Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಶಿವಾಜಿ ಇಲ್ಲದಿದ್ದರೇ ನಾವು ಹಿಂದೂಗಳಾಗಿ ಇರುತ್ತಿರಲಿಲ್ಲ : ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಬಾಗಲಕೋಟೆ : ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದೇ ಹೋಗಿದ್ದರೇ ನಾವೆಲ್ಲ ಹಿಂದೂಗಳಾಗಿ ಇರುತ್ತಿರಲಿಲ್ಲ. ಎಲ್ಲ ತುಂಡಾಗಿ ಹೋಗುತ್ತಿತ್ತು, ಎಲ್ಲಾ ತುಂಡು ತುಂಡು ಮಾಡಿ ಇಟ್ಟಿರುತ್ತಿದ್ದರು. ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ. ಯಾರಾದರೂ ಕೇಸ್ ಹಾಕಲಿ ನನ್ನ ಮೇಲೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಸವಾಲು ಹಾಕಿದ್ದಾರೆ. ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಛತ್ರಪತಿ ಶಿವಾಜಿ ಮಹಾರಾಜರು ಈ ದೇಶದಲ್ಲಿ ಇದ್ದಿದ್ದಕ್ಕೆ ನಾವೆಲ್ಲ ಹಿಂದೂಗಳಾಗಿ ಉಳಿದ್ದಿದ್ದೇವೆ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಅಪಮಾನ ಮಾಡುವುದರಿಂದ ಮುಸಲ್ಮಾನರ ಓಟು ನಮಗೆ ಬರುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ ಅವರು. ಈ ಕಾಂಗ್ರೆಸ್​​ನವರು ದೇಶದ್ರೋಹಿಗಳಿಗೆ ಬೆಂಬಲ ಕೊಡುವ ವ್ಯಕ್ತಿಗಳು. ರಾಷ್ಟ್ರ ದ್ರೋಹಿಗಳಿಗೆ ಬೆಂಬಲ ಕೊಡುವ ಪಕ್ಷ ಕಾಂಗ್ರೆಸ್. ಮುಸ್ಲಿಂ ಲೀಗ್ ಸ್ವಲ್ಪ ಹಿಂದೆ ಮುಂದೆ ನೋಡುತ್ತೆ ಆದರೆ ಕಾಂಗ್ರೆಸ್ ನೋಡುತ್ತಿಲ್ಲ. ಶಿವಾಜಿ ಮಹಾರಾಜರ ರೋಮಕ್ಕೂ ಸಮ ಇಲ್ಲ ಈ ಕಾಂಗ್ರೆಸ್​​ನವರು ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಆಡಳಿತ ಅವಧಿಯಲ್ಲಿನ ವ್ಯವಸ್ಥೆಗೂ, ಪ್ರಧಾನಿ ಮೋದಿ ಆಡಳಿತದಲ್ಲಿ ಬಂದ ವ್ಯವಸ್ಥೆಗೂ ಬಹಳ ಬದಲಾವಣೆ ಇದೆ. ಶಿವಾಜಿ ಮೂರ್ತಿಯನ್ನು ಎರಡು ದಿನ ಆದಮೇಲೆ ಯಾಕೆ ತೆಗೆದರು. ಎಸ್ಪಿ, ಡಿಸಿ ಎರಡೂ ಪೋಸ್ಟ್ ಖಾಲಿ ಇತ್ತಾ ? ಕಾಂಗ್ರೆಸ್​ನ ಯಾವ ಮಂತ್ರಿ, ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಧಮ್ಕಿ ಹಾಕಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬುವುದರ ಕುರಿತು ತನಿಖೆ ಮಾಡಬೇಕು. ಇದು ಬಾಗಲಕೋಟೆಗೆ ಮಾಡಿದ ಅವಮಾನ ಅಲ್ಲ. ಇಡೀ ದೇಶದ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಅನುಭವಿಸ್ತಾರೆ ಅನುಭವಿಸಲಿ ಎಂದರು.

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್​ ಸರ್ಕಾರದ ಪರಿಸ್ಥಿತಿ ನೋಡುವಿರಂತೆ. ಸಿದ್ದರಾಮಯ್ಯ ಪಕ್ಷಾಂತರ ವಿಚಾರದಲ್ಲಿ ಬಹಳ ಪ್ರಾವೀಣ್ಯತೆ ಹೊಂದಿದ್ದಾರೆ. ಜೆಡಿಎಸ್​ನಿಂದ ಫಸ್ಟ್ ಕಾಂಗ್ರೆಸ್​ಗೆ ಬಂದವರು ಇದೇ ಸಿದ್ದರಾಮಯ್ಯ. ಸಿದ್ದರಾಮಯ್ಯಗೆ ಪಕ್ಷಾಂತರದ ಬಗ್ಗೆ ಮಾತನಾರುವ ಅಧಿಕಾರವೇ ಇಲ್ಲ. ಕಾಂಗ್ರೆಸ್​ನಲ್ಲಿ ಸರಿ ಇಲ್ಲ ಅಂತಾ 17 ಜನ ರಾಜೀನಾಮೆ ಕೊಟ್ಟು ಬಂದರು. ಒಬ್ಬರನ್ನೂ ವಾಪಸ್ ಸೇರಿಸಿಕೊಳ್ಳಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಈಗ ಯಾಕೆ ಅವರ ನಿವಾಸಕ್ಕೆ ಕೈ, ಕಾಲು ಹಿಡಿದುಕೊಂಡು ಹೋಗುತ್ತಿದ್ದೀರಿ. ಎಸ್​.ಟಿ.ಸೋಮಶೇಖರ್ ನಿವಾಸಕ್ಕೆ ನಿನ್ನೆ ಮೂರು ಬಾರಿ ಹೋಗಿದ್ದಾರೆ. ಚುನಾವಣೆ ಸಮೀಕ್ಷೆ ಬಂದ ಬಳಿಕ ಸಿಎಂ ಹಾಗೂ ಡಿಸಿಎಂ ನಿದ್ದೆ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಬಿಜೆಗೆ 23 ಸ್ಥಾನ ಬರುತ್ತಿದ್ದಂತೆ ಈ ಸರ್ಕಾರ ಇರುತ್ತಾ? ನಾವು ಕರೆಯೋದೆ ಬೇಡ, ಅವರು ದಿಕ್ಕು ದಿಕ್ಕು ಹಾರಾಡೋಕೆ ಹೋಗುತ್ತಾರೆ. ಮುಂದೆ ಕಾಂಗ್ರೆಸ್ ಶಾಸಕರು ಯಾವ ಪಕ್ಷಕ್ಕೆ ಹೋಗುತ್ತಾರೆ ನೋಡುವಿರಂತೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹಾಗೂ ವರ್ಗಾವಣೆ ದಂಧೆ ನಡೀತಿದೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಮಗುವಿಗೆ ಈಗ 3 ತಿಂಗಳು ಆಗಿದೆ, ಇನ್ನೂ ಮೂರು ತಿಂಗಳು ಆಗಲಿ. ಲೋಕಸಭಾ ಚುನಾವಣೆ ಆಗಲಿ, ಬಳಿಕ ಇವರ ಪರಿಸ್ಥಿತಿ ನೋಡುವಿರಂತೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ, ಒಬ್ಬರು, ಇಬ್ಬರು ಪಕ್ಷಾಂತರ ಮಾಡಿದರೆ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಿಬಿಡುತ್ತೆ ಎಂದು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಕಳೆದ ಬಾರಿ ಇದೇ ರೀತಿಯ ಭಾವನೆಗಳನ್ನು ಕಾಂಗ್ರೆಸ್ ತಂದಿತ್ತು. ಒಂದು ಸೀಟ್​ ಗೆಲ್ಲಲ್ಲ, ಎರಡು ಸೀಟ್ ಸಹ ಗೆಲ್ಲಲ್ಲ ಎಂದು ಹೇಳಿದ್ದರು. ಈಗಲೂ ಅದೇ ವಾತಾವರಣ ಇದೆ. ಯಾರೋ ಒಂದಿಬ್ರು ಅಲ್ಲಿ ಇಲ್ಲಿ ಹೋದರು ಅಂದ ಮಾತ್ರಕ್ಕೆ ಪಕ್ಷಕ್ಕೆ ಯಾವುದೇ ರೀತಿಯ ಪರಿಣಾಮ‌‌ಬೀರಲ್ಲ ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ