ನವದೆಹಲಿ: ಸಂಸತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ನಂತರ ಇಂದು ಶುಕ್ರವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರ ಮಹಿಳೆಗೆ ನೀಡಿದ ಬದ್ಧತೆಯನ್ನು ಈಡೇರಿಸಿದ್ದೇವೆ ಎಂದಿದ್ದಾರೆ.
ನಾರಿ ಶಕ್ತಿ ವಂದನ್ ಅಧಿನಿಯಮ್ ಸಾಮಾನ್ಯ ಕಾನೂನಲ್ಲ. ಇದು ನವ ಭಾರತದ ಪ್ರಜಾಸತ್ತಾತ್ಮಕ ಬದ್ಧತೆಯ ಘೋಷಣೆಯಾಗಿದೆ. ಇದು ಮಹಿಳಾ ನೇತೃತ್ವದ ಅಭಿವೃದ್ಧಿಯ ನಮ್ಮ ಭರವಸೆಗೆ ಸಾಕ್ಷಿಯಾಗಿದೆ, ಕೆಲವು ನಿರ್ಧಾರಗಳು ದೇಶದ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅಂತಹ ಒಂದು ನಿರ್ಧಾರಕ್ಕೆ ನಾವು ಸಾಕ್ಷಿಯಾಗಿದ್ದೇವೆ” ಎಂದು ಹೇಳಿದರು.
https://x.com/PTI_News/status/1705096348351996316?s=20
ಇದೇ ಸಂದರ್ಭದಲ್ಲಿ ಭಾರತದ ಎಲ್ಲಾ ಮಹಿಳೆಯರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ರಾಷ್ಟ್ರವು ದಶಕಗಳಿಂದ ಕಾಯುತ್ತಿರುವ ಬದ್ಧತೆಯನ್ನು ಪೂರೈಸಿದ್ದೇವೆ ಎಂದಿದ್ದಾರೆ.
“ಇಂದು, ನಾನು ಭಾರತದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳನ್ನು ಅಭಿನಂದಿಸಲು ಬಯಸುತ್ತೇನೆ. 2023ನೇ ಇಸವಿಯ ಸೆಪ್ಟೆಂಬರ್ 20 ಮತ್ತು 21 ರಂದು ನಾವೆಲ್ಲರೂ ಇತಿಹಾಸ ನಿರ್ಮಿಸಿದ್ದೇವೆ. ಭಾರತದ ಪ್ರಜೆಗಳು ನಮಗೆ ಇತಿಹಾಸವನ್ನು ಸೃಷ್ಟಿಸುವ ಅವಕಾಶವನ್ನು ನೀಡಿರುವುದು ನಮ್ಮ ಅದೃಷ್ಟ. ಈ ನಿರ್ಧಾರವನ್ನು ಮುಂದಿನ ಪೀಳಿಗೆಗಳು ಆಚರಿಸುತ್ತವೆ. ನಾರಿ ಶಕ್ತಿ ವಂದನ್ ಅಧಿನಿಯಂ ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡಿದೆ ಎಂದು ಖುಷಿಯಿಂದ ಹೇಳಿಕೊಂಡರು.
ಮುಂದಿನ ಹಲವು ತಲೆಮಾರುಗಳವರೆಗೆ ಈ ನಿರ್ಧಾರವನ್ನು ಚರ್ಚಿಸಲಾಗುವುದು ಎಂದು ಹೇಳಿದರು. “ನಾರಿ ಶಕ್ತಿ ವಂದನ್ ಕಾಯ್ದೆಯನ್ನು ಸಂಸತ್ತಿನ ಉಭಯ ಸದನಗಳು ಬಹುಮತದೊಂದಿಗೆ ಅಂಗೀಕರಿಸಿವೆ. ಕಳೆದ ಹಲವು ದಶಕಗಳಿಂದ ದೇಶ ಕಾಯುತ್ತಿದ್ದ ಕನಸು ಈಗ ನನಸಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಸೂದೆಯನ್ನು ಬೆಂಬಲಿಸಿ ಮತ ಚಲಾಯಿಸಿದ ರಾಜಕೀಯ ಪಕ್ಷಗಳು ಮತ್ತು ಸಂಸತ್ತಿನ ಸದಸ್ಯರಿಗೆ ಧನ್ಯವಾದಗಳನ್ನು ಹೇಳಿದರು.
ನಿಮ್ಮ ಪ್ರಯತ್ನಗಳಲ್ಲಿ ನೀವು ಪ್ರಾಮಾಣಿಕ ಉದ್ದೇಶಗಳು ಮತ್ತು ಪಾರದರ್ಶಕತೆಯನ್ನು ಹೊಂದಿರುವಾಗ, ಸಮಸ್ಯೆಗಳನ್ನು ನಿವಾರಿಸಬಹುದು ಮತ್ತು ಉತ್ತಮ ಫಲಿತಾಂಶ ಪಡೆಯಬಹುದು. ಹೊಸ ಸಂಸತ್ತಿನಲ್ಲಿ ಕಾನೂನನ್ನು ಬಹುತೇಕ ಎಲ್ಲರೂ ಬೆಂಬಲಿಸಿದ ದಾಖಲೆಯಾಗಿದೆ. ಇದಕ್ಕಾಗಿ ನಾನು ಪ್ರತಿ ರಾಜಕೀಯ ಪಕ್ಷಗಳಿಗೆ ಮತ್ತು ಸಂಸತ್ತಿನ ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶ ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಅರ್ಪಣೆ: ನಮ್ಮ ರಾಷ್ಟ್ರದ ಪ್ರಜಾಸತಾತ್ಮಕ ಪಯಣದಲ್ಲಿ ನಿರ್ಣಾಯಕ ಕ್ಷಣ. 140 ಕೋಟಿ ಭಾರತೀಯರಿಗೆ ಅಭಿನಂದನೆಗಳು. ನಾರಿ ಶಕ್ತಿ ವಂದನ್ ಅಧಿನಿಯಮ ಮಸೂದೆಗೆ ಮತ ನೀಡಿದ ರಾಜ್ಯ ಸಭಾ ಸದಸ್ಯರಿಗೆ ಧನ್ಯವಾದ. ಭಾರತದಲ್ಲಿ ಮಹಿಳೆ ಸಬಲೀಕರಣ ಮತ್ತು ಪ್ರಾತಿನಿಧ್ಯ ಒದಗಿಸುವ ಕಾಲವನ್ನು ಬರಮಾಡಿಕೊಂಡಿದ್ದೇವೆ. ಇದು ಕೇವಲ ಶಾಸನ ಅಲ್ಲ. ನಮ್ಮ ದೇಶ ನಿರ್ಮಿಸಿರುವ ಅಸಂಖ್ಯಾತ ಮಹಿಳೆಯರಿಗೆ ಅರ್ಪಣೆಯಾಗಿದೆ. ಮಹಿಳೆಯರ ಕೊಡುಗೆಯಿಂದಾಗಿ ಭಾರತ ಸುಧಾರಣೆ ಕಂಡಿದೆ. ನಮ್ಮ ದೇಶದ ಮಹಿಳೆಯರ ಅದಮ್ಯ ಚೇತನ, ಶಕ್ತಿ, ಧೈರ್ಯವನ್ನು ಸ್ಮರಿಸುತ್ತೇವೆ. ಈ ಐತಿಹಾಸಿಕ ಹೆಜ್ಜೆಯು ಅವರ ಧ್ವನಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೇಳಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಬೇಟಿ ಬಚಾವೋ ಬೇಟಿ ಪಢಾವೋ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಸುಕನ್ಯಾ ಯೋಜನೆ, ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದ್ದೇವೆ, ಎಲ್ಲಾ ಪಕ್ಷಗಳು ಹಾಗೂ ಸಂಸದರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕುಟುಂಬದ ಸದಸ್ಯನಂತೆ ಬಿಜೆಪಿ ಸರ್ಕಾರ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಮೋದಿ ಹೇಳಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೂಡ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಆಗಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಮೋದಿ ಅವರ ಉದಾತ್ತ ಚಿಂತನೆಯಲ್ಲಿ ಮೂಡಿ ಬಂದ ಕಲ್ಪನೆಯಾಗಿದೆ ಎಂದಿದ್ದಾರೆ.
1980-90 ರ ದಶಕದಿಂದಲೂ ಮಹಿಳಾ ಮೀಸಲಾತಿ ಕೂಗು ಕೇಳಿ ಬಂದಿತ್ತು. ಹಲವು ಸರ್ಕಾರಗಳು ಬಂದು ಹೋದವು,ಅಟಲ್ ಬಿಹಾರಿ ವಾಜಪೇಯಿ ಬಹಳ ಪ್ರಯತ್ನಿಸಿದ್ದರು. ಆದ್ರೆ, ಸಂಪೂರ್ಣ ಬಹುಮತ ಇರದ ಕಾರಣ ಅವರ ಪ್ರಯತ್ನ ಆಗಲಿಲ್ಲ. ಮುಂದೆ ಬಂದ UPA ಸರ್ಕಾರ ವೋಟ್ ಬ್ಯಾಂಕ್ ರೀತಿ ನೋಡಿ,ಪ್ರಮಾಣಿಕ ಪ್ರಯತ್ನ ಮಾಡಲಿಲ್ಲ.ಆದ್ರೆ ಮೋದಿ ಅವರ ಧೃಡ ನಿಶ್ಚಯ,ರಾಜಕೀಯ ಇಚ್ಛಾ ಶಕ್ತಿ ಕಾರಣದಿಂದ ಸಂಸತ್ ನಲ್ಲಿ ಮಹಿಳಾ ಮೀಸಲಾತಿ ಅಂಗೀಕಾರ ಆಗಿದೆ. ದೇಶದ ಎಲ್ಲಾ ಮಹಿಳೆಯರ ಪರವಾಗಿ ಮೋದಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.