ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿನ ಗ್ರೂಪ್ ಹಂತದಲ್ಲಿ ಇಲ್ಲಿಯವರೆಗೂ 4 ಪಂದ್ಯಗಳಲ್ಲಿ ಕಣಕ್ಕಿಳಿದು ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ್ದ ಕರ್ನಾಟಕ ತಂಡ ಇಂದು ( ಡಿಸೆಂಬರ್ 1 ) ನಡೆದ ಐದನೇ ಪಂದ್ಯದಲ್ಲಿ ಚಂಢೀಗಡ್ ವಿರುದ್ಧ 22 ರನ್‌ಗಳ ಗೆಲುವನ್ನು ಕಂಡು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.
ವಲ್ಲಭ್ ವಿದ್ಯಾನಗರ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ದೇವದತ್ ಪಡಿಕ್ಕಲ್ ಅಬ್ಬರದ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 299 ರನ್ ಕಲೆಹಾಕಿ ಎದುರಾಳಿ ಚಂಡೀಗಢ್ ತಂಡಕ್ಕೆ ಗೆಲ್ಲಲು 300 ರನ್‌ಗಳ ಸವಾಲಿನ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಚಂಡೀಗಢ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಅರ್ಸ್ಲನ್ ಖಾನ್ ಶತಕ ಬಾರಿಸಿದರೂ ಸಹ ತಂಡ ಗೆಲುವು ಕಾಣುವಲ್ಲಿ ವಿಫಲವಾಯಿತು.
ಕರ್ನಾಟಕ ಇನ್ನಿಂಗ್ಸ್: ಕರ್ನಾಟಕದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಆರ್ ಸಮರ್ಥ್ 5 ರನ್ ಗಳಿಸಿದರೆ, ನಾಯಕ ಮಯಾಂಕ್ ಅಗರ್ವಾಲ್ 19 ರನ್ ಗಳಿಸಿದರು. ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ದೇವದತ್ ಪಡಿಕ್ಕಲ್ 103 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 9 ಬೌಂಡರಿ ಬಾರಿಸುವ ಮೂಲಕ 114 ರನ್ ಗಳಿಸಿದರು. ಇನ್ನುಳಿದಂತೆ ಮನೀಶ್ ಪಾಂಡೆ ಅಜೇಯ 53, ಜಗದೀಶ ಸುಚಿತ್ ಶೂನ್ಯ, ಕೃಷ್ಣಪ್ಪ ಗೌತಮ್ 1 ಹಾಗೂ ಶರತ್ ಬಿ ಆರ್ ಅಜೇಯ 1 ರನ್ ಗಳಿಸಿದರು.
ಚಂಡೀಗಢದ ಪರ ಸಂದೀಪ್ ಶರ್ಮಾ ಹಾಗೂ ಮನ್‌ದೀಪ್ ಸಿಂಗ್ ತಲಾ ಎರಡು ವಿಕೆಟ್ ಪಡೆದರೆ, ಮುರುಗನ್ ಅಶ್ವಿನ್ ಹಾಗೂ ಅರ್ಸ್ಲಾನ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಚಂಡೀಗಢ ಇನ್ನಿಂಗ್ಸ್: ಕರ್ನಾಟಕ ನೀಡಿದ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಚಂಡೀಗಢ ಉತ್ತಮ ಆರಂಭವನ್ನೇ ಪಡೆದುಕೊಂಡಿತು. ತಂಡದ ಮೊತ್ತ ಶತಕ ದಾಟುವವರೆಗೂ ವಿಕೆಟ್ ಕಳೆದುಕೊಳ್ಳದೇ ಇದ್ದ ತಂಡ ಟೂರ್ನಿಯಲ್ಲಿ ಕರ್ನಾಟಕಕ್ಕೆ ಸೋಲಿನ ರುಚಿ ತೋರಿಸಲಿದೆ ಎಂದು ಊಹಿಸಲಾಗಿತ್ತು. ಆದರೆ ಬಳಿಕ ತಂಡ ಮೂರು ವಿಕೆಟ್ ಕಳೆದುಕೊಂಡ ಬಳಿಕ ಬೇಗನೆ ವಿಕೆಟ್ ಕಳೆದುಕೊಂಡು, ನಿಧಾನಗತಿಯಲ್ಲಿ ರನ್ ಗಳಿಸಿ ಗುರಿ ಮುಟ್ಟಲಾಗದೇ ಸೋಲನ್ನು ಅನುಭವಿಸಿತು.
ಚಂಡೀಗಢದ ಪರ ಅರ್ಸ್ಲನ್ ಖಾನ್ 102, ನಾಯಕ ಮನನ್ ವೋಹ್ರಾ 34, ಅಂಕಿತ್ ಕೌಶಿಕ್ 51, ಭಾಗ್‌ಮೆಂದರ್ ಲಾಥೆರ್ 32, ಗೌರವ್ ಪೂರಿ 6, ಕರಣ್ ಕೈಲ 20, ಮುರುಗನ್ ಅಶ್ವಿನ್ 2, ಮಯಾಂಕ್ ಸಿಧು ಅಜೇಯ 13 ಹಾಗೂ ವಿಷು ಕಶ್ಯಪ್ ಅಜೇಯ 7 ರನ್ ದಾಖಲಿಸಿದರು.
ಕರ್ನಾಟಕದ ಪರ ವಾಸುಕಿ ಕೌಶಿಕ್ 2 ವಿಕೆಟ್, ವಿದ್ವತ್ ಕಾವೇರಪ್ಪ, ವಿಜಯ್‌ಕುಮಾರ್ ವೈಶಖ್, ಕೃಷ್ಣಪ್ಪ ಗೌತಮ್ ಹಾಗೂ ಜಗದೀಶ ಸುಚಿತ್ ತಲಾ ಒಂದೊಂದು ವಿಕೆಟ್ ಪಡೆದರು.