ನವದೆಹಲಿ : ವಾಘ್ ಬಕ್ರಿ ಟೀ ಗ್ರೂಪ್‌ನ ಮಾಲೀಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ (49) ಅವರು ಮೆದುಳಿನ ರಕ್ತಸ್ರಾವದಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ.
ದೇಸಾಯಿ ಅವರು ಕಳೆದ ವಾರ ಉದ್ಯಾನವನದಲ್ಲಿ ಬೆಳಗ್ಗೆ ವಾಕ್ ಮಾಡುತ್ತಿದ್ದ ಸಂದರ್ಭ ಬಿದ್ದು ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದರು. ಇದರಿಂದಾಗಿ ಅವರನ್ನು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅವರ ಅಗಲಿಕೆಯ ಕುರಿತು, ವಾಘ್ ಬಕ್ರಿ ಕಂಪನಿಯು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಂತಾಪ ಸೂಚಿಸಿದೆ. ಗಾಢವಾದ ದುಃಖದೊಂದಿಗೆ, ನಮ್ಮ ಪ್ರೀತಿಯ ಪರಾಗ್ ದೇಸಾಯಿ ಅವರ ನಿಧನವನ್ನು ತಿಳಿಸಲು ನಾವು ವಿಷಾದಿಸುತ್ತೇವೆ ಎಂದು ಕಂಪನಿ ಬರೆದುಕೊಂಡಿದೆ.
ಅಕ್ಟೋಬರ್ 15 ರಂದು ತನ್ನ ಮೇಲೆ ದಾಳಿ ಮಾಡಿದ ಬೀದಿನಾಯಿಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದ ಸಂದರ್ಭ ಪರಾಗ್ ದೇಸಾಯಿ ತನ್ನ ನಿವಾಸದ ಹೊರಗೆ ಜಾರಿ ಬಿದ್ದಿದ್ದರು. ಘಟನೆಯ ಬಳಿಕ ಅವರನ್ನು ಶೆಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ದೇಸಾಯಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಝೈಡಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಚಿಕಿತ್ಸೆ ವೇಳೆ ಮಿದುಳು ರಕ್ತಸ್ರಾವಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಸೇಶ್ ದೇಸಾಯಿ ಅವರ ಪುತ್ರ. ಅವರು ಪತ್ನಿ ವಿದಿಶಾ ಮತ್ತು ಮಗಳು ಪರಿಶಾ ಅವರನ್ನು ಅಗಲಿದ್ದಾರೆ. ದೇಸಾಯಿ ಅವರು 30 ವರ್ಷಗಳ ಉದ್ಯಮಶೀಲತೆಯ ಅನುಭವದೊಂದಿಗೆ, ಗ್ರೂಪ್‌ನ ಅಂತಾರಾಷ್ಟ್ರೀಯ ವ್ಯಾಪಾರ, ಮಾರಾಟ ಮತ್ತು ಮಾರ್ಕೆಟಿಂಗ್ ಅನ್ನು ಮುನ್ನಡೆಸಿದ್ದರು. ಅವರು ಭಾರತೀಯ ಕೈಗಾರಿಕೆಗಳ ಒಕ್ಕೂಟದಂತಹ ಪ್ರಮುಖ ಉದ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಮಾತ್ರವಲ್ಲದೇ ಉದ್ಯಮದ ಗೌರವಾನ್ವಿತ ಧ್ವನಿಯಾಗಿದ್ದರು.





