ನವದೆಹಲಿ : ಕರ್ನಾಟಕದ ಜಲಾಶಯಗಳು ಬತ್ತಿ ಹೋಗುತ್ತಿದ್ದು, ಕುಡಿಯುವ ನೀರಿಗೆ ತತ್ವಾರ ಇದೆ. ಹೀಗಾಗಿ ತಮಿಳುನಾಡಿಗೆ ಈ ಬಾರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಿದೆ. ಕೆಆರ್ ಎಸ್ ಸೇರಿದಂತೆ ಎಲ್ಲಾ ಜಲಾಯಶಗಳಲ್ಲೂ ನೀರಿನ ಸಂಗ್ರಹ ಕಡಿಮೆ ಇದೆ. ಬೆಂಗಳೂರು ಸೇರಿದಂತೆ ಇತರ ಭಾಗಗಳಿಗೆ ಕುಡಿಯುವ ನೀರಿಲ್ಲ. ಹೀಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿಯ ಸೂಚನೆ ಹೊರತಾಗಿಯೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಎಲ್ಲಾ ರಾಜ್ಯಗಳ ನೀರಾವರಿ ಇಲಾಖೆಯ ಅಕಾರಿಗಳ ಸಭೆ ರಾಜ್ಯದಲ್ಲಿ ನಡೆಸಲು ನಿಗದಿಯಾಗಿದೆ. ಬಹುತೇಕ ಜು.8 ಅಥವಾ 9ರಂದು ಸಭೆ ನಡೆಯಬಹುದು. ಅದನ್ನು ಬೆಂಗಳೂರಿನಲ್ಲೇ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಕೆಆರ್ ಎಸ್ ನಲ್ಲಿ ನೀರಿನ ಕೊರತೆ ಇರುವುದನ್ನು ಅಕಾರಿಗಳು ಕಣ್ಣಾರೆ ನೋಡಲಿ ಎಂಬ ಉದ್ದೇಶಕ್ಕಾಗಿ ಕೆಆರ್ ಎಸ್ ನಲ್ಲಿ ನಡೆಸುವಂತೆ ಸಲಹೆ ನೀಡಿರುವುದಾಗಿ ಹೇಳಿದರು.
ಬೆಂಗಳೂರಿಗೆ ನೀರು ಪೂರೈಸುವ ಹಳೆಯ ಪೈಪ್‍ಲೈನ್ ಮಾರ್ಗ ದುರಸ್ಥಿ ಕಾಮಗಾರಿ ನಡೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ ಜಲಾಶಯಗಳ ನೀರಿನ ಸಂಗ್ರಹದ ಆಧಾರದ ಮೇಲೆ ತಮಿಳುನಾಡಿಗೆ ನೀರು ಬಿಡುವಷ್ಟು ಸಾಮಥ್ಯವಿಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆಯ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ ಬಳಿಕ ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಯೋಜನೆ ವಿಳಂಬವಾದಷ್ಟು ಅಂದಾಜು ವೆಚ್ಚ ದುಬಾರಿಯಾಗಿ ರಾಜ್ಯಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಮೊದಲು 9 ಸಾವಿರ ಕೋಟಿ ರೂ.ನಷ್ಟಿದ್ದ ಅಂದಾಜು ವೆಚ್ಚ 13 ಸಾವಿರ ಕೋಟಿ ರೂ.ಗೆ ಹೆಚ್ಚಾಗಿದೆ. ಈ ಮಧ್ಯೆ ತಮಿಳುನಾಡಿನವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಬಾಕಿ ಉಳಿದ ಬೀಗದ ಕೈಗಳು ರಾಜ್ಯಸರ್ಕಾರದ ಬಳಿ ಇವೆ.
ಕಾವೇರಿ ನದಿ ಪಾತ್ರದಲ್ಲಿ 700 ಟಿಎಂಸಿ ನೀರು ಸಮುದ್ರಕ್ಕೆ ಹರಿದುಹೋಗುತ್ತಿದೆ. ಅದರಲ್ಲಿ ನಾವು ಬಳಕೆ ಮಾಡಿಕೊಳ್ಳುತ್ತಿರುವುದು 40 ಟಿಎಂಸಿ ಮಾತ್ರ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನಷ್ಟವಾಗುವುದಿಲ್ಲ. ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ರಾಜಕಾರಣ ಹೊರತಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಬ್ರಾಂಡ್ ಬೆಂಗಳೂರು ಕುರಿತಂತೆ ಸಾರ್ವಜನಿಕರಿಂದ ಸಲಹೆ ಆಹ್ವಾನಿಸಲಾಗಿದ್ದು, ನಿಗದಿತ ಕಾಲಾವಧಿಯಲ್ಲಿ ಸಾವಿರಾರು ಸಲಹೆಗಳು ಬಂದಿವೆ. ಅದನ್ನು ಪರಿಷ್ಕರಿಸಲು ಮತ್ತು ಸೂಕ್ತವಾದವುಗಳನ್ನು ಅನುಷ್ಠಾನಕ್ಕೆ ಪರಿಶೀಲಿಸಲು ಸಮಿತಿ ರಚನೆ ಮಾಡುತ್ತೇವೆ. ಸಲಹೆ ನೀಡಲು ಮತ್ತೆ 15 ದಿನಗಳ ಕಾಲಾವಕಾಶ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು.