ಟೆಲ್ ಅವಿವ್ : ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧ ಮುಂದುವರಿದಿದ್ದು, ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯಲ್ಲ. ಗೆಲುವಿನ ತನಕ ವಿರಮಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ.
ಹಮಾಸ್ ಬಂಡುಕೋರರು ಒತ್ತೆಯಾಳಾಗಿಟ್ಟುಕೊಂಡವರಲ್ಲಿ ಇಬ್ಬರನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಗೆಲುವಿನ ಕಡೆಯ ಕ್ಷಣದ ವರೆಗೂ ಹೋರಾಟ ನಡೆಸುತ್ತೇವೆ. ಬಾಂಬ್ ದಾಳಿಯಲ್ಲಿ ಯಾವುದೇ ವಿರಾಮವಿಲ್ಲ ಎಂದು ತಿಳಿಸಿದ್ದಾರೆ.
ಹಮಾಸ್ ವಿರುದ್ಧದ ಹೋರಾಟಕ್ಕೆ 14ನೇ ದಿನ ತುಂಬಿದೆ. ಗಾಜಾದ ಆರೋಗ್ಯ ಸಚಿವಾಲಯದಿಂದ ಮಾಹಿತಿಗಳ ಪ್ರಕಾರ ಈವರೆಗೂ 4,137 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ, 13,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಆಕ್ರಮಣದ ಸಮಯದಲ್ಲಿ ಹಮಾಸ್ 203 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದೆ. ಅವರನ್ನು ಬಿಡುಗಡೆ ಮಾಡುವವರೆಗೂ ನಾವು ದಾಳಿ ಮುಂದುವರಿಸುತ್ತೇನೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಈ ನಡುವೆ ಇಸ್ರೇಲ್ ಗಾಜಾದಲ್ಲಿ ನಡೆಸುತ್ತಿರುವ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಬೇಕು ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇಸ್ರೇಲ್‌ನಲ್ಲಿ ಬಂಡುಕೋರರು ದಾಳಿ ಮಾಡಿದ ನಂತರ ಗಾಜಾದಲ್ಲಿ ಒತ್ತೆಯಾಳುಗಳಾಗಿದ್ದ ಇಬ್ಬರು ಅಮೆರಿಕನ್ನರನ್ನ ಬಿಡುಗಡೆ ಮಾಡಿದ ಬಳಿಕ ಶ್ವೇತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆಚ್ಚಿನ ಒತ್ತೆಯಾಳುಗಳು ಹೊರಬರುವವರೆಗೆ ಇಸ್ರೇಲ್ -ಗಾಜಾದ ಸಂಭಾವ್ಯ ನೆಲದ ಆಕ್ರಮಣವನ್ನು ವಿಳಂಬಗೊಳಿಸಬೇಕು ಎಂದು ಹೇಳಿದ್ದಾರೆ.
ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಯುರೋಪಿನ ಹಲವಾರು ಸರ್ಕಾರಗಳು ಗಾಜಾದ ಮೇಲೆ ನೆಲದ ಆಕ್ರಮಣವನ್ನು ವಿಳಂಬಗೊಳಿಸುವಂತೆ ಇಸ್ರೇಲ್ ಅನ್ನು ಒತ್ತಾಯಿಸುತ್ತಿವೆ. ಸೌದಿ ಅರೇಬಿಯಾ ಕಳೆದ ಎರಡು ವಾರಗಳಲ್ಲಿ ಗಾಜಾದ ಮೇಲೆ ಇಸ್ರೇಲ್‌ನ ಬಾಂಬ್ ದಾಳಿಯನ್ನು ಬಹಳ ಟೀಕಿಸಿದೆ.