ಗುಜರಾತ್ : ದೀರ್ಘಕಾಲದ ನಿದ್ರೆಗೆ ಕಳುಹಿಸಲಾಗಿದ್ದ ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್, ಚಂದ್ರನ ಹಗಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸುವ ಪ್ರಕ್ರಿಯೆ ಸ್ವಯಂ ಚಾಲಿತ. ಇದನ್ನು ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ ಮಾಡಲಾಗದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ಪೇಸ್ ಅಪ್ಲಿಕೇಷನ್ ಸೆಂಟರ್‌ನ ನಿರ್ದೇಶಕ ನೀಲೇಶ್ ಎಂ.ದೇಸಾಯಿ ಹೇಳಿದ್ದಾರೆ.
ಸೆ. 22ರಂದು ಚಂದ್ರನಲ್ಲಿ ಹಗಲು ಆರಂಭವಾಗಿದೆ. ಇದರಿಂದಾಗಿ ವಿಕ್ರಮ್ ಲ್ಯಾಂಡರ್ ಹಾಗೂ ರೋವರ್‌ಗೆ ಅಳವಡಿಸಿರುವ ಸೌರ ಫಲಕದಿಂದ ಅವುಗಳು ಪೂರ್ಣ ಚಾರ್ಜ್ ಆಗಿವೆ. ಆದರೆ ಅಲ್ಲಿಂದ ಯಾವುದೇ ಸಂದೇಶ ಬಂದಿಲ್ಲ. ವಿಕ್ರಮ್ ಮತ್ತು ಪ್ರಜ್ಞಾನ್ ಜತೆ ಸಂಪರ್ಕ ಬೆಳೆಸುವ ಪ್ರಯತ್ನ ಮುಂದುವರಿದಿದೆ ಎಂದು ಇಸ್ರೋ ತನ್ನ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ತೀವ್ರ ಚಳಿಯನ್ನು ಎದುರಿಸಿರುವ ಸಾಧನದಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಸುಸ್ಥಿಗೆ ಮರಳುವ ಸಾಧ್ಯತೆ ಶೇ 50ರಷ್ಟು ಮಾತ್ರ. ಆದರೆ ಈಗಾಗಲೇ ಈ ಸಾಧನಗಳು ಅವುಗಳಿಗೆ ನೀಡಲಾದ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿವೆ. ಒಂದೊಮ್ಮೆ ಲ್ಯಾಂಡರ್ ಮತ್ತು ರೋವರ್ ತಮ್ಮ ಕಾರ್ಯಗಳನ್ನು ಮರಳಿ ಆರಂಭಿಸಿದರೆ, ಈಹಿಂದೆ ನಡೆಸಿದ ಕಾರ್ಯಗಳನ್ನೇ ಮತ್ತೊಮ್ಮೆ ನಡೆಸಲಾಗುವುದು ಎಂದು ದೇಸಾಯಿ ಹೇಳಿದ್ದಾರೆ.
ಪ್ರಜ್ಞಾನ್ ಎಲ್ಲಾ ಹಂತಗಳಲ್ಲೂ ಪರೀಕ್ಷಿಸಿ ಮತ್ತು ಪರಿಶೀಲಿಸಿದ ನಂತರವೇ ಚಂದ್ರನಲ್ಲಿಗೆ ಕಳುಹಿಸಲಾಗಿದೆ. ಹೀಗಾಗಿ ಅದು ತನ್ನ ಕಾರ್ಯವನ್ನು ಆರಂಭಿಸಲಿದೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ನಾವು ಕಾಯಬೇಕಷ್ಟೇ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.