Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ದೇವಸ್ಥಾನಕ್ಕೆ ಹೋದ್ರೆ ನ್ಯಾಯ ಸಿಗುತ್ತಾ? ಕೋರ್ಟ್ ಇದೆ ಸಾಕ್ಷಿ ಸಮೇತ ಬನ್ನಿ: ಪ್ರಿಯಾಂಕ್ ಖರ್ಗೆ

ಕಲಬುರಗಿ: “ದೇವಸ್ಥಾನಕ್ಕೆ ಯಾಕೆ ಹೋಗ್ತೀರಾ? ದೇವಸ್ಥಾನಕ್ಕೆ ಹೋದ್ರೆ ನ್ಯಾಯ ಸಿಗುತ್ತಾ? ದೇವಸ್ಥಾನಕ್ಕೆ ಹೋದ್ರೆ ಜನರಿಗೆ ನೆಮ್ಮದಿ ಸಿಗುತ್ತಾ? ಸಂವಿಧಾನ ಇದೆ, ಕೋರ್ಟ್ ಇದೆ, ಸಾಕ್ಷಿ ಸಮೇತ ಬನ್ನಿ”

-ಇದು ಕಮಿಷನ್ ಕೇಳಿಲ್ಲ ಅಂದ್ರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೇವರಲ್ಲಿ ಆಣೆ ಮಾಡಲಿ ಎಂಬ ಬಿಜೆಪಿ ಮುಖಂಡ ಆರ್ ಅಶೋಕ ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ತಿರುಗೇಟು.

ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನೀವು ಮಾಡುತ್ತಿರುವ ಆರೋಪಗಳಿಗೆ ಸಾಕ್ಷಿ ಇಟ್ಟು ಮಾತಾಡಿ. ನಾವು ಈ ಹಿಂದೆ ಪಿಎಸ್ ಐ ಹಗರಣದಲ್ಲಿ ಸಾಕ್ಷಿ ಇಟ್ಟು ಮಾತಾಡಿಲ್ವಾ? ಕೆಂಪಣ್ಣನವರು ಹೇಳಿದ್ದು ನಮಗೆ ಬಿಲ್ ವಿಳಂಬ ಆಗ್ತಿದೆ ಅಂತ ಅಷ್ಟೆ, ಬಿಜೆಪಿಯವರು ಸುಮ್ ಸುಮ್ನೆ ಏನೇನೋ ಮಾತಾಡ್ತಾರೆ ಎಂದು ಪ್ರೀಯಾಂಕ್ ಖರ್ಗೆ ಆರೋಪಿಸಿದರು.

ಏಮ್ಸ್ ಸ್ಥಾಪನೆಗೆ ಸಂಸದರು ಒತ್ತಡ ಹೇರಲಿ
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ‌ ಅಥವಾ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕೆಂಬುದು ಬಹಳ ದಿನದಿಂದ ಇಲ್ಲಿನ ಜನರ ಕೂಗಿದೆ. ಈ ನಿಟ್ಟಿನಲ್ಲಿ ಪ್ರದೇಶದ ಚುನಾಯಿತ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ರಾಯಚೂರು ಜಿಲ್ಲೆ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿ ಒಂದಾಗಿದೆ. ಕಲಬುರಗಿಯಲ್ಲಿನ ಇಎಸ್ಐಸಿ ಆಸ್ಪತ್ರೆ, ರಾಯಚೂರಿನ ಓಪೆಕ್ಸ್ ಆಸ್ಪತ್ರೆ ಕಟ್ಟಡದ‌ಜಿತೆ ಸಕಲ ಮೂಲ ಸೌಕರ್ಯವಿದ್ದು, ಇದನ್ನೇ ಏಮ್ಸ್ ಗೆ ಮೇಲ್ದರ್ಜೇಗೇರಿಸಬಹುದು. ಈ ಭಾಗದ ಒಳಿತಿಗೆ ಮತ್ತು ಪ್ರಗತಿಗೆ ಸಂಸದರು‌ ಮುಂದಾಗಬೇಕು ಎಂದರು.

ಕೆಕೆಆರ್ ಡಿಬಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ
ಕೆಕೆಅರ್ ಡಿಬಿಗೆ ಜಿಲ್ಲೆಯವರೇ ಆದ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರನ್ನು ನೇಮಿಸಿದಲ್ಲದೆ, ಇತರೆ‌ 10 ಜನಪ್ರತಿನಿಧಿಗಳನ್ನು ನೇಮಿಸಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ತಂದಿರುವುದು ಸಂತಸವಾಗಿದೆ. ಡಾ.ಅಜಯ್ ಸಿಂಗ್ ಅವರು, ಮಂಡಳಿ ಮತ್ತು ಪ್ರದೇಶದವನ್ನು ಅಭಿವೃದ್ದಿಯತ್ತ ಮುನ್ನೆಡೆಸಲು ಸಮರ್ಥರಿದ್ದಾರೆ. ಇತ್ತೀಚೆಗೆ ಯೋಜನಾ ಸಚಿವ ಡಿ.ಸುಧಾಕರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದಿನ ಸರ್ಕಾರ ಮಂಡಳಿ‌ಯ ವಿವೇಚನೆಗೆ ಶೇ.26 ರಷ್ಟು ಅನುದಾನ ನೀಡುತ್ತಿತ್ತು. ಅದನ್ನು ನಮ್ಮ ಸರ್ಕಾರ ಶೇ.96ಕ್ಕೆ ಹೆಚ್ಚಿಸಿದೆ. ಈ ಮೂಲಕ ಮಂಡಳಿ ಬಲವರ್ಧನೆಯೂ ಮಾಡಲಾಗಿದೆ ಎಂದರು.

ವಾಟರ್ ಆಡಿಟ್ ಕಮಿಟಿ ರಚನೆ

ಇತ್ತೇಚೆಗೆ ಚಿತ್ರದುರ್ಗ, ಮೊನ್ನೆ ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿರುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆರ್.ಡಿ.ಪಿ.ಆರ್. ಇಲಾಖೆಯಿಂದ ಆರ್.ಓ.ಪ್ಲ್ಯಾಂಟ್ ಸೇರಿದಂತೆ ಇತರೆ ನೀರು ಕುಡಿಯಲು ಯೋಗ್ಯ ಇರುವ ಕುರಿತು ಅಧ್ಯಯನಕ್ಕೆ “ವಾಟರ್ ಆಡಿಟ್ ಕಮಿಟಿ” ರಚಿಸಲಾಗುವುದು.

ಈ ತಂಡವು ಅಧ್ಯಯನ ನಡೆಸಿ ಒಂದು ತಿಂಗಳ ಒಳಗಾಗಿ ವರದಿ ನೀಡಲಿದೆ. ನಂತರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಜಲ್ ಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಕಡೆ ಕಾಮಗಾರಿ ಕಳಪೆಯಾಗಿಲ್ಲ. ಕೆಲವು ಕಡೆ ಆಗಿದ್ದು, ಮೂರನೇ ತಂಡದಿಂದ ತನಿಖೆ ಮಾಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ