ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಚುನಾವಣೆ ಪ್ರಚಾರ ಸಂದರ್ಭದಲ್ಲಿ ದೇಶ-ವಿದೇಶಗಳ ವಿಚಾರ, ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆಯೇ ವಿನಃ ಇಲ್ಲಿನ ಶೇ.40 ಕಮೀಷನ್ ಪಡೆಯುವ ಭ್ರಷ್ಟಾಚಾರದ ಸರ್ಕಾರದ ಬಗ್ಗೆ ಉತ್ತರ ನೀಡಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಸಂದರ್ಭದಲ್ಲಿ ನಿರುದ್ಯೋಗ, ಕೃಷಿಕರ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಮೋದಿ ಅವರು ಪ್ರಸ್ತಾಪಿಸದೇ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಇಲ್ಲಿನ ಶೇ.40 ಕಮೀಷನ್ ಸರ್ಕಾರದ ಬಗ್ಗೆ ಯಾವುದೇ ಉತ್ತರ ನೀಡಿಲ್ಲ’ ಎಂದು ಟೀಕಿಸಿದರು.
ಮತದಾರರು ಸತ್ಯವನ್ನು ಅನ್ವೇಷಣೆ ಮಾಡಬೇಕು. ಬಿಜೆಪಿ ಕಳೆದ ಮೂರು ವರ್ಷದಲ್ಲಿ ಏನು ಮಾಡಿದೆ ಎಂದು ತಿಳಿದುಕೊಳ್ಳಿ. ಅಗತ್ಯ ವಸ್ತುಗಳ ಬೆಲೆ ಏರಿಕೆ ದೊಡ್ಡ ವಿಷಯವಲ್ಲವೇ, ನಿರುದ್ಯೋಗ ದೊಡ್ಡದಲ್ಲವೇ. ಸತ್ಯ ನಿಮ್ಮ ಕಣ್ಣ ಮುಂದಿದೆ. ಮೋದಿ ಅವರಿಗೆ ಚುನಾವಣಾ ವಿಷಯದ ಬಗ್ಗೆ ಮಾತನಾಡಿ ಎಂದು ಕೇಳಿಕೊಂಡರೂ ಜನರ ಬದುಕಿನ ವಿಚಾರ ಬಿಟ್ಟು ಬೇರೆ ವಿಷಯಗಳನ್ನು ಮಾತನಾಡಿದ್ದಾರೆ. ದೇಶ-ವಿದೇಶಗಳ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ’ ಎಂದು ತರಾಟೆ ತೆಗೆದುಕೊಂಡರು.