ಬಾರಿ ತಲಾಖ್ ಹೇಳುವುದು, ಮೊಬೈಲ್ ಫೋನ್‌ನಲ್ಲಿಯೇ ಮೂರು ಬಾರಿ ತಲಾಖ್ ಹೇಳುವುದು; ವಾಟ್ಸ್‌ಆಪ್ ಅಥವಾ ಮೆಸೇಜ್ ಮೂಲಕ ಮೂರು ಬಾರಿ ತಲಾಖ್ ಹೇಳುವುದು; ಪತ್ರವೊಂದರಲ್ಲಿ ಮೂರು ಬಾರಿ ತಲಾಖ್ ಎಂದು ಬರೆಯುವುದು ಇತ್ಯಾದಿ ಅಕ್ರಮ ತಲಾಖ್ ಪದ್ಧತಿಗಳು ಚಾಲ್ತಿಯಲ್ಲಿದ್ದವು. ಆದ್ದರಿಂದ ಸುಪ್ರೀಂ ಕೋರ್ಟ್ 2017ರಲ್ಲಿ ಈ ಪದ್ಧತಿಯನ್ನು ನಿಷೇಧಗೊಳಿಸಿತು.