ರಾಮನಗರ: ಸೋಮವಾರದಂದು ಬೆಳಕಿಗೆ ಬಂದ ಕೆಂಚುಗಲ್ ಬಂಡೇಮಠದ ಪೀಠಾಧ್ಯಕ್ಷರಾದ ಬಸವಲಿಂಗ ಸ್ವಾಮೀಜಿಯವರ ನಿಗೂಢ ಸಾವಿನ ಸುತ್ತ ಹಲವಾರು ವದಂತಿಗಳು ಹರದಾಡಲಾರಂಭಿಸಿವೆ. ಅವರನ್ನು ಕೆಲವರು ಹನಿಟ್ರ್ಯಾಪ್ ಗೆ ಒಳಪಡಿಸಿದ್ದರು. ಆನಂತರ, ಸ್ವಾಮೀಜಿಯವರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು. ಅದರಿಂದಲೇ ಸ್ವಾಮೀಜಿಯವರು ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಜನರು ಮಾತಾಡಿಕೊಳ್ಳುವಂತಾಗಿದೆ. ಆದರೆ, ರಾಮನಗರದ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ವದಂತಿಗಳನ್ನು ತಳ್ಳಿಹಾಕಿದ್ದು, ತನಿಖೆ ಮುಗಿದಾದ ಮೇಲೆ ಸತ್ಯ ಬಹಿರಂಗವಾಗುತ್ತದೆ ಎಂದಿದ್ದಾರೆ.
ಸ್ವಾಮೀಜಿಯವರು ಬರೆದಿರುವ ಡೆತ್ ನೋಟ್ ನಲ್ಲಿ ಅನಾಮಿಕ ಮಹಿಳೆಯ ಬಗ್ಗೆಯೂ ಹೇಳಿದ್ದು, ಅದು ಹನಿಟ್ರ್ಯಾಪ್ ನ ಮಹಿಳೆಯೇ ಆಗಿರಬಹುದು ಎಂಬ ಗುಮಾನಿ ಎದ್ದಿದೆ. ಆದರೆ, ರಾಮನಗರದ ಎಸ್ಪಿ ಸಂತೋಷ್ ಕುಮಾರ್ ಪೊಲೀಸ್ ತನಿಖೆ ಮುಗಿದ ಮೇಲೆ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.
ಮಠದಲ್ಲಿರುವ ಸ್ವಾಮೀಜಿಯವರ ಕೊಠಡಿಯಲ್ಲಿ ಸ್ವಾಮೀಜಿಯವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ವಾಮೀಜಿಯ ಕೊಠಡಿಯಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಮಂಗಳವಾರದಂದು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಎಸ್ಪಿ ಸಂತೋಷ್ ಬಾಬು ಮಾತಾನಾಡಿ, ಸ್ವಾಮೀಜಿಯವರ ಕೊಠಡಿಯಲ್ಲಿ ಪತ್ತೆಯಾಗಿದ್ದ ಡೆತ್ ನೋಟ್ ನಲ್ಲಿ ಆತ್ಮಹತ್ಯೆಯ ಬಗ್ಗೆ ಸ್ವಾಮೀಜಿ ಉಲ್ಲೇಖಿಸಿಲ್ಲ. ಕೆಲವರಿಂದ ತಮಗೆ ಕಿರುಕುಳವಾಗುತ್ತಿದೆ ಎಂದು ಹೇಳಿದ್ದಾರಷ್ಟೇ. ಆದರೆ, ‘ಅವರ ಕಿರುಕುಳದಿಂದ ತಾವು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಪತ್ರದಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ ಎಂದು ಹೇಳಿದ್ದಾರೆ.





